ಕಾರವಾರ, ಏ.16 www.bengaluruwire.com : ಕಾರವಾರದಿಂದ ಸುಮಾರು 215 ನಾಟಿಕಲ್ ಮೈಲುಗಳಷ್ಟು ದೂರದ ಸಮುದ್ರದಲ್ಲಿ ಇಂಜಿನ್ ವೈಫಲ್ಯದಿಂದ ಏ.13ರಂದು ತೊಂದರೆಗೆ ಸಿಲುಕಿದ್ದ ಇಂಡಿಯನ್ ಫಿಶಿಂಗ್ ಬೋಟ್ (IFB) ರೋಸರಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ಸುರಕ್ಷಿತವಾಗಿ ಸಂರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಕರಾವಳಿಯಿಂದ 203 ನಾಟಿಕಲ್ ಮೈಲುಗಳ ವ್ಯಾಪ್ತಿಯಲ್ಲಿ ಏ.14ರಂದು ಸರಿಸುಮಾರು ಮಧ್ಯಾಹ್ನ 3.56 ಗಂಟೆಗೆ ಐಎಫ್ ಬಿಯ ರೋಸರಿ ಬೋಟ್ ಇಂಜಿನ್ ವೈಫಲ್ಯದಿಂದ ತೊಂದರೆಗೆ ಸಿಲುಕಿದ ಮಾಹಿತಿ ಲಭ್ಯವಾಗಿತ್ತು. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಕರಾವಳಿ ಕಾವಲುಪಡೆ ತಕ್ಷಣವೇ ಐಸಿಜಿಎಸ್ ಸಾವಿತ್ರಿಬಾಯಿ ಫುಲೆ ಕಣ್ಗಾವಲು ಹಡಗಿನ ಸಹಾಯದಿಂದ, ಕಠಿಣ ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ, ಹಡಗು ಅತ್ಯುತ್ತಮ ವೇಗದಲ್ಲಿ ಸಾಗಿ, ಸಂಕಷ್ಟದಲ್ಲಿದ್ದ ದೋಣಿಯೊಂದಿಗೆ ಸಂವಹನ ಸಾಧಿಸಿತು.
ಏ.14ರ ಸಂಜೆ 4.25 ರ ಸಮಯದಲ್ಲಿ ರೋಸರಿ ಬೋಟ್ ನತ್ತ ಕಾವಲು ಪಡೆಯೊಂದಿಗೆ ಧಾವಿಸಿದ ತಾಂತ್ರಿಕ ಸಿಬ್ಬಂದಿ ದೋಣಿಯ ಎಂಜಿನ್ ಅನ್ನು ರಿಪೇರಿ ಮಾಡಲು ಪ್ರಯತ್ನಿಸಿದರೂ ಅದರಲ್ಲಿ ಸಫಲವಾಗಲಿಲ್ಲ. ಆಗ ಕಾರವಾರ ಬಂದರಿನತ್ತ ದೋಣಿಯನ್ನು ಸುರಕ್ಷಿತವಾಗಿ ಕಾರವಾರದ ಕಡೆಗೆ ಎಳೆದು ತರಲು ನಿರ್ಧರಿಸಿತು.
ಪ್ರತಿಕೂಲ ಸಮುದ್ರದ ಪರಿಸ್ಥಿತಿಗಳ ನಡುವೆ ಹಡಗು ಏ.14ರಂದು ಸಂಜೆ 7.10 ಗಂಟೆಗೆ ಕಾವಲು ಪಡೆಯ ಹಡಗು, ರೋಸರಿಯನ್ನು ಎಳೆಯಲು ಪ್ರಾರಂಭಿಸಿತು. ಇದಕ್ಕೆ ರಾಜ್ಯದ ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಛೇರಿ, ಸಿಜಿಎಸ್ ಕಾರವಾರ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಥೇಂಗೈಪಟ್ಟಣಂ ಮೀನುಗಾರಿಕಾ ದೋಣಿಯ ಸಹಯೋಗದೊಂದಿಗೆ ಸಾವಿತ್ರಿಬಾಯಿ ಫುಲೆ ಕಣ್ಗಾವಲು ಹಡಗಿನ (Savitri ICGS) ಸಹಾಯದಿಂದ ಕಾವಲು ಪಡೆಯ ತಂಡವು ಇಂಡಿಯನ್ ಫಿಶಿಂಗ್ ಬೋಟನ್ನು ಕಾರವಾರ ಬಂದರಿಗೆ ಸುರಕ್ಷಿತವಾಗಿ ಕರೆತರುವಲ್ಲಿ ಕಾವಲು ಪಡೆ ಯಶಸ್ಸು ಸಾಧಿಸಿದೆ ಎಂದು ರಕ್ಷಣಾ ಪಡೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.