ಬೆಂಗಳೂರು, ಡಿ.1 www.bengaluruwire.com : ಒಂದು ಅಂಗೈಯಲ್ಲಿ ಹಿಡಿಯಬಹುದಾದ ಈ ಪುಟ್ಟ ಯಂತ್ರ ರೋಗಿಗಳ ಪಾಲಿಗೆ ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.
ಹೌದು ಭಾರತೀಯ ವೈದ್ಯಕೀಯ ಪರಿಷತ್ (ICMR-ಐಸಿಎಂಆರ್) ಬೆಂಬಲದಲ್ಲಿ ಐಐಟಿ ಗೌಹಾತಿಯಲ್ಲಿನ ಸಾಹಿಲ್ ಎಂಬ ಪಿಎಚ್ ಡಿ ವಿದ್ಯಾರ್ಥಿ ಸಂಶೋಧನೆ ನಡೆಸಿ ಮೊಬಿಲ್ಯಾಬ್ (Mobilab) ಎಂಬ ಪುಟ್ಟಯಂತ್ರವನ್ನು ತಯಾರಿಸಿದ್ದಾರೆ. ಈ ಯಂತ್ರದ ಮೂಲಕ 25 ವಿವಿಧ ರೀತಿಯ ರಕ್ತ ಪರೀಕ್ಷೆ ಮಾಡಬಹುದು. ಸ್ಮಾರ್ಟ್ ಮೊಬೈಲ್ ಆಧಾರಿತ ಈ ಮೊಬಿಲ್ಯಾಬ್ ಯಂತ್ರವನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಕಳೆದ ವರ್ಷ ಈ ಯಂತ್ರದ ಉತ್ಪಾದನೆಗೆ ಲೈಸೆನ್ಸ್ ಸಿಕ್ಕಿದೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಹಲವಾರು ತಂತ್ರಜ್ಞಾನ ಸಂಸ್ಥೆಗಳು ತಮ್ಮ ಉತ್ಪನ್ನ, ವಸ್ತುಗಳು ಹಾಗೂ ಸೇವೆಗಳ ಬಗೆಗೆ ವಿವಿಧ ರೀತಿಯ ಮಳಿಗೆಗಳನ್ನು ತೆರೆದಿದ್ದವು. ಅವುಗಳ ಪೈಕಿ ಐಸಿಎಂಆರ್ ಮಳಿಗೆಯಲ್ಲಿ ಮೊಬಿಲ್ಯಾಬ್ ರಕ್ತ ಪರೀಕ್ಷೆ ಮಾಡುವ ಪುಟ್ಟ ಯಂತ್ರ ಎಲ್ಲರ ಗಮನ ಸೆಳೆದಿತ್ತು.
ಹೃದಯ, ಕಿಡ್ನಿ, ಲಿವರ್, ಪ್ಯಾಂಕ್ರಿಯಾಸ್ ಹಾಗೂ ಇನ್ನಿತರ ಗಂಭೀರ ಸ್ವರೂಪದ ಖಾಯಿಲೆಗಳ ಬಗ್ಗೆ ರಕ್ತ ಪರೀಕ್ಷೆ ಮಾಡಿ 5-6 ನಿಮಿಷದಲ್ಲಿ ಫಲಿತಾಂಶವನ್ನು ಡಿಜಿಟಲ್ ರೂಪದಲ್ಲಿ ನೀಡಲಿದೆ. ಇದಕ್ಕಾಗಿ ಮೊಬಿಲ್ಯಾಬ್ ಆಂಡ್ರಾಯ್ಡ್ ಆಪ್ ಅನ್ನು ರಕ್ತ ಪರೀಕ್ಷೆ ಕೈಗೊಳ್ಳುವವರು ಡೌನ್ ಲೋಡ್ ಮಾಡಿಕೊಂಡಿರಬೇಕು. ಈ ಆಪ್ ಅಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಉಪಕರಣದ ಬೆಲೆ 25,000 ರೂ. ನಷ್ಟು ಇರಲಿದ್ದು, ಪ್ರಸ್ತುತ ಐಸಿಎಂಆರ್ ಪ್ರಾಯೋಗಿಕ ವಿಶ್ಲೇಷಣೆ ನಡೆಸುತ್ತಿದ್ದು, ಆ ಬಳಿಕ ಆನ್ ಲೈನ್ ನ ಮೂಲಕ ಇನ್ನು 5-6 ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಕೇವಲ 312 ಗ್ರಾಮ್ ತೂಕದ ಈ ಯಂತ್ರದಲ್ಲಿ ಪರೀಕ್ಷೆಯಾದ ರಕ್ತ ಮಾದರಿಯ ವರದಿಗಳು ಮೊಬಿಲ್ಯಾಬ್ ಆಪ್ ನಲ್ಲಿ ಬಹುಭಾಷೆಯಲ್ಲಿ ಲಭ್ಯವಾಗಲಿದೆ. ಇದರ ಎಲೆಕ್ಟ್ರಾನಿಕ್ ವರದಿಗಳನ್ನು ಸುಲಭವಾಗಿ ವೈದ್ಯರೊಂದಿಗೆ ಹಂಚಿಕೊಳ್ಳಬಹುದು.
ಕೇವಲ 5-6 ನಿಮಿಷದಲ್ಲಿ ಪರೀಕ್ಷೆಯ ಡಿಜಿಟಲ್ ವರದಿ ಫಲಿತಾಂಶವು ಲಭ್ಯವಾಗಲಿದೆ. ಇದರಿಂದ ಸಣ್ಣ ಮಟ್ಟದ ಲ್ಯಾಬ್, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಹಳ್ಳಿಗಾಡಿನಲ್ಲಿ ಬಳಸಲು ಇದು ಅನುಕೂಲವಾಗಲಿದೆ. ಗಂಭೀರ ಕಾಯಿಲೆಗಳ ಚಿಕಿತ್ಸೆ ಹಾಗೂ ರೋಗದ ಸ್ಥಿತಿಗತಿ ತಿಳಿಯುವಲ್ಲಿ ಈ ಪೋರ್ಟಬಲ್ ಯಂತ್ರ ಹೊಸ ಭಾಷ್ಯ ಬರೆಯಲಿದೆ. ಈ ಯಂತ್ರವನ್ನು ಮುಂದೆ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸೇರಿಸಲು ಕೇಂದ್ರ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ಮೌಬಿಲ್ಯಾಬ್ ಅನ್ನು ಯಾವುದೇ ಮೊಬೈಲ್ ಫೋನ್ ಚಾರ್ಜರ್ ಡಿವೈಸ್ ನಿಂದಲೂ ಚಾರ್ಜ್ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದರೆ 150 ರಕ್ತ ಪರೀಕ್ಷೆಗಳನ್ನು ಮಾಡಬಹುದು.
ಜಗತ್ತಿನಲ್ಲಿ ಸಾವು ಸಂಭವಿಸುವಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಪಾಲು 41 ದಶಲಕ್ಷದಷ್ಟಿದೆ. ಅಂದರೆ ಶೇ.74ರಷ್ಟು ಪ್ರಮಾಣದಲ್ಲಿದೆ. ಆ ಪೈಕಿ 5.87 ದಶಲಕ್ಷ (ಶೇ.60) ಸಾವುಗಳು ನಮ್ಮ ದೇಶದಲ್ಲಿ ಆಗುತ್ತಿದೆ. ಅನಾರೋಗ್ಯಕರ ಜೀವನ ಪದ್ಧತಿ, ಸೂಕ್ತ ಹಾಗೂ ನಿಯಮಿತ ಪರೀಕ್ಷೆಗಳು ಮಾಡಿಸದ ಕಾರಣ ಲಕ್ಷಾಂತರ ಜನರು ಕಿಡ್ನಿ ವೈಫಲ್ಯ, ಪಿತ್ತಕೋಶ ವೈಫಲ್ಯ ಹಾಗೂ ಹೃದಯ ತೊಂದರೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದೆ. ಇಂತಹ ಮೊಬಿಲ್ಯಾಬ್ ಉಪಕರಣಗಳಿಂದ ನಿಯಮಿತವಾಗಿ ಪರೀಕ್ಷೆ ಮಾಡಿಸುವದರಿಂದ ಹಲವು ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳುತ್ತಾರೆ ಐಸಿಎಂಆರ್ ವಿಜ್ಞಾನಿ ರಾಜೇಶ್ ಕುಮಾರ್ ಸಾಗರ್.
ಐಸಿಎಂಆರ್ ಮಳಿಗೆಗಳಲ್ಲದೆ ವಿಜ್ಞಾನ ತಂತ್ರಜ್ಞಾನ ಇಲಾಖೆಯು ಇಸ್ರೋದ ಮಹತ್ವದ ಬಾಹ್ಯಾಕಾಶ ಯೋಜನೆ ಆದಿತ್ಯ ಎಲ್-1 ಕುರಿತಂತೆ ನೆಹರು ಪ್ಲಾನಿಟೋರಿಯಂ ಸಹಯೋಗದಲ್ಲಿ ಆದಿತ್ಯ ಎಲ್-1 ಯೋಜನೆಯ ಬಗ್ಗೆ ನೀಡಿದ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು. ಅದೇ ರೀತಿ ರೋಬೋಟಿಕ್ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಬಯೋ ತಂತ್ರಜ್ಞಾನ, ಅತ್ಯಾಧುನಿಕ ತಂತ್ರಜ್ಞಾನ ಬಳಿ ಕೃಷಿ ಭೂಮಿ, ಬೆಳೆಗಳ ವೈಜ್ಞಾನಿಕ ಪರೀಕ್ಷೆ ಕೈಗೊಳ್ಳುವ ಸಂಸ್ಥೆಗಳು ಸೇರಿದಂತೆ ವಿವಿಧ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದವು.