ಕಠ್ಮಂಡು, ಜೂ.26 www.bengaluruwire.com : ಇಲ್ಲಿನ ವಿಶ್ವವಿಖ್ಯಾತ ಪಶುಪತಿನಾಥ ದೇವಸ್ಥಾನದಲ್ಲಿ (Pashupatinath Temple) 10 ಕೆಜಿ ಚಿನ್ನ (Gold) ಕಳ್ಳತನವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ದೇವಾಲಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ನೇಪಾಳದ (Nepal) ರಾಜಧಾನಿ ಕಠ್ಮಂಡುವಿನಲ್ಲಿರುವ (Kathmandu) ಪಶುಪತಿನಾಥ ದೇವಸ್ಥಾನದಲ್ಲಿ ಕಳೆದ ವರ್ಷ ಶಿವರಾತ್ರಿ ಹಬ್ಬದ ಆಚರಣೆ ಸಂದರ್ಭದಲ್ಲಿ ಗರ್ಭಗುಡಿಯಲ್ಲಿರುವ ಶಿವಲಿಂಗದ ಸುತ್ತ 103 ಕೆಜಿ ಚಿನ್ನದ ಜಲಹರಿಯನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ 10 ಕೆಜಿ ಚಿನ್ನ ಕಣ್ಮರೆಯಾಗಿದೆ ಎಂದು ದೂರಲಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ನೇಪಾಳದ ಉನ್ನತ ತನಿಖಾ ಸಂಸ್ಥೆ ಸಿಐಎಎ ಈ ಪ್ರಕರಣದ ತನಿಖೆ ಆರಂಭಿಸಿದ್ದು, ನಿನ್ನೆ ಮಧ್ಯಾಹ್ನದಿಂದಲೇ ಭಕ್ತರಿಗೆ ದೇವಾಲಯ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ.