ಬೆಂಗಳೂರು, ಜೂ.08 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಮುಖಂಡರಿಗೆ ನಿರಾಸೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಡಿಎ ಅಧ್ಯಕ್ಷರಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿದೆ.
ಐಎಎಸ್ ಅಧಿಕಾರಿಗಳ ವಲಯ ಹಾಗೂ ರಾಜ್ಯ ಸರ್ಕಾರದಲ್ಲಿ ಪ್ರಬಲ ಹಾಗೂ ಚಾಣಾಕ್ಷ ಅಧಿಕಾರಿಯೆಂದು ಗುರ್ತಿಸಿಕೊಂಡಿರುವ ಟ್ರಬಲ್ ಶೂಟರ್ ರಾಕೇಶ್ ಸಿಂಗ್ ಪ್ರಸ್ತುತ ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿಯಾಗಿ, ಜಲಸಂಪನ್ಮೂಲ ಇಲಾಖೆಯ ಎಸಿಎಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹೊಸ ಹುದ್ದೆಯ ಜೊತೆಗೆ ರಾಜ್ಯ ಸರ್ಕಾರವು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು ಕಾಯ್ದೆ 1987ರ ಕಲಂ 3(3)(ಎ) ಮತ್ತು 3(4)ರನ್ವಯ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ-1961ರ ಕಲಂ 4(3)(i)ರನ್ವಯ ಈ ಕೆಳಕಂಡ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನಾಗಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಿಸಿದೆ.
- ಆನೇಕಲ್ ಯೋಜನಾ ಪ್ರಾಧಿಕಾರ
- ಹೊಸಕೋಟೆ ಯೋಜನಾ ಪ್ರಾಧಿಕಾರ
- ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ
- ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ
- ಮಾಗಡಿ ಯೋಜನಾ ಪ್ರಾಧಿಕಾರ
- ಚನ್ನಪಟ್ಟಣ ಯೋಜನಾ ಪ್ರಾಧಿಕಾರ
- ಕನಕಪುರ ಯೋಜನಾ ಪ್ರಾಧಿಕಾರ
- ನೆಲಮಂಗಲ ಯೋಜನಾ ಪ್ರಾಧಿಕಾರ
- ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
- ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ
ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವು ಆಯಕಟ್ಟಿನ ಹುದ್ದೆಗಳ ಭರ್ತಿ ಕಾರ್ಯ ಶರವೇಗದಿಂದ ಸಾಗುತ್ತಿದೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಾದಿಯ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ನಾಯಕರು ಪ್ರಯತ್ನಿಸಿದ್ದರು. ಆದರೆ ಆ ನಾಯಕರಿಗೆ ಒಲಿಯದ ಭಾಗ್ಯ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರ ಪಾಲಾಗಿದೆ.
ಬಿಡಿಎ ಅಧ್ಯಕ್ಷ ಹುದ್ದೆಗಾಗಿ ಟಿ.ಬಿ.ಜಯಚಂದ್ರ, ಹ್ಯಾರೀಸ್, ಎಂ.ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ನಡುವೆ ಪ್ರಬಲ ಪೈಪೋಟಿ ನಡೆಸಿದ್ದರು ಎನ್ನಲಾಗಿದೆ.