ಬೆಂಗಳೂರು, ಆ.23 www.bengaluruwire.com : ಚಂದ್ರಯಾನ-3 ಇಸ್ರೋ ಯೋಜನೆಯ ಸಾಕಾರದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಬ್ಯಾಲಾಳುವಿನ ಭಾರತೀಯ ಆಳ ಬಾಹ್ಯಾಕಾಶ ಜಾಲ (Indian Deep Space Network -IDSN)ದ ಅತಿ ಪ್ರಾಮುಖ್ಯ ಪಾತ್ರವಿದೆ.
2008 ಅಕ್ಟೋಬರ್ ನಲ್ಲಿ ಉಡಾಯಿಸಲಾದ ಚಂದ್ರಯಾನ-1, 2 ಹಾಗೂ ಚಂದ್ರಯಾನ-3 ಯೋಜನೆಯಲ್ಲಿ ರಾಮೋಹಳ್ಳಿಯಿಂದ ಕೆಲವು ಕಿ.ಮೀ ದೂರವಿರುವ ಬ್ಯಾಲಾಳು ಹಲವು ವಿಶೇಷತೆಗಳಿಂದ ಕೂಡಿದೆ. ಇಲ್ಲಿನ ಐಎಸ್ ಡಿಎನ್, ಚಂದ್ರನ ತಾಣದಿಂದ ಬಂದ ದತ್ತಾಂಶಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ ಹಾಗೂ ಪೀಣ್ಯದಲ್ಲಿರುವ ಟೆಲಿಮೆಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ (ISTRAC) ಸಂಸ್ಥೆಗೆ ರೇಡಿಯೋ ತರಂಗಗಳ ರೂಪದ ಮಾಹಿತಿಯನ್ನು, ಹಾಗೂ ಅಗತ್ಯವಾದ ರೇಡಿಯೋ ಆಜ್ಞೆಗಳನ್ನು (Command)ರವಾನಿಸುವ ಸಂವಹನ ಕೊಂಡಿಯಾಗಿ ಕೆಲಸ ಮಾಡುತ್ತದೆ. ಇಸ್ಟ್ರಾಕ್ ನಲ್ಲಿನ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ (MOX) ಚಂದ್ರಯಾನ-3 ಯೋಜನೆಯ ಕೇಂದ್ರ ನರಮಂಡಲದಂತೆ ಕಾರ್ಯನಿರ್ವಹಿಸುತ್ತದೆ ಎಂದು ನಿವೃತ್ತ ಇಸ್ರೋ ವಿಜ್ಞಾನಿ ಡಾ.ರಾಜು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬ್ಯಾಲಾಳುವುನಲ್ಲಿನ ಭಾರತೀಯ ಬಾಹ್ಯಾಕಾಶ ವಿಜ್ಞಾನದ ಕುರಿತು ಮಂಗಳಯಾನ, ಅಸ್ಟ್ರೋಸ್ಯಾಟ್, ಚಂದ್ರಯಾನ-1, ಚಂದ್ರಯಾನ-2 ನ ಆರ್ಬಿಟರ್ ಹಾಗೂ ಈಗ ಚಂದ್ರಯಾನ-3 ನಂತಹ ಅಅಕಾಶಕಾಯಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಉಪಗ್ರಹ ಅಥವಾ ಅಂತರಿಕ್ಷ ನೌಕೆಯ ಮೂಲಕ ಅಂತರಿಕ್ಷದಿಂದ ಬಂದ ಅಗಾಧ ಪ್ರಮಾಣದ ದತ್ತಾಂಶಗಳನ್ನು ಬ್ಯಾಲಾಳುವಿಲ್ಲಿನ “ಭಾರತೀಯ ಅಂತರಿಕ್ಷ ದತ್ತಾಂಶಗಳ ಸಂಗ್ರಹ” ಕೇಂದ್ರ (Indian Space Science Data Center)ದ ಭಾರೀ ಅತ್ಯುನ್ನತ ಸಾಮರ್ಥ್ಯ ದ ಡಾಟಾ ಸೆಂಟರ್ ಹಾಗೂ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿಟ್ಟು, ಅಗತ್ಯವಿದ್ದಾಗ ಅವುಗಳನ್ನು ಇಸ್ರೋ ವಿಜ್ಞಾನಿಗಳು ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಮಂಗಳಯಾನ ನೌಕೆ ಮಂಗಳಗ್ರಹ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದ ಸಂದರ್ಭದಲ್ಲಿ ಆ ನೌಕೆಗಳ ನಿಯಂತ್ರಣ ಕಾರ್ಯ ನಡೆದಿದ್ದು ಇದೇ ಬ್ಯಾಲಾಳುವಿನಿಂದ ಎಂಬುದು ಪ್ರಮುಖ ವಿಷಯವಾಗಿದೆ.
ಬ್ಯಾಲಾಳುವಿನ ಈ ಭೂ ಸೌಲಭ್ಯದಿಂದಾಗಿಯೇ ಇಸ್ರೋ ಚಂದ್ರಯಾನ-3ರ ಪಥ, ಕಕ್ಷೆ ಹಾಗೂ ಅದರ ಸ್ಥಾನಗಳನ್ನು ನಿಖರವಾಗಿ ಲೆಕ್ಕ ಹಾಕಲು, ಈ ನೌಕೆಯ ಆರೋಗ್ಯ ತಪಾಸಣೆಗೂ ಹಾಗೂ ಮುಂದಿನ ಹಂತದ ಕಾರ್ಯಾಚರಣೆ ಕೈಗೊಳ್ಳಲು ಸಹಕಾರಿಯಾಗಿದೆ. ಬ್ಯಾಲಾಳುವಿನಲ್ಲಿ 18 ಮತ್ತು 32 ಮೀಟರ್ ವ್ಯಾಸದ ಕೊಡೆಯಾಕಾರದ ಎರಡು ಬೃಹತ್ ಸಂಪರ್ಕ ಆಂಟೆನಾಗಳಿದ್ದು, ದೇಶೀಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. 32 ಮೀಟರ್ ವ್ಯಾಸದ ಈ ಬೃಹತ್ ಆಂಟೆನಾ 350 ಟನ್ ತೂಕವಿದ್ದು, ಭೂಮಿಯಿಂದ ಲಕ್ಷಾಂತರ ಕಿ.ಮೀ ದೂರದ ಅಂತರಿಕ್ಷದಲ್ಲಿನ ಗಗನ ನೌಕೆಗಳು ಕಳುಹಿಸುವ ರೇಡಿಯೋ ತರಂಗಗಳನ್ನು ಸ್ವೀಕರಿಸುವ ಮತ್ತು ಭೂನಿಯಂತ್ರಣ ಕೇಂದ್ರದಿಂದ ಬಂದ ಆಜ್ಞೆಗಳನ್ನು ಅಲ್ಲಿಗೆ ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ.