ಬೆಂಗಳೂರು, ಜು.22 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಾಣದ ಡಾ. ಶಿವರಾಮ ಕಾರಂತ ಬಡಾವಣೆಯ 9 ಸೆಕ್ಟರ್ ಗಳಲ್ಲಿ ಕಚ್ಚಾ ರಸ್ತೆಗಳನ್ನು ಸಮತಟ್ಟು ಮಾಡುವ ಕಾರ್ಯ ನಡೆದಿರುವ ಮಧ್ಯೆ ಶೇ.37ರಷ್ಟು ರಸ್ತೆ ಬದಿ ಕಾಂಕ್ರೀಟ್ ಚರಂಡಿಗಳನ್ನು ಮಾಡುವ ಕಾಮಗಾರಿ ಪೂರ್ಣಗೊಂಡಿದ್ದು, ಭೂಮಿ ನೀಡಿದ ರೈತರಿಗೆ ಮೊದಲಿಗೆ ಸೆಪ್ಟೆಂಬರ್ ತಿಂಗಳಿನಿಂದ ನಿವೇಶನ ಹಂಚಿಕೆ ಮಾಡಲು ತಾತ್ವಿಕವಾಗಿ ನಿರ್ಧರಿಸಲಾಗಿದೆ.
ಕಳೆದ ಏಪ್ರಿಲ್ ತಿಂಗಳಿನಿಂದ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 17 ಗ್ರಾಮಗಳ ವ್ಯಾಪ್ತಿಯಲ್ಲಿ 2,605 ಕೋಟಿ ರೂಪಾಯಿ (ಜಿಎಸ್ ಟಿ 405 ಕೋಟಿ ರೂ. ಪ್ರತ್ಯೇಕ) ವೆಚ್ಚದಲ್ಲಿ 9 ಪ್ಯಾಕೇಜ್ ಗಳಲ್ಲಿ 25,000 ಕ್ಕೂ ಹೆಚ್ಚು ನಿವೇಶನಗಳನ್ನು ನಿರ್ಮಿಸುವ ಕಾಮಗಾರಿ ಆರಂಭವಾಗಿದೆ. ಶೇ.37ರಷ್ಟು “ಯು” ಆಕಾರದ ಡ್ರೈನ್ ಗಳು ಪೂರ್ಣಗೊಂಡಿರುವುದರಿಂದ ಆಯಾ ಸೆಕ್ಟರ್ ಗಳ ಭೂಮಿಯಲ್ಲಿ ನಿವೇಶನ ರಚನೆ ಸ್ವರೂಪ ಪಡೆದುಕೊಂಡಿದೆ.
ಈ ಹಿಂದೆ 2008ರಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 3,546 ಎಕರೆ ಭೂಮಿ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಈ ಭೂಸ್ವಾಧೀನ ಕಾರ್ಯಕ್ಕೆ 5,337 ಕೋಟಿ ರೂ. ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ. ಅದರಂತೆ ಈ ಪೈಕಿ 2,782 ಎಕರೆ ಭೂಮಿಯನ್ನು ಬಿಡಿಎ ಭೂಸ್ವಾಧೀನ ವಿಭಾಗವು, ಬಡಾವಣೆ ಕಾಮಗಾರಿ ಅಭಿವೃದ್ಧಿಗಾಗಿ ಎಂಜಿನಿಯರ್ ವಿಭಾಗಕ್ಕೆ ಹಸ್ತಾಂತರಿಸಿದೆ. ಬಡಾವಣೆ ನಿರ್ಮಾಣಕ್ಕಾಗಿ 1,669 ಮಂದಿ ರೈತರಿಂದ ಈವರೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆ ಪೈಕಿ 20 ಪ್ರಕರಣಗಳಲ್ಲಿ ರೈತರ 97 ಎಕರೆಗೆ
ಭೂಪರಿಹಾರವಾಗಿ ನಗದು ಹಣವನ್ನು ಬಿಡಿಎ ನೀಡಿದೆ. ಅಲ್ಲದೆ 323 ಮಂದಿಗೆ ಇಸಿ (ಎನ್‌ಟೈಟಲ್ ಮೆಂಟ್ ಸರ್ಟಿಫಿಕೇಟ್ ) ಹಂಚಿಕೆ ಮಾಡಲಾಗಿದೆ.
ಬಡಾವಣೆ ರಚನೆಗೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಗಳು ಬಹುತೇಕವಾಗಿ ಮುಗಿದಿದ್ದು, ಬಿಡಿಎ ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರ ಮಾಡಿದೆ. 173.11 ಎಕರೆ ಭೂಮಿಯಲ್ಲಿ ಶಾಲೆ, ಕಾಲೇಜು ಮತ್ತಿತರ ಸಾರ್ವಜನಿಕ ಸಂಸ್ಥೆಗಳಿದ್ದು, ಅವುಗಳನ್ನು ಸುಪ್ರೀಂಕೋರ್ಟ್ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದೆ. 150 ಎಕರೆ ಭೂಮಿಗೆ ಬಿಡಿಎ ಮಂಡಳಿ ಸಭೆಯಲ್ಲಿ ಅವಾರ್ಡ್ ಮಾಡಲು ತೀರ್ಮಾನ ಕೈಗೊಳ್ಳಬೇಕಿದೆ. ಬಾಕಿ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ ಎಂದು ಬಿಡಿಎ ಉನ್ನತ ಮೂಲಗಳು ಖಚಿತಪಡಿಸಿದೆ.
ನ್ಯಾ.ಎ.ವಿ.ಚಂದ್ರಶೇಖರ್ ಸಮಿತಿಯಿಂದ ಖಡಕ್ ಪರಿಶೀಲನೆ :
ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯವು ಸುಪ್ರೀಂಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್ ನೇತೃತ್ವದ ಸಮಿತಿಯು ಮೇಲುಸ್ತುವಾರಿಯನ್ನು ವಹಿಸಿದ್ದು, ಈ ಸಮಿತಿಯು ಲೇಔಟ್ ರೂಪಿಸುವ ಕುರಿತು ಮೇಲ್ವಿಚಾರಣೆ ಮಾಡುತ್ತಿದೆ. ವಾರಕ್ಕೆ ಎರಡು ದಿನಗಳ ಕಾಲ ಸಮಿತಿ ಸದಸ್ಯರು 9 ಪ್ಯಾಕೇಜ್ ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಖುದ್ದು ಪರಿಶೀಲನೆ ನಡೆಸುತ್ತಿದ್ದು, ಬಿಡಿಎ ನಿಂದ ನಿಯೋಜಿಸಿದ ಎಂಜಿನಿಯರ್ ಗಳಿಗೆ ಹಾಗೂ ಬಡಾವಣೆ ಅಭಿವೃದ್ಧಿಪಡಿಸುತ್ತಿರುವ ಕಾಂಟ್ರಾಕ್ಟರ್ ಗಳ ಕಾಮಗಾರಿ ಮುಗಿಸಲು ಗುರಿಯನ್ನು ನೀಡುತ್ತಾ, ಆಗಾಗ ಅವುಗಳ ಪ್ರಗತಿ ಪರಿಶೀಲನೆಯನ್ನು ಈ ಸಮಿತಿಯು ಮಾಡುತ್ತಿದೆ. ನಿವೃತ್ತ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್ ನೇತೃತ್ವದ ಸಮಿತಿಯು ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಗುಣಮಟ್ಟದ ಕಾಮಗಾರಿ ಹಾಗೂ ವೇಗ ಗತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡುತ್ತಿದೆ.
ಬಿಡಿಎ ಎಂಜಿನಿಯರಿಂಗ್ ವಿಭಾಗ ಕಾಮಗಾರಿ ಪೂರ್ಣಗೊಂಡ ಜಾಗಗಳಲ್ಲಿ ವಿವಿಧ ಅಳತೆಯ ನಿವೇಶನ ಗಡಿ ಗುರುತು ಮಾಡಿ, ಸೈಟ್ ನಂಬರ್ ನೀಡಿದ ಬಳಿಕ ರೈತರಿಗೆ ಬಹುತೇಕ ಅವರು ಭೂಮಿ ನೀಡಿದ ಜಾಗದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪ್ರಾಧಿಕಾರ ನೋಂದಣಿ ಮಾಡಿಕೊಡಲಿದೆ.
ಸೆಪ್ಟೆಂಬರ್ ನಿಂದ ರೈತರಿಗೆ ನಿವೇಶನ ಹಂಚಿಕೆಗೆ ಕ್ರಮ :
“ಡಾ.ಶಿವರಾಮಕಾರಂತ ಬಡಾವಣೆ ನಿರ್ಮಾಣ ಕಾರ್ಯವು ವೇಗ ಗತಿಯಲ್ಲಿ ನಡೆಯುತ್ತಿದ್ದು, ಈ ತನಕ 9 ಸೆಕ್ಟರ್ ಗಳಲ್ಲಿ ಒಂಭತ್ತು ಪ್ಯಾಕೇಜ್ ಗಳಲ್ಲಿ ರಸ್ತೆ ಸಮತಟ್ಟು ಮಾಡಿ ರಸ್ತೆ ಬದಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾರ್ಯವು ನಡೆಸುತ್ತಿದ್ದು ಶೇ.37ರಷ್ಟು ಕೆಲಸ ಪೂರ್ಣಗೊಂಡಿದೆ. ಸೆಪ್ಟೆಂಬರ್ ವೇಳೆಗೆ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಮೊದಲಿಗೆ ನಿವೇಶನ ಹಂಚಿಕೆ ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ. ನಂತರ ಸಾರ್ವಜನಿಕರಿಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುತ್ತೇವೆ. ರೈತರು ಭೂಮಿ ನೀಡಿದ ಸರ್ವೇ ನಂಬರ್ ಗಳಲ್ಲಿಯೇ ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡಲಿದ್ದು, ಉಳಿದಿದ್ದನ್ನು ಬಡಾವಣೆಯ ಬೇರೆ ಕಡೆ ಹಂಚಿಕೆ ಮಾಡುತ್ತೇವೆ. ಪ್ರಾಧಿಕಾರಕ್ಕೆ ಭೂಮಿ ನೀಡಿದ ರೈತರು ಆದಷ್ಟು ಬೇಗ ಬಿಡಿಎನಿಂದ ಅರ್ಹತಾ ಪ್ರಮಾಣಪತ್ರ ಪಡೆದುಕೊಂಡರೆ ನಿವೇಶನ ಹಂಚಿಕೆಗೆ ಅನುಕೂಲವಾಗಲಿದೆ.”
ಜಿ.ಕುಮಾರ್ ನಾಯಕ್, ಬಿಡಿಎ ಆಯುಕ್ತರು
ಉತ್ತರ ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಹಳ್ಳಿಗಳಾದ ವಡೇರಹಳ್ಳಿ, ಕೆಂಪನಹಳ್ಳಿ, ಬ್ಯಾಲಕೆರೆ ಗಾಣಿಗರಹಳ್ಳಿ, ಕಾಳತಮ್ಮನಹಳ್ಳಿ, ಮೇಡಿ ಅಗ್ರಹಾರ, ಶಾಮರಾಜಪುರ, ವೀರಸಾಗರ, ಲಕ್ಷ್ಮೀಪುರ, ಸೋಮಶೆಟ್ಟಿಹಳ್ಳಿ, ಕೆಂಪಾಪುರ, ರಾಮಗೊಂಡನಹಳ್ಳಿ, ಹಾರೋಹಳ್ಳಿ, ಆವಲಹಳ್ಳಿ, ಗುಣಿ ಅಗ್ರಹಾರ, ಕೆ.ಬಿ.ಕಾವಲ್, ದೊಡ್ಡಬೆಟ್ಟಹಳ್ಳಿ, ಗ್ರಾಮಗಳ ರೈತರಿಂದ ಭೂಮಿಯನ್ನು ಡಾ.ಕೆ.ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಭೂಸ್ವಾಧೀನ ಕಾರ್ಯಕ್ಕಾಗಿ ಒಬ್ಬೊಬ್ಬ ಕೆಎಎಸ್ ಅಧಿಕಾರಿಗಳಿಗೆ ಎರಡು ಗ್ರಾಮಗಳಂತೆ ಒಟ್ಟು ಏಳು ಮಂದಿ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಆದ್ದರಿಂದ ಈ ಬಡಾವಣೆಯಲ್ಲಿ ಭೂಸ್ವಾಧೀನ ಕಾರ್ಯಗಳು ವೇಗವಾಗಿ ಸಾಗಲು ಕಾರಣವಾಯಿತು. .
ಬಡಾವಣೆ ಕಾಮಗಾರಿ ವೇಗ ಪಡೆದುಕೊಂಡಂತೆ ರೈತರಲ್ಲಿ ಆಸಕ್ತಿ ಮೂಡುತ್ತಿದೆ :
ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಬದಲಾಗಿ ಮಾಲೀಕರಿಗೆ ಅಭಿವೃದ್ಧಿಪಡಿಸಿದ ನಿವೇಶನ ಇಲ್ಲವೇ ನಗದು ಪರಿಹಾರ ನೀಡಲಾಗುತ್ತಿದೆ. ಭೂ ಮಾಲೀಕರು ಈ ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಒಂದು ಎಕರೆಗೆ 43,560 ಚದರ ಅಡಿ ಬರಲಿದ್ದು, ಬಿಡಿಎ ಒಂದು ಎಕರೆ ಭೂಮಿ ಬಿಟ್ಟುಕೊಟ್ಟ ರೈತರಿಗೆ 9,600 ಚ.ಅಡಿ ವಿಸ್ತೀರ್ಣದ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರವಾಗಿ ನೀಡುತ್ತಿದೆ. ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪಡೆಯಲು ಇಚ್ಚಿಸದವರಿಗೆ ಎಕರೆಗೆ ಒಂದು ಕೋಟಿ ರೂ. ಪರಿಹಾರ ನಿಗದಿಪಡಿಸಲಾಗಿದೆ. ಈ ಹಿಂದೆ ರೈತರಿಗೆ ಬಡಾವಣೆ ನಿರ್ಮಾಣದ ಕುರಿತಂತೆ ಅಪನಂಬಿಕೆ, ಗೊಂದಲಗಳಿದ್ದು, ಹಲವು ರೈತರು ತಮ್ಮ ಭೂಮಿ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದರು, ಯಾವಾಗ ಬಡಾವಣೆ ಅಭಿವೃದ್ಧಿ ವೇಗ ಹೆಚ್ಚಾಗುತ್ತಾ ಬಂದಂತೆ ರೈತರು ಭೂಪರಿಹಾರ ಪಡೆಯಲು ಆಸಕ್ತಿ ತೋರುತ್ತಿದ್ದಾರೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಎರಡು ಹಂತಗಳಲ್ಲಿ ಬಡಾವಣೆ ಅಭಿವೃದ್ಧಿ :
“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಟ್ಟು ಎರಡು ಹಂತಗಳಲ್ಲಿ 9 ಸೆಕ್ಟರ್ ಗಳಲ್ಲಿ ಬಡಾವಣೆಯನ್ನು ಪೂರ್ಣ ರೂಪದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿತ್ತು. ಆ ಪೈಕಿ ಮೊದಲ ಹಂತದಲ್ಲಿ ರಸ್ತೆ ಸಮತಟ್ಟು ಮಾಡಿ ರಸ್ತೆ ಬದಿ ಮಳೆ ನೀರು ಮೋರಿ, ಆನಂತರ ನೀರು, ಒಳಚರಂಡಿ ನೀರಿನ ವ್ಯವಸ್ಥೆ ಕಲ್ಪಿಸಲಿದೆ. ಎರಡನೇ ಹಂತದಲ್ಲಿ ಮಳೆ ನೀರು ಕೊಯ್ಲು, ತ್ಯಾಜ್ಯ ನೀರು ಸಂಸ್ಕರಣಾ ಘಟಕ (Sewage Treatment Plant), ಎಲೆಕ್ಟ್ರಿಕ್ ಸಬ್ ಸ್ಟೇಷನ್, ಬೀದಿ ದೀಪ, ವಿದ್ಯುತ್ ಸಂಪರ್ಕದಂತಹ ಕಾರ್ಯಗಳನ್ನು ಕೈಗೊಳ್ಳಲಿದೆ” ಎಂದು ಬಿಡಿಎ ಅಭಿಯಂತರರ ಸದಸ್ಯ ಶಾಂತಾರಾಜಣ್ಣ ಬೆಂಗಳೂರು ವೈರ್ ಗೆ ವಿವರಿಸಿದ್ದಾರೆ.
ಪ್ರಾರಂಭದಲ್ಲಿ ಕಾಮಗಾರಿ ಆರಂಭಿಸಿದ 18 ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ಕಳೆದ ವರ್ಷದ ಡಿಸೆಂಬರ್ ನಲ್ಲಿ ಬಡಾವಣೆ ಅಭಿವೃದ್ಧಿಗೆ ಬಿಡಿಎ ಅಧ್ಯಕ್ಷರಾಗಿದ್ದ ಎಸ್.ಆರ್.ವಿಶ್ವನಾಥ್ ಭೂಮಿ ಪೂಜೆ ನೆರವೇರಿಸಿದಾಗ ಹೇಳಿದ್ದರು. ಆದರೆ ಬಡಾವಣೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲು ಇನ್ನು ಹೆಚ್ಚಿನ ಸಮಯ ಹಿಡಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.