ಬೆಂಗಳೂರು, ಆ.28 www.bengaluruwire.com : ನಗರದ ಉಲ್ಲಾಳು ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಇದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಹೀಗೆ ಸತ್ತು ಹೋದ ಸಾವಿರಾರು ಮೀನುಗಳು ನೀರಿನಲ್ಲಿ ತೇಲುತ್ತಿದ್ದರೆ, ಕೆಲವು ದಡದಲ್ಲಿರುವುದು ಕಂಡು ಬಂದಿದೆ.
ಬೆಳಗಿನ ಹೊತ್ತು ವಾಯು ವಿಹಾರಕ್ಕೆ ಬರುವ ನಡಿಗೆದಾರರಿಗೆ, ಸತ್ತು ಮೀನುಗಳು ಕೊಳೆತು ನಾರುತ್ತಿರುವ ಕಾರಣ ಮೂಗು ಹಿಡಿದೇ ನಡಿಗೆ ಮಾಡುವಂತಾಗಿದೆ. ಈ ಮೀನುಗಳ ಮಾರಣ ಹೋಮವಾಗಿ ನಾಲ್ಕೈದು ದಿನಗಳು ಕಳೆದರೂ ಉಲ್ಲಾಳ ಕೆರೆಯ ಹೊಣೆ ಹೊತ್ತ ಬಿಬಿಎಂಪಿಕೆರೆ ವಿಭಾಗದ ಎಂಜಿನಿಯರ್ ಗಳಾಗಲಿ, ಕೆರೆಯ ನಿರ್ವಹಣೆ ಹೊಣೆಹೊತ್ತ ಗುತ್ತಿಗೆದಾರರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಾರಿಯ ಮಳೆಗಾಲದಲ್ಲಿ ಆಗಸ್ಟ್ ತಿಂಗಳಲ್ಲಿ ನಿಗದಿತ ರೀತಿ ಮಳೆ ಬಾರದ ಕಾರಣ ಈಗಾಗಲೇ ಕೊಳಚೆ ನೀರು ಹರಿಯುವ ಕೆರೆಗಳನ್ನು ಬಿಟ್ಟು ನಗರದ ಹಲವು ಕೆರೆಗಳಲ್ಲಿ ನೀರಿಲ್ಲದೆ ಬರಗಾಲದ ಛಾಯೆ ರೀತಿ ನೆಲ ಕಾಣುವಂತಾಗಿದೆ. ಸಕಾಲದಲ್ಲಿ ಈ ಕೆರೆಗಳಲ್ಲಿ ಸಾಕಷ್ಟು ಹೂಳು ತುಂಬಿದ್ದರೂ ಅವುಗಳನ್ನು ಅಮೃತ ನಗರೋತ್ಥಾನ ಮತ್ತಿತರ ಸರ್ಕಾರದ ಅನುದಾನಗಳನ್ನು ಬಳಸಿ ಹೂಳೆತ್ತುವ ಕೆಲಸವಾಗಿಲ್ಲ.
ಹಾಗೂ ಕೊಳಚೆ ನೀರು ಹರಿಯುವುದನ್ನು ತಪ್ಪಿಸಿ, ಕೆರೆ ನಿರ್ವಹಣೆ ಸೂಕ್ತ ರೀತಿ ಆಗುತ್ತಿಲ್ಲ. ಇದರ ಪರಿಣಾಮ ಉಲ್ಲಾಳ ಕೆರೆಯಲ್ಲಿ ಕಾಣುವಂತಾಗಿದೆ. ಕೆರೆಯ ಅಳಿದುಳಿದ ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾದರೆ, ನೀರು ಕಲುಷಿತವಾದರೆ ಸಾಮಾನ್ಯವಾಗಿ ಹೀಗೆ ಮೀನುಗಳು ಒಂದೇ ಸಮನೇ ಸತ್ತು ಬೀಳುತ್ತವೆ ಎನ್ನುತ್ತಾರೆ ಪರಿಸರಪ್ರೇಮಿಯೊಬ್ಬರು.
ಮೀನು ಸಾಕಿ- ಮಾರಾಟ ಮಾಡಲು ಖಾಸಗಿ ಗುತ್ತಿಗೆ – ಪಾಲಿಕೆಗೆ ಮಾಹಿತಿಯೇ ಇಲ್ಲ :
ಇದು ಸಾಲದು ಎಂಬಂತೆ ಇರೋ 27 ಎಕರೆ ವಿಸ್ತೀರ್ಣದ ಉಲ್ಲಾಳ ಕೆರೆಯನ್ನು ಬೆಂಗಳೂರು ನಗರ ಜಿಲ್ಲಾಡಳಿತ ಮೀನುಗಾರಿಕೆ ಇಲಾಖೆಯ ಕೋರಿಕೆ ಮೇರೆಗೆ ಖಾಸಗಿ ಗುತ್ತಿಗೆದಾರರಿಗೆ ಮೀನು ಹಿಡಿಯಲು 2022ರಲ್ಲಿ ಅನುಮತಿ ನೀಡಿತ್ತು. ಆದರೆ ಈ ವಿಚಾರ ಪಾಲಿಕೆಯ ಕೆರೆ ವಿಭಾಗದ ಎಂಜಿನಿಯರ್ ಗಳ ಗಮನಕ್ಕೇ ಬಂದಿಲ್ಲ. ಇನ್ನು ಈ ಕೆರೆಯಲ್ಲಿನ ಹೂಳೆತ್ತಿ ಈ ಜಲಮೂಲವನ್ನು ಅಭಿವೃದ್ಧಿಪಡಿಸಿ ಅಂತ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ನಿವಾಸಿಗಳು ಮನವಿ ಮಾಡಿದ್ದರೂ, ಅದಕ್ಕೆ ಕ್ಯಾರೇ ಅನ್ನದ ಅಧಿಕಾರಿಗಳು ಉಲ್ಲಾಳ ಕೆರೆಯನ್ನು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಜೌಗು ಭೂಮಿಯಲ್ಲಿನ ಹೂಳೆತ್ತುವ ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರನಿಗೆ ನೀಡಿತ್ತು.
ಅವಸಾನದ ಅಂಚಿಗೆ ತಲುಪಿದ ಉಲ್ಲಾಳ ಕೆರೆ :
ಆ ಜಾಗವಾದರೂ ಅಭಿವೃದ್ಧಿಯಾಗುತ್ತದೆಂಬ ನಿರೀಕ್ಷೆಯಲ್ಲಿರುವಾಗಲೇ 15-20 ದಿನ ಹೂಳೆತ್ತುವ ಶಾಸ್ತ್ರ ಮಾಡಿ ಇದೀಗ ಆ ಕಾಮಗಾರಿಯು ಕುಂಟುತ್ತಾ ಸಾಗಿದೆ. ಇಲ್ಲಿಗೆ ವಿದೇಶಿ ಹಕ್ಕಿಗಳು ಸೇರಿದಂತೆ 20ಕ್ಕೂ ವಿವಿಧ ಜಾತಿಯ, ರಾಷ್ಟ್ರಪಕ್ಷಿ ನವಿಲುಗಳಿಗೆ ಆಶ್ರಯ ತಾಣವಾಗಿದ್ದ ಉಲ್ಲಾಳು ಕೆರೆ ಅವಸಾನದ ಅಂಚಿಗೆ ಬಂದು ನಿಲ್ಲುವಂತಾಗಿದೆ. ಈ ಕೆರೆ ಹೇಳ ಹೆಸರಿಲ್ಲದಂತೆ ಮಂಗಮಾಯವಾಗುವ ಮುನ್ನ ಕೆರೆ ವಿಭಾಗದ “ಜಡತ್ವ”ದ ದಪ್ಪ ಚರ್ಮದ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆ ಉಳಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.
ಮತ್ತೊಂದು ವಿಚಾರ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಶೇ.60ಕ್ಕೂ ಹೆಚ್ಚು ಕೆರೆಗಳು ಮಾಲಿನ್ಯವಾಗಿದೆ. ಹೀಗಿದ್ದಾಗ ಅವುಗಳಲ್ಲಿ ಮೀನು ಸಾಕಾಣೆ ಮಾಡಿ, ಅದನ್ನೇ ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡಿದರೆ ಅದನ್ನು ತಿಂದ ನಾಗರೀಕರ ಆರೋಗ್ಯ ಸ್ಥಿತಿ ಏನಾಗಬೇಡ? ರಾಜ್ಯದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಬಗ್ಗೆ ಗಮನಹರಿಸೋಕೆ ಟೈಮಿಲ್ವಾ?