ಬೆಂಗಳೂರು, ಜೂ.5 www.bengaluruwire.com : ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ವೇಗಕ್ಕೆ ತಕ್ಕಂತೆ ರಸ್ತೆ ವಿನ್ಯಾಸ, ಸಂಚಾರ ಪದ್ಧತಿಗಳು ಸೂಕ್ತ ರೀತಿ ಅಳವಡಿಕೆಯಾಗಿಲ್ಲ. ಎಷ್ಟೋ ಕಡೆಗಳಲ್ಲಿ ವೈಜ್ಞಾನಿಕ ಆಡಿಟಿಂಗ್ ನಡೆಸದೆ ಫ್ಲೇಓವರ್, ಕೆಳಸೇತುವೆ ನಿರ್ಮಿಸಲಾಗಿದೆ. ಆ ಹಾಗೆ ಗ್ರೇಡ್ ಸಪರೇಟರ್ ನಿರ್ಮಾಣ ಮಾಡುವ ಮುನ್ನ ತಾಂತ್ರಿಕ, ವಿನ್ಯಾಸ ದೋಷಗಳು, ನಿರ್ವಹಣೆ ಕೊರತೆಯು ಅಂತಿಮವಾಗಿ ವಾಹನ ಸವಾರರು ತೊಂದರೆ ಎದುರಿಸುವಂತಾಗಿದೆ.
ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಕೆ.ಆರ್.ವೃತ್ತದ ಅಂಡರ್ ಪಾಸ್ ನಲ್ಲಿ ಕಳೆದ ತಿಂಗಳು ಮೇ.21ರಂದು ಸಂಜೆ ಒಂದು ಗಂಟೆಯಲ್ಲಿ ಸುರಿದ ಭಾರೀ ಮಳೆಗೆ ನೀರು ತುಂಬಿಕೊಂಡು ಕಾರು ಸಿಕ್ಕಿಹಾಕಿಕೊಂಡು ಅದರಲ್ಲಿದ್ದ ಸಾಫ್ಟ್ ವೇರ್ ಉದ್ಯೋಗಿ ಮೃತಪಟ್ಟ ಘಟನೆಯಾಗಿದೆ.
ನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 1,352.95 ಕೋಟಿ ರೂ. ಮೊತ್ತದ ಒಟ್ಟು 18 ಮೇಲ್ಸೇತುವೆ ಮತ್ತು ಕೆಳ ಸೇತುವೆ ಯೋಜನೆಗಳು ವಿವಿಧ ಹಂತಗಳಲ್ಲಿದ್ದು, ಕೆಲವೊಂದು ಯೋಜನೆಗಳು ಕುಂಟುತ್ತಾ ಸಾಗುತ್ತಿದ್ದರೆ, ಕೆಲವು ಯೋಜನೆಗಳು ಇನ್ನು ಕಣ್ಣು ಬಿಟ್ಟಿಲ್ಲ. ಮತ್ತೊಂದಿಷ್ಟು ಯೋಜನೆಗಳು ಜಾಗದ ಸಮಸ್ಯೆ, ಟೆಂಡರ್ ಕರೆಯುವ ಹಂತದಲ್ಲಿದೆ. 2011-12ರಲ್ಲಿ ನಗರದ ವಾಹನಗಳ ಸಂಖ್ಯೆ 50.33 ಲಕ್ಷವಿದ್ದರೆ, 2022ರ ಮಾರ್ಚ್ ನಲ್ಲಿ 1.04 ಕೋಟಿ ವಾಹನಗಳು ನಗರದ ರಸ್ತೆಗಳಲ್ಲಿ ಓಡಾಡುತ್ತಿವೆ. ಅವುಗಳ ಪೈಕಿ 69.31 ಲಕ್ಷ ದ್ವಿಚಕ್ರ ವಾಹನ, 21.97 ಲಕ್ಷ ಕಾರುಗಳಿವೆ. ಈ ಸಂದರ್ಭದಲ್ಲಿ ನಗರದಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕುರಿತಂತೆ ಸ್ಥಳೀಯಾಡಳಿತ ಸಂಸ್ಥೆಯಾದ ಬಿಬಿಎಂಪಿ ಏನು ಮಾಡಬೇಕಿದೆ? ಸುಗಮ ಸಂಚಾರಕ್ಕಾಗಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಎಲ್ಲೆಲ್ಲಿ ಎಡವಿದೆ? ಹೇಗೆ ಅವುಗಳನ್ನು ನಿಭಾಯಿಸಬೇಕು ಎಂಬ ಬಗ್ಗೆ ಸಂಚಾರ ಹಾಗೂ ಮೂಲಭೂತ ಸೌಕರ್ಯ ತಜ್ಞರಾದ ಪ್ರೊ.ಎಂ.ಎನ್.ಶ್ರೀಹರಿ ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.
ಕೆಲವೇ ವರ್ಗಕ್ಕಷ್ಟೇ ಸೀಮಿತ ಈ ಅಂಡರ್ ಪಾಸ್ :
ವಾಟಾಳ್ ನಾಗರಾಜ್ ರಸ್ತೆಯ (ಸುಜಾತ ಚಿತ್ರಮಂದಿರ ರಸ್ತೆ) ಮಾಗಡಿ ರಸ್ತೆ ಜಂಕ್ಷನ್ ನಲ್ಲಿನ 34 ಕೋಟಿ ರೂ. ಮೊತ್ತದ ಅಂಡರ್ ಪಾಸ್ ಕಾಮಗಾರಿ ಉದ್ಘಾಟನೆಯಾಗೋದು ಬಾಕಿಯಿರುತ್ತದೆ. ಈ ಅಂಡರ್ ಪಾಸ್ ಲುಲು ಮಾಲ್ ಹೋಗುವವರಿಗೆ ಅನುಕೂಲವಾಗಲಿ ಅಂತ ಮಾಡಿರುವುದು. ಅಲ್ಲಿ ಟೂಲೇನ್ ನಲ್ಲಿ ವಾಹನಗಳು ಸಾಗಲು ನಿರ್ಮಿಸಿರುವ ಅಂಡರ್ ಪಾಸ್ ಒಂದು ವರ್ಗದ ಜನರಿಗೆ ಮಾತ್ರ ಮಾಡಲಾಗಿದೆ. ಆ ರಸ್ತೆಯಲ್ಲಿ ಪ್ರತಿದಿನ ಲಕ್ಷಾಂತರ ಜನರು ಓಡಾಡುವವರಿಗೆ ಇದರ ಅಗತ್ಯವಿರಲಿಲ್ಲ.
ಕೆ.ಆರ್.ಸರ್ಕಲ್ ಅಂಡರ್ ಪಾಸ್ ಅವೈಜ್ಞಾನಿಕ ವಿನ್ಯಾಸ :
ನಗರದಲ್ಲಿ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ಅವಶ್ಯಕತೆ ಎಷ್ಟಿದೆ ಎಂದು ವೈಜ್ಞಾನಿಕ ಆಡಿಟಿಂಗ್ ಆಗಬೇಕಿದೆ. ಈ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ವಿನ್ಯಾಸ ಸಂದರ್ಭದಲ್ಲೇ ತಾಂತ್ರಿಕವಾಗಿ ಪರಿಶೀಲನೆ ಮಾಡಬೇಕು. ಕೆ.ಆರ್.ವೃತ್ತದ ಕೆಳಸೇತುವೆಯಲ್ಲಿ ಜೋರು ಮಳೆ ಬಂದು ನೀರು ನಿಂತು ಕಾರಿನೊಳಗಿದ್ದ ಮಹಿಳೆ ಸಾವನ್ನಪ್ಪಿದರು. ಈ ಕೆಳ ಸೇತುವೆ ತಾಂತ್ರಿಕವಾಗಿ ನೋಡಿದಾಗ, ಅಲ್ಲಿ ಇಳಿಜಾರು ಬಹಳ ಹಿಂದಿನಿಂದಲೇ ಆರಂಭವಾಗಬೇಕಿತ್ತು. ಆ ಇಳಿಜಾರು ಜಾಸ್ತಿಯಾಗಿದ್ದರೆ ಕಾಮಗಾರಿ ದರ ಜಾಸ್ತಿಯಾಗುತ್ತೆ ಅಂತ ಇಳಿಜಾರು ಜಾಸ್ತಿ ಮಾಡಿದರು. ನೀರು ತುಂಬಿದ್ದು ಸರಾಗವಾಗಿ ಹರಿಯಲು ಸೂಕ್ತ ರೀತಿ ವ್ಯವಸ್ಥೆ ಹಾಗೂ ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿಲ್ಲ. ನೀರು ಪಂಪ್ ಮಾಡುವ ಪಂಪ್ ಸೆಟ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೆಆರ್ ವೃತ್ತದ ಕೆಳಸೇತುವೆ ರಸ್ತೆ ನೇರವಾಗಿಲ್ಲ. ವಿಧಾನ ಸೌಧದಿಂದ ನೃಪತುಂಗ ರಸ್ತೆ ಹೋಗುವ ಕಡೆ ಮರದ ಕೊಂಬೆಯಿದ್ದು, ಅಲ್ಲಿಂದ ಮರಗಳ ಎಲೆಗಳು ಬಿದ್ದು ನೀರು ಸರಾಗ ಹರಿಯಲು ತೊಂದರೆಯಾಗಿದೆ. ಹೀಗಾಗಿ ಕಾರು ಮುಳುಗುವಷ್ಟು ನೀರು ತುಂಬಿದೆ. ವಿಧಾನಸೌಧದಿಂದ ನೃಪತುಂಗ ರಸ್ತೆ ಬದಲಿಗೆ, ಮಹಾರಾಣಿ ಕಾಲೇಜು ಕಡೆ ಅಂಡರ್ ಪಾಸ್ ಮಾಡಬಹುದಿತ್ತು. ಆ ಕಡೆ ರಸ್ತೆ ಅಗಲವಿತ್ತು. ಜನರ ಓಡಾಟವೂ ಕಡಿಮೆಯಿತ್ತು. ಅಲ್ಲದೆ ವಿಧಾನಸೌಧದಿಂದ ಕಾರ್ಪೋರೇಷನ್ ಹೋಗುವ ಕಡೆ ಈಗಿರುವಂತೇ ರಸ್ತೆ ಅಗಲ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬಹುದಿತ್ತು.ಈ ರೀತಿ ಲೋಪದೋಷಗಳು ನಗರದ ಬಹಳ ಕಡೆಗಳಲ್ಲಿನ ಗ್ರೇಡ್ ಸಪರೇಟ್ ರಗಳಲ್ಲಿದೆ.
ನಗರದ ಸ್ಲಿಪ್ ರಸ್ತೆಗಳು ಕಿರಿದಾಗಿವೆ :
ಕಾರ್ಡ್ ರಸ್ತೆಯಿಂದ ನವರಂಗ್ ಕಡೆ ತಿರುಗುವ ಕಡೆ ಎರಡು ಮಾರ್ಗಗಳಲ್ಲೂ ಸ್ಲಿಪ್ ರೋಡ್ (ಎರಡು ಕಡೆ ಇರುವ ರಸ್ತೆ) ಇದ್ದು, ಇದು ಕನಿಷ್ಠ 5.5 ಮೀಟರ್ ಅಗಲವಿರಬೇಕು. ಇಂತಹ ಕಡೆಗಳಲ್ಲಿ ಸ್ಲಿಪ್ ರಸ್ತೆ ಅಗಲವಿರದಿದ್ದಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆಯಾಗುತ್ತದೆ. ಮತ್ತಿಕೆರೆ ರಸ್ತೆಯಲ್ಲಿ ಗೋಕುಲಂ ಹತ್ತಿರ ಎಂ.ಎಸ್.ರಾಮಯ್ಯ ಅವರ ಮನೆಯ ಮುಂದೆ ಕೆಳಸೇತುವೆ ನಿರ್ಮಿಸಿದ್ದು, ಅಲ್ಲಿನ ಸ್ಲಿಪ್ ರಸ್ತೆ ಸರಿಯಿಲ್ಲ. ಈ ರಸ್ತೆ ಅಗಲ ಕೇವಲ 4 ರಿಂದ 5 ಅಡಿಯಿದ್ದು, ಒಂದು ಟೂವೀಲರ್ ಹೋಗಬಹುದಷ್ಟೆ. ಎಲ್ಲಾ ರೀತಿಯ ವಾಹನ ಚಾಲನೆಗೆ ಸ್ಲಿಪ್ ರಸ್ತೆ ಅಗತ್ಯ. ಒಂದೊಮ್ಮೆ ಸ್ಲಿಪ್ ರಸ್ತೆ ಕಟ್ಟಲು ಸಾಧ್ಯವಿರದಿದ್ದಾಗ ಅಂತಹ ಕಡೆ ಮೇಲ್ಸೇತುವೆಯಾಗಲಿ, ಕೆಳಸೇತುವೆಯಾಗಲಿ ನಿರ್ಮಿಸಬಾರದು.
ಅಂದರೆ ಆ ಸ್ಥಳಗಳಲ್ಲಿ ರಸ್ತೆ ಅಗಲವಿರಬೇಕು. ಬಿಬಿಎಂಪಿ ಎಂಜಿನಿಯರ್ ಗಳು ಮತ್ತು ಜನಪ್ರತಿನಿಧಿಗಳು, ಕಾಂಟ್ರಾಕ್ಟರ್ ಗಳ ಜೋಬು ತುಂಬಿಸಲು ಅನವಶ್ಯಕವಾಗಿ ಈ ಹಿಂದೆ ಹಾಗೂ ಈಗಲೂ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡುವ ಪರಿಪಾಠವನ್ನು ಮುಂದುವರೆಸಿದ್ದಾರೆ. ಇದರಿಂದ ವಿನಾ ಕಾರಣ ವಾಹನ ಸವಾರರು ಪರದಾಡುವಂತಾಗಿದೆ ಎಂದು ಪ್ರೊ.ಶ್ರೀಹರಿ ಹೇಳುತ್ತಾರೆ.
ಸ್ಲಿಪ್ ಲೇನ್ ಎಂದರೇನು? :
ರಸ್ತೆ ವಿನ್ಯಾಸದಲ್ಲಿ, ಫಿಲ್ಟರ್ ಲೇನ್ ಎಂದೂ ಕರೆಯಲ್ಪಡುವ ಸ್ಲಿಪ್ ಲೇನ್, ಜಂಕ್ಷನ್‌ನಲ್ಲಿರುವ ರಸ್ತೆಯಾಗಿದ್ದು, ವಾಹನ ಚಾಲಕರು ವಾಸ್ತವವಾಗಿ ಛೇದಕವನ್ನು ಪ್ರವೇಶಿಸದೆ ರಸ್ತೆಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಕಾಮಗಾರಿ ನಂತರ ನಿರ್ವಹಣೆ ಅತಿಮುಖ್ಯ :
ಅಂಡರ್ ಪಾಸ್ ಗಳಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಬೇಕು. ಆದರೆ ಪದೇ ಪದೇ ಇದೇ ತಪ್ಪು ಮಾಡುತ್ತಾರೆ. ಲಿಂಗಾರಾಜಪುರ ಮೇಲ್ಸೇತುವೆ ಅಕ್ಕಪಕ್ಕ ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ. ಇಲ್ಲಿಯ ಸರ್ವೀಸ್ ರಸ್ತೆ ಇದ್ದೂ ಇಲ್ಲವಾಗಿದೆ. ಹೆಬ್ಬಾಳದಿಂದ ದೇವನಹಳ್ಳಿ ಕಡೆ ಸಾಗುವ ಹೊಸ ಅಂತರಾಷ್ಟ್ರೀಯ ವಿಮನ ನಿಲ್ದಾಣ ತಲುಪುವ ಕಡೆ ಮೇಲ್ಸೇತುವೆ ಮೇಲೆ ಹಾಗೂ ಸ್ಲಿಪ್ ರೋಡ್ ನಲ್ಲಿ ಒಂದು ಮಾರ್ಗದಲ್ಲಿ ತಲಾ ಮೂರು ಮೂರು ಲೇನ್ ರಸ್ತೆ ನಿರ್ಮಿಸಲಾಗಿದೆ. ಸ್ಲಿಪ್ ರಸ್ತೆ ಈ ರೀತಿಯಿರಬೇಕು. ಪ್ರತಿಯೊಂದು ಗ್ರೇಡ್ ಸಪರೇಟರ್ ನಲ್ಲಿ ಸೂಕ್ತ ರೀತಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಿ ಅದನ್ನು ಸೂಕ್ತ ರೀತಿ ನಿರ್ವಹಣೆ ಮಾಡಬೇಕು. ಆದರೆ ಬಿಬಿಎಂಪಿ ನಿರ್ಮಿಸುವ ಮೇಲ್ಸೇತುವೆ, ಕೆಳಸೇತುವೆಗಳಲ್ಲಿ ಎಷ್ಟೋ ಸಂದರ್ಭದಲ್ಲಿ ಬೀದಿ ದೀಪಗಳಿರುತ್ತದೆ, ಆದರೆ ಅವು ಕಾರ್ಯನಿರ್ವಹಿಸುವುದಿಲ್ಲ.
ಪೊಲೀಸರು ಅಪರಾಧ ಆದ ನಂತರ ಬರುತ್ತಾರೆ ಅನ್ನೋ ಮಾತು ಸಾಮಾನ್ಯ. ಆದರೆ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ನೋಡುವುದಾದರೆ, ಇಲ್ಲಿ ಯಾರಾದರೂ ಸತ್ತ ನಂತರ ಬಿಬಿಎಂಪಿ ಎಂಜಿನಿಯರ್ ಗಳು ಅಂಡರ್ ಪಾಸ್ ಅಥವಾ ಮೇಲ್ಸೇತುವೆ ಸರಿಪಡಿಸೋದು ಎಷ್ಟು ಸರಿ? ಅಭಿವೃದ್ಧಿ ಕಾಮಗಾರಿಗಳು ಮಾಡಿದ ಮೇಲೆ ನಿರ್ವಹಣೆಯೂ ಅದೇ ರೀತಿ ಮಾಡಬೇಕು. ನಗರದಲ್ಲಿನ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರಂತರವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ ಎಂದು ಸಂಚಾರ ತಜ್ಞರಾಗಿರುವ ಪ್ರೊ.ಎಂ.ಎನ್.ಶ್ರೀಹರಿ ಸರ್ಕಾರ ಮತ್ತು ಬಿಬಿಎಂಪಿ ಆಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅನುಪಯುಕ್ತವಾಗಿದೆ ನಗರದ ಪಾದಚಾರಿ ಸುರಂಗ ಮಾರ್ಗಗಳು :
ನಗರದ ಹಲವು ಕಡೆಗಳಲ್ಲಿ ಪಾದಚಾರಿ ಸುರಂಗ ಮಾರ್ಗ ಕಟ್ಟದಂತೆ ದಶಕಗಳ ಹಿಂದೆಯೇ ತಿಳಿಸಲಾಗಿತ್ತು. ಇದರಿಂದ ನಾಗರೀಕರಿಗೆ ತೊಂದರೆಯಾಗಿದೆ. ಈ ಸ್ಥಳಗಳು ಅಕ್ರಮ ನಡೆಯುವ ತಾಣವಾಗಿದೆ. ಆಗ ನಗರದಲ್ಲಿ ಪಾದಚಾರಿ ಸುರಂಗ ಮಾರ್ಗ ನಿರ್ಮಾಣ ಮಾಡುವುದಕ್ಕಾಗಿಯೇ ಸರಿ ಸುಮಾರು 300 ರಿಂದ 400 ಕೋಟಿ ರೂ. ವೆಚ್ಚ ಮಾಡಿದ್ದು, ಈಗ ವ್ಯರ್ಥವಾಗುವಂತಾಗಿದೆ. ನಗರದಲ್ಲಿನ ಹಲವು ಕಡೆಗಳ ಪಾದಚಾರಿ ಸುರಂಗ ಮಾರ್ಗಗಳು ಮುಚ್ಚಿಹೋಗಿವೆ. ಹೀಗೆ ಮುಚ್ಚಿರುವ ಹಲವು ಪಾದಚಾರಿ ಸುರಂಗ ಮಾರ್ಗದ ಒಳಗೆ ಮಳೆಯ ನೀರು ಸೇರ್ಪಡೆಗೊಂಡು ಆ ಸ್ಥಳವು ಈಗ ಗೊಬ್ಬು ನಾರುತ್ತಿದೆ.
ಕಾಲಮಿತಿಯಲ್ಲಿ ಹಣ ಬಿಡುಗಡೆ – ಕಾಮಗಾರಿ ಪೂರ್ಣಗೊಳಿಸುವುದು ಅವಶ್ಯಕ :
ಬಜೆಟ್ ನಲ್ಲಿ ಕಾಮಗಾರಿಗಳನ್ನು ಘೋಷಣೆ ಮಾಡುವಾಗ ಅದಕ್ಕೆ ಸೂಕ್ತ ರೀತಿ ಹಣ ಮೀಸಲಿಡಬೇಕು. ಅದನ್ನು ಕಾಲಮಿತಿಯಲ್ಲಿ ಸಂಬಂಧಿಕ ಕೆಲಸಗಳಿಗೆ ಬಿಡುಗಡೆ ಮಾಡಬೇಕು. ಗ್ರೇಡ್ ಸಪರೇಟರ್ ಗಳು ಕಾಮಗಾರಿ ಆರಂಭಿಸಿ ಸೂಕ್ತ ಕಾಲಾವಧಿಯಲ್ಲಿ ಮುಗಿಸದಿದ್ದಲ್ಲಿ ಹಣದುಬ್ಬರ ಜಾಸ್ತಿಯಾಗಿ ಕರ್ಚು ವೆಚ್ಚ ಜಾಸ್ತಿಯಾಗಿ ಕಾಂಟ್ರಾಕ್ಟರ್ ಓಡಿ ಹೋಗುತ್ತಾನೆ ಅಥವಾ ಕಳಪೆ ಕಾಮಗಾರಿ ಮಾಡಬೇಕಾಗುತ್ತದೆ. ಇದರ ದುಷ್ಪರಿಣಾಮ ಕಳಪೆ ಕಾಮಗಾರಿ, ತೆರಿಗೆದಾರರ ಹಣವೂ ವ್ಯರ್ಥವಾಗುತ್ತದೆ. ಕಾಮಗಾರಿ ವಿಳಂಬದಿಂದ ಕೋಟ್ಯಾಂತರ ರೂಪಾಯಿ ದೇಶದ ಸಂಪನ್ಮೂಲ ನಷ್ಟವಾಗುತ್ತದೆ ಹಾಗೂ ಉತ್ಪಾದನಾ ನಷ್ಟ ಆಗುತ್ತದೆ. ಅಲ್ಲದೆ ಸಂಚಾರ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತದೆ. ವಾಹನ ಸಂಚಾರ ಸುಗಮವಾಗಿ ಸಾಗದಿದ್ದಾಗ ಗಾಡಿಗಳ ಹೊಗೆ ಹೆಚ್ಚಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ.
ಅನವಶ್ಯಕ, ಅವೈಜ್ಞಾನಿಕವಾಗಿ ಅಥವಾ ಕಾಂಟ್ರಾಕ್ಟರ್ ಗಳು, ಜನಪ್ರತಿನಿಧಿಗಳ ಕಮಿಷನ್ ಹಣಕ್ಕಾಗಿ ಫ್ಲೈಓವರ್, ಅಂಡರ್ ಪಾಸ್, ಗ್ರೇಡ್ ಸಪರೇಟರ್ ಗಳನ್ನು ನಿರ್ಮಿಸುವುದಕ್ಕೆ ಇತಿಶ್ರೀ ಹಾಕಬೇಕಿದೆ. ಈಗಾಗಲೇ ನಡೆಯುತ್ತಿರುವ ಇಂತಹ ಕಾಮಗಾರಿಗಳಿಗೆ ಸುರಿದಿರುವ ಹಣಕ್ಕೆ ಹೊಣೆಗಾರರು ಯಾರು? ತೆರಿಗೆದಾರರು ಕಟ್ಟಿದ ಹಣಕ್ಕೆ ಬೆಲೆಯಿಲ್ಲವಾ?
ನಗರದ ಹಲವು ಕಡೆಗಳಲ್ಲಿ ನಡೆಯುತ್ತಿರುವ ಫ್ಲೈಓವರ್, ಅಂಡರ್ ಪಾಸ್ ಹಾಗೂ ಗ್ರೇಡ್ ಸಪರೇಟರ್ ಗಳ ವಿವರ ಈ ಕೆಳಕಂಡಂತಿದೆ :