ಬೆಂಗಳೂರು, ಏ.17 www.bengaluruwire.com : ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರ ಮಗಳು ಸಂಸ್ಕೃತಿ ಸಿಂಗ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 366ನೇ ರ‌್ಯಾಂಕ್ ಪಡೆದಿದ್ದಾರೆ. ಈ ಮೂಲಕ ರಾಕೇಶ್‌ಸಿಂಗ್ ಕುಟುಂಬದ 4ನೇ ತಲೆಮಾರು ನಾಗರೀಕ ಸೇವೆಗೆ ಪ್ರವೇಶ ಪಡೆದಂತಾಗಿದೆ.
ರಾಕೇಶ್ ಸಿಂಗ್ ಅವರ ತಾತ ಎಸ್ ಪಿ ಸಿಂಗ್ ಬ್ರಿಟಿಷ್ ಸರ್ಕಾರದಲ್ಲಿ ಐಸಿಎಸ್ (Indian Civil Service), ಇವರ ತಂದೆ ಬಿ.ಪಿ.ಸಿಂಗ್ ನಿವೃತ್ತ ಐಪಿಎಸ್ ಆಗಿದ್ದು ಉತ್ತರದಪ್ರದೇಶದ ಡಿಜಿ ಆಗಿ ಸೇವೆ ಸಲ್ಲಿಸಿದ್ದರು. ರಾಕೇಶ್ ಸಿಂಗ್ ಅವರು ಐಎಎಸ್, ಅವರ ಸಹೋದರ ಎಂಪಿ ಸಿಂಗ್ ಐಎ ಎಂಡ್ ಎಸ್ ನಿವೃತ್ತ ಡೆಪ್ಯುಟಿ ಸಿಎಜಿ ಆಗಿದ್ದರು. ಮತ್ತೊಬ್ಬ ಸಹೋದರ ಡೆಹ್ರಾಡೂನ್ ಮೆಟ್ರೊ ರೈಲ್ವೇ ಎಂಡಿಯಾಗಿದ್ದಾರೆ. ರಾಕೇಶ್ ಸಿಂಗ್ ಅವರ ಅಳಿಯ ಕೂಡ ಐಆರ್‌ಎಸ್ ಆಗಿದ್ದು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
1989 ನೇ ಬ್ಯಾಚಿನ ಕರ್ನಾಟಕ ಕೆಡರ್ ನ ಅಧಿಕಾರಿಯಾಗಿರುವ ರಾಕೇಶ್ ಸಿಂಗ್, ನಗರಾಭಿವೃದ್ಧಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದು, ರಾಜ್ಯದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇದೀಗ ಅವರ ಮಗಳು ಕೂಡ ಯುಪಿಎಸ್ಸಿ ಪರೀಕ್ಷೆಯನ್ನು ಕೇವಲ 2ನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ.
‘ದೆಹಲಿಯಲ್ಲಿ ಪರೀಕ್ಷೆ ಬರೆದಿದ್ದು, ಮಗಳು ಸಾಕಷ್ಟು ಶ್ರಮಪಟ್ಟು ಓದಿ, 366ನೇ ರ‌್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಐಎಎಸ್ ಆಗುವ ಅವರ ಪ್ರಯತ್ನ ಮುಂದುವರಿಯಲಿದೆ ಎಂದು ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) 2023 ರ ಸೆಪ್ಟಂಬರ್ ನಲ್ಲಿ ನಡೆಸಿದ್ದ ನಾಗರೀಕ ಸೇವೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ 1026 ಮಂದಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ತೇರ್ಗಡೆಯಾದವರನ್ನು ಐಎಎಸ್, ಐಪಿಎಸ್, ಐಆರ್ ಎಸ್ ಕೇಂದ್ರ ಸರಕಾರದ ಎ ಮತ್ತು ಬಿ ವೃಂದದ ಸೇವೆಗಳು ಸೇರಿದಂತೆ ಇತರ ನಾಗರೀಕ ಸೇವೆಗಳಿಗೆ ನಿಯೋಜನೆ ಮಾಡಲಾಗುತ್ತದೆ. ಕರ್ನಾಟಕದ 23 ಮಂದಿ ನಾಗರೀಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.
ಯುಪಿಎಸ್ ಸಿಯಲ್ಲಿ ತೇರ್ಗಡೆ ಹೊಂದಿದವರ ಪೈಕಿ 347 ಸಾಮಾನ್ಯ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗ (EWS)ದಿಂದ 115, ಒಬಿಸಿ 303, ಎಸ್ ಸಿ 165, ಎಸ್ ಟಿ 86 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.