ಬೆಂಗಳೂರು, ಏ.13 www.bengaluruwire.com : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಸಿಬ್ಬಂದಿಯ ಎರಡನೇ ಹಂತದ(2nd Level Randomization of Polling Persons) ರ‍್ಯಾಂಡಮೈಸೇಷನ್ ಅನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸಾಮಾನ್ಯ ವೀಕ್ಷಕರುಗಳ ಸಮ್ಮುಖದಲ್ಲಿ ಶನಿವಾರ ಮಲ್ಲೇಶ್ವರಂ ಐಪಿಪಿ ಕೇಂದ್ರದಲ್ಲಿ ನಡೆಸಿದರು.
ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳು ಬರಲಿದ್ದು, ಈ ಸಂಬಂಧ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 24 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ 1 ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ 3 ಲೋಕಸಭಾ ಕ್ಷೇತ್ರಗಳು ಬರಲಿವೆ.
28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 8,984 ಮತಕೇಂದ್ರಗಳಿದ್ದು, 43,123 ಮತಗಟ್ಟೆ ಅಧಿಕಾರಿ/ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಲೋಕಸಭಾ ಚುನಾವಣೆಗೆ ನಿಯೋಜನೆ ಮಾಡಿಕೊಂಡಿರುವ ಮತಗಟ್ಟೆ ಅಧಿಕಾರಿಗಳಿಗೆ ಏ.17 ರಂದು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಗಧಿಪಡಿಸಿರುವ ಸ್ಥಳಗಳಲ್ಲಿ ಬೆಳಗ್ಗೆ 9.30ರಿಂದ ಎರಡನೇ ಹಂತದ ತರಬೇತಿಯನ್ನು ನಡೆಸಲು ನೀಡಲು ನಿರ್ಧರಿಸಲಾಗಿದೆ. ಏ.24 ರಂದು ಅಂತಿಮ ಹಂತದ (Final Level Randomization of Polling Persons) ರ‍್ಯಾಂಡಮೈಸೇಷನ್ ಅನ್ನು ನಡೆಸಲಾಗುತ್ತದೆ.
ಅದಲ್ಲದೆ, ಮತದಾನದ ದಿನ ಕಾರ್ಯನಿರ್ವಹಿಸಲು ಮೈಕ್ರೋ ಅಬ್ಸವರ್ಸ್ ನೇಮಿಸುವ ಹಾಗೂ ಅವರಿಗೆ ತರಬೇತಿ ನೀಡುವ ಕುರಿತು ಸಾಮಾನ್ಯ ವೀಕ್ಷಕರೊಂದಿಗೆ ಇದೇ ವೇಳೆ ಚರ್ಚಿಸಲಾಯಿತು.
ಈ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಾಮನ್ಯ ವೀಕ್ಷಕರಾದ ಮಕ್ರಂದ್ ಪಾಂಡುರಂಗ್, ಬೆಂಗಳೂರು ಉತ್ತದ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಗಾಯತ್ರಿ ರಾಥೋರ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ವಾಣಿ ಮೋಹನ್ ಹಾಗೂ ಎಂಸಿಸಿ ನೊಡಲ್ ಅಧಿಕಾರಿಯಾದ ಮುನೀಶ್ ಮೌದ್ಗಿಲ್, ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಚುನಾವಣಾಧಿಕಾರಿಗಳಾದ ಡಾ.ಹರೀಶ್ ಕುಮಾರ್, ಕೆ.ಎ ದಯಾನಂದ್, ವಿನೋತ್ ಪ್ರಿಯಾ, ಸಹಾಯಕ ಆಯುಕ್ತರಾದ ರವಿ ಚಂದ್ರ ನಾಯ್ಕ್, ಜಿಲ್ಲಾ ಮಟ್ಟದ ಮಾನವ ಸಂಪನ್ಮೂಲ ನೋಡಲ್ ಅಧಿಕಾರಿಯಾದ ಡಿ.ಆರ್ ಅಶೋಕ್, ಎನ್.ಐ.ಸಿ ಸಿಬ್ಬಂದಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿರಿಯ ನಾಗರೀಕರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತದಾನ ಅವಕಾಶ :
ಬೆಂಗಳೂರು 3 ಲೋಕಸಭಾ ಕ್ಷೇತ್ರಗಳಲ್ಲಿ ಬರುವ ಮತದಾರರ ಪಟ್ಟಿಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ(AVSC) ಒಟ್ಟು 95,128 ಮತದಾರರಿದ್ದು ಆ ಪೈಕಿ 7,556 ಮಂದಿ ಹಾಗೂ 22,222 ವಿಶೇಷ ಚೇತನರಿದ್ದು (ಶೇ.40ಕ್ಕಿಂತ ಹೆಚ್ಚು ಅಂಗವಿಲತೆ ಉಳ್ಳವರು [ಮತದಾರರ ಪಟ್ಟಿಯಲ್ಲಿ ಗುರುತಿಸಿರುವ]) ಆ ಪೈಕಿ 302 ಮತದಾರರು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದರು. ಹಾಗಾಗಿ ಅವರುಗಳಿಗೆ ಏ.13ರಿಂದ 18ನೇ ತಾರೀಖಿನ ವರೆಗೆ ಅಂಚೆ ಮತದಾನ ಪ್ರಕ್ರಿಯೆ ಮೂಲಕ ಮತದಾನ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶನಿವಾರ ಒಟ್ಟಾರೆ 28 ವಿಧಾನಸಭಾ ಕ್ಷೇತ್ರದಲ್ಲಿ 4,459 ಮತದಾರರು ಅಂಚೆ ಮತದಾನ ಮಾಡಿದರು.