ಬೆಂಗಳೂರು, ಆ.30 www.bengaluruwire.com : ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯದ ಉಲ್ಲಾಳು ಕೆರೆಯಲ್ಲಿ ಮೀನುಗಳ ಮಾರಣಹೋಮ ಕುರಿತಂತೆ ಆ.28ರಂದು ಬೆಂಗಳೂರು ವೈರ್ ಸುದ್ದಿ ಪ್ರಸಾರದ ಬಳಿಕ ಎಚ್ಚೆತ್ತುಕೊಂಡಿರುವ ಪಾಲಿಕೆ ಕೆರೆ ವಿಭಾಗದ ಎಂಜಿನಿಯರ್ ಗಳು, ಬೆಂಗಳೂರು ಜಲಮಂಡಳಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬುಧವಾರ ಕೆರೆಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿದರು.
ಇದೇ ಸಂದರ್ಭದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿರುವುದರ ಬಗ್ಗೆ ಹಿಂದಿನ ಕಾರಣ ತಿಳಿಯಲು, ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ನವೀನ್ ಕೆರೆಯ ನೀರಿನ ಮಾದರಿಯನ್ನು ಸಂಗ್ರಹಿಸಿದರು. ಉಲ್ಲಾಳ ಕೆರೆಯಲ್ಲಿ ಸತ್ತು ಹೋಗಿದ್ದ ಮೀನುಗಳಿಂದ ಸಾಕಷ್ಟು ದುರ್ವಾಸನೆ ಬರುತ್ತಿದ್ದು ಅದನ್ನು ನಿಯಂತ್ರಿಸಲು ಜೆಸಿಬಿ ಯಂತ್ರದ ಮೂಲಕ ಪಾಲಿಕೆ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿದರು.
ಕೆರೆಯ ನೀರಿನ ಮಾದರಿ ಪರೀಕ್ಷೆಗೆ ಕೊಂಡೊಯ್ದ ಕೆಎಸ್ ಪಿಸಿಬಿ :
ಉಲ್ಲಾಳು ಕೆರೆಯ ದುಸ್ಥಿತಿ ಬಗ್ಗೆ ಬೆಂಗಳೂರು ವೈರ್ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಅವರನ್ನು ಪ್ರಶ್ನಿಸಿದಾಗ, “ಉಲ್ಲಾಳು ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿರುವುದನ್ನು ಇದೀಗ ತೆರವುಗೊಳಿಸಲಾಗಿದೆ. ಮೀನುಗಳ ಸಾವಿಗೆ ಕಾರಣವಾಗಿರುವ ಅಂಶಗಳ ಬಗ್ಗೆ ತಿಳಿಯಲು ಬುಧವಾರ ಸ್ಥಳಕ್ಕೆ ಪಾಲಿಕೆ ಕೆರೆ ವಿಭಾಗದ ಎಇಇ ಮಹೇಶ್, ಬೆಂಗಳೂರು ಜಲಮಂಡಳಿಯ ಎಇಇ ಸೈಯ್ಯದ್ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ನವೀನ್ ಸ್ಥಳಕ್ಕೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿದ್ದಾರೆ. ನವೀನ್ ಅವರ ತಂಡ ಕೆರೆಯ ನೀರಿನ ಮಾದರಿಗಳನ್ನು ಲ್ಯಾಬ್ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.”
ಕೆರೆಯಲ್ಲಿ ಮೀನುಗಾರಿಕೆ ನಿಷೇಧಕ್ಕೆ ಪಾಲಿಕೆ ಕ್ರಮ :
“ಕೆರೆಯಲ್ಲಿ ಉಳಿದಿರುವ ನೀರಿನ ಶುದ್ಧೀಕರಣಕ್ಕಾಗಿ ‘ಬೊಕಾಸಿ ಬಾಲ್’ ಗಳನ್ನು ನೀರಿಗೆ ಹಾಕಿ, ನೈಸರ್ಗಿಕವಾಗಿ ನೀರಿನಲ್ಲಿ ಸೇರಿಸಿರುವ ವಿಷಕಾರಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾವನ್ನು ನಿವಾರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಅದೇ ರೀತಿ ಮೀನುಗಾರಿಕೆ ಇಲಾಖೆಗೆ ಪತ್ರ ಬರೆದು ಉಲ್ಲಾಳು ಕೆರೆಯಲ್ಲಿ ಮೀನುಗಾರಿಕೆ ನಿಲ್ಲಿಸುವಂತೆ ಸೂಚಿಸುತ್ತೇವೆ. ಅದೇ ರೀತಿ ಹಲವು ದಿನಗಳಿಂದ ನಿಂತಿರುವ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗುತ್ತದೆ. ಬೆಂಗಳೂರು ಜಲಮಂಡಳಿ ವತಿಯಿಂದ ಮಲ್ಲತ್ತಹಳ್ಳಿ ಕೆರೆ ಬದಿ ಹಿಂದೆ ಇದ್ದ 5 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು 10 ದ.ಲ.ಲೀ ಸಾಮರ್ಥ್ಯಕ್ಕೆ ಉನ್ನತೀಕರಿಸುವ ಕಾಮಗಾರಿಗೆ ಅನುಕೂಲವಾಗುವಂತೆ ಜು.1ರಿಂದ ಉಲ್ಲಾಳ ಕೆರೆಗೆ ಸಂಸ್ಕರಿತ ನೀರು ಹರಿಯುವುದು ನಿಂತಿರುವ ಕಾರಣ ಹಾಗೂ ಮಳೆಯ ಕೊರತೆಯಿಂದ ಕೆರೆ ಬಹುತೇಕ ಬರಿದಾಗಿದೆ” ಎಂದು ಸಿಇ ವಿಜಯ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ.
ಬೆಳಗಿನ ಹೊತ್ತು ವಾಯು ವಿಹಾರಕ್ಕೆ ಬರುವ ನಡಿಗೆದಾರರಿಗೆ, ಸತ್ತು ಮೀನುಗಳು ಕೊಳೆತು ನಾರುತ್ತಿರುವ ಕಾರಣ ಮೂಗು ಹಿಡಿದೇ ನಡಿಗೆ ಮಾಡುವಂತಾಗಿದೆ. ಈ ಮೀನುಗಳ ಮಾರಣ ಹೋಮವಾಗಿ ನಾಲ್ಕೈದು ದಿನಗಳು ಕಳೆದರೂ ಉಲ್ಲಾಳ ಕೆರೆಯ ಹೊಣೆ ಹೊತ್ತ ಬಿಬಿಎಂಪಿಕೆರೆ ವಿಭಾಗದ ಎಂಜಿನಿಯರ್ ಗಳಾಗಲಿ, ಕೆರೆಯ ನಿರ್ವಹಣೆ ಹೊಣೆಹೊತ್ತ ಗುತ್ತಿಗೆದಾರರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ ಎಂದು “ಬಿಬಿಎಂಪಿಯ ಉಲ್ಲಾಳ ಕೆರೆಯಲ್ಲಿ ಮೀನುಗಳ ಮಾರಣಹೋಮ…!! ಹೇಳೋರಿಲ್ಲ ಕೇಳೋರಿಲ್ಲ!! ಅಧಿಕಾರಿಗಳೇನು ಮಾಡ್ತಿದ್ದಾರೆ!!?” ಶೀರ್ಷಿಕೆಯಡಿ ಮೊದಲಿಗೆ ಸುದ್ದಿ ಪ್ರಸಾರ ಮಾಡಿತ್ತು.
ಆ ಬಳಿಕ ಇತರ ರಾಜ್ಯ ಮಟ್ಟದ ಇಂಗ್ಲೀಷ್ ಮತ್ತು ಕನ್ನಡ ದಿನಪತ್ರಿಕೆಗಳು ಬೆಂಗಳೂರು ವೈರ್ ಕನ್ನಡ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಸುದ್ದಿಯನ್ನು ಅನುಸರಿಸಿ ಉಲ್ಲಾಳ ಕೆರೆಯಲ್ಲಿ ಮೀನುಗಳ ಸತ್ತು ಹೋಗಿರುವ ಬಗ್ಗೆ ವರದಿ ಪ್ರಕಟಿಸಿದ್ದವು.
27 ಎಕರೆ ವಿಸ್ತೀರ್ಣದ ಉಲ್ಲಾಳ ಕೆರೆಯಲ್ಲಿ ಪಾಲಿಕೆಯ ಗಮನಕ್ಕೆ ಬಾರದೆ ಮೀನುಗಾರಿಕಾ ಇಲಾಖೆಯು ಬೆಂಗಳೂರು ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಖಾಸಗಿಯವರಿಗೆ ಮೀನು ಸಾಕಲು ಅನುಮತಿ ಪಡೆದಿರುವುದರ ಬಗ್ಗೆಯೂ ಬೆಂಗಳೂರು ವೈರ್ ಆ.28ರ ವರದಿಯಲ್ಲಿ ತಿಳಿಸಿತ್ತು. ಅದೇ ರೀತಿ ಕೆರೆಯಲ್ಲಿನ ಔಗುಪ್ರದೇಶದಲ್ಲಿ ಹೂಳೆತ್ತುವ, ನಡಿಗೆ ಮಾರ್ಗ ಸರಿಪಡಿಸುವ, ಕೆರೆ ದಂಡೆಯಲ್ಲಿ ಕಲ್ಲಿನ ಬೆಂಚು ಹಾಕುವ ಮತ್ತಿತರ ಕಾರ್ಯಗಳ ಸುಮಾರು 2 ಕೋಟಿ ರೂ. ಕಾಮಗಾರಿಯು ಮಂಜೂರಾಗಿದೆ. ಈ ಪೈಕಿ ಉಲ್ಲಾಳು ಕೆರೆಯ ಜೌಗು ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು, ಪಾಲಿಕೆಯಿಂದ ಹಳೆ ಬಿಲ್ ಬಾಕಿ ಕಾರಣದ ನೆಪ ಹೇಳಿ ಕಾಮಗಾರಿಯನ್ನು ನಿಲ್ಲಿಸಿದ್ದರು. ಈ ಬಗ್ಗೆಯೂ ಪಾಲಿಕೆ ಗಮನ ಸೆಳೆಯಲಾಗಿತ್ತು. ಇವೆಲ್ಲದರ ಬಗ್ಗೆ ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಕೆರೆ ವಿಭಾಗದ ಚೀಫ್ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಭರವಸೆ ನೀಡಿದ್ದಾರೆ.
ಉಲ್ಲಾಳು ಕೆರೆಗೆ ವರ್ಷದ ಹಲವು ತಿಂಗಳುಗಳ ಕಾಲ ವಿದೇಶಿ ಹಕ್ಕಿಗಳು ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಜಾತಿಯ ಹಕ್ಕಿಗಳು ಆಹಾರ ಅರಸಿ ಬರುತ್ತವೆ. 13 ರಿಂದ 14ಕ್ಕೂ ಹೆಚ್ಚು ನವಿಲುಗಳು, ಆಮೆ, ಹಾವು, ಮುಂಗುಸಿ, ಅಳಿಲು ಸೇರಿದಂತೆ ಹತ್ತಾರು ಪ್ರಾಣಿ, ಪಕ್ಷಿಗಳು ಹಾಗೂ ಸರೀಸೃಪಗಳ ಆಶ್ರಯ ತಾಣವಾಗಿರುವ ಉಲ್ಲಾಳು ಕೆರೆಯ ಅಭಿವೃದ್ಧಿಗೆ ಬಿಬಿಎಂಪಿ ತನ್ನ ಬದ್ಧತೆಯನ್ನು ತೋರಿಸಬೇಕಿದೆ ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.
ಏನಿದು ಬೊಕಾಸಿ ಬಾಲ್? :
ಬೊಕಾಸಿ ಬಾಲ್ ಗಳು ಸಾವಯವ ವಸ್ತುಗಳಾದ ಉದ್ಯಾನವನದ ಮಣ್ಣು, ಸೂಕ್ಷ್ಮ ಜೀವಾಣುಗಳು, ಕಾಕಂಬಿ ಹಾಗೂ ಭತ್ತದ ತೌಡನ್ನು ಮಿಶ್ರಣ ಮಾಡಿ ತಯಾರಿಸುವ ಒಂದು ಮುದ್ದೆಯಾಗಿದೆ. ಈ ಮುದ್ದೆಗಳನ್ನು ಕಲುಷಿತ ನೀರಿಗೆ ಮಿಶ್ರಣ ಮಾಡಿದಾಗ, ನೀರಿನಲ್ಲಿನ ಅಪಯಕಾರಿ ಬ್ಯಾಕ್ಟೀರಿಯಾ ಹಾಗೂ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ.