ತುಮಕೂರು, ಏ.1 www.bengaluruwire.com : ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ್ ಶ್ರೀಗಳ 117 ನೇ ಜಯಂತಿ ದಿನವಾದ ಇಂದು, ಲೋಕಸಭಾ ಚುನಾವಣೆ ನೀತಿ ಸಂಹಿತ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಸರಳವಾಗಿ ಜಯಂತಿ ಆಚರಣೆ ಮಾಡಲಾಗುತ್ತಿದೆ. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ಮಾಡಲಾಗುತ್ತಿದೆ.
ಶ್ರೀಗಳ 117 ನೇ ಜಯಂತಿ ಹಿನ್ನಲೆಯಲ್ಲಿ ನೂರಾರು ಭಕ್ತರು ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ವಿವಿಧ ಮಠಾಧೀಶರು ಹಾಗೂ ಭಕ್ತರು ಭಾಗಿಯಾಗಿದ್ದಾರೆ. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ಡಾ.ಜಿ.ಪರಮೇಶ್ವರ್ ಬೆಳಗ್ಗೆಯೇ ಗದ್ದುಗೆ ದರ್ಶನ ಪಡೆದುಕೊಂಡರು. “ಡಾ.ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಕ್ತಿ ಪೂರ್ವಕವಾಗಿ ನಾನು ಅವರಿಗೆ ನಮನ ಸಲ್ಲಿಸಿದ್ದೇನೆ. ರಾಜ್ಯದ ಎಲ್ಲಾ ಭಾಗದಿಂದ ಬಂದಿರುವ ಮಕ್ಕಳು ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಲಕ್ಷಾಂತರ ಮಕ್ಕಳು ಇಲ್ಲಿನ ವಿದ್ಯಾಭ್ಯಾಸದ ಮೂಲಕ ಜೀವನ ಕಲ್ಪಿಸಿಕೊಂಡಿದ್ದಾರೆ. ಎಲ್ಲಾ ಕೊಡುಗೆಗಳನ್ನು ಗುರುತಿಸಿ ಶ್ರೀಗಳಿಗೆ ಭಾರತ ರತ್ನ ಕೊಡಬೇಕು. ಆದರೆ ಕೇಂದ್ರ ಸರ್ಕಾರ ಯಾಕೋ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ” ಎಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಲಿಂಗೈಕ್ಯ ಶಿವಕುಮಾರಸ್ವಾಮಿಗಳ 117ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. 11 ಗಂಟೆಗೆ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತಿದೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ಬಾರಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಜಿ, ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ವಿಶೇಷವಾಗಿ ಪತಂಜಲಿ ಖ್ಯಾತಿಯ ಬಾಬಾ ರಾಮದೇವ್, ಮುಂಡರಗಿಯ ಅನ್ನದಾನೇಶ್ವರ ಶ್ರೀಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಗದಗಿನ ವೀರಶೈವ ಪುಣ್ಯಶ್ರಮದ ಕಲ್ಲಯ್ಯ ಅಜ್ಜರವರು ಸೇರಿದಂತೆ ಅನೇಕ ಪೂಜ್ಯರು, ಯತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ 117 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಸಿದ್ದಗಂಗಾ ಮಠದವರು ತಿಳಿಸಿದ್ದಾರೆ.
ಏಪ್ರಿಲ್ 1 ರಂದು ನಡೆಯುತ್ತಿರುವ ಗುರುವಂದನ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಭಕ್ತರು ಮಠಕ್ಕೆ ಭೇಟಿ ನೀಡುವ ಸಾಧ್ಯತೆಗಳಿದ್ದು, ಎಲ್ಲರಿಗೂ ನಿರಂತರವಾಗಿ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಶ್ರೀಮಠವು ಹೇಳಿದೆ.