ಬೆಂಗಳೂರು, ಪೀಣ್ಯಾ (ಇಸ್ರೋ ಇಸ್ಟ್ರಾಕ್ ಸೆಂಟರ್) ಆ.23 www.bengaluruwire.com : ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರಸ್ಪರ್ಶಕ್ಕೆ ಅಣಿಯಾಗುತ್ತಿದ್ದು ಇದರ ನೇರ ಪ್ರಸಾರವನ್ನು ಇಸ್ರೋ ಮಾಡುತ್ತಿದ್ದು, ಬೆಂಗಳೂರು ವೈರ್ ನಲ್ಲಿ ಇಂದು ಸಂಜೆ 5.20ರಿಂದ ನೀವಿರುವ ಜಾಗದಲ್ಲೇ ಕೂತು ಈ ವೈಜ್ಞಾನಿಕ ಕೌತುಕವನ್ನು ನೋಡಬಹುದಾಗಿದೆ.
ಇಂದು ಸಂಜೆ ಭಾರತೀಯ ಕಾಲಮಾನ 6.04 ಗಂಟೆಗೆ ಸರಿಯಾಗಿ ಪ್ರಗ್ಯಾನ್ ರೋವರ್ ಅನ್ನು ಹೊತ್ತು ಹಗುರ ಚಂದ್ರಸ್ಪರ್ಶ ಮಾಡುವ ರೀತಿಯಲ್ಲಿ ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ಸಾಫ್ಟ್ ವೇರ್ ಹಾಗೂ ಸೆನ್ಸಾರ್ ಗಳ ಮೂಲಕ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಿದ್ದಾರೆ.
ಲ್ಯಾಂಡರ್ ಕೋಶದಲ್ಲಿ ನಾಲ್ಕು ವೈಜ್ಞಾನಿಕ ಉಪಕರಣಗಳಿವೆ. ಇದರಲ್ಲಿ ಒಂದು ಚಂದ್ರನ ಮೇಲ್ಮೈನ ಉಷ್ಣವಾಹಕತೆಯ ಅಧ್ಯಯನ (Thermophysical Experiment) ನಡೆಸಲಿದೆ. ಮತ್ತೊಂದು ಉಪಕರಣ ಚಂದ್ರನ ಕಂಪನವನ್ನು ಅಭ್ಯಾಸ ಮಾಡುತ್ತದೆ. ಮೂರನೆಯದು ಚಂದ್ರನಲ್ಲಿನ ಪ್ಲಾಸ್ಮಾ ಪರಿಸರವನ್ನು ವಿಶ್ಲೇಷಿಸುತ್ತದೆ. ನಾಲ್ಕನೆಯದು ವಿಶೇಷ ಲೇಸರ್ ಪ್ರತಿಫಲಕವಾಗಿದ್ದು, ಇದು ಭೂಮಿ ಮತ್ತು ಚಂದ್ರನ ನಡುವಿನ ದೂರವನ್ನು ನಿಖರವಾಗಿ ಅಳೆಯಲಿದೆ.
ರೋವರ್‌ನಲ್ಲಿ ಎರಡು ವೈಜ್ಞಾನಿಕ ಉಪಕರಣಗಳಿವೆ. ಇದರಲ್ಲಿ ಒಂದು ಲೇಸರ್ ಉಪಕರಣವಾಗಿದ್ದು, ಮತ್ತೊಂದು ಕ್ಷ-ಕಿರಣ ಸಾಧನ. ಇವೆರಡೂ ಪ್ರತ್ಯೇಕ ವಿಧಾನಗಳ ಮೂಲಕ ಚಂದ್ರನ ಮೇಲಿನ ಧಾತುಗಳ ಸಂಯೋಜನೆ ಕುರಿತು ಅಧ್ಯಯನ ನಡೆಸಲಿವೆ. ರೋವರ್ ಆರು ಚಕ್ರಗಳನ್ನು ಹೊಂದಿದ ಪುಟಾಣಿ ರೋಬಾಟ್ ವಾಹನವಾಗಿದೆ.
ಜು.14ರಂದು ಎಲ್ ವಿಎಂ ಮಾರ್ಕ್-3 ರಾಕೆಟ್ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಂಡಿದ್ದ ಚಂದ್ರಯಾನ-3 ಗಗನನೌಕೆಯು 40 ದಿನಗಳ ಯಾನ ಪೂರ್ಣಗೊಳಿಸಿ ಇಂದು ಲ್ಯಾಂಡರ್ ಚಂದ್ರನ ಸ್ಪರ್ಶ ಮಾಡುತ್ತಿದೆ.
ಸಂವಹನ ಕಾರ್ಯ ಹೇಗೆ ನಡೆಯುತ್ತದೆ ?:
ಭೂಮಿಯಿಂದ 3,84,400 ಕಿ.ಮೀ ದೂರವಿರುವ ಚಂದ್ರನಲ್ಲಿನ ಲ್ಯಾಂಡರ್ ಹಾಗೂ ರೋವರ್
ಭೂ ನಿಯಂತ್ರಣ ಕೇಂದ್ರವಿರುವ ಬ್ಯಾಲಾಳು, ಪೀಣ್ಯಾದ ಇಸ್ಟ್ರಾಕ್ ನಲ್ಲಿ ಎಮ್ ಒಎಕ್ಸ್ ಕೇಂದ್ರದ ಜೊತೆ ಸಂವಹನ ನಡೆಸಲಿದೆ.
ಲ್ಯಾಂಡರ್ ಮತ್ತು ರೋವರ್ ಕಳಿಸುವ ಮಾಹಿತಿ ಭೂಮಿಗೆ ತಲುಪಲು ಚಂದ್ರನನ್ನು ಸುತ್ತುತ್ತಿರುವ ಚಂದ್ರಾಯಾನ-2ರ ಆರ್ಬಿಟರ್ (ಕಕ್ಷಾಗಾಮಿ)ಸಂವಹನದ ಪ್ರಮುಖ ಕೊಂಡಿಯಾಗಿದೆ.
ಬೆಂಗಳೂರಿನ ಬ್ಯಾಲಾಳುವಿನಲ್ಲಿನ ಭಾರತೀಯ ಆಳ ಬಾಹ್ಯಾಕಾಶ ಜಾಲ (Indian Deep Space Network) ಮೂಲಕ ಪೀಣ್ಯಾದಲ್ಲಿನ ಟೆಲಿಮೆಟ್ರಿ ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ (ISTRAC) ರೇಡಿಯೋ ತರಂಗಗಳ ಮೂಲಕ ಆಜ್ಞೆಗಳನ್ನು ಕಳುಹಿಸುತ್ತದೆ. ಇಲ್ಲಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ ಮೂಲಕವೇ ಚಂದ್ರನಲ್ಲಿ ಕಾರ್ಯನಿರ್ವಹಿಸುವ ಆರ್ಬಿಟರ್ (ಚಂದ್ರಯಾನ-2), ವಿಕ್ರಮ್ ಲ್ಯಾಂಡರ್ ಹಾಗೂ ರೋವರ್ ಗೆ ಕಮಾಂಡ್ ಕಳಿಸುವ ಮತ್ತು ಸ್ವೀಕರಿಸುವ ಕೆಲವನ್ನು ಇಸ್ರೋ ವಿಜ್ಞಾನಿಗಳು ಮಾಡಲಿದ್ದಾರೆ.
ಲ್ಯಾಂಡರ್
ಕಾರ್ಯ ಅವಧಿ: ಚಂದ್ರನ1ದಿನ (ಭೂಮಿಯ 14 ದಿನಗಳು)
ತೂಕ : 1749.86 (ರೋವರ್ ಸೇರಿ)
ಅಗತ್ಯವಿರುವ ವಿದ್ಯುತ್;738 ವಾಟ್ ಸಂವಹನ:ಚಂದ್ರಯಾನ-2ರ ಆರ್ಬಿಟರ್
ಆರು ಚಕ್ರದ ರೋವರ್
ಕಾರ್ಯ ಅವಧಿ : ಚಂದ್ರನ 1ದಿನ
(ಭೂಮಿಯ 14 ದಿನಗಳು)
ತೂಕ : 26 ಕೆ.ಜಿ
ಬೇಕಾಗುವ ವಿದ್ಯುತ್ : 50 ವಾಟ್
ಪೇಲೋಡ್ : 2
ಸಂವಹನ : ಲ್ಯಾಂಡರ್ ಜೊತೆ