ಅಯೋಧ್ಯೆ, ಡಿ.29 www.bengaluruwire.com : ಅಯೋಧ್ಯೆಯಲ್ಲಿ ಜನವರಿ 22ರಂದು ಮಧ್ಯಾಹ್ನ 12.45ರ ಒಳಗಾಗಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳು ನಡೆಯಲಿದೆ. ಇದಕ್ಕಾಗಿ ರಾಜ್ಯದ ಇಬ್ಬರು ಶಿಲ್ಪಿಗಳು ಸೇರಿದಂತೆ ಮೂವರು ಕಲಾವಿದರು ಮೂರು ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಮೂರ್ತಿಗಳನ್ನು ತಯಾರಿಸಿದ್ದು, ಇದರಲ್ಲಿ ಒಂದು ಮೂರ್ತಿ ಅಯೋಧ್ಯೆಯ ಶ್ರೀರಾಮನ ನೂತನ ದೇವಾಲಯದ ಗರ್ಭಗುಡಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾಣಪ್ರತಿಷ್ಠೆ ನಡೆದು ಪೂಜಿಸಲ್ಪಡುತ್ತದೆ.
ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್ ಭಟ್ ಹಾಗೂ ರಾಜಸ್ತಾನದ ಸತ್ಯನಾರಾಯಣ ಪಾಂಡೆ ಅವರು ತಲಾ ಮೂರು ಮೂರ್ತಿಗಳನ್ನು ಕೆತ್ತನೆ ಮಾಡಿದ್ದಾರೆ. ಈ ಮೂರು ಮೂರ್ತಿಗಳಲ್ಲಿ ಅತ್ಯುತ್ತಮ ವಿನ್ಯಾಸದ ಒಂದು ಮೂರ್ತಿಯನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಗುತ್ತದೆ. ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡಲಾಗುತ್ತದೆ. ಇಂದು ಯಾವ ಮೂರ್ತಿ ಆ ಮೂರ್ತಿಯು ಗರ್ಭಗುಡಿ ಸೇರಲಿದೆ. ಮತದಾನದ ಪ್ರಕ್ರಿಯೆ ಮೂಲಕ ಗರ್ಭಗುಡಿ ಸೇರುವ ರಾಮಲಲ್ಲಾ ವಿಗ್ರಹದ ಆಯ್ಕೆ ಕಾರ್ಯ ನಡೆಯಲಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
5 ವರ್ಷದ ಬಾಲರಾಮನ ಮುಗ್ಧತೆಯನ್ನು ಬಿಂಬಿಸುವ ಹಾಗೂ ದೈವಕಳೆ ಮುಖದ ಮೂರ್ತಿಯ ಆಯ್ಕೆಯಾಗಲಿದೆ. ಈ ಮೂರ್ತಿಗಳನ್ನು ಕೆತ್ತನೆ ಮಾಡುವುದಕ್ಕೆ ಆರು ತಿಂಗಳು ಹಿಡಿದಿದೆ. 51 ಇಂಚು ಎತ್ತರದ ವಿಗ್ರಹದಲ್ಲಿ ದೈವಿಕತೆ ಹಾಗೂ ಮಗುವಿನಂತಹ ಮುಗ್ಧತೆ ಇರುವ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಟ್ರಸ್ಟ್ ಹೇಳಿದೆ.
ಶ್ರೀ ರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ಶ್ರೀ ಶಾರದಾ ಪೀಠದಲ್ಲಿನ ಪವಿತ್ರ ಕುಂಡದ ಜಲವನ್ನು ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ನೀಡಲಾಗುವುದು ಎಂದು ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿ ಸಂಸ್ಥಾಪಕರಾದ ರವೀಂದ್ರ ಪಂಡಿತ್ ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
15 ತಲೆಮಾರಿನ ಶಿಲ್ಪಿ ಅರುಣ್ ಯೋಗಿರಾಜ್ ರಿಂದ ಬಾಲರಾಮ ಮೂರ್ತಿ ನಿರ್ಮಾಣ :
ಅಯೋಧ್ಯೆಯ ಶ್ರೀ ಬಾಲರಾಮನ ಮೂರ್ತಿಯನ್ನು ತಯಾರು ಮಾಡುವಲ್ಲಿ ದೇಶದ ಮೂರು ಶಿಲ್ಪಿಗಳ ಪೈಕಿ ರಾಜ್ಯದಿಂದ ಮೈಸೂರಿನ 15ನೇ ತಲೆಮಾರಿನ ಶಿಲ್ಪಕಲಾ ಪರಂಪರೆಯನ್ನು ಹೊಂದಿದ ಅರುಣ್ ಯೋಗಿರಾಜ್ ಕೂಡ ಒಬ್ಬರು. ಈ ಮೂವರು ಶಿಲ್ಪಿಗಳು ಅಯೋಧ್ಯೆಯಲ್ಲಿಯೇ ನೆಲಸಿ ತಲಾ 51 ಇಂಚು ಎತ್ತರದ ಮೂರ್ತಿಯನ್ನು ತಯಾರಿಸಿದ್ದಾರೆ. ಈ ವರ್ಷದ ಜೂನ್ ನಿಂದ ಡಿಸೆಂಬರ್ ತನಕ ಅಯೋಧ್ಯೆಯಲ್ಲೇ ನೆಲಸಿದ ಯೋಗಿರಾಜ್ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಪೂಜೆ ನಡೆಸಿ, 10 ರಿಂದ 12 ಗಂಟೆಗಳ ಕಾಲ ತಮಗೆ ವಹಿಸಿದ ಶ್ರೀ ರಾಮಲಲ್ಲಾನ ಮೂರ್ತಿ ನಿರ್ಮಾಣ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.
ಮೂರ್ತಿ ನಿರ್ಮಾಣದ ಆರಂಭದಲ್ಲಿ ಕೈಗೆ ಕಂಕಣ ಧರಿಸಿ, ಪೂಜೆ ಸಲ್ಲಿಸಿ, ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಅರುಣ್ ಯೋಗಿರಾಜ್ ಅಯೋಧ್ಯೆಯಲ್ಲೇ ನೆಲೆಸಿ ತಮ್ಮ ಈ ಕಾರ್ಯವನ್ನು ಸಂಪನ್ನಗೊಳಿಸಿದ್ದಾರೆ. ಕೃಷ್ಣಶಿಲೆಗೆ ಜೀವಕಳೆ ನೀಡುವ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಅವಧಿಯಲ್ಲಿ ತಮ್ಮ ಕುಟುಂಬದೊಂದಿಗೆ ಸಂಪೂರ್ಣ ಸಂಪರ್ಕ ಕಡಿತಗೊಳಿಸಿಕೊಂಡಿದ್ದರು. ಸ್ಪುರದ್ರೂಪಿ ಬಾಲರಾಮನನ್ನು ಮೈಸೂರಿನ ಎಚ್ ಡಿ ಕೋಟೆ ಬಳಿಯ ಹೇರೊಹಳ್ಳಿಯಲ್ಲಿ ಸಿಕ್ಕ ಕೃಷ್ಣಶಿಲೆಯನ್ನು ಬಳಸಿ ಮೂರ್ತಿಯನ್ನು ತಯಾರು ಮಾಡಲಾಗಿದೆ.
ಜಮೀನು ಹದಗೊಳಿಸುತ್ತಿದ್ದ ವೇಳೆ ಪತ್ತೆಯಾಗಿದ ಕೃಷ್ಣಶಿಲೆ :
ಹಾರೋಹಳ್ಳಿಯಲ್ಲಿ ಜಮೀನು ಹದಗೊಳಿಸುತ್ತಿದ್ದ ವೇಳೆ ಆಕಾಶ ನೀಲಿ ಬಣ್ಣದ ಬೃಹತ್ ಗಾತ್ರದ ಬಂಡೆಯೊಂದು ಪತ್ತೆಯಾಯಿತು. ರಾಮಮಂದಿರ ಗುರುಗಳೊಂದಿಗೆ ಸಂಪರ್ಕದಲ್ಲಿದ್ದ ವಿಶ್ವಕರ್ಮ ಸಮುದಾಯದ ಸುರೇಂದ್ರ ಎಂಬವರು ಶ್ರೀರಾಮನ ಮೂರ್ತಿಗೆ ಪರಿಶುದ್ಧ ಶಿಲೆ ಸಿಕ್ಕರೆ ಕೊಡುವಂತೆ ತಿಳಿಸಿದ್ದರು. ಜಮೀನು ಹದಗೊಳಿಸುತ್ತಿದ್ದ ವೇಳೆ ಬೃಹತ್ ಗಾತ್ರದ ಬಂಡೆ ಪತ್ತೆಯಾಯಿದ ನಂತರ ಅದನ್ನು ಮೂರು ಭಾಗ ಮಾಡಿ ಮತ್ತೊಂದು ಸ್ಥಳದಲ್ಲಿ ಇರಿಸಲಾಯಿತು. ನಂತರ ಸುರೇಂದ್ರ ವಿಶ್ವಕರ್ಮ ಎಂಬವರು ಅದನ್ನು ಇಷ್ಟಪಟ್ಟು, ವೈಜ್ಞಾನಿಕ ಪರೀಕ್ಷೆ ಮಾಡಿಸಿದ ಬಳಿಕ ಶ್ರೀರಾಮ ಮತ್ತು ಸೀತಾಮಾತೆ ಮೂರ್ತಿ ನಿರ್ಮಾಣಕ್ಕೆ ಶಿಲೆಗಳನ್ನ ಅಯೋಧ್ಯೆಗೆ ಕಳುಹಿಸಿಕೊಟ್ಟರು.
ಮೊದಲು 2 ಶಿಲೆಗಳನ್ನು ಕಳುಹಿಸಿದ ಬಳಿಕ ಅಯೋಧ್ಯೆಯಿಂದ ಗುರುಗಳೊಬ್ಬರು ಬಂದಿದ್ದರು. ಅವರು ಶಿಲೆ ಪತ್ತೆಯಾದ ಜಾಗದಿಂದಲೇ ಹಿಡಿ ಮಣ್ಣನ್ನು ತೆಗೆದುಕೊಂಡು ಹೋದರು. ಅದನ್ನು ರಾಮನ ಗರ್ಭಗುಡಿಯಲ್ಲಿಡುವುದಾಗಿಯೂ ಹೇಳಿದರು. ಶ್ರೀರಾಮ-ಸೀತಾ ಮಾತೆ ಬಳಿಕ, ಲಕ್ಷ್ಮಣ, ಭರತ, ಶತ್ರುಜ್ಞ ವಿಗ್ರಹಗಳ ಕೆತ್ತನೆಗಳಿಗೂ ಕೃಷ್ಣಶಿಲೆಯನ್ನು ಕಳುಹಿಸಿಕೊಡಲಾಯಿತು. ಇದೆಲ್ಲ ನಮ್ಮ ಪೂರ್ವಜರ ಪುಣ್ಯವೆಂದೇ ನಾವು ಭಾವಿಸುತ್ತೇವೆ ಎಂದು ಕ್ವಾರಿ ಕೆಲಸ ಮಾಡುವ ಗುತ್ತಿಗೆದಾರ ಶ್ರೀನಿವಾಸ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಎಚ್.ಡಿ.ಕೋಟೆ ಕೃಷ್ಣಶಿಲೆಯ ವಿಶೇಷತೆ :
ಎಚ್ ಡಿ.ಕೋಟೆ ಸುಮಾರು 25-30 ಕಿ.ಮೀ ವ್ಯಾಪ್ತಿಯಲ್ಲಿ ಕೃಷ್ಣಶಿಲೆ ಇರುವ ಕಡೆ ಸರ್ಕಾರವೇ ಈ ಜಾಗವನ್ನು ತಮ್ಮ ಸುಪರ್ದಿಗೆ ಪಡೆದು ಶಿಲ್ಪಕಲೆಗೆ ಮೂರ್ತಿ ಕೆತ್ತನೆಗೆ ಸರ್ಕಾರವೇ ಕೊಡಿಸುವ ವ್ಯವಸ್ಥೆ ಮಾಡುತ್ತಿದೆ. ಭೂಮಿಯ ಒಳಗೆ 60 ಅಡಿಯಲ್ಲಿ ಇಂತಹ ಶಿಲೆ ಲಭ್ಯವಾಗುತ್ತಿದೆ. ಇತ್ತೀಚೆಗೆ ಇಂತಹ ಕಲ್ಲುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಹೀಗಾಗಿ ಇಂತಹ ಕೃಷ್ಣ ಶಿಲೆ ಲಭ್ಯತೆ ಕಡಿಮೆಯಾಗುತ್ತಿದೆ ಎಂದು ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಸಹೋದರ ಸೂರ್ಯ ಪ್ರಕಾಶ್ ಹೇಳಿದ್ದಾರೆ. ಈ ಕೃಷ್ಣಶಿಲೆ ನೀಲಿ ಮಿಶ್ರಿತ ಶಿಲೆಯಾಗಿದ್ದು ಆಸಿಡ್, ಅಗ್ನಿ ನಿರೋಧಕವಾಗಿದ್ದು ಎಂತದ್ದೇ ಪ್ರಕೃತಿ ವಿಕೋಪಗಳನ್ನು ಎದುರಿಸುವಷ್ಟು ಸಾಮರ್ಥ್ಯ ಹೊಂದಿದೆ. ಕಬ್ಬಿಣ ಸಾಮಾನ್ಯವಾಗಿ 850 ಡಿಗ್ರಿಯಷ್ಟು ಉಷ್ಣಾಂಶದಲ್ಲಿ ಕರಗುತ್ತದೆ. ಆದರೆ ಈ ಶಿಲೆ ಸದೃಢವಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.