ಬೆಂಗಳೂರು, ಜು.15 www.bengaluruwire.com : ಬ್ಯಾಟರಾಯನಪುರ ಕ್ಷೇತ್ರದಲ್ಲಿನ ಸಿಂಗಾಪುರ ಗ್ರಾಮ ಹಾಗೂ ಕೊಡಗಲಹಟ್ಟಿ ಗ್ರಾಮದಲ್ಲಿ ಒತ್ತುವರಿಯಾಗಿರುವ 248.5 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡು ರಾಜ್ಯದಲ್ಲಿ ನಡೆದಿರುವ ಭೂ ಒತ್ತುವರಿ ತೆರವು ಕಾರ್ಯಕ್ಕೆ ತಮ್ಮ ಕ್ಷೇತ್ರದಿಂದಲೇ ಚಾಲನೆ ನೀಡಬೇಕೆಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಸಿಂಗಾಪುರ ಗ್ರಾಮದ ಸರ್ವೆ ನಂಬರ್ 109 ರ 2,300 ಕೋಟಿ ಮೌಲ್ಯದ 226.15 ಎಕರೆ ಹಾಗೂ ಹುಣಸಮಾರನಹಳ್ಳಿ ಬಳಿಯ ಕೊಡಗಲಹಟ್ಟಿ ಗ್ರಾಮದ ಸರ್ವೆ ನಂಬರ್ 103 ರ ಸುಮಾರು 325 ಕೋಟಿ ಮೌಲ್ಯದ 22 ಎಕರೆ 35 ಗುಂಟೆ ಸರ್ಕಾರೀ ಸ್ವತ್ತುಗಳನ್ನು ವಶಪಡಿಸಿಕೊಳ್ಳಬೇಕು ಎಂದು ಜು.14ರಂದು ಪತ್ರ ಬರೆದು ಒತ್ತಾಯಿಸಿದ್ದಾರೆ.
‘ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ದಿನಾಂಕ ಜು.12 ರಂದು ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ತಾವು, ರಾಜಧಾನಿ ಬೆಂಗಳೂರು ಮಹಾನಗರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಸರ್ಕಾರೀ ಜಮೀನುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದಾಗಿ ಹೇಳಿಕೆ ನೀಡಿದ್ದೀರ. ತಮ್ಮ ಈ ಹೇಳಿಕೆಯನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ’.
‘ಆದರೆ, ಸ್ವತಃ ರಾಜ್ಯದ ಕಂದಾಯ ಸಚಿವರಾಗಿರುವ ತಾವು ಮೊದಲು ತಾವು ಪ್ರತಿನಿಧಿಸುತ್ತಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಬಳಿಸಲ್ಪಟ್ಟಿರುವ ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಸ್ವತ್ತುಗಳನ್ನು ಸರ್ಕಾರೀ ನೆಲಗಳ್ಳರಿಂದ ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ
‘ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ – 11 (ಕುವೆಂಪುನಗರ ವಾರ್ಡ್) ರ ವ್ಯಾಪ್ತಿಯ ಸಿಂಗಾಪುರ ಗ್ರಾಮದ ಸರ್ವೆ ನಂಬರ್ 109 ರ ಸುಮಾರು 2,300 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ 226.15 ಎಕರೆಗಳಷ್ಟು ವಿಸ್ತೀರ್ಣದ ಸರ್ಕಾರೀ ಸ್ವತ್ತುಗಳನ್ನು ಹಲವಾರು ಮಂದಿ ಸರ್ಕಾರೀ ನೆಲಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಕೆ ಮಾಡಿರುವ ವಿಷಯವನ್ನು ದಾಖಲೆಗಳ ಸಹಿತ ಈ ಹಿಂದೆಯೇ ತಮ್ಮ ಗಮನಕ್ಕೆ ತರಲಾಗಿತ್ತು.’
‘ಹಾಗೆಯೇ, ತಮ್ಮದೇ ಕ್ಷೇತ್ರದ ಜಾಲ ಹೋಬಳಿ, ಹುಣಸಮಾರನಹಳ್ಳಿ ತಾಲ್ಲೂಕು ಪಂಚಾಯಿತಿಯ ಕೊಡಗಲಹಟ್ಟಿ ಗ್ರಾಮದ ಸರ್ವೆ ನಂಬರ್ 103 ರ ಸುಮಾರು 325 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ 22 ಎಕರೆ 35 ಗುಂಟೆ ಸರ್ಕಾರೀ ಸ್ವತ್ತನ್ನು ತಮ್ಮ ಹಿಂಬಾಲಕರಲ್ಲಿ ಒಬ್ಬರಾಗಿರುವ ಮತ್ತು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿರುವ ಸುಜಾತ ಶ್ರೀನಿವಾಸ್ ರವರ ಪತಿ ಶ್ರೀನಿವಾಸ್ ರವರು ಮತ್ತು ಅವರ ಹಿಂಬಾಲಕರು ಕಬಳಿಸಿರುವ ಬಗ್ಗೆಯೂ ಈ ಹಿಂದೆಯೇ ದಾಖಲೆಗಳ ಸಹಿತ ತಮ್ಮ ಗಮನಕ್ಕೆ ತರಲಾಗಿತ್ತು ಹಾಗೂ ಈ ಸಂಬಂಧ ವಿವಿಧ ತನಿಖಾ ಸಂಸ್ಥೆಗಳಲ್ಲಿ ದೂರುಗಳನ್ನೂ ಸಹ ದಾಖಲಿಸಲಾಗಿರುತ್ತದೆ.’
‘ಆದ ಕಾರಣ, ತಾವು ಬೆಂಗಳೂರು ಮಹಾನಗರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಸರ್ಕಾರೀ ಸ್ವತ್ತುಗಳನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವ ಕಾರ್ಯಕ್ಕೆ ತಮ್ಮ ಕ್ಷೇತ್ರದಿಂದಲೇ ಚಾಲನೆಯನ್ನು ನೀಡಬೇಕೆಂದು ಹಾಗೂ ಬೇರೆಲ್ಲಾ ರಾಜಕಾರಣಿಗಳಿಗೆ ಮೇಲ್ಪಂಕ್ತಿಯಾಗಿ ಮತ್ತು ಆದರ್ಶಪ್ರಾಯರಾಗಬೇಕು’ ಎಂದು
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಹೇಳಿದ್ದಾರೆ.
‘ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಒತ್ತುವರಿಯಾಗಿರುವ ಸರ್ಕಾರೀ ಸ್ವತ್ತುಗಳನ್ನು ನಿರ್ಧಾಕ್ಷಿಣ್ಯವಾಗಿ ಮತ್ತು ನಿಷ್ಪಕ್ಷಪಾತವಾಗಿ ತೆರವುಗೊಳಿಸಿ, ಒಟ್ಟು 2,600 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಎರಡು ವಿವಿಧ ಸ್ಥಳಗಳಲ್ಲಿರುವ ಅತ್ಯಮೂಲ್ಯ ಸರ್ಕಾರೀ ಭೂ ಕಬಳಿಕೆ ಹಗರಣಗಳನ್ನು ಸಿಬಿಐ (CBI) ಅಥವಾ ಸಿಐಡಿ(CID) ತನಿಖೆಗೆ ವಹಿಸುವ ಸಂಬಂಧ ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.