ಬೆಂಗಳೂರು, ಏ.07 www.benglauruwire.com : ಬೆಂಗಳೂರು ಸೇರಿದಂತೆ ದೇಶಾದ್ಯಂತ ಬೇಸಿಗೆಯಲ್ಲಿ ಉಷ್ಣಾಂಶ ಒಂದೆಡೆ ಒಂದೇ ಸಮನೆ ಏರಿಕಾಯಾಗುತ್ತಿದ್ರೆ, ಇನ್ನೊಂದು ಕಡೆ ಹವಾನಿಯಂತ್ರಿತ ಉಪಕರಣ, ಕೂಲರ್, ಫ್ಯಾನ್ ಹಾಗೂ ರೆಫ್ರಿಜರೇಟರ್ ಗಳಿಗೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗ್ರಾಹಕ ಉಪಕರಣಗಳ ಮಾರಾಟ ಮಳಿಗೆಗಳಲ್ಲಿ, ಆನ್ ಲೈನ್ ಖರೀದಿ ಮಾಡುವ ಗ್ರಾಹಕರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ.
ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಈ ಬಾರಿ ಫೆಬ್ರವರಿ ಮೂರನೇ ವಾರದಿಂದಲೇ ಉಷ್ಣಾಂಶ ಹೆಚ್ಚಾಗಿದ್ದು, ಬೇಸಿಗೆಯ ಬಿಸಿಯ ಅನುಭವ ಚಳಿಗಾಲದಲ್ಲೇ ಆರಂಭವಾದಂತಿತ್ತು. ಮಾರ್ಚ್ ನಲ್ಲಿ ಸುಡುಬಿಸಿಲಿನಲ್ಲಿ ನಗರದ ನಾಗರೀಕರು ಹೈರಾಣಾಗಿದ್ದರು. ಮನೆಯಿಂದ ಕಚೇರಿಗೆ ಟೂವೀಲರ್, ಕಾರ್, ಮೆಟ್ರೋ, ಬಸ್ ಮತ್ತಿತರ ವಾಹನಗಳಲ್ಲಿ ಹೋಗಿಬರುವವರು ಸುಸ್ತಾಗಿ ಹೋಗುತ್ತಿದ್ದಾರೆ. ಮನೆಗೆ ಬಂದರೂ ಬೆಳಗ್ಗೆಯಿಂದ ರಾತ್ರಿ ತನಕವೂ ಮೈಕೈ ಬಿಸಿಯಾಗುತ್ತಿದೆ. ಇದು ಏಪ್ರಿಲ್ ತಿಂಗಳಲ್ಲೂ ಇನ್ನೂ ಹೆಚ್ಚಾಗುತ್ತಾ ಬಂದಿದೆ.
ನಗರದಲ್ಲಿ ಏಪ್ರಿಲ್ 6 ರಿಂದ 7ನೇ ತಾರೀಖಿನ ಬೆಳಗ್ಗೆ 8.30ರ ಅವಧಿವರೆಗೆ ಬೆಂಗಳೂರಿನ ಗರಿಷ್ಠ ಉಷ್ಣಾಂಶ ನಗರದ ಬೇರೆ ಬೇರೆ ಕಡೆಗಳಲ್ಲಿ 36.8 ಡಿಗ್ರಿಯಿಂದ 41.3 ಡಿಗ್ರಿ ತನಕವಿತ್ತು. ಇನ್ನು ಕನಿಷ್ಠ ಉಷ್ಣಾಂಶವು 20.9 ಡಿಗ್ರಿಯಿಂದ 32.8 ಡಿಗ್ರಿವರೆಗೆ ಇದೆ. ಬೇಸಿಗೆ ಬಿಸಿಗಾಳಿ, ಉಷ್ಣಾಂಶ ಹೆಚ್ಚಳದಿಂದ ಜನರು ಕೂಲ್ ಆಗಿರಲು ತಂಪು ಪಾನೀಯ, ಐಸ್ ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಇನ್ನೊಂದು ಕಡೆ ಶೋರೂಮ್ ಗಳಲ್ಲಿ, ಆನ್ ಲೈನ್ ಮೂಲಕ ಏರ್ ಕಂಡೀಷನರ್, ಕೂಲರ್ ಉಪಕರಣ, ಫ್ಯಾನ್ ಹಾಗೂ ರೆಫ್ರಿಜರೇಟರ್ ಖರೀದಿಗೆ ಹೆಚ್ಚು ಒಲವು ತೋರುತ್ತಿದ್ದಾರೆ.
ನಗರದ ಶೋರೂಮ್ ಮಾಲೀಕರೊಬ್ಬರ ಪ್ರಕಾರ, “ನಗರದಲ್ಲಿ ಎಸಿ, ಕೂಲರ್, ಫ್ಯಾನ್ ಗಳ ಮಾರಾಟವು ಕಳೆದ ಮೂರು ವರ್ಷಗಳಲ್ಲಿಯೇ ಹೆಚ್ಚಾಗಿದೆ. ಕಳೆದ ವರ್ಷ ಏಪ್ರಿಲ್ ಮೊದಲ ಎರಡು ವಾರಗಳ ನಂತರ ಬೇಸಿಗೆ ಬಿಸಿಯ ಅನುಭವ ಆಗುತ್ತಿತ್ತು. ಆದರೆ ಈ ಬಾರಿ ಫೆಬ್ರವರಿ ಮೂರನೇ ವಾರದಿಂದಲೇ ಎಸಿ, ಕೂಲರ್, ಫ್ಯಾನ್ ಹಾಗೂ ರೆಫ್ರಿಜರೇಟರ್ ಬೇಡಿಕೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ಬೇಡಿಕೆ 20-30 ಪ್ರತಿಶತ ಹೆಚ್ಚಾಗಿದೆ” ಎನ್ನುತ್ತಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣವು 33.9 ಡಿಗ್ರಿಯಿಂದ 44 ಡಿಗ್ರಿಯಷ್ಟು ಹೆಚ್ಚಾಗಿದೆ. ಕಳೆದ ವರ್ಷ ವಾಡಿಕೆಯ ಪ್ರಮಾಣದಷ್ಟು ಮಳೆಯಾಗಿಲ್ಲ. ಈ ಬಾರಿಯೂ ಮುಂಗಾರು ಪೂರ್ವ ಮಳೆಯಾಗದೆ ಎಲ್ಲೆಡೆ ಬರ ಕಾಣಿಸಿಕೊಂಡಿದೆ. ಬೆಂಗಳೂರಿನ 5 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ನಗರದ ಹಲವು ಭಾಗಗಳಲ್ಲಿ ಬೋರ್ ವೆಲ್ ಗಳು ಬತ್ತಿ ಹೋಗಿವೆ. ದೇಹವನ್ನು ತಂಪಿಡಲು ಫ್ಯಾನ್, ಎಸಿ, ಕೂಲರ್, ರೆಫ್ರಿಜರೇಟರ್ ಬಳಕೆ ಹೆಚ್ಚಾಗಿರುವುದರಿಂದ ವಿದ್ಯುತ್ ಬಳಕೆಯ ಪ್ರಮಾಣವು ಏರಿಕೆಯಾಗಿದೆ.
ಇನ್ನೊಂದೆಡೆ ನಗರದ ಮತ್ತೊಂದು ಗ್ರಾಹಕ ಸರಕುಗಳನ್ನು ಮಾರಾಟ ಮಾಡುವ ಷೋರೂಮ್ ನವರು, “ಈ ಬಾರಿ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗ್ರಾಹಕರು ಫ್ಯಾನ್, ಎಸಿ, ರೆಫ್ರಿಜರೇಟರ್ ಖರೀದಿಸಲು ಮುಗಿಬೀಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಇವುಗಳ ಬೇಡಿಕೆ ಮೂರುಪಟ್ಟು ಹೆಚ್ಚಾಗಿದೆ. ಕೆಲವೊಮ್ಮೆ ಗ್ರಾಹಕರು ಕೇಳಿದ ಉತ್ಪನ್ನವನ್ನು ಹೊಂದಿಸಲು ಕಷ್ಟವಾಗುತ್ತಿದೆ. ಸಾಮಾನ್ಯವಾಗಿ ನಗರದಲ್ಲಿ ಬೇಸಿಗೆ ಕಾಲದಲ್ಲಿ ಈ ಪ್ರಮಾಣದ ಬೇಡಿಕೆ ಕಂಡು ಬರುತ್ತಿರಲಿಲ್ಲ. ಆದರೆ ಈ ಬಾರಿ ಇವುಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.
“ವಾತಾವರಣದಲ್ಲಿ ತೇವಾಂಶ ಸಂಪೂರ್ಣವಾಗಿ ಕಡಿಮೆಯಾಗಿದೆ. ಉಷ್ಣಾಂಶ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಮಧ್ಯಾಹ್ನದ ಹೊತ್ತಿರಲಿ, ಬೆಳಗ್ಗೆಯೇ ಮನೆಯಿಂದ ಹೊರಹೋಗಲು ಬಹಳ ಕಷ್ಟವಾಗುತ್ತದೆ. ಸೇಲ್ಸ್ ಮ್ಯಾನ್ ಆಗಿರುವುದರಿಂದ ಹೊರಗೆ ಹೋಗದೆ ವಿಧಿಯಿಲ್ಲ. ಮನೆಗೆ ಫ್ಯಾನ್ ಗಾಳಿ ಸಾಕಾಗುತ್ತಿಲ್ಲ ಎಂದು ಒಂದು ವಾರದ ಹಿಂದೆ ಕೂಲರ್ ಖರೀದಿಸಿ ತರಬೇಕಾಯಿತು” ಎಂದು ಹೇಳುತ್ತಾರೆ ಎನ್.ಆರ್.ಕಾಲೋನಿ ನಿವಾಸಿ ವೆಂಕಟೇಶ್.
ಬೆಂಗಳೂರು ಹವಾಮಾನ ಇಲಾಖೆಯ ವಿಜ್ಞಾನಿ ಎ ಪ್ರಸಾದ್ ಪ್ರಕಾರ, ಬೆಂಗಳೂರಿನಲ್ಲಿ ಮಾರ್ಚ್ ತಿಂಗಳ ಸಾಮಾನ್ಯ ಮಳೆ 14.1 ಮಿ.ಮೀ. “ಏಪ್ರಿಲ್‌ನಲ್ಲಿ ನಮ್ಮ ಮುನ್ಸೂಚನೆಗೆ ಸಂಬಂಧಿಸಿದಂತೆ, ನಾವು ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಮುನ್ಸೂಚನೆ ನೀಡಿದ್ದೇವೆ. ಕಳೆದ 10-15 ವರ್ಷಗಳಲ್ಲಿ, ಮಾರ್ಚ್‌ನಲ್ಲಿ ನಗರದಲ್ಲಿ ಮಳೆಯಿಲ್ಲದೆ ಎರಡು ರೀತಿಯ ನಿದರ್ಶನಗಳಿವೆ. ಏಪ್ರಿಲ್ 2 ರಂದು, ಸರಾಸರಿಯಾಗಿ 37.2 ಡಿಗ್ರಿಯಷ್ಟು ತಾಪಮಾನ ದಾಖಲಾಗಿತ್ತು. ಇದು ಕಳೆದ 15 ವರ್ಷಗಳಲ್ಲಿ ನಾಲ್ಕನೇ ಅತಿ ಹೆಚ್ಚಿನ ತಾಪಮಾನವಾಗಿದೆ. 2016 ರಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 39.2 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಏಪ್ರಿಲ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಸರಾಸರಿ ಮಳೆ 61.7 ಮಿ.ಮೀ ಆಗಿದ್ದರೆ, ಒಂದೇ ದಿನದಲ್ಲಿ ಮಳೆಯ ದಾಖಲೆ 108.6 ಮಿ.ಮೀ, 2001 ರಲ್ಲಿ ದಾಖಲಾಗಿತ್ತು. ಏಪ್ರಿಲ್ 2001 ರಲ್ಲಿ ಒಟ್ಟಾರೆಯಾಗಿ 323.8 ಮಿಮೀ ಮಳೆ ದಾಖಲಾಗಿತ್ತು.”