ಬೆಂಗಳೂರು, ಏ.16 www.bengaluruwire.com : ಕನ್ನಡ ಚಿತ್ರದರಂಗದ ಕುಳ್ಳ ಹಾಗೂ ಹಿರಿಯ ನಟ ದ್ವಾರಕೀಶ್ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. 81 ವರ್ಷದ ಹಿರಿಯ ನಟ ದ್ವಾರಕೀಶ್ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ನಟರಾಗಿ, ನಿರ್ಮಾಪಕರಾಗಿ ಹಲವು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿ ಕೆಲಸ ಮಾಡಿದ್ದರು. ದ್ವಾರಕೀಶ್ ನಿಧನರಾಗಿರುವ ಸುದ್ದಿಯನ್ನು ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ.
ದ್ವಾರಕೀಶ್ ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ದ್ವಾರಕೀಶ್ ಕನ್ನಡ ಚಿತ್ರರಂಗದ ಬಹುತೇಕ ದಿಗ್ಗಜರೊಂದಿಗೆ ನಟಿಸಿದ್ದರು. ದ್ವಾರಕೀಶ್ ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ರಾಜಕೀಯ ನಾಯಕರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
1942ರ ಆಗಸ್ಟ್ 19ರಂದು ಶಾಮರಾವ್-ಜಯಮ್ಮ ದಂಪತಿ ಪುತ್ರನಾಗಿ ಮೈಸೂರಿನ ಹುಣಸೂರಿನಲ್ಲಿ ಜನಿಸಿದ ಅವರು 1963ರಲ್ಲಿ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. 1966ರಲ್ಲಿ ಡಾ.ರಾಜ್‍ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಅಧ್ಯಾಯ ಬರೆದಿದ್ದರು. ಚಿತ್ರರಂಗದಲ್ಲಿ ಅವರು ಹಲವಾರು ಏಳುಬೀಳುಗಳನ್ನು ಕಂಡು ದಾಖಲೆಗಳನ್ನೇ ನಿರ್ಮಿಸಿದ್ದರು. ಇಂದು ಬೆಳಗ್ಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಈ ಮೊದಲು ದ್ವಾರಕೀಶ್ ಸಾವನ್ನಪ್ಪಿದರು ಹಲವು ಬಾರಿ ವದಂತಿ ಹಬ್ಬಿತ್ತು. ಈ ಬಾರಿಯೂ ಸಾವಿನ ಸುದ್ದಿ ಸುಳ್ಳಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಈಗ ಅವರ ಕುಟುಂಬದ ಕಡೆಯಿಂದಲೇ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. “ಸೋಮವಾರ ರಾತ್ರಿ ಅವರಿಗೆ ಬೇಧಿ ಆರಂಭವಾಯಿತು. ಅವರು ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ದೆ ಮಾಡಲು ಹೋಗಿದ್ದರು. ಆದರೆ, ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತವಾಗಿದೆ” ಎಂದು ಅವರ ಪುತ್ರ ಹೇಳಿದ್ದಾರೆ.
ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ರವಿಚಂದ್ರನ್ ಸೇರಿದಂತೆ ಬಹುತೇಕ ಎಲ್ಲ ಸ್ಟಾರ್ ನಟರ ಚಿತ್ರಗಳನ್ನು ನಿರ್ಮಿಸುವ ಮೂಲಕ ಅಂದಿನ ದಿನಗಳಲ್ಲೇ ವಿದೇಶಗಳಲ್ಲಿ ಚಿತ್ರೀಕರಣ ನಡೆಸಿ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಜಾಗತಿಕ ಮನ್ನಣೆ ತಂದುಕೊಟ್ಟಿದ್ದರು.
ಗುರು-ಶಿಷ್ಯರು, ಕಳ್ಳ ಕುಳ್ಳ, ಆಪ್ತಮಿತ್ರ, ಕುಳ್ಳ ಏಜೆಂಟ್ 000, ಬ್ರಹ್ಮಗಂಟು ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಿಸಿದ್ದರು.