ಬೆಂಗಳೂರು ಏ.16 www.bengaluruwire.com : ಬೆಂಗಳೂರು ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ದೊರಕಿಸುವ ನಿಟ್ಟಿನಲ್ಲಿ ಜಲಮಂಡಳಿಯು ಮಹತ್ವಾಕಾಂಕ್ಷೆಯ ಗ್ರೀನ್ ಸ್ಟಾರ್ ಚಾಲೆಂಜ್ ನ ನೊಂದಣಿಗಾಗಿ ವೆಬ್ ಪೋರ್ಟಲನ್ನು ನಿರ್ಮಿಸಿದ್ದು, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆಗೂಡಿ ಅದನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.
ಎಫ್‌ಕೆಸಿಸಿಐ (Federation of Karnataka Chambers of Commerce & Industry), ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಕ್ರೆಡೈ (Confederation of Real Estate Developerś Association of India) ಕರ್ನಾಟಕ, ಹೊಟೇಲ್ ಅಸೋಸಿಯೇಷನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇದಕ್ಕೆ ಕೈಜೋಡಿಸಿವೆ.
ಮಾರ್ಚ್ 14 ರಂದೇ ನೀರು ಉಳಿಸಿ ಬೆಂಗಳೂರು ಬೆಳೆಸಿ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಗ್ರೀನ್ ಸ್ಟಾರ್ ಚಾಲೆಂಜ್ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಈ ಅಭಿಯಾನಕ್ಕೆ ನೋಂದಣಿಯಾಗಲು ವೆಬ್ ಪೋರ್ಟ್‌ಲ್ ಬಳಕೆಗೆ ಬುಧವಾರದಿಂದ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಗರದಲ್ಲಿ ಅಪಾರ್ಟ್‌ಮೆಂಟ್ ಗಳು, ಹೋಟೇಲ್ ಗಳು, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ಆಸ್ಪತ್ರೆಗಳು, ಸಾರ್ವಜನಿಕ ಉದ್ದಿಮೆಗಳು, ಸರಕಾರಿ ಕಚೇರಿಗಳು ಮತ್ತಿತರೆ ಕಟ್ಟಡಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡುವ ಸ್ಪರ್ಧೆಯನ್ನು ಪ್ರಾರಂಭಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಆಯಾ ವಿಭಾಗವಾರು ಕಟ್ಟಡಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನ ಪ್ರಮಾಣ ಪತ್ರವನ್ನು ನೀಡುವ ಯೋಜನೆ ಇದಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದಾಗಿ ನಗರದಲ್ಲಿ ನೀರಿನ ಅಭಾವವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್ ಸ್ಟಾರ್ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಏನಿದು ಗ್ರೀನ್ ಸ್ಟಾರ್ ಚಾಲೆಂಜ್ ?:
ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು. ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು. ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು. ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುವುದು. ಈ ಪಂಚ ಸೂತ್ರಗಳನ್ನು ಅಳವಡಿಸಿಕೊಂಡರೆ ಫೈವ್ ಸ್ಟಾರ್ ಗ್ರೀನ್ ರೇಟಿಂಗನ್ನು ನೀಡುವುದಾಗಿ ಜಲ ಮಂಡಳಿ ಅಧ್ಯಕ್ಷರಾದ ರಾಮಪ್ರಸಾದ್ ಮನೋಹರ್ ತಿಳಿಸಿದರು.
ಸ್ವಯಂ ಘೋಷಣೆಗೆ ಅವಕಾಶ:
https://greenstar.bwssb.gov.in/ ಈ ವೆಬ್ ಪೋರ್ಟ್‌ಲ್ ಮೂಲಕ ಆಯಾ ವಿಭಾಗವಾರು ಆಯ್ಕೆಗಳಲ್ಲಿ ತಮ್ಮ ಕಟ್ಟಡಗಳಲ್ಲಿ ಅಳವಡಿಸಿರುವಂತಹ ನೀರು ಉಳಿತಾಯದ ಅಂಶಗಳನ್ನು ಸ್ವಯಂ ಘೋಷಣೆ ಮೂಲಕ ನಮೂದಿಸಲು ಅವಕಾಶ ನೀಡಲಾಗಿದೆ.
ಜಲಮಂಡಳಿಯಿಂದ ಪರಿಶೀಲನೆ – ಪ್ರಮಾಣ ಪತ್ರ ನೀಡಿಕೆ:
ಎರಡನೇ ಹಂತದಲ್ಲಿ ಜಲಮಂಡಳಿಯಿಂದ ಈ ಸ್ಪರ್ಧೇಯಲ್ಲಿ ಭಾಗಿಯಾದವರ ಕಟ್ಟಡಗಳನ್ನ ಜಲಮಂಡಳಿ ಅಧಿಕಾರಿಗಳು ವಿಭಾಗವಾರು ಪರಿಶೀಲನೆ ನಡೆಸಲಿದ್ದಾರೆ. ಯಾವ ಕಟ್ಟಡಗಳಲ್ಲಿ ಯಾವ ಯಾವ ಸೂತ್ರಗಳನ್ನು ಅಳವಡಿಸಿಕೊಂಡಿದ್ದಾರೋ ಅಷ್ಟು ಸ್ಟಾರ್ ರೇಟೀಂಗ್ ನ ಪ್ರಮಾಣ ಪತ್ರವನ್ನು ನಂತರ ನೀಡಲಾಗುವುದು. ಪಂಚಸೂತ್ರಗಳನ್ನು ಅಳವಡಿಸಿಕೊಂಡ ಮೇಲೂ ನೀರಿನ ಸಮಸ್ಯೆ ಇದ್ದರೆ ಅದನ್ನ ಜಲಮಂಡಳಿಯ ವತಿಯಿಂದ ಆದ್ಯತೆ ಮೇರೆಗೆ ಪರಿಹರಿಸಲಾಗುವುದು ಎಂದು ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಫ್.ಕೆ.ಸಿ.ಸಿ.ಐ ಅಧ್ಯಕ್ಷರಾದ ರಮೇಶ್ ಚಂದ್ರ ಲಹೋಟಿ, ಕ್ರೆಡೈ ಬೆಂಗಳೂರು ಅಧ್ಯಕ್ಷ ಅಮರ್ ಮೈಸೂರು, ಬಿಎಎಫ್ ಅಧ್ಯಕ್ಷ ವಿಕ್ರಮ್ ರಾಯ್, ಕಾರ್ಯದರ್ಶಿ ಸತೀಶ್ ಮಲ್ಯ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.