ಬೆಂಗಳೂರು, ಜೂ.3 www.bengaluruwire.com : ಸಮಾಜದಲ್ಲಿ ಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಬೆಳೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನೇತೃತ್ವದ ಪ್ರಕಾಶಕರ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕನ್ನಡದ ಪ್ರಕಾಶಕರು ಹಾಗೂ ಬರಹಗಾರರ ಸ್ಥಿತಿ ಕಷ್ಟಕರವಾಗಿದ್ದು, ಜ್ಞಾನಭಾಗ್ಯವನ್ನು ನೀಡಬೇಕೆಂದು ನಿಯೋಗ ಕೋರಿತು. ಬಿಬಿಎಂಪಿ ವತಿಯಿಂದ 600 ಕೋಟಿ ರೂ.ಗಳು ಸೆಸ್ ಬಾಕಿ ಇದೆ. ಗ್ರಂಥಾಲಯಗಳ ಶೇ.6 ರಷ್ಟು ಸೆಸ್ ಮೊತ್ತವನ್ನು ಸಂಗ್ರಹ ಮಾಡುತ್ತಿದ್ದು, ಅದನ್ನು ಗ್ರಂಥಾಲಯ ಲೆಕ್ಕಶೀರ್ಷಿಕೆಗೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳು ಮಂಡಿಸಲು ಉದ್ದೇಶಿಸಿರುವ ಬಜೆಟ್ ನಲ್ಲಿ 25 ಕೋಟಿ ರೂಗಳನ್ನು ಒದಗಿಸುವಂತೆ ನಿಯೋಗ ಮನವಿ ಮಾಡಿತು. ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಕಾರ್ಯದರ್ಶಿ ಆರ್ ದೊಡ್ಡೇಗೌಡ ಅವರು ಮಾತನಾಡಿ ಇದು ಅನುಷ್ಟಾನಗೊಂಡಲ್ಲಿ ಸರಕಾರ ಒದಗಿಸಿರುವ ಅನೇಕ ಭಾಗ್ಯಗಳ ಜೊತೆಗೆ ‘ಜ್ಞಾನ ಭಾಗ್ಯ’ವನ್ನೂ ಒದಗಿಸಿದಂತಾಗುತ್ತದೆ ಎಂದು ಗಮನ ಸೆಳೆದರು.
ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಕಡೆಗಣಿಸಲಾಗಿದ್ದು ಇದರಿಂದ ರಾಜ್ಯದ ಓದುಗರು ಜ್ಞಾನ ವಂಚಿತರಾಗುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಸ್ಥಗಿತವಾಗಿರುವ ಸಗಟು ಖರೀದಿ ಯೋಜನೆಗೆ ಚಾಲನೆ ನೀಡಬೇಕು ಹಾಗೂ 500 ಪ್ರತಿಗಳನ್ನು ಕೊಳ್ಳಬೇಕು ಎಂದು ನಿಯೋಗವು ಮನವಿ ಮಾಡಿದೆ.
ನಿಯೋಗದಲ್ಲಿ ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್ ದೊಡ್ಡೇಗೌಡ, ಹಿರಿಯ ಪ್ರಕಾಶಕರಾದ ನಿತಿನ್ ಶಾ, ಹೆಚ್ ಕೆ ಲಕ್ಷ್ಮೀನಾರಾಯಣ ಅಡಿಗ, ಜಿ ಎನ್ ಮೋಹನ್, ಮಾನಸ, ಪದಾಧಿಕಾರಿಗಳಾದ ಬಿ ಕೆ ಸುರೇಶ್, ಚಂದ್ರಕೀರ್ತಿ ಬಿ ಎಂ, ಕೆ ಎಸ್ ಮುರಳಿ ಅವರು ಭಾಗವಹಿಸಿದ್ದರು.