ಬೆಂಗಳೂರು, ಏ.7 www.bengaluruwire.com : ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಏ.7ರಿಂದ ಸೌಂಡಿಂಗ್ ರಾಕೆಟ್‌ಗಳಿಂದ ಈಗಿನ ಗಗನಯಾನದ ತನಕ ‘ಭಾರತೀಯ ಅಂತರಿಕ್ಷ ಯಾತ್ರೆ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಸ್ಕೈ ಶೋ’ (ಆಕಾಶ ದರ್ಶನ) ಸಾಕ್ಷ್ಯಚಿತ್ರ ಪ್ರದರ್ಶನ ಆರಂಭವಾಗಿದೆ.
ಭಾರತೀಯ ಗಗನಯಾನದ ಆರಂಭ, ವಿಕಾಸ ಹಾಗೂ ಸಾಧನೆಗಳು, ಗಗನಯಾತ್ರಿಗಳ ತರಬೇತಿ, ಎಚ್‌ಎಲ್‌ವಿ 3ರ ಉಡ್ಡಯನ ಸೇರಿದಂತೆ ಉಪಗ್ರಹ ಯಾವ ರೀತಿಯಾಗಿ ಉಡಾವಣೆಯ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಸಾಕ್ಷ್ಯಾಚಿತ್ರ ಒಳಗೊಂಡಿದೆ. ‘ಸ್ಕೈ ಶೋ’ (ಆಕಾಶ ದರ್ಶನ) ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹಾಗೂ ಇಸ್ರೊದ ಗಗನಯಾನ ಯೋಜನಾ ನಿರ್ದೇಶಕ ಆರ್. ಹಟನ್ ಶನಿವಾರ ಹಸಿರು ನಿಶಾನೆ ತೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎ.ಎಸ್. ಕಿರಣ್ ಕುಮಾರ್ ಅವರು, ‘1960ರಲ್ಲಿ ಸೌಂಡಿಂಗ್ ರಾಕೆಟ್‌ನಿಂದ ಇಂದಿನ ಗಗನಯಾನದವರೆಗೆ ವಿವಿಧ ಅಭಿವೃದ್ಧಿ ಹಂತಗಳನ್ನು ಮುಂದಿನ ಪೀಳಿಗೆಯವರಿಗೆ ಅರ್ಥವಾಗುವಂತೆ ಈ ಸಾಕ್ಷ್ಯಾಚಿತ್ರದಲ್ಲಿ ಮಾಹಿತಿ ನೀಡಲಾಗಿದೆ. ಚಂದ್ರಯಾನ-3ರ ಯಶಸ್ಸಿನ ನಂತರ ವಿಶ್ವದಲ್ಲಿ ಹೆಚ್ಚಿನ ಯುವಕರಲ್ಲಿ ವಿಜ್ಞಾನ, ಬಾಹ್ಯಾಕಾಶ ಬಗ್ಗೆ ಆಸಕ್ತಿ ಮೂಡಿದೆ. ಜವಾಹರಲಾಲ್ ನೆಹರೂ ಪ್ಲಾನಿಟೋರಿಯಂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಅಭಿನಂದಿಸಿದರು.
‘ಸ್ಕೈ ಶೋ’ ಪ್ರದರ್ಶನ ವಿವರ ಹೀಗಿದೆ :
ಪ್ರತಿ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಿಗ್ಗೆ ಮೊದಲಿಗೆ 10.30ಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಬೆಳಿಗ್ಗೆ 11.30ಕ್ಕೆ ಕನ್ನಡ ಭಾಷೆಯಲ್ಲಿ ಈ ‘ಸ್ಕೈ ಶೋ’ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನ ಎರಡು ತಿಂಗಳ ತನಕ ನಡೆಯಲಿದೆ ಎಂದು ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ತಿಳಿಸಿದ್ದಾರೆ.