ಬೆಂಗಳೂರು, ಏ.06 www.bengaluruwire.com : ಬೆಂಗಳೂರು ಅಭಿವೃದ್ಧಿ ಮಾಡದ ಪ್ರಾಧಿಕಾರವೆಂಬ ಕುಖ್ಯಾತಿಗೆ ಗುರಿಯಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಒಂದಲ್ಲಾ ಒಂದು ತಪ್ಪು ನಿರ್ಧಾರದಿಂದ ಎಡವಟ್ಟು ಮಾಡಿಕೊಳ್ಳುವ ಪ್ರಾಧಿಕಾರ ಇದೀಗ ಮತ್ತೊಂದು ಎಡವಟ್ಟು ಮಾಡಲು ಹೊರಟು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಕೋಪಕ್ಕೆ ಗುರಿಯಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯ ಅಭಿವೃದ್ಧಿಗೆ ಆಸ್ಥೆವಹಿಸದೆ, ಇಲ್ಲಿನ 2500 ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ಬರುವ ಸಾವಿರ ಕೋಟಿ ರೂ. ಹಣವನ್ನು ಶಿವರಾಮ ಕಾರಂತ ಬಡಾವಣೆಗೆ ಬಿಡಿಎ ಬಳಸಿಕೊಳ್ಳಲಿದೆ ಎಂಬ ಮಾಧ್ಯಮದ ವರದಿಯನ್ನು ಆಧರಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ (Nadaprabhu Kempegowda Layout Open Forum – NPKL Open Forum) ಬಿಡಿಎ ಕ್ರಮವನ್ನು ಉಗ್ರ ಶಬ್ದಗಳಲ್ಲಿ ಖಂಡಿಸಿದೆ. ಅಲ್ಲದೆ ಈ ಮೂಲ ನಿವೇಶನಗಳನ್ನು ಅಡಮಾನವಿಟ್ಟು ಬರುವ ಹಣವನ್ನು ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಮಾತ್ರ ಬಳಸುವಂತೆ ಈ ಪತ್ರದಲ್ಲಿ ತಿಳಿಸಿದೆ.
“ನಾಡಪ್ರಭು ಕೆಂಪೇಗೌಡ ಬಡಾವಣೆಯ 2500 ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ಬರುವ ಸಾವಿರ ಕೋಟಿ ರೂ. ಹಣವನ್ನು ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ವ್ಯಯಿಸಲು ಯೋಜಿಸಿರುವ ಬಗ್ಗೆ ಬಿಡಿಎ ಸುಪ್ರೀಂಕೋರ್ಟ ನಲ್ಲಿ ಸಲ್ಲಿಸಿರುವ ತನ್ನ ಅಫಿಡೆವಿಟ್ ನಲ್ಲಿ ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿಗೆ, ಅಭಿವೃದ್ಧಿ ಹೊಂದಿದ ಬಡಾವಣೆಯ ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ಆ ಹಣವನ್ನು ಹೊಂದಿಸುವ ಬಗ್ಗೆ ಪ್ರಸ್ತಾಪಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಂಪೇಗೌಡ ಬಡಾವಣೆಯು ಇನ್ನೂ ಅಭಿವೃದ್ಧಿ ಹೊಂದಿಲ್ಲ. ಇಲ್ಲಿಯೇ ಸಾಕಷ್ಟು ಕಾಮಗಾರಿಗಳು ಬಾಕಿ ಉಳಿದಿದೆ. 26 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದರೂ, ಬೆರಳಣಿಕೆಯಷ್ಟು ಮನೆಗಳು ಮಾತ್ರ ನಿರ್ಮಾಣವಾಗುತ್ತಿದೆ” ಎಂದು ಎನ್ ಪಿಕೆಎಲ್ ಓಪನ್ ಫೋರಮ್ ಅಧ್ಯಕ್ಷರಾದ ಎಂ.ಇ.ಚೆನ್ನಬಸವರಾಜ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದಲ್ಲದೆ “ಎಂಟು ವರ್ಷ ಕಳೆದರೂ ಮನೆಗಳ ನಿರ್ಮಾಣವು ಸಾಕಷ್ಟು ಸಂಖ್ಯೆಯಲ್ಲಿ ಪ್ರಾರಂಭವಾಗದೇ ಇರುವ ಮೂಲ ಕಾರಣ, ಬಡಾವಣೆಯಲ್ಲಿನ ಮೂಲಭೂತ ಸೌಕರ್ಯ ಕೊರತೆ ಮತ್ತು ಎಂದು ಮುಗಿಯದ ಕಾಮಗಾರಿಗಳಾಗಿದೆ. ಹಾಗಾಗಿ ಕೆಂಪೇಗೌಡ ಬಡಾವಣೆಯ ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ಬರುವ ಹಣವನ್ನು ಇಲ್ಲಿಗೆ ಬಳಸುವಂತೆ” ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಯೋಜನೆಯನ್ನು ಪ್ರಾರಂಭಿಸಲು,ಯಾವುದೇ ಯೋಜನೆಯಿಂದ ಬಂದ ಆದಾಯವನ್ನು ಮತ್ತೊಂದು ಯೋಜನೆಗೆ ಬಳಸಲು ಸರ್ವ ಸ್ವತಂತ್ರ. ಆದರೆ ಅಪೂರ್ಣವಾಗಿರುವ ಯೋಜನೆಯ ಮೂಲೆ ನಿವೇಶನಗಳನ್ನು ಆದಾಯದ ಮೂಲವಾಗಿ ಮಾಡಿಕೊಂಡು ಅದೇ ಬಡಾವಣೆಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಮತ್ತೊಂದು ಬಡಾವಣೆ, ಮತ್ತಿತರ ಯೋಜನೆಗಳಿಗೆ ವಿನಯೋಗಿಸಲು ನಿರ್ಧರಿಸಿರುವುದು ಖಂಡನಾರ್ಹ. ಒಂದು ಬಡಾವಣೆ ಯೋಜನೆಯಿಂದ ಬಂದ ಮತ್ತು ಬರುವ ಆದಾಯವನ್ನು ಅದೇ ಬಡಾವಣೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಳಸಲು ಆದ್ಯತೆ ಕೊಡದೆ ಮತ್ತೊಂದು ಬಡಾವಣೆ, ಮತ್ತಿತರ ಯೋಜನೆಗಳಿಗೆ ವಿನಿಯೋಗ ಮಾಡುತ್ತಿರುವ ಕ್ರಮವು ಯಾವ ಸಾಮಾಜಿಕ ನ್ಯಾಯ?” ಎಂದು ಪ್ರಶ್ನಿಸಿದ್ದಾರೆ.
8 ವರ್ಷವಾದರೂ ಮೂಲಸೌಕರ್ಯ ಕಲ್ಪಿಸಿಲ್ಲ :
ಪ್ರಾಧಿಕಾರವು ತಾನೇ ನಿರ್ಧರಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗಡವು,ಸರಕಾರವು ಗೊತ್ತು ಪಡಿಸಿದ ಸಮಯ, ರೇರಾ (RERA) ಪ್ರಾಧಿಕಾರದ ಗಡವು ಮತ್ತು ಅರ್ಜಿ ಸಮಿತಿಯ ಸಮಯ ಮಿತಿಯನ್ನು ಮೀರಿದ್ದರೂ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉತ್ಸುಕತೆ ತೋರಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದ ನೆಪವಡಿ ಶಿವರಾಮ ಕಾರಂತ ಬಡಾವಣೆಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿರುವುದು ಮತ್ತು 8 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನವನ್ನು ಪಡೆದು ಇಲ್ಲಿಯವರೆಗೂ ಮನೆ ಕಟ್ಟಲು ಕನಿಷ್ಠ ಮೂಲಭೂತ ಸೌಕರ್ಯಕ್ಕಾಗಿ ಕಾಯುತ್ತಿರುವ ನಿವೇಶನಾದರರಿಗೆ ಭ್ರಮನಿರಸನವಾಗಿದೆ ಎಂದು ಮುಕ್ತ ವೇದಿಕೆಯು ಬೇಸರ ವ್ಯಕ್ತಪಡಿಸಿದೆ.
ಈ ಬಡಾವಣೆಯಲ್ಲಿ ಸುಮಾರು 10,000 ನಿವೇಶನಗಳನ್ನು ಸಾರ್ವಜನಿಕರಿಗೆ 2016 ರಿಂದ ಮಾರುಕಟ್ಟೆ ದರದಲ್ಲಿ ಪೂರ್ಣ ಮೌಲ್ಯವನ್ನು ಪಡೆದು ಹಂಚಿಕೆ ಮಾಡಲಾಗಿರುತ್ತದೆ. ಎರಡುವರೆ ಸಾವಿರಕ್ಕಿಂತಲೂ ಹೆಚ್ಚಿನ ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಈಗಾಗಲೇ ಹರಾಜು ಮಾಡಲಾಗಿರುತ್ತದೆ. ಬಹಳಷ್ಟು ಸಿಎ ನಿವೇಶನಗಳನ್ನು ಕೂಡ ಹಂಚಿಕೆ ಮಾಡಲಾಗಿರುತ್ತದೆ. ಈ ಎಲ್ಲಾ ಮೂಲಗಳಿಂದ ಬಂದಿರುವ ಆದಾಯವನ್ನು ಇದೆ ಬಡಾವಣೆಯಲ್ಲಿ ವಿನಿಯೋಗಿಸಿದಿದ್ದರೆ ಎಲ್ಲಾ ಮೂಲಭೂತ ಸೌಕರ್ಯ ಕಾಮಗಾರಿಗಳು ಪೂರ್ಣಗೊಂಡು ಮನೆಗಳ ನಿರ್ಮಾಣಕ್ಕೆ ಅನುಕೂಲವಾಗುತ್ತಿತ್ತು.
ಕಾಂಟ್ರಾಕ್ಟರ್ ಬಿಲ್ ಬಾಕಿಯಿಂದ ಕಾಮಗಾರಿ ಮತ್ತಷ್ಟು ಆಮೆಗತಿ :
ಆದರೆ ಕೆಂಪೇಗೌಡ ಲೇಔಟ್ ನಲ್ಲಿ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರಿಗೆ ಕಾಮಗಾರಿಗಳ ಬಹಳಷ್ಟು ಬಿಲ್ ಗಳನ್ನು ಬಾಕಿ ಉಳಿಸಿಕೊಳ್ಳಲಾಗಿರುತ್ತದೆ. ಆದ್ದರಿಂದ ಗುತ್ತಿಗೆದಾರರು ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ನಿಯೋಜಿಸದೆ ಕಾಮಗಾರಿಗಳು ಕುಂಠಿತಗೊಳಿಸಿದ್ದಾರೆ. ಹೀಗಾಗಿ ಬಹಳಷ್ಟು ಕಾಮಗಾರಿಗಳಿಗೆ ಬಿಡಿಎ ಇನ್ನು ಟೆಂಡರ್ ಅನ್ನು ಕರೆದಿರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಪತ್ರದಲ್ಲಿ ತಿಳಿಸಿರುವ ಎನ್ ಪಿಕೆಎಲ್ ಮುಕ್ತ ವೇದಿಕೆಯು ಲೇಔಟ್ ನಲ್ಲಿ ಆಗಬೇಕಿರುವ ಬಾಕಿ ಕಾಮಗಾರಿಗಳ ವಿವರವನ್ನು ತಿಳಿಸಿದೆ.
ಬಿಡಿಎ ವಿವಿಧ ಸಂಪನ್ಮೂಲಗಳಿಂದ ಲೇಔಟ್ ನಿರ್ಮಾಣ ಮಾಡುವುದರಲ್ಲಿ ತಪ್ಪೇನಿದೆ? :
“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯಾವುದೇ ಹೊಸ ಬಡಾವಣೆಯನ್ನು ರಚನೆ ಮಾಡುವಾಗ ಹಿಂದಿನ ಬಡಾವಣೆ ಹಾಗೂ ವಿವಿಧ ಸಂಪನ್ಮೂಲಗಳಿಂದ ಬಂದ ಹಣವನ್ನು ಅದಕ್ಕೆ ಖರ್ಚು ಮಾಡುತ್ತೆ. ಬಿಡಿಎ ಖಾಸಗಿ ಬಡಾವಣೆಯಂತೆ 8-10 ಎಕರೆ ಜಾಗದಲ್ಲಿ ಲೇಔಟ್ ಅಭಿವೃದ್ಧಿಪಡಿಸುವುದಿಲ್ಲ. ಸಾವಿರಾರು ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸುವುದರಿಂದ ನೂರಾರು ಕೋಟಿ ರೂ. ಹಣ ಕರ್ಚಾಗುತ್ತದೆ. ಅದಕ್ಕೆ ಸಂಪನ್ಮೂಲವನ್ನು ಒದಗಿಸಲು ಮೂಲೆ ನಿವೇಶನಗಳನ್ನು ಮಾರಾಟ ಮಾಡುವ ಬದಲು ಅಡಮಾನ ಇಟ್ಟು ಬರುವ ಆದಾಯದಿಂದ ಇನ್ನೊಂದು ಬಿಡಿಎ ಲೇಔಟ್ ಅಭಿವೃದ್ಧಿಪಡಿಸುವುದರಲ್ಲಿ ತಪ್ಪೇನಿದೆ? ಎನ್ ಪಿಕೆಎಲ್ ಲೇಔಟ್ ನಲ್ಲಿ ಈತನಕ 9,500 ನಿವೇಶನಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ. ಅವರಿಂದ ಸಂಗ್ರಹವಾಗಿರುವ ಹಣ ಕೇವಲ 2,100 ಕೋಟಿ ರೂ. ಆದರೆ ಬಿಡಿಎ ಅಲ್ಲಿ ಕರ್ಚು ಮಾಡಿರುವ ಹಣ 2,700 ಕೋಟಿ ರೂ. ಇಲ್ಲಿಗೆ ಬೇರೆ ಸಂಪನ್ಮೂಲಗಳಿಂದ ಬಂದ ಹಣವನ್ನು ವೆಚ್ಚ ಮಾಡಲಾಗಿದೆ. ಈತನಕ ಪ್ರಾಧಿಕಾರದಿಂದ ಕೇವಲ 20 ಮಂದಿ ಮನೆ ಕಟ್ಟಲು ನಕ್ಷೆ ಮಂಜೂರಾತಿ ಪಡೆದಿದ್ದಾರಷ್ಟೆ. ಬಿಡಿಎ ಹಂತ ಹಂತವಾಗಿ ಭವಿಷ್ಯದ ದೃಷ್ಟಿಯಿಂದ ಮೂಲಸೌಕರ್ಯವನ್ನು ಕಲ್ಪಿಸಲಿದೆ. ವಿನಾ: ಕಾರಣ ಪ್ರಾಧಿಕಾರವನ್ನು ತಪ್ಪು ದೃಷ್ಟಿಕೋನದಿಂದ ನೋಡಬಾರದು.”
- ಡಾ.ಎಚ್.ಆರ್.ಶಾಂತಾರಾಜಣ್ಣ, ಬಿಡಿಎ ಎಂಜಿನಿಯರ್ ಸದಸ್ಯರು