ಬೆಂಗಳೂರು, ಆ.16 www.bengaluruwire.com : ದೇಶದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಆಗಸ್ಟ್ 23ರಂದು ಚಂದ್ರನಲ್ಲಿ ಇಳಿಯಲು ಇಸ್ರೋ (ISRO) ಯೋಜಿಸಿದೆ. ಈ ನಿಟ್ಟಿನಲ್ಲಿ ಚಂದ್ರಯಾನ-3 ನೌಕೆ ಚಂದ್ರನ ಮೇಲ್ಮೈನಿಂದ ಕೇವಲ 163 ಕಿ.ಮೀ ದೂರದಲ್ಲಿದೆ. ಆ.17ರಂದು ಲ್ಯಾಂಡರ್ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಿಸಲು ಇಸ್ರೋ ನಿರ್ಧರಿಸಿದೆ.
ಚಂದ್ರಯಾನ-3 ನೌಕೆಯ ಕಕ್ಷೆ ಎತ್ತರಿಸುವ ಮತ್ತೊಂದು ಅಂತಿಮ ಸುತ್ತು ಬುಧವಾರ ಯಶಸ್ವಿಯಾಗಿ ನೆರವೇರಿದೆ. ಇದೀಗ ಚಂದ್ರಯಾನ-3 ನೌಕೆ ಚಂದ್ರನಿಗೆ ಮತ್ತಷ್ಟು ಸನಿಹವಾಗಿದೆ ಎಂದು ಇಸ್ರೋ ಹೇಳಿದೆ. ಇದೊಂದು ಯೋಜನೆಯ ಮಹತ್ವದ ಮೈಲಿಗಲ್ಲು ಎಂದು ಹರ್ಷ ವ್ಯಕ್ತಪಡಿಸಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಇದೀಗ ಚಂದ್ರಯಾನ-3 ನೌಕೆ ಕಕ್ಷೆಯಿಂದ ಕೇವಲ 163 ಕಿಲೋ ಮೀಟರ್ ಗಳಷ್ಟು ಮಾತ್ರ ದೂರದಲ್ಲಿದೆ.
ಬೆಂಗಳೂರಿನ ಇಸ್ರೋ ಕೇಂದ್ರದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ ಬಳಸಿ ಇಂದು ಬೆಳಗ್ಗೆ 8.30 ನಿಮಿಷಕ್ಕೆ ಕಕ್ಷೆ ಎತ್ತರಿಸು ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ. ಚಂದ್ರನ ಮೇಲೆ ಚಂದ್ರಯಾನ-3 ನೌಕೆಯಲ್ಲಿರುವ ರೋವರ್ ಅನ್ನು ಯಶಸ್ವಿಯಾಗಿ ಇಳಿಸುವುದು ಇಸ್ರೋದ ಮೊದಲ ಗುರಿಯಾಗಿದೆ.
ಆಗಸ್ಟ್ 5ರಿಂದ ಹಂತ, ಹಂತವಾಗಿ ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆಯಲ್ಲಿ ಇಸ್ರೋ ವಿಜ್ಞಾನಿಗಳ ತಂಡ ತೊಡಗಿಕೊಂಡಿದ್ದರು. ಚಂದ್ರಯಾನ-3 ನೌಕೆ ಕಕ್ಷೆಯಿಂದ ಸ್ವಯಂ ರೀತಿಯಲ್ಲಿ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಲಿದೆ ಎಂದು ಇಸ್ರೊ ವಿವರಿಸಿದೆ.
ಒಂದು ಬಾರಿ ನೌಕೆಯಲ್ಲಿನ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿದ ಮೇಲೆ ಅದರಲ್ಲಿನ ರೋವರ್ ಚಂದ್ರನ ಮೇಲ್ಮೈಯಿಂದ ಬರುವ ಮಾಹಿತಿ ರವಾನಿಸಲಿದೆ. ಅದರ ಆಧಾರದಲ್ಲಿ ಇಸ್ರೋ ಚಂದ್ರನ ಕುರಿತು ಅಧ್ಯಯನ ನಡೆಸಲಿದೆ. ಚಂದ್ರಯಾನ-1ರ ಮೂಲಕ ಇಸ್ರೋ ಆ ಗ್ರಹದಲ್ಲಿ ನೀರಿದೆ ಎಂಬ ಅಂಶವನ್ನು ಕಂಡುಕೊಂಡಿದ್ದನ್ನು ಇಲ್ಲಿ ಗಮನಿಸಬಹುದು. ಚಂದ್ರಯಾನ-3 ಯೋಜನೆ ಯಶಸ್ವಿಯಾದಲ್ಲಿ ಜಾಗತಿಕವಾಗಿ ಈ ಗುರಿಯನ್ನು ಸಾಧಿಸಿದ 4ನೇ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ. ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ಈ ಸಾಧನೆ ಮಾಡಿವೆ.