ಬೆಂಗಳೂರು, ಜೂ.22 www.bengaluruwire.com : ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಜಾರಿಯಿಂದ ಹಾಗೂ ವಿದ್ಯುತ್ ದರ ಹೆಚ್ಚಳದಿಂದಾಗಿ ಮೀಟರ್ ರೀಡಿಂಗ್ ಐದು ದಿನ ವಿಳಂಬವಾಗಿದೆಯಷ್ಟೆ. ಇದಲ್ಲದೆ ತಾಂತ್ರಿಕ ಸಮಸ್ಯೆಗಳು ಬಗೆಹರಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (ಎಫ್‌ಪಿಪಿಸಿಎ) ಶುಲ್ಕ ಹೆಚ್ಚಳದಿಂದ ಜೂನ್ ತಿಂಗಳ ಬಿಲ್‌ನಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಜೊತೆಗೆ ಈ ಸಂದರ್ಭದಲ್ಲಿ ಕಂಡುಬಂದ ಎಲ್ಲ ತಾಂತ್ರಿಕ ಸಮಸ್ಯೆ ಬಗೆಹರಿಸಿದ್ದೇವೆ. ಹಾಗಾಗಿ ಮುದ್ರಣ ಮತ್ತು ಆನ್‌ಲೈನ್ ಬಿಲ್‌ನಲ್ಲಿ ಸಮಸ್ಯೆ ಕಂಡು ಬಾರದು ಎಂದು ವಿವರಿಸಿದ್ದಾರೆ.
ಬೆಸ್ಕಾಂ ಗ್ರಾಹಕರು ಎಷ್ಟೋ ಜನ ವಿದ್ಯುತ್ ವಿತರಣಾ ಕಂಪನಿಗಳು ಬಿಲ್ಲಿಂಗ್ ನಲ್ಲಿ 4 ಸ್ಲಾಬ್ ತೆಗೆದು ಹಾಕಿರುವುದು, ವಿದ್ಯುತ್ ದರ ಹೆಚ್ಚಳ ಮಾಡಿರುವುದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC)ದ ಆದೇಶದಂತೆಯೇ ಹೊರತು ಎಸ್ಕಾಂಗಳು ಏಕಾ ಏಕಿ ವಿದ್ಯುತ್ ದರ ಏರಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಎಷ್ಟೋ ಕಡೆಗಳಲ್ಲಿ ಬೆಸ್ಕಾಂ ಬಿಲ್ ತಡವಾಗಿ ಗ್ರಾಹಕರಿಗೆ ತಲುಪಿರುವುದಕ್ಕೆ ಕಾರಣಗಳನ್ನು ವಿವರಿಸಿರುವ ಅಧಿಕಾರಿಗಳು, ಸಾಮಾನ್ಯವಾಗಿ ತಮ್ಮ ಸಿಬ್ಬಂದಿ ಪ್ರತಿ ತಿಂಗಳು 1ನೇ ತಾರೀಖಿನಿಂದ 15ರವರೆಗೆ ಮೀಟರ್ ರೀಡಿಂಗ್ ಕಾರ್ಯ ಕೈಗೊಳ್ಳುತ್ತಾರೆ. ಆದರೆ, ಗೃಹ ಜ್ಯೋತಿ ಯೋಜನೆ ಜಾರಿ ಬಗ್ಗೆ ಜೂನ್ 5ರಂದು ಸರ್ಕಾರ ಆದೇಶ ಹೊರಡಿಸಿತ್ತು. ಹಾಗಾಗಿ 6ನೇ ತಾರೀಖಿನಿಂದ ಮೀಟರ್ ರೀಡಿಂಗ್ ಕೈಗೊಂಡಿದ್ದರಿಂದ ಬಿಲ್ ಓದುವಿಕೆ ತಡವಾಗಿದೆ. ಇದರೊಂದಿಗೆ ಐದು ದಿನಗಳ ಮೀಟರ್ ರೀಡಿಂಗ್ ಸಹ ಸೇರಿಸಿದ್ದರಿಂದ ಗ್ರಾಹಕರ ಬಿಲ್ ಮೊತ್ತದಲ್ಲಿ ಏರಿಕೆ ಕಂಡುಬಂದಿದೆ. ಆದರೆ ಮುಂದಿನ ತಿಂಗಳ ಬಿಲ್‌ನಲ್ಲಿ ಐದು ದಿನಗಳ ಇಂಧನ ಬಳಕೆ ಶುಲ್ಕ ಕಡಿಮೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಇಆರ್ ಸಿ ಮೇ 12ರಂದು ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್‌ಗೆ 70 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಿಸಿ ಆದೇಶ ಮಾಡಿತ್ತು. ಕೆಇಆರ್‌ಸಿ ನಿರ್ದೇಶನದಂತೆ ಇದೇ ಸಂದರ್ಭದಲ್ಲಿ 4 ಸ್ಲಾಬ್‌ಗಳ ಬದಲಾಗಿ ಕೇವಲ ಎರಡು ಸ್ಪ್ಯಾಬ್‌ಗಳನ್ನು ಮಾತ್ರ ವಿದ್ಯುತ್ ಬಿಲ್ ಲೆಕ್ಕಾಚಾರಕ್ಕೆ ಬಳಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಇಂಧನ ಹೊಂದಾಣಿಕೆ ದರ ಹೆಚ್ಚಿಸಲಾಯಿತು. ಆದ್ದರಿಂದ ದರ ಹೆಚ್ಚಳದ ಬಾಕಿ ಮೊತ್ತವನ್ನು ಏಪ್ರಿಲ್, ಮೇ ತಿಂಗಳಿಂದಲೇ ಗ್ರಾಹಕರಿಂದ ವಸೂಲಿ ಮಾಡಿದ್ದರಿಂದ ಬಿಲ್ ಮೊತ್ತದಲ್ಲಿ ಹೆಚ್ಚಳವಾಯಿತು. ಇದರ ಜೊತೆಗೆ, ಈ ಎಲ್ಲಾ ಹೊಸ ಬದಲಾವಣೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಸಮಯಾವಕಾಶ ಬೇಕಾಗಿತ್ತು. ಈ ಕಾರಣದಿಂದ ಬಿಲ್ ಅನ್ನು ಗ್ರಾಹಕರಿಗೆ ನೀಡುವುದು ವಿಳಂಬವಾಯಿತು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ
ವಿದ್ಯುತ್ ಬಿಲ್ ಗ್ರಾಹಕರಿಗೆ ನೀಡಿದ ದಿನದಿಂದ ಹಣ ಪಾವತಿಸಲು 15 ದಿನಗಳ ಕಾಲಾವಕಾಶ ಇರುತ್ತದೆ. ಈ ಹದಿನೈದು ದಿನಗಳಿಗೆ ಯಾವುದೇ ರೀತಿ ದಂಡ ವಿಧಿಸುವುದಿಲ್ಲ. ಉದಾಹರಣೆಗೆ ಜೂ.21ಕ್ಕೆ ಬಿಲ್ ನೀಡಿದ್ದರೆ ಮುಂದಿನ 15 ದಿನಗಳವರೆಗೆ ಹಣ ಕಟ್ಟಲು ಸಮಯಾವಕಾಶ ಇರುತ್ತದೆ. 15 ದಿನಗಳ ನಂತರ ಪಾವತಿಸಿದರೆ ಮಾತ್ರ ದಂಡ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.