ನವದೆಹಲಿ, ಮಾ.31 www.bengaluruwire.com : ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 1 ರಂದು ವಾರ್ಷಿಕ ಖಾತೆಗಳನ್ನು ಮುಚ್ಚುವ ಕಾರಣ 2,000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದೆ. ಸೇವೆಯು ಏಪ್ರಿಲ್ 2 ರಂದು ಪುನರಾರಂಭವಾಗಲಿದೆ ಎಂದು ಭಾರತದ ಕೇಂದ್ರ ಬ್ಯಾಂಕ್ ಪ್ರಕಟಿಸಿದೆ.
“ಖಾತೆಗಳ ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ 19 ಕಛೇರಿಗಳಲ್ಲಿ ಸೋಮವಾರ, ಏಪ್ರಿಲ್ 1 ರಂದು 2,000 ರೂ. ಬ್ಯಾಂಕ್‌ನೋಟುಗಳ ವಿನಿಮಯ/ಠೇವಣಿ ಸೌಲಭ್ಯವು ಲಭ್ಯವಿರುವುದಿಲ್ಲ. ಆದರೆ ಈ ಸೌಲಭ್ಯವು ಏಪ್ರಿಲ್ 2ರಿಂದ ಪುನರಾರಂಭವಾಗಲಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಫೆಬ್ರವರಿ 29 ರ ಹೊತ್ತಿಗೆ, ಸುಮಾರು 97.62% ನಷ್ಟು ₹ 2,000 ಕರೆನ್ಸಿ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಮೇ 19, 2023 ರಂದು, ಆರ್‌ಬಿಐ 2,000 ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಅವುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಅಥವಾ ಇತರ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಸಾರ್ವಜನಿಕರನ್ನು ಒತ್ತಾಯಿಸಿತ್ತು. ಇದು ಬ್ಯಾಂಕಿನ ಕ್ಲೀನ್ ನೋಟ್ ನೀತಿಯ (Clean Note Policy) ಭಾಗವಾಗಿತ್ತು.
ಆದಾಗ್ಯೂ, ಆರ್‌ಬಿಐ ಅಹಮದಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕೋಲ್ಕತ್ತಾ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ, ರಾಂಚಿ, ರಾಯ್ಪುರ್ ಮತ್ತು ಕಾನ್ಪುರ್‌ನಂತಹ ಪ್ರಮುಖ ಸ್ಥಳಗಳಲ್ಲಿ ದೇಶಾದ್ಯಂತ ತನ್ನ 19 ಕಚೇರಿಗಳಲ್ಲಿ 2000 ನೋಟುಗಳನ್ನು ಠೇವಣಿ ಮಾಡುವ ಅಥವಾ ಬದಲಾಯಿಸುವ ಸೌಲಭ್ಯವನ್ನು ಮುಂದುವರೆಸಿದೆ.