ಬೆಂಗಳೂರು, ಏ.5 www.bengaluruwire.com : ಕನ್ನಡ ಸಾಹಿತ್ಯ ಪರಿಷತ್ತಿನ 2024ರ ‘ಕುವೆಂಪು ಸಿರಿಗನ್ನಡ ದತ್ತಿ’ ಪ್ರಶಸ್ತಿಗೆ ಹಿರಿಯ ಕನ್ನಡ ಹೋರಾಟಗಾರರಾದ ಸಾ.ರಾ.ಗೋವಿಂದು ಮತ್ತು ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ.
ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದವರು. 18ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ. ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರೂ ಆಗಿದ್ದ ಅವರು ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಪ್ರವೀಣ್ ಕುಮಾರ್ ಶೆಟ್ಟಿ ಕನ್ನಡ ಪರ ಹೋರಾಟಗಳಲ್ಲಿ ಸದಾ ಸಕ್ರಿಯರಾಗಿರುವವರು, ಕನ್ನಡ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷರಾಗಿರುವ ಅವರು ನಾಡು ಮತ್ತು ನುಡಿ ಪರ ಹೋರಾಟದಲ್ಲಿ ಮಂಚೂಣಿಯಲ್ಲಿರುವವರು.
ಪ್ರಶಸ್ತಿಯ ಆಯ್ಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಭಾಗವಹಿಸಿದ್ದರು.
ದತ್ತಿ ಪ್ರಶಸ್ತಿ ಪುರಸ್ಕೃತರಾದ ಸಾ.ರಾ.ಗೋವಿಂದು ಮತ್ತು ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸಿ ಅವರ ಕನ್ನಡ ಪರ ಹೋರಾಟದ ಬದುಕಿಗೆ ಶುಭವನ್ನು ಕೋರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.