ಬೆಂಗಳೂರು, ಜು.08 www.bengaluruwire.com : 108 ಆಂಬುಲೆನ್ಸ್ (Ambulance) ಸಿಬ್ಬಂದಿ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಷ್ಕರ ನಡೆಸದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಆರೋಗ್ಯ ವಾಹಿನಿ ಸಿಬ್ಬಂದಿಗೆ ಕರೆ ನೀಡಿದ್ದಾರೆ.
ಮುಷ್ಕರಕ್ಕೆ ಕರೆ ನೀಡಿರುವ 108 ಸಿಬ್ಬಂದಿ (Ambulance Staff) ಬಾಕಿ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಸಚಿವರ ಸೂಚನೆ ಮೇರೆಗೆ ಆ ಸಿಬ್ಬಂದಿ ಜೊತೆ ಸಭೆ ನಡೆಸಿ, ಮೊದಲ ಕಂತಿನ 14 ಕೋಟಿ ಬಿಡುಗಡೆಗೊಳಿಸಿದ್ದಾರೆ. ಉಳಿದ ಕಂತುಗಳನ್ನು ಶೀಘ್ರದಲ್ಲಿ ಪಾವತಿಸುವ ಭರವಸೆ ನೀಡಿದ್ದಾರೆ.
40 ಕೋಟಿ ವೇತನ ಪಾವತಿ ಬಾಕಿಯಿದ್ದು, ಇಂದು ಮೊದಲ ಕಂತು 14 ಕೋಟಿ ಬಿಡುಗಡೆಗೊಳಿಸಲಾಗಿದೆ. ಸೋಮವಾರ ಸಂಜೆಯೊಳಗೆ ಉಳಿದ ಬಾಕಿ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಆಯುಕ್ತ ರಂದೀಪ್ ಸಿಬ್ಬಂದಿಗೆ ಭರವಸೆ ನೀಡಿದ್ದಾರೆ.
ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ 108 ಸಿಬ್ಬಂದಿ ಜೊತೆ ಸೋಮವಾರ ಸಭೆ ನಡೆಸಲಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೇತನ ಬಾಕಿ ಇರುವ ಸಮಸ್ಯೆಯನ್ನ ಪರಿಹರಿಸುವುದಾಗಿ ಹೇಳಿದ್ದಾರೆ. 108 ಸಿಬ್ಬಂದಿಯ ಸಮಸ್ಯೆ ಮತ್ತು ಶೇ.15 ರಷ್ಟು ವೇತನ ಹೆಚ್ಚಳ ಸೇರಿದಂತೆ ಅವರ ಬೇಡಿಕೆಗಳ ಬಗ್ಗೆಯೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ 108 ಗುತ್ತಿಗೆಯಲ್ಲಿ ಆದ ಎಡವಟ್ಟುಗಳಿಂದ ವೇತನ ಪಾವತಿಯಲ್ಲಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದು, ಸಿಬ್ಬಂದಿಗೆ ವೇತನದ ಸಮಸ್ಯೆಯಾಗದಂತೆ ಕ್ರಮ ವಹಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು ಎಂದು ಆರೋಗ್ಯ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಗ್ಯ ಸಚಿವರು ಸಿಬ್ಬಂದಿ ಜೊತೆ ಸಭೆ ನಡೆಸುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಮುಷ್ಕರ ನಡೆಸದಿರಲು 108 ಅಂಬುಲೆನ್ಸ್ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.