– ಲೇಖನ ಬರಹ : ಶ್ರೀನಾಥ್ ಜೋಶಿ ಸಿದ್ದರ, ಹಿರಿಯ ಪತ್ರಕರ್ತರು
ಭಾರತೀಯ ಸಂಸ್ಕೃತಿಯ ಮೇಲೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಸವಾರಿ ಅತಿಯಾಗುತ್ತಿದೆ. `ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬುದು ಋಗ್ವೇದದ ಮಾತು. ಅಂದರೆ ಉದಾತ್ತ ವಿಚಾರಗಳು ವಿಶ್ವದ ಎಲ್ಲ ಕಡೆಗಳಿಂದಲೂ ಬರಲಿ ಎನ್ನುವ ಸಂಸ್ಕೃತಿ ನಮ್ಮದು. ಯುಗಾದಿ ಪರ್ವ ಕಾಲ, ಯುಗ ಮತ್ತು ಆದಿ ಎಂಬ ಪ್ರತ್ಯೇಕ ಎರಡು ಶಬ್ದಗಳು’ಯುಗಾದಿ’ ಎನ್ನುವ ಶಬ್ದ ಹುಟ್ಟಿಕೊಂಡಿದೆ. ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ.
ಈ ಬಾರಿಯ ಭಾರತೀಯ ಹೊಸ ವರ್ಷದ ಮೊದಲ ದಿನವನ್ನು ಯುಗಾದಿ ಹಬ್ಬವನ್ನು ದೇಶದಾದ್ಯಂತ ಏಪ್ರಿಲ್ 9, 2024 ರ ಮಂಗಳವಾರ ಆಚರಿಸಲಾಗುತ್ತಿದೆ. ಮುಂದಿನ ʻಶ್ರೀ ಕ್ರೋಧಿನಾಮ ಸಂವತ್ಸರʼವೂ ಸಮಸ್ತ ಚರಾಚರ ಜೀವಿಗಳಿಗೆ ಒಳಿತನ್ನು ಮಾಡಲಿ ಎನ್ನುವ ಪ್ರಾರ್ಥನೆಯೊಂದಿಗೆ ಸಮಸ್ತ ಜನ ಕೋಟಿಗೆ ನವ ವರ್ಷ ಹರ್ಷವನ್ನು ತರಲಿ ಎನ್ನುವ ಶುಭ ಹಾರೈಕೆಯೊಂದಿಗೆ, ಈ ವರ್ಷದ ಯುಗಾದಿ ಪುಣ್ಯ ಕಾಲದಲ್ಲಿ ಪಂಚಾಂಗ ಶ್ರವಣ ಮಾಡುವುದು ವಾಡಿಕೆ.
ಶ್ರೀ ಕ್ರೋಧಿನಾಮ ಸಂವತ್ಸರ ಫಲದ ಶ್ಲೋಕ :
ಕ್ರೋಧಿನಾಮಕ್ಕೆ ಸಂಬಂಧಿಸಿದ ಫಲಶ್ಲೋಕವು ಇಂತಿದೆ..
“ಕ್ರೋಧಿನಿ ಸತತಂ ಭೂಮೌ |ಕ್ಷಿತಿಪತಿಕಲಹೈರ್ವಿಹೀನಧನಾಃ ||ಫಲಮೂಲಾಶನವಶಗಾ |ಸ್ತಥಾ ಲೋಕಾಶ್ಚವರ್ಧಂತೇ ||”
ಪೂರ್ತಿ ಶ್ಲೋಕದ ಭಾವಾನುವಾದಂತೆ, ‘ಕ್ರೋಧಿ ಸಂವತ್ಸರದಲ್ಲಿ ರಾಜರುಗಳ ಸಂಘರ್ಷದಿಂದ ಜನರು ಬಡವರಾಗುತ್ತಾರೆ. ಬರಗಾಲದಿಂದಾಗಿ ಆಹಾರಕ್ಕೂ ಕಷ್ಟವಾಗುತ್ತದೆ. ಫಲಮೂಲಗಳನ್ನು ತಿಂದು ಜೀವಿಸುತ್ತಾರೆ’ ಎನ್ನುವ ಅರ್ಥ ಬರುತ್ತದೆ.
ಶ್ರೀ ಕ್ರೋಧಿನಾಮ ಸಂವತ್ಸರದ ಫಲಾಫಲವು ಇಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ದೇಶಕ್ಕೆ ಕೆಲವು ಅನುಕೂಲಕರ ಸಂಗತಿಗಳು ಕಂಡು ಬರಲಿದೆ. ಕಾನೂನಿಗೆ ಸಾಮಾನ್ಯ ಜನರೂ ಗೌರವಿಸಲಿದ್ದಾರೆ. ರಾಜಕೀಯ ಪಕ್ಷಗಳ ನಡುವಿನ ವಿವಾದಗಳು ಮುಂದುವರೆಯಲಿದೆ. ದೇಶದ ಪ್ರಮುಖ ಪಕ್ಷವೊಂದು ಶಕ್ತಿ ಕಳೆದುಕೊಳ್ಳುತ್ತದೆ. ಆ ಪಕ್ಷದಲ್ಲಿರುವವರೇ ನಾಯಕತ್ವದ ಬಗ್ಗೆ ಭಿನ್ನ ಮತದ ಮಾತುಗಳನ್ನು ಆಡುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ರಾಜಕೀಯ ಪಕ್ಷವೊಂದರ ಕಠಿಣ ನಿರ್ಧಾರದಿಂದ ದೇಶದಲ್ಲಿ ಆಶಾದಾಯಕ ಬದಲಾವಣೆಯಾಗಲಿದೆ. ದೇಶಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಕಾರ್ಯಗಳಲ್ಲಿ ವಿಳಂಬವಿದೆ.
ಆಧುನಿಕ ತಂತ್ರಜ್ಞಾನದಲ್ಲಿ ನಮ್ಮ ದೇಶಕ್ಕೆ ಉತ್ತಮ ಭವಿಷ್ಯವಿದೆ. ದೇಶದ ರಕ್ಷಣೆಗೆ, ಜನಪರ ಕಾರ್ಯಕ್ಕೆ ಅಧಿಕಾರಿಗಳ ತೀರ್ಮಾನಕ್ಕೆ ಜನರ ಸ್ಪಂದನೆ ಕಾಣಲಿದೆ. ಸೈನ್ಯದ ಕೆಲವು ನಡೆಗಳು ವಿದೇಶಿಗರ ಕೆಂಗಣ್ಣಿಗೆ ಗುರಿಯಾಗಲಿದೆ. ಚಿಕ್ಕ ವಯಸ್ಸಿನ ಬಾಲನೊಬ್ಬ ವಿಶ್ವಕ್ಕೆ ಕೊಡುಗೆ ನೀಡಲಿದ್ದಾನೆ. ಆದಾಯ ಇದ್ದರೂ ಸಮಸ್ಯೆಗಳಿಗೂ ಕೊರತೆ ಇರುವುದಿಲ್ಲ. ಜನರು ಜಾತಿ ಮತ್ತು ಧರ್ಮಗಳ ಭೇದ ಮರೆತು ತಾವು ಭಾರತೀಯರು ಎನ್ನುವ ಭಾವನೆಯಿಂದ ಒಗ್ಗೂಡಿ ಬಾಳಲು ಮನಸ್ಸು ಮಾಡುತ್ತಾರೆ. ಆದರೆ ಧಾರ್ಮಿಕ ಉಗ್ರಗಾಮಿಗಳ ಹಾವಳಿ ಮುಂದುವರಿಯಲಿದೆ. ಹೊರಗಿನ ಬೆದರಿಕೆಗಳಿಗಿಂತಲೂ ಆಂತರಿಕ ಸಮಸ್ಯೆಗಳು ಹೆಚ್ಚಾಗಲಿದೆ. ಭಾರತದ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ.
ನಿತ್ಯೋಪಯೋಗಿ ಪದಾರ್ಥಗಳ ಬೆಲೆ ಗಗನಕ್ಕೇರಲಿದೆ. ಮಧ್ಯಮವರ್ಗದವರ ಕಷ್ಟ ಮುಂದುವರೆಯಲಿದೆ. ವಯೋವೃದ್ಧರ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ಬರುವ ಸೂಚನೆಗಳಿವೆ. ವಾಹನಗಳ ವ್ಯಾಪಾರದಲ್ಲಿ ವೃದ್ಧಿ. ಹೆಣ್ಣುಮಕ್ಕಳ ಸಂತಾನ ಹೆಚ್ಚಾಗಲಿದೆ. ಭಯಂಕರ ರೋಗಗಳು ಕಾಣಿಸಿಕೊಳ್ಳಲಿದೆ. ಅದಕ್ಕೆ ತಕ್ಕ ಆವಿಷ್ಕಾರದಿಂದ ದೇಶ ಹೆಸರು ಮಾಡಲಿದೆ. ಮೋಸಕ್ಕೂ ತಂತ್ರಜ್ಞಾನವೇ ಕಾರಣವಾಗಲಿದೆ.
ಫಸಲಿನಲ್ಲಿ ಭಾರಿ ಪ್ರಮಾಣದ ಕುಸಿತ ಕಾಣಲಿದೆ. ಕೃಷಿಕರು ಕೃಷಿ ಬಿಡುವ ಚಿಂತನೆ ಮಾಡಲಿದ್ದಾರೆ. ಕಳ್ಳರ ಹಾವಳಿ ಹಿಂದಿನಕ್ಕಿಂತ ಈ ಬಾರಿ ಹೆಚ್ಚಾಗಲಿದೆ. ವಿಳಂಬಿತ ಮಳೆ ಕಾಣಿಸಿಕೊಳ್ಳಲಿದೆ. ಹೈನುಗಾರಿಕೆ ಯಥಾವತ್ತಾಗಿ ಇರಲಿದೆ. ಹಣ್ಣು ಹಂಪಲು ಹೆಚ್ಚಾಗಿದ್ದರೂ, ತರಕಾರಿ, ಸೌಂದರ್ಯವರ್ಧಕಗಳು ತುಟ್ಟಿಯಾಗಲಿದೆ. ನಮ್ಮ ರಾಜ್ಯ ವಲಸಿಗರ ತಾಣವಾಗಲಿದೆ. ಹಿರಿಯ ರಾಜಕಾರಣಿಗಳು ಹಗರಣದಲ್ಲಿ ಸಿಲುಕಲಿದ್ದಾರೆ. ಅಕಾಲಿಕ ಮಳೆ, ಭೂಕಂಪದ ಭೀತಿಯೂ ಇದೆ. ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಲಿದ. ಷೇರು ಮಾರುಕಟ್ಟೆ ತೇಜಿಯಾಗಲಿದೆ. ಜಗತ್ತಿನ ದೊಡ್ಡ ದೇಶದೊಂದಿಗಿನ ಭಾರತದ ಸ್ನೇಹಕ್ಕೆ ತುಸು ಇರುಸು ಮುರುಸು ಆಗುವ ಲಕ್ಷಣಗಳು ಇವೆ. ವಿರೋಧಿ ದೇಶಗಳು ತಮ್ಮ ಆತ್ಮ ರಕ್ಷಣೆಗೆ ಹೆಚ್ಚಿನ ಧನ ವ್ಯಯಿಸಲಿದ್ದಾರೆ.
ಯುಗಾದಿ ಹಬ್ಬದ ಪೌರಾಣಿಕ ಹಿನ್ನೆಲೆ
ಯುಗಾದಿ ಹಬ್ಬದ ಪೌರಾಣಿಕ ಹಿನ್ನೆಲೆಯಂತೆ ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ್ದು ಸಹ ಯುಗಾದಿಯ ದಿನದಂದು. ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿದ್ದು, ಸೀತಾ, ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿ ಬಂದ್ದಿದ್ದು, ಸೋಮಕಾಸುರ ಎಂಬ ರಾಕ್ಷಸನಿಂದ ವೇದಗಳನ್ನು ಮಹಾವಿಷ್ಣು ರಕ್ಷಿಸಿ, ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೂ ಯುಗಾದಿಯೇ. ಇಂಥ ಹಲವು ಶುಭಾರಂಭಗಳಿಂದ ‘ಯುಗಾದಿ ಆಚರಣೆ ಬಂದಿದೆ. ಬ್ರಹ್ಮನು ಚೈತ್ರ ಶುದ್ಧ ಪ್ರಥಮದಂದು ಸೂರ್ಯೋದಯ ಸಮಯಕ್ಕೆ ಸರಿಯಾಗಿ, ಸಮಗ್ರವಾಗಿ ಈ ಜಗತ್ತನ್ನು ಸೃಷ್ಟಿಸಿದನೆಂದು ಪುರಾಣಗಳು ಹೇಳುತ್ತವೆ. ಅದಕ್ಕಾಗಿ ಆ ದಿನ ನಮಗೆ ಹೊಸ ವರುಷದ ಆರಂಭದ ಹಬ್ಬದ ದಿನವೆನಿಸಿದೆ.
ಚಾಂದ್ರಮಾನ ಕಾಲಗಣನೆ :
ಚಾಂದ್ರಮಾನ ಕಾಲಗಣನೆಯ ಪ್ರಕಾರ ಮೇಷ ಸಂಕ್ರಮಣಕ್ಕೆ ಯುಗಾದಿ ಬರುತ್ತದೆ. ಇದನ್ನೇ `ವಿಷು’, `ಬಿಸು’, `ಪರ್ಬ’ ಎಂದೆಲ್ಲ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಈ `ಬಿಸು’ ಪರ್ಬದ ದಿವಸ ಒಕ್ಕಲಿಗರು ಹಾಗೂ ಧನಿಕರಲ್ಲಿ ಊಳುವ ಭೂಮಿಯನ್ನು ಬಿಟ್ಟುಕೊಡುವ ಹಾಗೂ ನವೀಕರಿಸುವ ಪದ್ಧತಿಯಿತ್ತು. ಸಾಹುಕಾರನ ಸಾಲ ಸಂದಾಯ ಮಾಡಿ ರೈತ ಋಣಮುಕ್ತನಾಗುವ ಹೊಸ ವರ್ಷದ ಹಬ್ಬವಿದು. ಹೊಸ ವರ್ಷದ ಯುಗಾದಿಯಂದು ತಮ್ಮ ವ್ಯಾಪ್ತಿಯ ಭೂಮಿಯಲ್ಲಿ ಸ್ವಲ್ಪ ಭಾಗವನ್ನಾದರೂ ಉಳುಮೆ ಮಾಡುವ ವಾಡಿಕೆಯಿದೆ. ಯುಗಾದಿಯಂದು ಸಂಜೆ ಎಲ್ಲರೂ ಊರ ದೇವಾಲಯದಲ್ಲಿ ಸೇರಿ ಪಂಚಾಂಗ ಶ್ರವಣ ಮಾಡಿ, ಮುಂದಿನ ವರ್ಷದ ಮಳೆ-ಬೆಳೆ ಇತರ ಫಲಗಳನ್ನು ತಿಳಿಯುತ್ತಾರೆ. ಯುವಜನತೆ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.
ಕಾಲಗಣನೆ ಲೆಕ್ಕಾಚಾರ ಹೇಗೆ ಮಾಡಲಾಗುತ್ತೆ? :
9 ವರ್ತಮಾನಗಳನ್ನು ನಮ್ಮ ಪೂರ್ವಜರು ನಂಬಿದ್ದರು. ಭಾರತೀಯರು ಒಂಭತ್ತು ಬಗೆಯ ಕಾಲಗಣನಾ ಪದ್ಧತಿಯನ್ನು ಖಗೋಳವಿಜ್ಞಾನದ ರೀತಿಯಲ್ಲಿ ಆವಿಷ್ಕರಿಸಿದ್ದರು. ಚಾಂದ್ರಮಾನ, ಸೌರಮಾನ, ಸಾವನಮಾನ, ಪಿತೃಮಾನ, ದೇವಮಾನ, ನಾಕ್ಷತ್ರಮಾನ, ಬಾರ್ಹಸ್ಪತ್ಯಮಾನ, ಪ್ರಾಜಾಪತ್ಯಮಾನ ಮತ್ತು ಬ್ರಾಹ್ಮಮಾನ. ಇವುಗಳ ಪೈಕಿ ಚಾಂದ್ರಮಾನ, ಸೌರಮಾನಗಳು ಮಾನವನ ದೈನಂದಿನ ವ್ಯವಹಾರಕ್ಕೆ ಒದಗಿಬರುತ್ತವೆ. ಪ್ರಾಜಾಪತ್ಯಮಾನ, ಬ್ರಾಹ್ಮಮಾನ ಇತ್ಯಾದಿಗಳು ಬ್ರಹ್ಮಾಂಡ, ಮನ್ವಂತರಗಳಿಗೆ ಸಂಬಂಧಪಟ್ಟವುಗಳಾಗಿದ್ದು, ಖಗೋಳವಿಜ್ಞಾನಕ್ಕೆ ಉಪಯುಕ್ತವಾದವುಗಳಾಗಿವೆ.
5116 ವರ್ಷಗಳ ಹಿಂದೆ ನವಗ್ರಹಗಳು ಒಂದೇ ರೇಖೆಯಲ್ಲಿ ಬಂದಿದ್ದವು. ಕೋಟ್ಯಂತರ ವರ್ಷಕ್ಕೊಮ್ಮೆ ನವಗ್ರಹಗಳು ಒಂದೇ ರೇಖೆಗೆ ಬರುತ್ತವೆ. 5116 ವರ್ಷಗಳ ಹಿಂದೆ ಎಲ್ಲಾ ಗ್ರಹಗಳು ಒಂದೇ ರೇಖೆಗೆ ಬಂದ ದಿನವೇ ಕಲಿಯುಗ ಆರಂಭ ಆದದ್ದು. ಅಂದೇ ಶ್ರೀಕೃಷ್ಣನು ಲೋಕವನ್ನಬಿಟ್ಟು ಹೋದದ್ದು. ಭಾರತೀಯ ಕಾಲಗಣನೆ ಅತ್ಯಂತ ವೈಜ್ಞಾನಿಕವಾದದ್ದು. ಕಲ್ಪ, ಮನ್ವಂತರ, ಚತುರ್ಯುಗ, ಯುಗ, ಬ್ರಹ್ಮನ ಆಯುಷ್ಯ ಮುಂತಾದ ಕಾಲಗಣನೆಯನ್ನು ಭಾರತೀಯ ಶಾಸ್ತ್ರಗಳಲ್ಲಿ ಕಾಣಬಹುದು. ನಾಲ್ಕು ಯುಗಗಳು, ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ ಎಂಬುದಾಗಿ. ಕಲಿಯುಗದ ಒಟ್ಟು ಅವಧಿ 4,32,000 ವರ್ಷಗಳು.
ಇದಕ್ಕಿಂತ ಎರಡುಪಟ್ಟು ದ್ವಾಪರಯುಗವೂ, ಕಲಿಯುಗದ ಮೂರುಪಟ್ಟು ತ್ರೇತಾಯುಗವೂ ಹಾಗೂ ನಾಲ್ಕುಪಟ್ಟು ಕೃತಯುಗದ ಅವಧಿಯೂ ಆಗಿರುತ್ತದೆ. ಹೀಗೆ ನಾಲ್ಕು ಯುಗಗಳ ಅವಧಿ 43,20,000 ವರ್ಷಗಳು. 1,000 ಚತುರ್ಯುಗ ಸೇರಿದರೆ ಒಂದು ಕಲ್ಪ. ಅಂದರೆ 437 ಕೋಟಿ ವರ್ಷಕ್ಕೆ ಒಂದು ಕಲ್ಪ. ಇದು ಬ್ರಹ್ಮನ ಒಂದು ಹಗಲು. ಆತನ ಒಂದು ದಿನ ಅಂದರೆ 864 ಕೋಟಿ ವರ್ಷಗಳು. ಆತನ ನೂರು ವರ್ಷ ಆಯುಷ್ಯ ಅಂದರೆ 3,11,04,000 ಕೋಟಿ ವರ್ಷ. ಅದರ ನಂತರ ಮಹಾ ಪ್ರಳಯ.
ಈ ಲೆಕ್ಕಾಚಾರದಂತೆ ಈಗ ನಮ್ಮ ಭೂಮಿಯ ಆಯುಷ್ಯ, 1,000 ಚತುರ್ಯುಗಗಳು ಸೇರಿದರೆ ಒಂದು ಕಲ್ಪ ಆಗುತ್ತದೆ. 71 ಚತುರ್ಯುಗಗಳು ಸೇರಿದರೆ ಒಂದು ಮನ್ವಂತರವಾಗುತ್ತದೆ. ಈಗ 6 ಮನ್ವಂತರ ಮುಗಿದು 7ನೇ ಮನ್ವಂತರ ನಡೆಯುತ್ತಾ ಇದೆ. 7ನೇ ಮನ್ವಂತರದಲ್ಲಿ 27 ಚತುರ್ಯುಗಗಳು ಮುಗಿದು 28ನೇ ಚತುರ್ಯುಗದ ಕಲಿಯುಗದ 5116ನೇ ವರ್ಷದಲ್ಲಿ ನಾವೆಲ್ಲಾ ಜೀವಿಸುತ್ತಿದ್ದೇವೆ. ಭಾರತೀಯ ಕಾಲಗಣನೆಯ ಪ್ರಕಾರ ಭೂಮಿಯ ಈಗಿನ ಆಯುಷ್ಯ ೧೯೮ ಕೋಟಿ ವರ್ಷ. ವಿಜ್ಞಾನಿಗಳು ಸಹ ಭೂಮಿಯ ಆಯುಷ್ಯವನ್ನು ವ್ಯಾಖ್ಯಾನಿಸಿದ್ದಾರೆ. ಪ್ರಖ್ಯಾತ ವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಎಂಬ ವಿಜ್ಞಾನಿ ಭೂಮಿಯು ಹುಟ್ಟಿ ೨೦೦ ಕೋಟಿ ವರ್ಷವಾಗಿದೆ ಎಂದು ತಿಳಿಸಿದ್ದಾನೆ.
ಭಾರತೀಯ ಕಾಲಗಣನೆಗೂ ವೈಜ್ಞಾನಿಕ ಕಾಲಗಣನೆಗೂ ತುಂಬಾ ಸಾಮ್ಯತೆ ಇದೆ. ನಮ್ಮಲ್ಲಿ ಇನ್ನೂ ಕೆಲವು ಕಾಲಗಣನೆ ಪದ್ಧತಿಗಳು ಇವೆ. ವಿಕ್ರಮ ಶಕೆ, ಶಾಲಿವಾಹನ ಶಕೆ ಮುಂತಾದ ಪದ್ಧತಿಗಳು ಉತ್ತರ ಭಾರತದಲ್ಲಿ ರೂಢಿಯಲ್ಲಿವೆ. ಈ ದೇಶಕ್ಕೆ ವಿದೇಶೀಯರಾದ ಶಕರು, ಹೂಣರು ಆಕ್ರಮಣ ಮಾಡಿದಾಗ ಶಾಲಿವಾಹನ ಎಂಬ ರಾಜ ಮಣ್ಣಿನ ಗೊಂಬೆಗಳನ್ನು ಮಾಡಿ, ಅದರಲ್ಲಿ ಜೀವ ತುಂಬಿ, ಅವರನ್ನು ಸೈನಿಕರನ್ನಾಗಿ ಮಾಡಿ ಶಕರ ವಿರುದ್ಧ ಹೋರಾಟ ಮಾಡಿ ಜಯಗಳಿಸಿದ ಎಂಬುದಾಗಿ ಕಥೆಯಿದೆ. ಆ ಕಥೆಯ ಆಧಾರದಲ್ಲಿ ಕಾಲಗಣೆಯನ್ನು ಮಾಡಲಾಗುತ್ತದೆ.
ಹಬ್ಬದ ಆಚರಣೆ ಹೇಗೆ ಮಾಡಬೇಕು? :
ಹಬ್ಬದ ದಿನ ಮುಂಜಾನೆ ಎಣ್ಣೆ ಹಚ್ಚಿಕೊಂಡು ಅಭ್ಯಂಗನ ಸ್ನಾನ ಮಾಡಬೇಕು.ಎಣ್ಣೆ ಲಕ್ಷ್ಮಿಯಾದರೆ, ನೀರು ಗಂಗೆ, ಹೊಸ ಬಟ್ಟೆ ಧರಿಸಿ ಮನೆಯಲ್ಲಿ ಹಿರಿಯರು ಮಾಡುವ ಪೂಜೆಗಳಲ್ಲಿ ಭಾಗಿಯಾಗಿ ತೀರ್ಥ ಪ್ರಸಾದ ಸೇವನೆ ಮಾಡಿ, ಸುಗ್ರಾಸ ಭೋಜನವನ್ನು ಸವಿದು ಆನಂದದಿಂದ ದಿನ ಕಳೆಯಬೇಕು. ಪಂಚಾಂಗ ಶ್ರವಣ ಕೇಳುವುದರೊಂದಿಗೆ, ಹಬ್ಬದ ಆಚರಣೆಯನ್ನು ಮಾಡಬೇಕು. ಯುಗಾದಿಯಂದು ಬೇವು ಬೆಲ್ಲ ಕೊಡುವಾಗ “ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯ ಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್” ಎಂದು ನೂರು ವರ್ಷಗಳ ಕಾಲ ವಜ್ರ ದೇಹಿಯಾಗಿರಲು, ಸರ್ವ ಸಂಪತ್ತುಗಳನ್ನು ಪಡೆಯಲು ಮತ್ತು ಸಕಲ ಅನಿಷ್ಠ ನಿವಾರಣೆಗಾಗಿಯೂ ಬೇವಿನ ಹೊಸ ಚಿಗುರನ್ನು ಸೇವಿಸಬೇಕು ಎನ್ನುವ ಅರ್ಥದಲ್ಲಿರುವ ಈ ಶ್ಲೋಕ ಹೇಳಲಾಗುತ್ತದೆ. ಈ ರೀತಿಯಲ್ಲಿ ಸನಾತನಿಗಳಾದ ನಾವು ಯುಗಾದಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ.