ಅಯೋಧ್ಯೆ (ಉತ್ತರಪ್ರದೇಶ), ಏ.15 www.bengaluruwire.com : ದಶಕಗಳ ಕಾಲ ಕಾಯುವಿಕೆಗೆ ಅಂತ್ಯ ಹಾಡಿದ ಶ್ರೀ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ಏ.17ರಂದು ನಡೆಯುತ್ತಿರುವ ಪ್ರಥಮ ಶ್ರೀರಾಮನವಮಿ ಕಾರ್ಯಕ್ರಮಕ್ಕೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಕಲ ಸಿದ್ಧತೆಗಳನ್ನು ನಡೆಸಿದೆ.
ಏ.17ರಂದು ಶ್ರೀ ಭಗವಾನ್ ಶ್ರೀರಾಮನಿಗೆ ಮುಂಜಾನೆ 3.30ರಿಂದಲೇ ಮಂಗಳ ಆರತಿಯ ನಂತರ, ಅಭಿಷೇಕ, ಶೃಂಗಾರ್ ಮತ್ತು ದರ್ಶನ ಸೇರಿದಂತೆ ಮುಂಜಾನೆ ಧಾರ್ಮಿಕ ವಿಧಿಗಳು ನಡೆಲಿದೆ. ರಾಮಲಲ್ಲಾನ ದರ್ಶನವು ಶ್ರೀರಾಮನವಮಿಯಂದು ರಾತ್ರಿ 11 ಗಂಟೆಯವರೆಗೆ ಇರಲಿದೆ. ಶ್ರೀರಾಮನಿಗೆ ನೈವೇದ್ಯ ಅರ್ಪಸಿಲು ಅಲ್ಪ ಸಮಯದವರೆಗೆ ಪರದೆ ಎಳೆಯಲಾಗುತ್ತದೆ. ಅದನ್ನು ಹೊರತು ಪಡಿಸಿದರೆ ಶಯನ ಆರತಿ ಇರಲಿದೆ. ಶಯನ ಆರತಿಯ ನಂತರ ಮಂದಿರ ನಿರ್ಗಮನದ ಬಳಿ ಪ್ರಸಾದ ವಿನಿಯೋಗ ನಡೆಯಲಿದೆ. ಉಳಿದಂತೆ ಭಕ್ತಾದಿಗಳಿಗೆ ಶ್ರೀರಾಮನ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಗತ್ಯ ವ್ಯವಸ್ಥೆ ಮಾಡಿದೆ.
ಏಪ್ರಿಲ್ 16, 17, 18 ಮತ್ತು 19 ರಂದು ಸುಗಮ ದರ್ಶನ್ ಪಾಸ್, ವಿಐಪಿ ದರ್ಶನ್ ಪಾಸ್, ಮಂಗಳಾ ಆರತಿ ಪಾಸ್, ಶೃಂಗಾರ್ ಆರತಿ ಪಾಸ್ ಮತ್ತು ಶಯನ್ ಆರತಿ ಪಾಸ್‌ನಂತಹ ಯಾವುದೇ ಪಾಸ್‌ಗಳನ್ನು ದಿನಾಂಕಗಳಲ್ಲಿ ನೀಡಲಾಗುವುದಿಲ್ಲ. ಇದರರ್ಥ ಎಲ್ಲಾ ವಿಶೇಷ ಸವಲತ್ತುಗಳು ಈ ದಿನಗಳಲ್ಲಿ ರದ್ದುಗೊಳಿಸಲಾಗಿದೆ ಎಂದು ಟ್ರಸ್ಟ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಭಕ್ತರಿಗಾಗಿ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಾದ್ಯಂತ ಸ್ಥಾಪಿಸಲಾದ ಸರಿಸುಮಾರು 80 ರಿಂದ 100 ಎಲ್ ಇಡಿ ಪರದೆ (LED Screen) ಗಳಲ್ಲಿ ತೋರಿಸಲಾಗುತ್ತದೆ. ಭಕ್ತರ ಅನುಕೂಲಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪರವಾಗಿ ಪ್ರಸಾರ ಭಾರತಿ ನೇರ ಪ್ರಸಾರವನ್ನು ಕೈಗೊಂಡಿದೆ. ಆದ್ದರಿಂದ ಎಲ್ಲಾ ಭಕ್ತರು ಶ್ರೀರಾಮ ನವಮಿಯ ಕಾರ್ಯಕ್ರಮಗಳನ್ನು ತಮ್ಮ ಮನೆಯಿಂದ ಸೌಕರ್ಯದಿಂದ ಅಥವಾ ಅವರು ಎಲ್ಲಿದ್ದರೂ ಮೊಬೈಲ್ ಫೋನ್‌ಗಳು, ಟೆಲಿವಿಷನ್‌ಗಳು ಮತ್ತು ಸ್ಥಾಪಿಸಲಾದ ಎಲ್‌ಇಡಿ ಪರದೆಗಳ ಮೂಲಕ ಆನಂದಿಸುವಂತೆ ಮನವಿ ಮಾಡಲಾಗಿದೆ.. ಶ್ರೀರಾಮ ನವಮಿಯ ನಂತರ, ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಅಯೋಧ್ಯಾ ಧಾಮಕ್ಕೆ ಭೇಟಿ ನೀಡಿ ಪ್ರಭು ಶ್ರೀ ರಾಮಲಲ್ಲಾ ಆಶೀರ್ವಾದ ಪಡೆಯಲು ಮತ್ತು ಪ್ರಸಾದ ಸ್ವೀಕರಿಸಬಹುದು. ಶ್ರೀರಾಮ ನವಮಿಯ ದಿನದಂದು ಅನಗತ್ಯ ವಿಪರೀತ ಜನಜಂಗುಳಿಯನ್ನು ತಪ್ಪಿಸುವಂತೆ ಮನವಿ ಮಾಡಲಾಗಿದೆ.
ರಾಮನವಮಿ ಮೇಳದಲ್ಲಿ 25 ಲಕ್ಷ ಭಕ್ತರು ಭಾಗಿ :
ಶ್ರೀ ರಾಮ ಜನ್ಮಭೂಮಿಯ ಪ್ರವೇಶದ್ವಾರದ ಬಳಿ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ದಿಂದ ಸುಗ್ರೀವ್ ಕೋಟೆಯ ಬುಡದಲ್ಲಿ, ಬಿರ್ಲಾ ಧರ್ಮಶಾಲಾ ಎದುರು, ಯಾತ್ರಾರ್ಥಿಗಳಿಗಾಗಿ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಬಾರಿ ರಾಮ ನವಮಿ ಆಚರಣೆಗೆ ಲಕ್ಷಾಂತರ ಮಂದಿ ಅಯೋಧ್ಯೆಯಲ್ಲಿ ಸೇರುವ ನಿರೀಕ್ಷೆ ಇದ್ದು, ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಲಿಸಿದೆ. ಏಪ್ರಿಲ್ 9ರಂದು ಅಯೋಧ್ಯಾ ಧಾಮದಲ್ಲಿ ರಾಮ ನವಮಿ ಮೇಳ ಆರಂಭವಾಗಿತ್ತು. ಇದು ಏಪ್ರಿಲ್ 17ರ ರಾಮ ನವಮಿವರೆಗೂ ಮುಂದುವರಿಯುತ್ತದೆ. ಸುಮಾರು 25 ಲಕ್ಷ ಭಕ್ತರನ್ನು ಈ ಮೇಳ ಇಲ್ಲಿಯವರೆಗೆ ಆಕರ್ಷಿಸಿದೆ. ಈ ಕಾರ್ಯಕ್ರಮಕ್ಕಾಗಿ ಹಲವು ವಿಶೇಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೇಳದ ಮೈದಾನಗಳನ್ನು 7 ವಲಯಗಳು ಹಾಗೂ 39 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ಸಂಚಾರ ನಿರ್ವಹಣೆಯನ್ನು ಎರಡು ವಲಯಗಳು ಮತ್ತು 11 ಕ್ಲಸ್ಟರ್‌ಗಳಾಗಿ ಸಂಯೋಜಿಸಲಾಗಿದೆ. ಅಯೋಧ್ಯೆ ನಗರದಲ್ಲಿ ಅದ್ಧೂರಿಯಾಗಿ ಉತ್ಸವವನ್ನು ಆಚರಿಸಲಾಗುತ್ತಿದ್ದು, ರಾಜ್ಯ ಸರ್ಕಾರವು ಇದಕ್ಕಾಗಿ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನವರಿಯಲ್ಲಿ ರಾಮಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯ ನಂತರ ಅತ್ಯಂತ ಅದ್ಧೂರಿಯಾಗಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಅಯೋಧ್ಯೆಗೆ ಅಯೋಧ್ಯೆಯೇ ಸಿಂಗಾರಗೊಂಡು ನಲಿಯುತ್ತಿದೆ. ಬಾಲರಾಮನು ದಿನಕ್ಕೊಂದು ಬಗೆಯ ಸಿಂಗಾರದಲ್ಲಿ ಭಕ್ತರನ್ನು ಸೆಳೆಯುತ್ತಿದ್ದಾನೆ. ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಶಕರು ತಮ್ಮ ಮೊಬೈಲ್ ಫೋನ್‌ಗಳು, ಪಾದರಕ್ಷೆ, ದೊಡ್ಡ ಬ್ಯಾಗ್‌ಗಳು ಮತ್ತು ನಿರ್ಬಂಧಿತ ವಸ್ತುಗಳನ್ನು ಸುರಕ್ಷಿತವಾಗಿವಾಗಿ ದೇವಸ್ಥಾನದ ಹೊರಗೆ ದೂರದಲ್ಲಿ ಇರಿಸಿಕೊಳ್ಳಲು ಸಲಹೆ ನೀಡಲಾಗಿದೆ.