ಬೆಂಗಳೂರು, ಜೂ.26 www.bengaluruwire.com : ರಾಜ್ಯದ 16ನೇ ವಿಧಾನಸಭೆಯ 70 ಜನ ನೂತನ ಶಾಸಕರಿಗೆ ನೆಲಮಂಗಲದ ಶ್ರೀ ಧರ್ಮಸ್ಥಳದ ಕ್ಷೇಮವನದಲ್ಲಿ ಇಂದಿನಿಂದ ಮೂರು ದಿನಗಳ ತರಬೇತಿ ಶಿಬಿರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ ಹಿಸದಾಗಿ ವಿಧಾನಸಭೆ ಆಗಮಿಸುವ ಎಂಎಲ್ ಎ ಗಳಿಗೆ ಪಾಠ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಾ, ಕೆಂಗಲ್ ಹನುಮಂತಯ್ಯನವರು 1953-54 ಇಸವಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ 21.3 ಕೋಟಿ ರೂ ಬಜೆಟ್ ಮಂಡಿಸಿದ್ದರು. ಈಗ 3.09 ಲಕ್ಷ ಕೋಟಿ ರೂ. ಹಿಂದಿನ ಬಜೆಟ್ ಸರ್ಕಾರ ಬಜೆಟ್ ಮಂಡಿಸಿತ್ತು. ಇದೀಗ ಮುಂದಿನ ತಿಂಗಳು ತಾವು 3.30 ರಿಂದ 3.35 ಲಕ್ಷ ಕೋಟಿ ರೂ. ಅಂದಾಜು ಮೊತ್ತದ ಬಜೆಟ್ ಮತ್ತೆ ಮಂಡಿಸುತ್ತೇನೆ. ಐದು ಗ್ಯಾರಂಟಿಯಿಂದ 59-60 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಆಗಸ್ಟ್ ಒಂದರಿಂದ ಹೊಸ ಬಜೆಟ್ ಜಾರಿಗೆ ಬರುವಂತೆ ಜೂ.7 ರಂದು ಮಂಡಿಸುತ್ತೇವೆ. ಅನುಭವಸ್ಥ ಶಾಸಕರಿಗೂ ವಿಷಯ ತಜ್ಞರಿಂದ ಕಾಲ ಕಾಲಕ್ಕೆ ತರಬೇತಿ ಅಗತ್ಯವಿದೆ ಎಂದರು.
ನೂತನವಾಗಿ ವಿಧಾನಸಭೆ ಪ್ರವೇಶಿಸುತ್ತಿರುವ ಶಾಸಕರಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಏಳು ಬಾರಿ ಸಂಸದರಾದ ಕೆ.ಎಚ್.ಮುನಿಯಪ್ಪ, ಎಂಎಲ್ ಸಿಯಾಗಿದ್ದ ಜನಾರ್ಧನ ರೆಡ್ಡಿ, ಅಲಂಪ್ರಭು ಬಿಟ್ಟು ಉಳಿದ 67 ಜನ ಶಾಸಕರು ಹೊಸದಾಗಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಶಾಸಕರಾಗಿ ಗೆಲುವು ಸಾಧಿಸುವುದು ಸುಲಭವಲ್ಲ. ಬಹಳ ಹೋರಾಟ ಮಾಡಿ ವಿಧಾನಸಭೆಗೆ ಬಂದಿದ್ದಾರೆ. ಮತದಾರರ ನಿರೀಕ್ಷೆಗಳು ಕಾಲ ಕಳದಂತೆ ನಿರೀಕ್ಷೆಗಳು ಹೆಚ್ಚಾಗುತ್ತದೆ. ಅದನ್ನು ನೆರವೇರಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರ ನಡುವೆ ನಿಂತು ಕೆಲಸ ಮಾಡುವವರು ಮುಂದೆ ಮತ್ತೆ ಶಾಸಕನಾಗಿ ಆರಿಸಿ ಬರುತ್ತಾನೆ. ಹಣದಿಂದ ಗೆಲವು ಸಾಧ್ಯವಿಲ್ಲ. ಈಗೀಗ ಚುನಾವಣೆಗಳು ದುಬಾರಿಯಾಗುತ್ತಿದೆ ಎಂದು ಹೇಳಿದರು.
ಯಾರು ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತಾರೆ ಅವರು ಆರಿಸಿ ಬರುವುದು ವಿರಳ. ಚುನಾವಣೆಗೆ ಹಣ ಬೇಕು. ಆದರೆ ಅದೊಂದೇ ಪ್ರಮುಖ ಅಂಶವಲ್ಲ. ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ಕೆಲಸ ಮಾಡುವವರು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ರಾಜಕಾರಣ ಅಂದರೆ ಧಿಮಾಕು, ಅಧಿಕಾರ ಚಲಾಯಿಸುವುದಲ್ಲ. ರಾಜಕಾರಣ ಜನರ ಸೇವೆ, ರಾಜಕಾರಣ ಎಂಬುವನು ಜನರ ಸೇವಕ. ಇದು ಮೂಲಭೂತ ಅಂಶ.
ಎಷ್ಟೋ ಜನರಿಗೆ ಶಾಸಕನಾಗಬೇಕೆಂಬ ಹಂಬಲ ಇರುತ್ತದೆ. ಆದರೆ ಆರಿಸಿ ಬಂದ ಮೇಲೆ ವಿಧಾನಸೌಧಕ್ಕೆ ಬರಲ್ಲ. ಇಂತಹ ಧೋರಣೆ ಬಿಡಬೇಕು. ಸದನ ಹಾಜರಾತಿ ಬಹಳ ಮುಖ್ಯ. ಇದನ್ನು ಚಾಚೂ ತಪ್ಪದೆ ಪಾಲನೆ ಮಾಡಿದರೆ ಉತ್ತಮ ಶಾಸಕರಾಗಬಹುದು. ಬಹಳ ಜನ ಮಂತ್ರಿಗಳೇ ಸದನಕ್ಕೆ ಹಾಜರಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಹಣಕಾಸು ಸಚಿವ ಹುದ್ದೆಯನ್ನು ಸವಾಲಾಗಿ ಸ್ವೀಕರಿಸಿದ್ದೆ :
ಹಿರಿಯರು ಮಾತನಾಡುವಾಗ ಕೇಳಿಸಿಕೊಳ್ಳಬೇಕು. ನನ್ನನ್ನು ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು, 1994ರಲ್ಲಿ ಹಣಕಾಸು ಮಂತ್ರಿ ಮಾಡಿದರು. ನಾನು ಕಾನೂನು ಪದವಿ ಓದಿರೋದು ಅದನ್ನೇ ಕೊಡುವಂತೆ ಕೇಳಿದ್ದೆ. ಆದರೆ ನಂಬಿಕಸ್ಥ ಸಚಿವರಾಗಬೇಕು ಎಂದು ಹಣಕಾಸು ಸಚಿವರನ್ನು ಮಾಡಿದರು. ಲಂಕೇಶ್ ಪತ್ರಿಕೆಯವರು ಕುರಿ ಕಾಯುವ ಸಿದ್ದರಾಮಯ್ಯ ಹಣಕಾಸು ಸಚಿವ ಆದರು ಅಂತ ಬರೆದರು. ನಾನು ಇದನ್ನು ಸವಾಲಾಗಿ ಸ್ವೀಕರಿಸಿ 1994-95ರಲ್ಲಿ ಮೊದಲ ಬಜೆಟ್ ಮಂಡಿಸಿದೆ. ಎಲ್ಲ ತಜ್ಞರೊಂದಿಗೆ ಸಮಾಲೋಚಿಸಿ, ಆ ಇಲಾಖೆ ಬಗ್ಗೆ ತಿಳಿದು ಬಜೆಟ್ ಮಂಡಿಸಿದೆ. ಆಗಿನ ಹಿಂದು ಪತ್ರಿಕೆ ನನ್ನ ಬಜೆಟ್ ಮ್ಯಾಜಿಕ್ ಬಜೆಟ್ ಎಂದು ಸಂಪಾದಕೀಯ ಬರೆದಿದ್ದರು.
‘ವಿಧಾನಸೌಧದ ಗ್ರಂಥಾಲಯಕ್ಕೆ ಯಾವಾಗಾದರೂ ಭೇಟಿ ನೀಡಿದ್ದೀರಾ?’:
ವಿಧಾನಸೌಧದಲ್ಲಿ ಬಹಳಷ್ಟು ವಿಷಯ ತಿಳಿಯಲು ಶಾಸಕರು ಗ್ರಂಥಾಲಯ ಬಳಸಬೇಕು.ಎಷ್ಟೋ ಮಂದಿ ಬಳಸಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ವೇದಿಕೆಯಲ್ಲಿದ್ದ ಸಚಿವ ಜಮೀರ್ ಖಾನ್ ಗೆ, ‘ವಿಧಾನಸೌಧದ ಗ್ರಂಥಾಲಯಕ್ಕೆ ಯಾವಾಗಾದರೂ ಭೇಟಿ ನೀಡಿದ್ದರಾ?’ ಎಂದಾಗ ‘ಇಲ್ಲ’ ಎಂದು ಜಮೀರ್ ಅಹಮದ್ ನಕ್ಕು ಸುಮ್ಮನಾದರು.
ಸಂವಿಧಾನದ ತಿಳುವಳಿಕೆ ಅಗತ್ಯ :
ನಾನು ಕಾಂಗ್ರೆಸ್ ನಿಂದ ಆಯ್ಕೆಯಾದರೂ, ಇಡೀ ರಾಜ್ಯಕ್ಕೂ ನಾನು ಮುಖ್ಯಮಂತ್ರಿ. ಈ ಭಾವನೆ ನಿಮ್ಮಲ್ಲೂ ಇರಬೇಕು. ನಮ್ಮ ಭಾರತದ ಸಂವಿಧಾನ ತಿಳಿದುಕೊಂಡಿರಬೇಕು. ಯಾರಿಗೆ ಸಂವಿಧಾನ ಗೊತ್ತಿರಲ್ಲ ಆತ ಉತ್ತಮ ಸಂವಿಧಾನ ಪಟು ಆಗಲ್ಲ. ಸಂವಿಧಾನದ ಆರ್ಟಿಕಲ್ 59 ಸಾಮಾನ್ಯ ಜನರಿಗೆ ಸೇರಿದ ಹಲವು ಅಂಶಗಳಿವೆ. ಕಾನೂನು ಜನರಿಗೆ ಪೂರಕವಾಗಿರದಿದ್ದರೆ ಅದನ್ನು ತಿದ್ದುಪಡಿ ಮಾಡುತ್ತೇವೆ ಅಥವಾ ತೆಗೆದು ಹಾಕುತ್ತೇವೆ.
ಜನರಿಗೆ ಮಾರಕವಾದ, ಸಂವಿಧಾನದ ಮೂಲೋದ್ದೇಶಕ್ಕೆ ವಿರುದ್ಧವಾದ ಕಾನೂನು ಮಾಡಬಾರದು. ಅದಕ್ಕಾಗಿ ಸಂವಿಧಾನ ಓದಿ ತಿಳಿದುಕೊಂಡಿರಬೇಕು. ನಮಗೆ ಸಂವಿಧಾನ ಇರದಿದ್ದರೆ ನಾವೆಲ್ಲ ಶಾಸಕ, ಮಂತ್ರಿಗಳು ಆಗುತ್ತಿರಲಿಲ್ಲ. ಈಶ್ವರಪ್ಪ, ಸಿ.ಟಿ.ರವಿ ಜೊತೆ ಈ ವಿಷಯ ಮಾತನಾಡುತ್ತಿದ್ದಾಗ ಹೇಳುತ್ತಿದೆ. ಸಂವಿಧಾನವಿದ್ದರೆ ನಾವು ಇರುತ್ತೇವೆ ಎಂದರು.
ಪ್ರತಿಯೊಬ್ಬರೂ ಬಜೆಟ್ ಬಗ್ಗೆ ತಿಳಿದುಕೊಳ್ಳಬೇಕು :
ಪ್ರತಿಯೊಬ್ಬರೂ ಬಜೆಟ್ ಬಗ್ಗೆ ತಿಳಿದುಕೊಳ್ಳಬೇಕು. ಬಜೆಟ್ ಎಂದರೆ ಆದಾಯ ಮತ್ತು ವೆಚ್ಚದ ವಿವರಗಳು. ಬಸವಣ್ಣನವರು 12ನೆಯ ಶತಮಾನದಲ್ಲಿ ಕಾಯಕ, ದಾಸೋಹದ ಬಗ್ಗೆ ಹೇಳಿದ್ದರು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಪೂರೈಕೆಯಾಗಿದೆ. ಅಧಿವೇಶನದಲ್ಲಿ ಮಾತನಾಡುವಾಗ ಅಂಕಿ ಅಂಶಗಳು ನಿಖರವಾಗಿ ಹೇಳಬೇಕಾದರೆ ಓದಿ, ಬರೆದಿಟ್ಟುಕೊಂಡಿರಬೇಕು. ಆಗಲೇ ನಿಖರವಾಗಿ ಹೇಳಲು ಸಾಧ್ಯ.
ವಿಧಾನಸಭೆ ಗುಣಮಟ್ಟದ ಚರ್ಚೆಯಾಗಬೇಕು :
ವಿಧಾನಸಭೆ ಅಧಿವೇಶನದಲ್ಲಿ ಗುಣಮಟ್ಟದ ಚರ್ಚೆಯಾಗಬೇಕು. ಗಂಭೀರವಾದ ವಿಚಾರದ ಜೊತೆ ಹಾಸ್ಯಮಿಶ್ರಿತ ವಿಚಾರಗಳಿರಬೇಕು. ವಿಷಯ ಗಂಭೀರವಾಗಿದ್ದಾಗ ಹಾಸ್ಯ ಮಿಶ್ರಿತ ದಾಟಿಯಲ್ಲಿ ತಿಳಿಗೊಳಿಸುವ ಚಾಕಚಕ್ಯತೆ ರೂಢಿಸಿಕೊಳ್ಳಬೇಕು. ತಮಗೆ ಇವೆಲ್ಲ ತಿಳಿದಿದೆ. ನಾನು ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೇನೆ. ನನ್ನ ಅನುಭವದಿಂದ ಈ ವಿಷಯ ಹೇಳಿದ್ದೇನೆ. ನನ್ನ ಮಾತು ಒರಟಾಗಿರಬಹುದು. ಅದರಲ್ಲಿ ಸತ್ಯ ಇರುತ್ತೆ. ನಮ್ಮ ಮಾತಲ್ಲಿ ಪ್ರಮಾಣಿಕತೆ ಇರಬೇಕು. ನನ್ನ ರಾಜಕೀಯ ಜೀವನದಲ್ಲಿ ನಾಲ್ಕು ದಿನ ಮಾತ್ರ ಅಧಿವೇಶನ ಹಾಜರಾಗಿರಲಿಲ್ಲ. ಆದರೆ ವಾಟಾಳ್ ನಾಗರಾಜ್ ಒಂದು ದಿನವೂ ಗೈರು ಹಾಜರಾಗುತ್ತಿರಲಿಲ್ಲ ಎಂದು ಅವರನ್ನು ಹೊಗಳಿದರು.
63 ಸಾವಿ ರೂ. ಹಣದಲ್ಲಿ ವಿಧಾನಸಭೆ ಚುನಾವಣೆ ಗೆದ್ದಿದ್ದೆ :
ಆಗ ಕೇವಲ 63 ಸಾವಿರ ಹಣದಲ್ಲಿ ವಿಧಾನಸಭೆ ಚುನಾವಣೆ ಕರ್ಚು ಮಾಡಿದ್ದೆ. ಆಗ ಊರಿನ ಯಜಮಾನರು ತೀರ್ಮಾನಿಸಿದ್ದರೆ ಅಂತಹವರು ಗೆಲುವಾಗುತ್ತಿತ್ತು. ಈಗ ಪಕ್ಷಾಂತರ ಪಿಡುಗು ಹೆಚ್ಚಾಗಿದೆ. ನಾವು ಯಾವ ಪಕ್ಷದಲ್ಲಿದಿವಿ ಅದರಲ್ಲೇ ಮುಂದುವರೆಯಬೇಕು. ಪಕ್ಷಾಂತರ ಮಾಡಬಾರದು ಎಂದು ಸಿದ್ದರಾಮಯ್ಯ ಅವರು ನೂತನ ಶಾಸಕರಿಗೆ ಕಿವಿಮಾತು ನೀಡಿದರು.
‘ಮೊಬೈಲ್ ಮೊದಲು ನನ್ನ ಬಳಿಯೇ ಇಟ್ಟುಕೊಂಡಿದ್ದೆ, ಮಧ್ಯರಾತ್ರಿ ಹೊತ್ತಲ್ಲಿ ಸಮಸ್ಯೆ ಹೇಳಿ ಕರೆ ಮಾಡ್ತಿದ್ರು. ಕುಡುಕರು ಕರೆ ಮಾಡುತ್ತಿದ್ದರು. ಇದರಿಂದ ಬೇಸೆತ್ತು ಮೊಬೈಲ್ ಇಟ್ಟುಕೊಳ್ಳೋದು ಬಿಟ್ಟೆ. ಬಳಿಕ ನಮ್ಮ ಸಿಬ್ಬಂದಿ ಬಹಳ ಪ್ರಮುಖ ಕರೆ ಇದ್ದಾಗ ಮಾತ್ರ ನನಗೆ ಕೊಡ್ತಾರೆ, ಆಗ ಮಾತನಾಡುತ್ತೇನೆ’ ಎಂದು ಮೋಬೈಲ್ ತಮ್ಮ ಹತ್ತಿರ ಇಟ್ಟುಕೊಳ್ಳದಕ್ಕೆ ಇರುವ ಕಾರಣವನ್ನು ಬಿಚ್ಚಿಟ್ಟರು.
ನನಗೆ ಇದೇ ಕೊನೆಯ ಚುನಾವಣೆ. ಆದರೆ ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಜನರ ಸೇವೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ವಿಧಾನಭೆ ಅಧ್ಯಕ್ಷ ಯು.ಟಿ.ಖಾದರ್, ನಾಯಕತ್ವದ ಗುಣ ಸರ್ಕಸ್ ನ ರಿಂಗ್ ಮಾಸ್ಟರ್ ರೀತಿ ಯುವ ನಾಯಕರು ಆಗಬೇಕು. ಶಾಸಕರ ಒಗ್ಗಟ್ಟು ರಾಜ್ಯದ ಶಕ್ತಿ. ನಮ್ಮ ತತ್ವ ಸಿದ್ಧಾಂತಗಳು ಬೇರೆ ಬೇರೆಯಾದರೂ ರಾಜ್ಯದ ಅಭಿವೃದ್ಧಿ ಗುರಿಯಿರಬೇಕ. ಎಲ್ಲ ಜಾತಿ, ಮನೋಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ದ್ವೇಷ ರಹಿತ, ದುಶ್ಚಟ ರಹಿತ ಸಮಾಜ ನಿರ್ಮಾಣ ಮಾಡುವ ನಮ್ಮ ರಾಜಕೀಯ ಗುರಿಯಿರಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಉಲ್ಲಾಳ ಕ್ಷೇತ್ರದಲ್ಲಿ ಮುಸ್ಲೀಂ, ಹಿಂದೂ ಹಾಗೂ ಕ್ರಶ್ಚಿಯನ್ ಧರ್ಮೀಯರು ಕೈ ಕೈಹಿಡಿದು ನಡೆದುಕೊಂಡು ಹೋಗುವ ಉದ್ದೇಶ ನನ್ನದು. ಅದೇ ದೇಶಕ್ಕೆ ನೀಡುವ ಕೊಡುಗೆಯಾಗಿದೆ. ಟೀಕೆ ಟಿಪ್ಪಣಿ ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಸೌಂದರ್ಯವಾಗಿದೆ. ಎಲ್ಲರನ್ನು ಸೇರಿಸಿ ಜೋಡಿಸುವುದು ಸ್ಪೀಕರ್ ಆದ ನನ್ನ ಕೆಲಸವಾಗಿದೆ. ನಿಮ್ಮ ನಡುವೆ ಸಹೋದರತ್ವ, ಮಿತ್ರತ್ವ ಐದು ವರ್ಷಗಳ ಕಾಲ ಇರಬೇಕು.
ಉತ್ತಮ ರಾಜಕಾರಣಿ, ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪ್ರಜಾಪ್ರತಿನಿಧಿಗಳಿಗೆ ಪ್ರತ್ಯೇಕ ಶೈಕ್ಷಣಿಕ ಸಂಸ್ಥೆಯಿಲ್ಲ. ಅದಕ್ಕಾಗಿ ಪದವಿ ಮುಗಿಸಿದವರಿಗೆ ತರಬೇತಿ ಸಂಸ್ಥೆ ಪ್ರಾರಂಭಿಸುವ ಚಿಂತನೆಯಿದೆ. ರಾಜಕಾರಣ ಮತ್ತು ಮಾಧ್ಯಮ ನಡುವೆ ಉತ್ತಮ ಸೌಹಾರ್ದ ಸಂಬಂಧವಿರಬೇಕು. ಈ ನಿಟ್ಟಿನಲ್ಲೂ ಖಾಸಗಿ ಪಿಆರ್ ಸಂಸ್ಥೆಯಿಂದ ಉಪನ್ಯಾಸ ಏರ್ಪಡಿಸಿದ್ದೇವೆ. ಜುಲೈ 3 ರಿಂದ ಅಧಿವೇಶನ ಆರಂಭವಾಗುತ್ತಿದ್ದು ಎಲ್ಲಾ ಶಾಸಕರು ಸಮಯಕ್ಕೆ ಸರಿಯಾಗಿ ಬೆಳಗ್ಗೆ 11ಗಂಟೆಗೆ ಆಗಮಿಸಿ, ದೇಶಕ್ಕೆ ಉತ್ತಮ ಸಂದೇಶ ರವಾನಿಸಬೇಕು ಎಂದು ಸ್ಪೀಕರ್ ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅಧಿವೇಶನ ಆರಂಭವಾದಾಗಿನಿಂದ ಮುಗಿಯುವ ತನಕ ಕೂರಬೇಕು. ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಲು ಉತ್ತಮ ಅವಕಾಶ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವ ವ್ಯಕ್ತಿಯನ್ನು ಹೇಗೆ ನೋಡುತ್ತೇವೆ ಅನ್ನೋದು ಮುಖ್ಯ. ಒಂದು ಸಲ ಆರಿಸಿ ಬಂದೋರು ಮತ್ತೊಮ್ಮೆ ಆರಿಸಿ ಬರಲು ಉತ್ತಮ ಹಾಗೂ ಪ್ರಮಾಣಿಕ ಕೆಲಸ ಮಾಡಬೇಕು. ಅಧಿವೇಶನದಲ್ಲಿ ಒಂದು ಪೇಪರ್ ಪೆನ್ನು ಹಿಡಿದು ಮುಖ್ಯ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು.
ಕಳೆದ 44 ವರ್ಷಗಳಿಂದ ಶಾಸನ ಸಭೆಯಲ್ಲಿದ್ದೇನೆ ಎರಡು ಸಾವಿರಕ್ಕಿಂತ ಹೆಚ್ಚಿನ ಶಾಸಕರನ್ನು ನೋಡಿದ್ದೇನೆ. ಯಾರೇ ಶಾಸಕರು ಇಂತಹ ತರಬೇತಿ ಪಡೆದೇ ತಮ್ಮ ಆಡಳಿತ ಆರಂಭಿಸಬೇಕು. ಇದೊಂದು ಉತ್ತಮ ವೇದಿಕೆ ಕಲ್ಪಿಸಿದ್ದಕ್ಕೆ ಸ್ಪೀಕರ್ ಯು.ಟಿ.ಖಾದರ್ ಹಾಗೂ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡುತ್ತಾ, ಕರ್ನಾಟಕದ ಮತದಾರರು 70 ಮಂದಿ ಹೊಸ ಶಾಸಕರನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದ್ದಾರೆ. ಹೊಸತನವನ್ನು ಮತದಾರ ಬಯಸಿದ್ದಾರೆ ಎಂಬುದು ಇದನ್ನು ಸೂಚಿಸುತ್ತದೆ. ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ನಾವು ಭಾಷಣಕ್ಕಷ್ಟೆ ಸೀಮಿತವಾಗಬಾರದು, ವಿಧಾನಸಭೆಯ ಸಮಿತಿ ರಚಿಸಲಾಗಿರುವುದನ್ನು ಸಚಿವಾಲಯಗಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಸಚಿವರೇ ಗಂಭೀರವಾಗಿರಲಿಲ್ಲ. ಸಚಿವರು ಸದನದಲ್ಲಿ ಜನರಿಗೆ ಭರವಸೆ ನೀಡಿದಲ್ಲಿ ಅದು ಭರವಸೆ ಸಮಿತಿಗೆ ಹೋಗುತ್ತದೆ.
ಈ ಸದನವನ್ನು ಗಂಭೀರವಾಗಿ ತೆಗೆದುಕೊಂಡರೆ, ಅಧಿಕಾರಿಗಳು ಗಂಭೀರವಾಗುತ್ತಾರೆ. ವರ್ಗಾವಣೆಗಾಗಿ ಅಧಿಕಾರಿಗಳ ಬಳಿ ಹೋಗಿ ಕೂತರೆ ಸದನದ ಘನತೆ ಕಡಿಮೆಯಾಗುತ್ತದೆ. 69 ರಲ್ಲಿ 55 ರಿಂದ 56 ಹೊಸ ಶಾಸಕರು ಈ ತರಬೇತಿ ಶಿಬಿರಕ್ಕೆ ಬಂದಿದ್ದಾರೆ. ಶೇ.90ರಷ್ಟು ಹಾಜರಾತಿಯು ನೀವೆಷ್ಟು ಜನಾಡಳಿಕ್ಕೆ ಗಂಭೀರವಾಗಿದ್ದೀರ ಅಂತ ಸೂಚಿಸುತ್ತದೆ.
ವಸತಿ ಸಚಿವ ಜಮೀರ್ ಖಾನ್ ಮಾತಾನಾಡಿ, ಮೊದಲ ಬಾರಿ ಎಂಎಲ್ ಎ ಆಗಿ ಆಯ್ಕೆ ಆದವರಿಗೆ ತರಬೇತಿ ಶಿಬಿರ ಆಯೋಜಿಸಿರುವುದು ಸಂತೋಷ ವಿಚಾರ. ಮೊದಲ ಬಾರಿ ಶಾಸಕರಾಗುವುದು ಸುಲಭ. ಎರಡನೆಯ ಬಾರಿ ಎಂಎಲ್ ಎ ಆಗೋದು ಸವಾಲಿನ ಕೆಲಸ. ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಗೆಲುವು ಸುಲಭ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರು ಸದನ ಹಾಜರಾತಿ ಬಗ್ಗೆ ಎಲ್ಲರಿಗೂ ತಿಳಿಸುತ್ತಿರುತ್ತಾರೆ. ಹೊಸ ಶಾಸಕರ ತರಬೇತಿ ಶಿಬಿರದಲ್ಲಿ ಶೇ.90ರಷ್ಟು ಹಾಜರಾತಿ ಇರುವುದು ತರಬೇತಿ ಶಿಬಿರದ ಬಗ್ಗೆ ಅವರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಗೊತ್ತಾಗುತ್ತದೆ.
ವಿಧಾನಸಭಾ ಕಾರ್ಯದರ್ಶಿ ವಿಶಾಲಕ್ಷ್ಮಿ, ಕ್ಷೇಮವನದ ಮುಖ್ಯಸ್ಥರಾದ ಸುರೇಂದ್ರ ಕುಮಾರ್ ಹೆಗ್ಗಡೆ ಉಪಸ್ಥಿತರಿದ್ದರು.