ಬೆಂಗಳೂರು, ಆ.28 www.bengaluruwire.com : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ಸಿನ ಬಳಿಕ ಇದೀಗ ಇಸ್ರೊ, ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್1 ಎಂಬ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವನ್ನು (observatory) ಪಿಎಸ್ ಎಲ್ ವಿ-ಎಲ್1 ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.
ಸೆಪ್ಟೆಂಬರ್ 2ರಂದು ಶ್ರೀಹರಿಕೋಟಾದಿಂದ ಬೆಳಗ್ಗೆ 11.50ಕ್ಕೆ PSLV-C57 ಮೂಲಕ ಆದಿತ್ಯ-L1 ಮಿಷನ್ ಮೂಲಕ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವನ್ನು ಸೂರ್ಯನತ್ತ ಕಳುಹಿಸಲು ಇಸ್ರೊ ವಿಜ್ಞಾನಿಗಳು ತಯಾರಿ ನಡೆಸಿದ್ದಾರೆ. ಈ ನೌಕೆಯು ಸೌರ ಶೋಧಕವನ್ನು ಹೊಂದಿದೆ. ಆದಿತ್ಯ-L1 ಮಿಷನ್ ಉಡಾವಣೆ ದಿನಾಂಕ ಕುರಿತು ಇಸ್ರೊ ಎಕ್ಸ್ (ಹಿಂದಿನ ಟ್ವಿಟರ್ ಖಾತೆ)ಯಲ್ಲಿ ಹಂಚಿಕೊಂಡಿದೆ.
ಭೂಮಿಯಿಂದ 1.5 ದಶಲಕ್ಷ ಕಿ.ಮೀ ದೂರದಲ್ಲಿರುವ ಹಾಗೂ ಚಂದ್ರನ ದೂರಕ್ಕಿಂತ ನಾಲ್ಕು ಪಟ್ಟು ಹೆಚ್ಚು ದೂರವಿರುವ ಸೂರ್ಯನಲ್ಲಿನ ಅನೇಕ ತಿಳಿಯದ ಖಗೋಳ ಕೌತುಕವನ್ನು, ವೈಜ್ಞಾನಿಕ ಸತ್ಯಗಳನ್ನು ತಿಳಿದುಕೊಳ್ಳುವುದು ಈ ಆದಿತ್ಯ ಎಲ್1 ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.
ಆಸಕ್ತರು ನೇರವಾಗಿ ಶ್ರೀಹರಿಕೋಟಾದಿಂದ ಉಡಾವಣಾ ಪ್ರಕ್ರಿಯೆ ವೀಕ್ಷಿಸಲು ಇಸ್ರೊ ಸಂಸ್ಥೆ ಅವಕಾಶ ನೀಡಿದ್ದು, ನೋಂದಣಿ ಮಾಡಿಕೊಂಡು ಶ್ರೀಹರಿಕೋಟಾಕ್ಕೆ ಬರುವಂತೆ ಆಹ್ವಾನಿಸಿದೆ.