ಬೆಂಗಳೂರು, ಏ.10 www.bengaluruwire.com : ಬಿಬಿಎಂಪಿ ಆರೋಗ್ಯ ಕ್ಲಿನಿಕಲ್ ವಿಭಾಗದ ಆಸ್ಪತ್ರೆಗಳಲ್ಲಿ ಹುಟ್ಟುವ ಎಲ್ಲಾ ನವಜಾತ ಶಿಶುಗಳಲ್ಲಿ ಚಯಾಪಚಯ ದೋಷಗಳನ್ನು (Inborn Errors of Metabolism – IEM) ಗುರುತಿಸಲು ನವಜಾತ ಶಿಶುಗಳ ಪರೀಕ್ಷೆ (Newborn Screening) ನಡೆಸಲು ಇದೇ ಪ್ರಥಮ ಬಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ಸ್ಥಳೀಯ ಆಡಳಿತ ಸಂಸ್ಥೆಯೊಂದು ತನ್ನ ಆಸ್ಪತ್ರೆಗಳಲ್ಲಿ ಈ ರೀತಿ ವ್ಯವಸ್ಥೆ ರೂಪಿಸಿರುವುದು ರಾಜ್ಯದಲ್ಲೇ ಇದೇ ಮೊದಲು ಎನ್ನಲಾಗಿದೆ. ಪಾಲಿಕೆ ಜೊತೆ ಒಪ್ಪಂದ ಮಾಡಿಕೊಂಡ ಡಯಾಗ್ನಾಸ್ಟಿಕ್ ಸಂಸ್ಥೆಯ ಸಹಕಾರದಲ್ಲಿ ಪ್ರಯೋಗಾಲಯ ಪರೀಕ್ಷೆ ಮಾಡಲಾಗುತ್ತಿದೆ. ಇಲ್ಲಿಗೆ ನವಜಾತ ಶಿಶುಗಳ ರಕ್ತ ಮತ್ತು ಮೂತ್ರ ಮಾದರಿಗಳನ್ನು ಕಳಿಸಿಕೊಟ್ಟು 7 ರಿಂದ 8 ಅಮೈನೋ ಆಸಿಡ್ ಸರಣಿಯ ಜನ್ಮಜಾತ ಚಯಾಪಚಯ ದೋಷಗಳನ್ನು ಪತ್ತೆಹಚ್ಚುವ ಗುರಿಯನ್ನು ಬಿಬಿಎಂಪಿ ವೈದ್ಯಕೀಯ ವಿಭಾಗವು ಹೊಂದಿದೆ.
“ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ನವಜಾತ ಶಿಶುಗಳಲ್ಲಿ ಅಪರೂಪದ ಕಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ನವಜಾತ ಶಿಶುಗಳ ಪರೀಕ್ಷೆ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ. ಇದಕ್ಕಾಗಿ ಕ್ವಾಲಿಟಿ ಡಯಾಗ್ನಾಸ್ಟಿಕ್ ಫೌಂಡೇಷನ್ ಜೊತೆ ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಅವರು ಉಚಿತವಾಗಿ ಈ ಪರೀಕ್ಷೆಗಳನ್ನು ನಡೆಸುತ್ತಾರೆ. ಈಗ ಮೊದಲಿಗೆ ಆರು ರೆಫರಲ್ ಆಸ್ಪತ್ರೆಯಲ್ಲಿ ಪೈಲಟ್ ಆಧಾರದ ಮೇಲೆ ಆರಂಭ ಮಾಡಿದ್ದೇವೆ. ಹಾಗೂ ಹಂತ ಹಂತವಾಗಿ ಇನ್ನು 24 ಹೆರಿಗೆ ಆಸ್ಪತ್ರೆಗಳಲ್ಲೂ ಪ್ರಾರಂಭಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಪರೀಕ್ಷೆಗಳನ್ನು ಬಿಬಿಎಂಪಿ ಆಸ್ಪತ್ರೆಗಳ ಪ್ರಯೋಗಾಲಯದಲ್ಲಿಯೇ ನಡೆಸಲು ಕ್ರಮವಹಿಸಲಾಗುವುದು” ಎಂದು ಹೇಳುತ್ತಾರೆ ಪಾಲಿಕೆ ಆರೋಗ್ಯ ವಿಭಾಗ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್.
ನವಜಾತ ಶಿಶುಗಳಿಗೆ ಕೆಲವೊಂದು ಅಪರೂಪದ ಕಾಯಿಲೆಗಳನ್ನು ಪತ್ತೆಹಚ್ಚಲು ಹಾಗೂ ಆ ಮಕ್ಕಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ತಡವಾಗಿ ಮಕ್ಕಳಲ್ಲಿ ಇಂತಹ ಅಪರೂಪದ ಕಾಯಿಲೆ ಪತ್ತೆಯಾದರೆ ಆಗುವ ರೋಗಗಳನ್ನು, ತೊಂದರೆಗಳನ್ನ ನಿಯಂತ್ರಿಸಬಹುದು. ಇದರಿಂದ ಪಾಲಿಕೆಯ ಆಸ್ಪತ್ರೆಗಳಲ್ಲಿ ವಾರ್ಷಿಕವಾಗಿ ಜನಿಸುವ ಅಂದಾಜು 14000 ರಿಂದ 15000 ನವಜಾತ ಶಿಶುಗಳು ಪ್ರಯೋಜನ ಪಡೆಯಲಿವೆ. ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಾಸಾಯನಿಕ ವಿಜ್ಞಾನ ವಿಭಾಗದಲ್ಲಿನ ಫ್ರೊ. ಉತ್ಪಾಲ್ ಟಾಟು ಅವರು, ಈ ಸಂಬಂಧ ಬಿಬಿಎಂಪಿ ವೈದ್ಯರಿಗೆ ತರಬೇತಿ ನೀಡಿದ್ದಾರೆ ಎಂದು ಪಾಲಿಕೆ ಆರೋಗ್ಯ ವಿಭಾಗ ಮುಖ್ಯ ವೈದ್ಯಾಧಿಕಾರಿ ಡಾ.ನಿರ್ಮಲ ಬುಗ್ಗಿ ತಿಳಿಸಿದ್ದಾರೆ.
ಈ ಸ್ಕ್ರೀನಿಂಗ್ ಪರೀಕ್ಷೆಯು ಈಗಾಗಲೇ ಪಾಲಿಕೆಯ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿರುವ ತಾಯಿ ಮತ್ತು ಮಕ್ಕಳ ಸೇವೆಗಳಿಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡಲಿದೆ. ಈ ಪ್ರಯೋಗಾಲಯ ಸ್ಕಿನಿಂಗ್ ಸೇವೆಯಡಿ ಪ್ರಾಥಮಿಕ ಹಂತದಲ್ಲಿ ಬಿಬಿಎಂಪಿ ರಫರಲ್ ಆಸ್ಪತ್ರೆಗಳಿಂದ ಕ್ಯಾಲಿಟಿ ಡಯಾಗೋಸ್ಟಿಕ್ ಫೌಂಡೇಶನ್ ಪ್ರಯೋಗಾಲಯಕ್ಕೆ ಮೂತ್ರ ಸ್ಯಾಂಪಲ್ ಅನ್ನು ಕಳುಹಿಸಲಾಗುತ್ತಿದ್ದು, ತದನಂತರ ಹೆರಿಗೆ ಆಸ್ಪತ್ರೆಗಳಿಂದ ಮೂತ್ರ ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗುವುದು.