ಬೆಂಗಳೂರು, ಏ.12 www.bengaluruwire.com : ಹೊಸ ವಿದ್ಯತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ಕಚೇರಿಯಿಂದ ಕಚೇರಿಗೆ ಅಲೆದು ಹೈರಾಣಾಗುವ ಪರಿಸ್ಥಿತಿ ಇನ್ನು ಮುಂದೆಯಿರಲ್ಲ. ಏಕೆಂದರೆ, ಹೊಸ ವಿದ್ಯುತ್ ಸಂಪರ್ಕ ನೀಡಲು ನಿಗದಿಪಡಿಸಿದ್ದ ಗರಿಷ್ಠ ಅವಧಿಯನ್ನು ಏಳು ದಿನಗಳಿಂದ ಮೂರು ದಿನಗಳಿಗೆ ಕಡಿತಗೊಳಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಕೆಇಆರ್‌ಸಿ) ಅದೇಶ ಹೊರಡಿಸಿದೆ.
ಈ ಆದೇಶದಿಂದಾಗಿ, ಹೊಸವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದ ಹಲವು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ. ‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳ ಕಾರ್ಯಕ್ಷಮತೆಯ ಗುಣಮಟ್ಟ (ಎಸ್‌ಒ- ಪಿ) ಮತ್ತು ಸಂಬಂಧಿತ ವಿಷಯಗಳು) ನಿಯಮಗಳು 2022’ ಅನ್ನು ತಿದ್ದುಪಡಿ ಮಾಡಲು ಕೆಇಆರ್‌ಸಿ ಪ್ರಸ್ತಾಪಿಸಿದೆ.
ಹೊಸ ಆದೇಶದ ಅನ್ವಯ, ವಿದ್ಯುತ್ ಪೂರೈಕೆ ಕಂಪನಿಗಳು (ಎಸ್ಕಾಂಗಳು) ಮೆಟ್ರೊ ನಗರಗಳಲ್ಲಿ ಅರ್ಜಿ ಸ್ವೀಕರಿಸಿದ ಮೂರು ದಿನಗಳಲ್ಲಿ, ಪುರಸಭೆ ವ್ಯಾಪ್ತಿಯಲ್ಲಿ ಏಳು ದಿನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 15 ದಿನಗಳ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ‘ಈ ಹೊಸ ಸಂಪರ್ಕಗಳಿಗೆ ವಿದ್ಯುತ್ ಸರಬರಾಜು ಮಾರ್ಗಗಳ ವಿಸ್ತರಣೆ ಅಥವಾ ಹೊಸ ಸಬ್‌ಸ್ಟೇಷನ್‌ಗಳ ಸ್ಥಾಪನೆಯ ಅಗತ್ಯವಿದ್ದರೆ, ವಿದ್ಯುತ್ ವಿತರಣಾ ಪರವಾನಗಿದಾರರು, 90 ದಿನಗಳೊಳಗೆ ವಿಸ್ತರಣೆ ಅಥವಾ ಸಬ್‌ಸ್ಟೇಷನ್ ಆರಂಭಿಸಿ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಇಂಧನ ಸಚಿವಾಲಯ ಕಳೆದ ಫೆಬ್ರವರಿ 22ರಂದು ಹೊರಡಿಸಿದ್ದ ಅಧಿಸೂಚನೆಯ ಅನ್ವಯ, ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು 2020ಕ್ಕೆ ತಿದ್ದುಪಡಿ ಮಾಡಿದ್ದು, ಅದನ್ನು ಅಳವಡಿಸಿಕೊಳ್ಳುವುದಾಗಿ ಎಂದು ಕೆಇಆರ್ ಸಿ ಪ್ರಸ್ತಾವನೆಯಲ್ಲಿ ವಿವರಿಸಿದೆ.
ಈ ಹಿಂದಿನ ನಿಯಮದ ಪ್ರಕಾರ, ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ ಗ್ರಾಹಕರು ಮೆಟ್ರೊ ನಗರಗಳಲ್ಲಾದರೆ ಏಳು ದಿನಗಳು, ಪುರಸಭೆ ವ್ಯಾಪ್ತಿಯಲ್ಲಿ 15 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವವರು 30 ದಿನಗಳವರೆಗೂ ಕಾಯಬೇಕಿತ್ತು. ಕೆಇಆರ್ ಸಿ ಹೊಸ ಆದೇಶ ವಿದ್ಯುತ್ ಗ್ರಾಹಕರಿಗೆ ಸಾಕಷ್ಟು ಉಪಯೋಗವಾಗಲಿದೆ.