ಬೆಂಗಳೂರು, ಫೆ.15 www.bengaluruwire.com : ರಾಜ್ಯದಲ್ಲಿ ಇನ್ನು ಮುಂದೆ ಸಾರ್ವಜನಿಕರು ಆನ್ ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಿ ವಿವಾಹ ಪ್ರಮಾಣಪತ್ರವನ್ನು ಪಡೆಯಬಹುದು. ಇದಕ್ಕಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆನ್‌ಲೈನ್ ಹಿಂದೂ ವಿವಾಹ ನೋಂದಣಿ ತಂತ್ರಾಂಶವನ್ನು ರೂಪಿಸಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡ ನಗರದಲ್ಲಿನ ಮಲ್ಲೇಶ್ವರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಆನ್‌ಲೈನ್ ಹಿಂದೂ ವಿವಾಹ ನೋಂದಣಿ ತಂತ್ರಾಂಶ, 2004ರ ಇಸವಿಗೂ ಮುನ್ನ ಆನ್ ಲೈನ್ ಋಣಭಾರ ಪ್ರಮಾಣಪತ್ರ ಪಡೆಯಲು ಪ್ರತ್ಯೇಕ ತಂತ್ರಾಂಶ ಸೇರಿದಂತೆ ಏಳು ವಿವಿಧ ರೀತಿಯ ಸಾಫ್ಟ್ ವೇರ್ ಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.
1. ಆನ್‌ಲೈನ್ ಹಿಂದೂ ವಿವಾಹ ನೋಂದಣಿ ತಂತ್ರಾಂಶ :
ಹಿಂದೂ ವಿವಾಹಗಳ ನೋಂದಣಿ ಕಾಯ್ದೆ, 1955 ರಡಿ ವಿವಾಹಗಳ ನೋಂದಣಿಯನ್ನು ಸರಳೀಕರಣಗೊಳಿಸಲು ಸಾರ್ವಜನಿಕರು ಆನ್‌ಲೈನ್ ಮೂಲಕ ಉಪನೋಂದಣಾಧಿಕಾರಿಗಳು ಅನುಮೋದಿಸಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಿ ಉಪನೋಂದಣಿ ಕಛೇರಿಗೆ ಭೇಟಿ ನೀಡದೆಯೇ ಆನ್‌ಲೈನ್ ಮೂಲಕ ವಿವಾಹ ಧೃಡೀಕರಣ ಪತ್ರವನ್ನು ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
2. ವಿಶೇಷ ವಿವಾಹಗಳ ನೋಂದಣಿ ತಂತ್ರಾಂಶ :
ವಿಶೇಷ ವಿವಾಹಗಳ ನೋಂದಣಿ ಕಾಯ್ದೆ, 1954 ರಡಿ ವಿವಾಹಗಳ ನೋಂದಣಿಯನ್ನು ಸುಲಭಗೊಳಿಸಲು ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು, ಶುಲ್ಕಗಳನ್ನು ಪಾವತಿಸಲು ಹಾಗೂ ವಿವಾಹ ನೋಂದಣಿಗೆ ಉಪನೋಂದಣಿ ಕಛೇರಿಯಲ್ಲಿ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
3. ಆನ್‌ಲೈನ್ ಮೂಲಕ 2004ರ ಪೂರ್ವದ ಋಣಭಾರ ಪ್ರಮಾಣಪತ್ರ ತಂತ್ರಾಂಶ :
ಪ್ರಸ್ತುತ 2004ಕ್ಕೂ ಪೂರ್ವದ ಋಣಭಾರ ಪ್ರಮಾಣ ಪತ್ರಗಳನ್ನು (ಇ.ಸಿ) ಸಾರ್ವಜನಿಕರು ಅರ್ಜಿ ಭರ್ತಿ ಮಾಡಿ, ಶುಲ್ಕಗಳನ್ನು ಖಜಾನೆ-2 ಚಲನ್ ಮೂಲಕ ಪಾವತಿಸಿ ಸಂಬಂಧಪಟ್ಟ ಉಪನೋಂದಣಿ ಕಛೇರಿಗೆ ಅರ್ಜಿಯನ್ನು ಸಲ್ಲಿಸಿ, ಭೌತಿಕವಾಗಿ ಇ.ಸಿಯನ್ನು ಪಡೆಯಬೇಕಾಗಿರುತ್ತದೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು 2004ಕ್ಕೂ ಪೂರ್ವದ ಋಣಭಾರ ಪ್ರಮಾಣಪತ್ರಕ್ಕೆ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆ ನಂತರ ಶುಲ್ಕಗಳನ್ನು ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ನೇರವಾಗಿ ಖಜಾನೆಗೆ ಪಾವತಿಸಿ ಉಪನೋಂದಣಾಧಿಕಾರಿಗಳು ಅಪಲೋಡ್ ಮಾಡಿರುವ ಇ.ಸಿಯನ್ನು ತಮ್ಮ ಲಾಗಿನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಯಾವುದೇ ವರ್ಷದ ಇ.ಸಿಯನ್ನು ಪಡೆಯಲು ಉಪನೋಂದಣಿ ಕಛೇರಿಯನ್ನು ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ.
4. ಆನ್‌ಲೈನ್ ಮೂಲಕ 2004 ಪೂರ್ವ ಧೃಢೀಕೃತ ನಕಲು ತಂತ್ರಾಂಶ :
ಪ್ರಸ್ತುತ 2004ಕ್ಕೂ ಪೂರ್ವದಲ್ಲಿ ನೋಂದಣಿಯಾದ ದಸ್ತಾವೇಜುಗಳ ಧೃಢೀಕೃತ ನಕಲು ಪ್ರತಿಗೆ (ಸಿ.ಸಿ) ಸಾರ್ವಜನಿಕರು ಅರ್ಜಿ ಭರ್ತಿ ಮಾಡಿ ಹಾಗೂ ಶುಲ್ಕಗಳನ್ನು ಖಜಾನೆ-2 ಚಲನ್ ಮೂಲಕ ಪಾವತಿಸಿ ಸಂಬಂಧಪಟ್ಟ ಉಪನೋಂದಣಿ ಕಛೇರಿಗೆ ಸಲ್ಲಿಸಿ, ಭೌತಿಕವಾಗಿ ಸಿ.ಸಿಯನ್ನು ಪಡೆಯಬೇಕಾಗಿರುತ್ತದೆ. ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕಗಳನ್ನು ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ನೇರವಾಗಿ ಖಜಾನೆಗೆ ಪಾವತಿಸಿ ಉಪನೋಂದಣಾಧಿಕಾರಿಗಳು ಅಪಲೋಡ್ ಮಾಡಿರುವ ಸಿ.ಸಿಯನ್ನು ತಮ್ಮ ಲಾಗಿನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಯಾವುದೇ ವರ್ಷದ ಸಿ.ಸಿಯನ್ನು ಪಡೆಯಲು ಉಪನೋಂದಣಿ ಕಛೇರಿಯನ್ನು ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ
5. ಜಿಐಎಸ್ ಮೂಲಕ ಕೃಷಿ ಭೂಮಿ ಋಣಭಾರ ಪ್ರಮಾಣಪತ್ರ ಪಡೆಯುವ ತಂತ್ರಾಂಶ :
ಕೃಷಿ ಭೂಮಿಯ ಋಣಭಾರ ಪ್ರಮಾಣಪತ್ರವನ್ನು ರೈತರು / ಸಾರ್ವಜನಿಕರು ಸುಲಭವಾಗಿ ಪಡೆಯಲು ಅರ್ಜಿ ಸಲ್ಲಿಸುವ ಸಮಯದಲ್ಲಿ ಗ್ರಾಮವನ್ನು ಜಿಐಎಸ್ ಮೂಲಕ ಆಯ್ಕೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಲ್ಲಿ ಕೃಷಿ ಭೂಮಿಯ ವಿವರಗಳು ಸ್ವಯಂಚಾಲಿತವಾಗಿ ಭರ್ತಿಯಾಗುತ್ತದೆ. ಇದರಿಂದಾಗಿ ನಿಖರವಾದ ಋಣಭಾರ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
6. ನೋಂದಣಿ ಪೂರ್ವ ಪರಿಶೀಲನೆ ತಂತ್ರಾಂಶ :
ನೋಂದಣಿ ಸಮಯದಲ್ಲಿ ಸಾರ್ವಜನಿಕರ ತಪ್ಪು ಅರಿವಿನಿಂದ ದಸ್ತಾವೇಜುಗಳ ತಪ್ಪು ವರ್ಗೀಕರಣ, ಸ್ವತ್ತುಗಳ ಅಪಮೌಲ್ಯ, ಕಾನೂನಿನ ತಪ್ಪು ವ್ಯಾಖ್ಯಾನ ಹಾಗೂ ಇತರ ಕಾರಣಗಳಿಂದ ಉಂಟಾಗುವ ಕಾನೂನಿನ ತೊಡಕುಗಳನ್ನು ಸರಿಪಡಿಸಿಕೊಳ್ಳಲು ಹಲವಾರು ಕಛೇರಿಗಳನ್ನು ಅಲೆಯಬೇಕಾಗಿರುತ್ತದೆ. ಅಲ್ಲದೆ ದಸ್ತಾವೇಜಿಗೆ ಕೊರತೆ ಶುಲ್ಕ ಉಂಟಾದಲ್ಲಿ ನ್ಯಾಯಾಲಯಗಳಲ್ಲಿ ದಸ್ತಾವೇಜುಗಳನ್ನು ಸಾಕ್ಷಿ ಎಂದು ಪರಿಗಣಿಸದೇ ಇರುವ ಸಾಧ್ಯತೆ ಇರುತ್ತದೆ. ಹಾಗೂ ಈ ಶುಲ್ಕಗಳನ್ನು ಸ್ವತ್ತಿಗೆ ಋಣವಾಗಿ (Charge) ಉಳಿದುಕೊಳ್ಳುತ್ತವೆ. ಇದನ್ನು ತಡೆಗಟ್ಟಲು ನೋಂದಣಿ ಪೂರ್ವದಲ್ಲಿಯೇ ದಸ್ತಾವೇಜಿನ ವರ್ಗೀಕರಣ, ಸ್ವತ್ತಿನ ಮೌಲ್ಯಮಾಪನ ಹಾಗೂ ಶುಲ್ಕಗಳನ್ನು ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸರಿಯಾದ ಶುಲ್ಕಗಳನ್ನು ಆಕರಿಸುವ ಮೂಲಕ ಸಾರ್ವಜನಿಕ ಹಿತಾದೃಷ್ಟಿಯನ್ನು ಕಾಪಾಡಲು ಈ ಪದ್ಧತಿಯನ್ನು ಜಾರಿಗೆ ತರಲಾಗಿದೆ.
7. ಇ-ಸ್ಟಾಂಪ್‌ನಲ್ಲಿ ಆನ್‌ಲೈನ್ ಕ್ಯಾಲ್ಕುಲೇಟರ್ ಅಳವಡಿಕೆ :
ಸ್ಯಾಕ್ ಹೋಲಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿ. (SHCIL) ಮುಖಾಂತರ ಇ-ಸ್ಟಾಂಪ್ ಪೇಪರ್‌ಗಳನ್ನು ಒದಗಿಸಲಾಗುತ್ತಿದ್ದು ಸಾರ್ವಜನಿಕರು ದಸ್ತಾವೇಜಿನ ಸ್ವರೂಪದ ಆಧಾರದ ಮೇಲೆ ಕರ್ನಾಟಕ ಮುದ್ರಾಂಕ ಕಾಯ್ದೆ, 1957 ರ ಷೆಡ್ಯೂಲ್‌ನಲ್ಲಿ ನಿಗದಿಪಡಿಸಿರುವ ಮುದ್ರಾಂಕ ಶುಲ್ಕಕ್ಕೆ ಇ-ಸ್ಟ್ಯಾಂಪ್ ಪೇಪರ್ ಗಳನ್ನು ಪಡೆಯಲು ಅಧಿಕೃತ ಸಂಗ್ರಹ ಕೇಂದ್ರ (Authorised Collection Centre (ACC)) ಗಳಲ್ಲಿ ಕ್ಯಾಲ್ಕುಲೇಟರ್‌ನ್ನು ಅಳವಡಿಸಲಾಗಿದೆ. ಇದರಿಂದ ನಿಗದಿಪಡಿಸಿದ್ದ ಮುದ್ರಾಂಕ ಶುಲ್ಕಕ್ಕೆ ಇ-ಸ್ಟ್ಯಾಂಪ್ ಪೇಪರ್ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಈ ಲಿಂಕ್ https://kaveri.karnataka.gov.in/landing-page ಒತ್ತಿ ಕಾವೇರಿ-2.0 ತಂತ್ರಾಂಶವಿರುವ ವೆಬ್ ಸೈಟಿಗೆ ಭೇಟಿ ನೀಡಬಹುದು.