ಬೆಂಗಳೂರು ಏ.08 www.bengaluruwire.com : ಯುಗಾದಿ ಹಾಗೂ ರಂಜಾನ್ ಹಬ್ಬದ ಸಂಧರ್ಭದಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಮಂಡಳಿಯ ಹಿರಿಯ ಅಧಿಕಾರಿಗಳಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈ ವಾರದಲ್ಲಿ ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬವಿದೆ. ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ನಾಗರೀಕರಿಗೆ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಬ್ಬದ ದಿನ ರೊಟೇಷನ್ ನಲ್ಲಿ ತುರ್ತು ಕಾರ್ಯಗಳಿಗೆ ಲಭ್ಯವಿರುವಂತೆ ಅಧ್ಯಕ್ಷರು ಕಟ್ಟಪ್ಪಣೆ ಮಾಡಿದ್ದಾರೆ.
ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ನೀರು ಸರಬರಾಜು ಮಾಡಿ :
ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಈಗಾಗಲೇ ಸಿಂಟೆಕ್ಸ್ ಟ್ಯಾಂಕ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹಬ್ಬದ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ನೀರು ಸರಬರಾಜು ಮಾಡಬೇಕು. ಒಂದು ಬಾರಿ ಟ್ಯಾಂಕ್ ತುಂಬುವ ಕಡೆ ಎರಡು ಬಾರಿ ತುಂಬುವ ಕೆಲಸ ಮಾಡಬೇಕು. ರಜೆಯಿಲ್ಲದೇ ಕೆಲಸ ಮಾಡುವ ಮೂಲಕ ನೀರಿನ ಸಮಸ್ಯೆಯನ್ನ ಸಮರ್ಥವಾಗಿ ಮಂಡಳಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಾಲ್‌ಮೆನ್‌ಗಳು ನಿಭಾಯಿಸಿದ್ದಾರೆ. ಇದೇ ರೀತಿಯ ಶ್ರಮದ ಮೂಲಕ ಜನರು ಯಾವುದೇ ಆತಂಕವಿಲ್ಲದೇ ಹಬ್ಬವನ್ನು ಆಚರಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದ್ದಾರೆ.
ನೀರು ಸೋರಿಕೆ ಬಗ್ಗೆ ತುರ್ತು ಕ್ರಮಕ್ಕೆ ಸೂಚನೆ:
ನೀರಿನ ಸೋರಿಕೆ ತಡೆಯುವ ನಿಟ್ಟಿನಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಂಡು ಬುಧುವಾರದಂದು (ಏಪ್ರಿಲ್ 10 ರಂದು) ಸಮಗ್ರ ವರದಿಯನ್ನು ನೀಡುವಂತೆ ಡಾ.ವಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಜಲಮಂಡಳಿಯ ವತಿಯಿಂದ ಸಮಸ್ಯೆ ಇರುವಂತಹ ಪೈಪ್‌ಲೈನ್ ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಹಾಳಾಗಿರುವ ಪೈಪ್‌ಲೈನ್‌ಗಳಿಂದ ನೀರು ಸೋರಿಕೆಯನ್ನ ಪರಿಣಾಮಕಾರಿಯಾಗಿ ತಡೆಗಟ್ಟಲು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನೀರು ತಡೆಗಟ್ಟಬಹುದಾದ ಕಾಮಗಾರಿಗಳನ್ನ ಕೈಗೊಂಡು ಅದರ ಬಗ್ಗೆ ಬುಧವಾರದಂದು ವರದಿ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಮುಖ್ಯ ಎಂಜನಿಯರ್ ಗಳಾದ ಎಲ್.ಕುಮಾರನಾಯಕ, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ ಕೆ.ಎನ್, ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ, ಅಪರ ಮುಖ್ಯ ಎಂಜನಿಯರ್ ಮಧುಸೂಧನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.