ತೈವಾನ್, ಏ.3 www.bengaluruwire.com : ಪೂರ್ವ ತೈವಾನ್ ಬಳಿಯ ದಕ್ಷಿಣ ಜಪಾನಿನ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸ್ಥಳೀಯ ಹವಾಮಾನ ಇಲಾಖೆಯು ತೈವಾನ್, ದಕ್ಷಿಣ ಜಪಾನ್ ಹಾಗೂ ಫಿಲಿಫೈನ್ಸ್ ನಲ್ಲಿ ಸುನಾಮಿ ಎಚ್ಚರಿಕೆ ನೀಡಿದೆ.
ತೈವಾನಿನಲ್ಲಿ ಬುಧವಾರ ಮುಂಜಾನೆ ಈ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ದ್ವೀಪವನ್ನು ಬೆಚ್ಚಿಬೀಳಿಸಿದೆ ಮತ್ತು ಕಟ್ಟಡಗಳು ಕುಸಿದಿವೆ. ದಕ್ಷಿಣ ಜಪಾನಿನ ದ್ವೀಪ ಸಮೂಹ ಒಕಿನಾವಾಗೆ ಜಪಾನ್ ಸುನಾಮಿ ಎಚ್ಚರಿಕೆ ನೀಡಿದೆ. 87,000 ಮನೆಗಳು ಪ್ರಬಲ ಕಂಪನದಿಂದಾಗಿ ವಿದ್ಯುತ್ ಇಲ್ಲದೆ ಬಳಲುವಂತಾಗಿದೆ. ಈ ದುರ್ಘಟನೆಯಲ್ಲಿ ಅಲ್ಪ ಪ್ರಮಾಣದ ಸಾವು ನೋವುಗಳಾಗಿವೆ ಎಂದು ತಿಳಿದುಬಂದಿದೆ. 25 ವರ್ಷಗಳಲ್ಲೇ ಅತ್ಯಂತ ಪ್ರಬಲ ಭೂಕಂಪನ ಇಲ್ಲಿ ಸಂಭವಿಸಿದೆ.
ಭೂಕಂಪನ ಪ್ರಭಾವದಿಂದಾಗಿ ಸಮುದ್ರದಲ್ಲಿ 3 ಮೀಟರ್ (9.8 ಅಡಿ) ವರೆಗೆ ಸುನಾಮಿ ಏಳುತ್ತದೆಂದು ಜಪಾನಿನ ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ. ತೈವಾನ್ ಭೂಕಂಪನ ಮಾಪನ ಸಂಸ್ಥೆಯು ರಿಕ್ಟರ್ ಮಾಪಕದಲ್ಲಿ 7.2 ರಷ್ಟಿದ್ದರೆ, ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು ಇದನ್ನು 7.5 ತೀವ್ರತೆಯ ಭೂಕಂಪನ ಎಂದು ಹೇಳಿದೆ. ಪೂರ್ವ ನಗರವಾದ ಹುವಾಲಿಯನ್ ನಲ್ಲಿನ ಕಟ್ಟಡಗಳ ಅಡಿಪಾಯವನ್ನು ಅಲುಗಾಡಿಸುತ್ತಿರುವ ದೃಶ್ಯವು ಕಂಡುಬಂದಿತ್ತು.
ತೈವಾನ್‌ನಲ್ಲಿ ಭೂಕಂಪನ ಎಷ್ಟು ತೀವ್ರವಾಗಿತ್ತೆಂದರೆ, ಜನರು ಸೇತುವೆಯೊಂದರ ಮೇಲೆ ವಾಹನದಲ್ಲಿ ಹೋಗುವಾಗ, ಸೇತುವೆ ಅಲಗಾಡುವ ಸಂದರ್ಭದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ, ಏನಾಗುತ್ತಿದೆ ಎಂದು ಕೆಲಕಾಲ ಗಾಬರಿಗೊಂಡರು. ತೈಪೆಯ ಮೆಟ್ರೊನಲ್ಲಿ ತೆರಳುತ್ತಿದ್ದವರಿಗೂ ಭೂಕಂಪನದ ಅನುಭವಾಯಿತು. ಹುವಾಲಿಯನ್ ಪ್ರದೇಶದಲ್ಲಿ ಭುಕುಸಿತ, ಈಜುಕೊಳದಲ್ಲಿ ನೀರು ತುಳುಕುತ್ತಿದ್ದ ದೃಶ್ಯ, ರಸ್ತೆ ಬಿರುಕು ಬಿಟ್ಟ ಹೀಗೆ ಹಲವು ಫೊಟೊ, ವಿಡಿಯೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.