ಬೆಂಗಳೂರು, ಡಿ.05 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಭೂತ ಸೌಕರ್ಯಗಳ ಕುರಿತ ಪ್ರಶ್ನೆಯೊಂದಕ್ಕೆ ಸರ್ಕಾರಕ್ಕೆ ಸಿದ್ದಪಡಿಸಿ ನೀಡಿರುವ ಉತ್ತರ ವಾಸ್ತವದಲ್ಲಿ ಸದನವನ್ನು ದಾರಿ ತಪ್ಪಿಸುವಂತಿದೆ ಎಂದು ಆರೋಪಿಸಲಾಗಿದೆ.
ಮಂಗಳವಾರ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ, ಶಾಸಕ ಸುರೇಶ್ ಕುಮಾರ್ ರವರ ಚುಕ್ಕೆ ಗುರುತಿನ ಪ್ರಶ್ನೆಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಗೆ ಬಿಡಿಎ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಭೂತ ಸೌಕರ್ಯಗಳ ಕುರಿತ ಪ್ರಶ್ನೆಗೆ ಮಾಹಿತಿ ನೀಡಿತ್ತು. ಡಿಸಿಎಂ ನೀಡಿದ ಈ ಉತ್ತರವು ವಾಸ್ತವಾಂಶಕ್ಕೆ ದೂರವಾಗಿದೆ. ಬಿಡಿಎ ಎಂಜಿನಿಯರಿಂಗ್ ವಿಭಾಗವು ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ದೂರಿದೆ.
ಬಿಡಿಎ ಇಲ್ಲಿಯವರೆಗೂ ಮಾಡಿರುವ ಮೂಲಭೂತ ಸೌಕರ್ಯ ಕಾಮಗಾರಿಗಳಿಂದ ಯಾವುದೇ ನಿವೇಶನಾದಾರರಿಗೆ, ಮನೆ ಕಟ್ಟುತ್ತಿರುವವರಿಗೆ ಅನುಕೂಲವಾಗಿಲ್ಲ. ಭೂಸ್ವಾಧೀನ ಸಮಸ್ಯೆಗಳಿಲ್ಲದ ಪ್ರದೇಶದಲ್ಲಿ ನೀರು, ಒಳಚರಂಡಿ, ವಿದ್ಯುತ್ ಸಂಪರ್ಕವನ್ನು ಕೊಡಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಲಾಗಿದೆ. ಭೂಸ್ವಾದಿನ ಸಮಸ್ಯೆಗಳಿರುವ ಪ್ರದೇಶದಿಂದಾಗಿ ನಿರಂತರತೆ ಕಾಪಾಡಿಕೊಳ್ಳುವಲ್ಲಿ ಸಮಸ್ಯೆ ಉಂಟಾಗಿರುವ ಬಡಾವಣೆಯ ಕೆಲವು ಭಾಗಗಳಿಗೆ ನೀರು, ಒಳಚರಂಡಿ, ವಿದ್ಯುತ್ ಪರ್ಯಾಯ ವ್ಯವಸ್ಥೆಯ ಮೂಲಕ ತಾತ್ಕಾಲಿಕವಾಗಿ ಕಲ್ಪಿಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಎಂ.ಅಶೋಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ಕಟ್ಟುತ್ತಿರುವ ನಿವೇಶನದಾರರಿಗೆ ತಾತ್ಕಾಲಿಕವಾಗಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮತ್ತು ಬಡಾವಣೆ ಎಲ್ಲಾ ನಿವೇಶನಗಳ ಹಂಚಿಕೆಯದಾರರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಸದನದ ದಿಕ್ಕು ತಪ್ಪಿಸಿದ್ದಾರೆ. ವಾಸ್ತವವಾಗಿ ಭೂಸ್ವಾಧೀನ ಸಮಸ್ಯೆಗಳಿರದ ಪ್ರದೇಶ, ಭೂಸ್ವಾಧೀನ ಸಮಸ್ಯೆಗಳಿಂದ ನಿರಂತರತೆಗೆ ಉಂಟಾಗಿರುವ ಸಮಸ್ಯೆಯ ಪ್ರದೇಶಗಳನ್ನು ಒಳಗೊಂಡಂತೆ ತಾತ್ಕಾಲಿಕವಾಗಿ ಯಾವುದೇ ಪರಿಹಾರವನ್ನು ಮಾಡಿರುವುದಿಲ್ಲ ಎಂದು ಅವರು ದೂರಿದ್ದಾರೆ.
ಒಳಚರಂಡಿ,ನೀರು, ವಿದ್ಯುತ್ ಸಂಪರ್ಕ ಕೊಡುವ ಪರಿಕರಗಳ ಅಳವಡಿಕೆ ಕಾಮಗಾರಿಗಳು ಕೂಡ ಅರ್ಧಂಬರ್ಧವಾಗಿರುತ್ತದೆ. ಈ ಅವ್ಯವಸ್ಥೆಯಿಂದ ಮನೆ ಕಟ್ಟುವವರು ತ್ರಿಶಂಕು ನರಕವನ್ನು ಅನುಭವಿಸುತ್ತಿದ್ದಾರೆ.
ಅಸಲಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ಸಮಸ್ಯೆಗಳು ಈ ಕೆಳಕಂಡಂತಿವೆ :
1. ಶೌಚ ಅಥವಾ ಕೊಳಚೆ ಗುಂಡಿ :
ಮನೆ ನಿರ್ಮಾಣ ಆರಂಭಿಸಿದವರಿಗೆ ಬಿಡಿಎ ಯುಜಿಡಿ ಜಾಲಕ್ಕೆ ಸಂಪರ್ಕ ಕಲ್ಪಿಸಬಾರದು ಎಂದು, ಕೊಳಚೆ ನೀರು ವಿಲೇವಾರಿ ಮಾಡಲು ಶೌಚ/ಕೊಳಚೆ ಗುಂಡಿಗಳನ್ನು ನಿರ್ಮಿಸಲು ಬಿಡಿಎ ಎಂಜಿನಿಯರ್ ಗಳು ಮೌಖಿಕವಾಗಿ ಒತ್ತಾಯಿಸುತ್ತಿದ್ದಾರೆ.
2. ಕೊಳವೆ ಬಾವಿಯ ನೀರು :
ಮನೆ ನಿರ್ಮಾಣಕ್ಕೆ , ನಿರ್ಮಾಣದ ನಂತರ ಬಿಡಿಎ ಜಾಲದಿಂದ ನೀರನ್ನು ಒದಗಿಸುತ್ತಿಲ್ಲ. ಬದಲಿಗೆ ಎಲ್ಲರೂ ಕೊಳವೆ ಬಾವಿಯ ನೀರಿನ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿಯಿದೆ.
3. ಕಗ್ಗತ್ತಲೆಯ ಬಡಾವಣೆ :
ಅಪೂರ್ಣ ಕಾಮಗಾರಿಯಿಂದಾಗಿ ಭೂಗತ ಬಿಡಿಎ ವಿದ್ಯುತ್ಜಾಲದ ಬದಲಾಗಿ ಬೆಸ್ಕಾಂನಿಂದ ಓವರ್‌ಹೆಡ್ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುತ್ತಿದೆ. ಬಡಾವಣೆಯ ನಿವೇಶನದಾರರ ಹೊಸದಾಗಿ ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಲು, ವಿದ್ಯುತ್ ಸಂಪರ್ಕ ಪಡೆಯಲು ತಿಂಗಳುಗಟ್ಟಲೆ ತಿರುಗಾಡಬೇಕಾಗಿದೆ. ಮನೆ ನಿರ್ಮಿಸುತ್ತಿರುವವರ ರಸ್ತೆಯಲ್ಲಿ ಮನೆ ನಿರ್ಮಾಣ ಸಾಮಗ್ರಿ ಕಳವು ತಡೆಯಲು ಉಳಿದುಕೊಳ್ಳುವ ಕಾರ್ಮಿಕರ, ಮನೆ ನಿರ್ಮಾಣ ನಂತರ ವಾಸಿಸುವವರ ಸುರಕ್ಷತೆಗಾಗಿ ಬಿದ್ದಿ ದೀಪಗಳ ವ್ಯವಸ್ಥೆಗಾಗಿ ಗೋಗರೆಯುವ ಪರಿಸ್ಥಿತಿ ಇದೆ.
4. ಮಣ್ಣಿನ ಹಳ್ಳ ಕೊಳ್ಳಗಳ ರಸ್ತೆ :
ಬಡಾವಣೆಯಲ್ಲಿ ಬಿಡಿಎ 30,40,50 ಅಡಿ ಆಂತರಿಕ ರಸ್ತೆಗಳು ಅವ್ಯವಸ್ಥಿತವಾಗಿದೆ. ಮನೆ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳು ನಿರ್ಮಾಣ ಪ್ರಾರಂಭವಾದ ನಿವೇಶನಗಳಿಗೆ ತಲುಪಲು ತುಂಬಾ ಕಷ್ಟಕರವಾಗಿದೆ. ಕಟ್ಟಡ ನಿರ್ಮಾಣ ಸ್ಥಳಗಳಿಗೆ ಹರಸಾಹಸ ಪಟ್ಟು ಹೋಗಬೇಕಿದೆ. ಹೀಗಾಗಿ ನಿವೇಶನಗಳಿಗೆ ವಸ್ತುಗಳನ್ನು ಸಾಗಿಸಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿದೆ ಮತ್ತು ವಾಹನ ಚಲಾಯಿಸುವ ವ್ಯವಸ್ಥಿತ ರಸ್ತೆ ಇಲ್ಲದಿರುವುದರಿಂದ ಆಟೋಗಳು ಮತ್ತು ದ್ವಿಚಕ್ರ ಅಥವಾ ನಾಲ್ಕು ಚಕ್ರ ವಾಹನಗಳು ಸಹ ನಿವೇಶನ, ಮನೆಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ.