ಬೆಂಗಳೂರು, ಮೇ.22 www.bengaluruwire.com : ನಗರದಲ್ಲಿ ಕಡಿಮೆ ಸಮಯದಲ್ಲಿ ಅತಿಹೆಚ್ಚು ಮಳೆ ಬೀಳುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂ. ಹಣ ಬಿಬಿಎಂಪಿಗೆ ಹರಿದು ಬಂದರೂ ನಗರದಲ್ಲಿ ರಾಜಕಾಲುವೆ ಹೂಳೆತ್ತುವಿಕೆ, ಕಾಲುವೆ ನಿರ್ಮಾಣ ಕಾಮಗಾರಿ, ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ರಸ್ತೆ ಬದಿಯ ಚರಂಡಿಗೆ ಸರಾಗವಾಗಿ ನೀರು ಹರಿದು ಹೋಗುವಿಕೆ ಕಾರ್ಯಗಳು ಈತನಕ ಸರಿಯಾಗಿ ಆಗಿಲ್ಲ.
ಇದರ ಪರಿಣಾಮದ ಒಂದು ಸ್ಯಾಂಪಲ್ ಅಂದರೆ ಭಾನುವಾರ ಸಂಜೆ 3 ರಿಂದ 4 ಗಂಟೆಯ ಮಧ್ಯೆ 45 ನಿಮಿಷ ಸುರಿದ ಮಳೆಯ ಪರಿಣಾಮವಾಗಿ ಕೆ.ಆರ್.ವೃತ್ತದ ಅಂಡರ್ ಪಾಸ್ ನಲ್ಲಿ ತುಂಬಿಕೊಂಡ ಮಳೆ ನೀರಿನಿಂದ ಯುವತಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಪ್ರವಾಹ ರೂಪದಲ್ಲಿ ಮಳೆಯಾದಾಗ ಪೂರ್ವ ಬೆಂಗಳೂರಿನ ಬಹುತೇಕ ಕಡೆ ನೀರು ತುಂಬಿದಾಗ ಆಗಿನ ಮುಖ್ಯಮಂತ್ರಿಗಳು, ಸಚಿವರ ಹಾಗೂ ಅಧಿಕಾರಿಗಳ ಟೀಮ್ ಸಮರೋಪಾದಿಯಲ್ಲಿ ರಾಜಕಾಲುವೆ ಹೂಳೆತ್ತುವಿಕೆ, ರಾಜಕಾಲುವೆ ಒತ್ತುವರಿ ತೆರವು, ಕಾಂಕ್ರೀಟ್ ಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಈತನಕ ಇವುಗಳ ಕಾರ್ಯಗಳಲ್ಲಿ ಪ್ರಗತಿಯಾಗಿಲ್ಲ.
ಕೆರೆಗಳಿಗೆ ತೂಬು ಅಳವಡಿಸುವ ಕಾರ್ಯ ಆರಂಭವಾಗಿಲ್ಲ :
ಇನ್ನು ಕೆರೆಗಳಿಗೆ ಅಮೃತ ನಗರೋತ್ಥಾನ ಯೋಜನೆಯಲ್ಲಿ 148 ಕೆರೆಗಳಿಗೆ ತೂಬು (ಸ್ಲೂಯಿಸ್ ಗೇಟ್) ಅಳವಡಿಸುವ ಯೋಜನೆಗೆ ರಾಜ್ಯ ಸರ್ಕಾರ ಕಳೆದ ನವೆಂಬರ್ ನಲ್ಲಿ ಅನುಮೋದನೆ ನೀಡಿದ್ದರೂ ಕಾಮಗಾರಿಗೆ ಅನುಮತಿ ಸಿಕ್ಕಿಲ್ಲ. ಕೇವಲ 108 ಕೆರೆಗಳಿಗೆ ತೂಬು ನಿರ್ಮಿಸಲು 36.85 ಕೋಟಿ ರೂ. ವೆಚ್ಚ ಮಾಡಲು ಸಮ್ಮತಿ ಸಿಕ್ಕಿದೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿದ್ದರೂ ಈತನಕ ಅದಕ್ಕೆ ಸಮ್ಮತಿ ಲಭಿಸಿಲ್ಲ. ಆದ್ದರಿಂದ ಈ ಸಲವೂ ನಗರದಲ್ಲಿನ ಕೆರೆಗಳಿಂದ ಹರಿಯುವ ನೀರಿನ ವೇಗವನ್ನು ನಿಯಂತ್ರಿಸಲು ಅಥವಾ ತಗ್ಗಿಸಲು ಸಾಧ್ಯವಿಲ್ಲ. ನಗರದಲ್ಲಿ ಕೇವಲ 10 ಕೆರೆಗಳಿಗೆ ಸ್ಲೂಯಿಸ್ ಗೇಟ್ ಅಳವಡಿಸುವ ಕಾರ್ಯ ಹಿಂದೆಯೇ ಆರಂಭವಾಗಿತ್ತು. ಅದು ಬಿಟ್ಟರೆ ಉಳಿದ ಕೆರೆಗಳಿಗೆ ತೂಬು ಅಳವಡಿಸುವ ಕೆಲಸಗಳಿಗೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಸಮರ್ಪಕವಾಗಿ ನಡೆಯದ ರಾಜಕಾಲುವೆ ಹೂಳೆತ್ತುವಿಕೆ :
ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ನಿರ್ವಹಣೆ ಗುತ್ತಿಗೆ ವಿಧಾನಸಭಾ ಕ್ಷೇತ್ರಾವಾರು 3 ವರ್ಷಗಳ ತನಕ ಪ್ರತಿವರ್ಷ 38.50 ಕೋಟಿ ರೂ. ಹಣವನ್ನು 581 ಕಿ.ಮೀ ಉದ್ದದ ರಾಜಕಾಲುವೆಗಳಲ್ಲಿ ಹಾಗೂ ತೃತೀಯ ವರ್ಗದ ಕಾಲುವೆಗಳಲ್ಲಿ ಮಳೆಗಾಲದ ಮೊದಲು ಬೆಳೆದ ಸಸ್ಯಗಳು, ಹೂಳು, ತೇಲುವ ಘನ ತ್ಯಾಜ್ಯವನ್ನು ತೆಗೆಯುವ ಕೆಲಸ ಸೂಕ್ತ ರೀತಿಯಲ್ಲಿ ನಡೆದಿಲ್ಲ. ಹೀಗಾಗಿ ಕೆಲವು ಕಡೆಗಳಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವು ಸರಾಗವಾಗಿ ಹೋಗುತ್ತಿಲ್ಲ.
ಪಾಲಿಕೆ ವ್ಯಾಪ್ತಿಯಲ್ಲಿ ಜನವರಿಗೆ ಬಳಿಕ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿಂತು ಹೋಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸುರಿದ ಭಾರೀ ಮಳೆಯ ಅವಾಂತರದ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮಳೆಯಿಂದ ಸೃಷ್ಟಿಯಾಗುವ ಅವಾಂತರಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ನಗರದ 30 ಕ್ಷೇತ್ರಗಳಲ್ಲಿ ರಾಜಕಾಲುವೆ ಹೂಳೆತ್ತುವಿಕೆ ಕಾರ್ಯ ಮೂರು ತಿಂಗಳ ಆವರ್ತದಂತೆ ಕಾರ್ಯ ನಡೆಯುತ್ತಿರುತ್ತದೆ. ಅದರಂತೆ ಮಾರ್ಚ್ ತಿಂಗಳಿನಲ್ಲಿ ಹೂಳೆತ್ತುವ ಕೆಲಸ ಮುಗಿದಿತ್ತು. ಮುಂದಿನ ತಿಂಗಳಿನ ಜೂನ್ ನಲ್ಲಿ ಪುನಃ ಕಾಲುವೆಯಲ್ಲಿನ ಹೂಳನ್ನು ತೆಗೆಯುವ ಕಾರ್ಯ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಇದೇ ತಿಂಗಳ ಒಳಗಾಗಿ ಹೂಳೆತ್ತುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಭಾನುವಾರ ಸಂಜೆ ಕೇವಲ 45 ನಿಮಿಷದಲ್ಲಿ ಕಡಿಮೆ ಅವಧಿಯಲ್ಲಿ 50 ಮಿ.ಮೀ ಮಳೆಯಾದ ಕಾರಣ ಅವಾಂತರ ಸೃಷ್ಟಿಯಾಗಿದೆ. ನಗರದ 18 ಅಂಡರ್ ಪಾಸ್ ಗಳ ಸರ್ವೆ ನಡೆಸಿ ಪರಿಸ್ಥಿತಿ ಮೌಲ್ಯಮಾಪನ ನಡೆಸಿ ವರದಿ ನೀಡುವಂತೆ ತಿಳಿಸಿದ್ದೇವೆ ” ಎಂದು ಹೇಳಿದ್ದಾರೆ.
ಪ್ರವಾಹದಿಂದ ಹಾನಿಗೊಳಗಾದ 85 ಸ್ಥಳಗಳು ಈವರೆಗೆ ಸರಿಯಾಗಿಲ್ಲ :
ನಗರದಲ್ಲಿ ಪ್ರವಾಹ ಪೀಡಿತವಾಗುವ ಒಟ್ಟು 198 ಸ್ಥಳಗಳಿವೆ. ಅವುಗಳ ಪೈಕಿ 55 ತೀವ್ರವಾಗಿ ಹಾನಿಗೊಳಗಾಗುವ ಮತ್ತು 143 ಮಧ್ಯಮವಾಗಿ ಹಾನಿಗೊಳಗಾಗುವ ಸ್ಥಳಗಳಿವೆ. ಆ ಪೈಕಿ 113 ಹಾನಿಗೊಳಗಾದ ಸ್ಥಳಗಳಲ್ಲಿ ಪಾಲಿಕೆ ಸೂಕ್ತ ಕ್ರಮ ಕೈಗೊಂಡಿದ್ದು, ಇನ್ನೂ ನಗರದ 85 ಸ್ಥಳಗಳಲ್ಲಿ ಜೋರು ಮಳೆ ಬಂದಾಗ ಪ್ರವಾಹ ಪೀಡಿತವಾಗುವ ಸಾಧ್ಯತೆಯ ಸ್ಥಳಗಳಿವೆ. ಅದರಲ್ಲೂ ನಗರದ 29 ಸ್ಥಳಗಳಲ್ಲಿ ತೀವ್ರವಾಗಿ ಪ್ರವಾಹ ಸಂಭವಿಸುವ ಜಾಗಗಳಿದ್ದರೆ, 56 ಸ್ಥಳಗಳಲ್ಲಿ ಮಧ್ಯಮ ರೀತಿಯಲ್ಲಿ ಪ್ರವಾಹ ಪೀಡಿತವಾಗುವಂತಹವು ಇವೆ. ಇವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಹೇಳಿದ್ದಾರೆ. ಪಾಲಿಕೆಯಲ್ಲಿ 2017 ಇಸವಿಯ ಮೊದಲು ಸಿಕ್ಕ ಅನುದಾನದಲ್ಲಿ 26 ಸ್ಥಳಗಳನ್ನು ನಿಭಾಯಿಸಿದ್ದರೆ, ಮುಖ್ಯಮಂತ್ರಿಗಳ ನಗರೋತ್ಥಾನ 1060 ಕೋಟಿ ರೂ. ಅನುದಾನದಲ್ಲಿ 45 ಸ್ಥಳಗಳನ್ನು, 1,500 ಕೋಟಿ ರೂ. ಅನುದಾನದಲ್ಲಿ 26 ಸ್ಥಳಗಳನ್ನು, 313 ಕೋಟಿ ರೂ. ಅನುದಾನದಲ್ಲಿ 16 ಸ್ಥಳಗಳಲ್ಲಿ ಪ್ರವಾಹ ತಡೆಗಟ್ಟಲು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಉನ್ನತ ಮೂಲಗಳು ತಿಳಿಸಿವೆ.
ನಗರದ ಈ ಕೆಳಕಂಡ ವಲಯಗಳಲ್ಲಿ ಪ್ರವಾಹ ಪೀಡಿತ ಸ್ಥಳಗಳಿವೆ :
ವಲಯ | ತೀವ್ರವಾಗಿ ಹಾನಿಗೊಳಗಾದ ಸ್ಥಳಗಳು | ಮಧ್ಯಮವಾಗಿ ಹಾನಿಗೊಳಗಾದ ಸ್ಥಳಗಳು | ಇನ್ನೂ ನಿಭಾಯಿಸಬೇಕಾದ ತೀವ್ರವಾಗಿ ಹಾನಿಗೊಳಗಾದ ಸ್ಥಳಗಳು | ಇನ್ನೂ ನಿಭಾಯಿಸಬೇಕಾದ ಮಧ್ಯಮ ಪ್ರಮಾಣದಲ್ಲಿ ಹಾನಿಗೊಳಗಾದ ಸ್ಥಳಗಳು |
ಪೂರ್ವ | 5 | 15 | 3 | 11 |
ಪಶ್ಚಿಮ | 5 | 33 | 2 | 2 |
ದಕ್ಷಿಣ | 0 | 6 | 0 | 2 |
ಕೋರಮಂಗಲ ಕಣಿವೆ | 5 | 0 | 3 | 0 |
ಯಲಹಂಕ | 8 | 3 | 8 | 0 |
ಮಹದೇವಪುರ ವಲಯ | 11 | 47 | 3 | 15 |
ಬೊಮ್ಮನಹಳ್ಳಿ ವಲಯ | 17 | 11 | 7 | 6 |
ಆರ್.ಆರ್.ನಗರ | 4 | 19 | 3 | 16 |
ದಾಸರಹಳ್ಳಿ | 0 | 9 | 0 | 5 |
ಒಟ್ಟು | 55 | 143 | 29 | 56 |
ಇನ್ನು ನಗರದಲ್ಲಿ ರಾಜಕಾಲುವೆ ಒತ್ತುವರಿ ಪ್ರಕರಣದ ವಿಷಯಕ್ಕೆ ಬರುವುದಾದರೆ ಈವರೆಗೆ 2,951 ಒತ್ತುವರಿ ಪ್ರಕರಣಗಳನ್ನು ಗುರ್ತಿಸಲಾಗಿದೆ. ಆದರೆ ಆ ಪೈಕಿ 21.01.2023ರ ತನಕ ನಗರದಲ್ಲಿ 2,344 ಒತ್ತುವರಿ ತೆರವು ಮಾಡಲಾಗಿದ್ದು, ಇನ್ನು 607 ಕಡೆಗಳಲ್ಲಿ ಒತ್ತುವರಿ ತೆರವು ಮಾಡಬೇಕಿದೆ. ಆ ಪೈಕಿ 122 ಪ್ರಕರಣಗಳು ನ್ಯಾಯಾಲಯದಲ್ಲಿರುವ ಕಾರಣ ಒತ್ತುವರಿ ತೆರವು ಕಾರ್ಯ ಸದ್ಯಕ್ಕೆ ಬಾಕಿಯಿದೆ.
ವಲಯವಾರು ಒಟ್ಟಾರೆ ಒತ್ತುವರಿ ಗುರ್ತಿಸಿರುವುದು ಹಾಗೂ ತೆರವಿಗೆ ಬಾಕಿಯಿರುವ ಪ್ರಕರಣಗಳ ವಲಯವಾರು ಮಾಹಿತಿ ಈ ಕೆಳಕಂಡಂತಿದೆ :
ಬಿಬಿಎಂಪಿ ವಲಯಗಳು | ವಲಯವಾರು ಒತ್ತುವರಿ ಗುರ್ತಿಸಿರುವುದು | 21.01.2023ರ ತನಕ ಒತ್ತುವರಿ ತೆರವು ಬಾಕಿಯಿರುವುದು |
ಪೂರ್ವ ವಲಯ | 237 | 88 |
ಪಶ್ಚಿಮ | 52 | 4 |
ದಕ್ಷಿಣ | 23 | 0 |
ಕೋರಮಂಗಲ ಕಣಿವೆ | 10 | 3 |
ಯಲಹಂಕ | 588 | 79 |
ಮಹದೇವಪುರ | 1446 | 243 |
ಬೊಮ್ಮನಹಳ್ಳಿ | 344 | 30 |
ಆರ್.ಆರ್.ನಗರ | 75 | 36 |
ದಾಸರಹಳ್ಳಿ | 176 | 124 |
ಒಟ್ಟಾರೆ | 2,951 | 607 |
ಬೆಂಗಳೂರು ಪೂರ್ವ ಹಾಗೂ ಮಹದೇವಪುರ ವಲಯ ಎಷ್ಟು ಸೇಫ್? :
ನಗರದಲ್ಲಿ ಪ್ರವಾಹ ಪೀಡಿತವಾಗುವ ಸ್ಥಳಗಳ ವಲಯವಾರು ಅಂಕಿ ಅಂಶ ಹಾಗೂ ರಾಜಕಾಲುವೆ ಒತ್ತುವರಿ ತೆರವು ಪ್ರಕರಣಗಳನ್ನು ವಿಶ್ಲೇಷಣೆಗೊಳಪಡಿಸಿದಾಗ, ಬೆಂಗಳೂರು ಪೂರ್ವ ವಲಯ ಹಾಗೂ ಮಹದೇವಪುರ ವಲಯ ಉಳಿದ ವಲಯಗಳಿಗಿಂತ ಮಳೆ ನೀರಿನ ಹಾನಿಯಾಗುವ ಸಂಭವವನ್ನು ಎತ್ತಿ ತೋರಿಸುತ್ತಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 3 ತೀವ್ರವಾಗಿ ಹಾಗೂ 11 ಕಡೆಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಪ್ರವಾಹ ಪೀಡಿತ ಸ್ಥಳವಿರುವುದನ್ನು ಗಮನಿಸಬಹುದು. ಅದೇ ವಲಯದಲ್ಲಿ 88 ರಾಜಕಾಲುವೆ ಒತ್ತುವರಿ ತೆರವು ಬಾಕಿಯಿದೆ. ಇನ್ನು ಮಹದೇವಪುರ ವಲಯದಲ್ಲಿ 3 ತೀವ್ರವಾಗಿ ಹಾಗೂ 15 ಮಧ್ಯ ಪ್ರಮಾಣದಲ್ಲಿ ಹಾನಿಗೊಳಗಾದ ಸ್ಥಳಗಳಲ್ಲಿ, ಇನ್ನೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಬಾಕಿಯಿದೆ.
ಅದೇ ರೀತಿ ಈ ವಲಯದಲ್ಲಿ ನಗರದಲ್ಲೇ 1446 ಅತಿಹೆಚ್ಚು ಒತ್ತುವರಿ ಪ್ರಕರಣಗಳನ್ನು ಈ ಹಿಂದೆ ಗುರ್ತಿಸಲಾಗಿದ್ದು, ಆ ಪೈಕಿ ಸದ್ಯ ಇನ್ನು 243 ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡದೆ ಬಾಕಿಯಿರುವುದು ಕಂಡು ಬಂದಿದೆ. ಮತ್ತೂ ಒಂದು ವಿಚಾರ ಮಹದೇವಪುರ ವಲಯದಲ್ಲಿ 199.09 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗವಿದೆ. ಆ ಪೈಕಿ ಈತನಕ ಬಿಬಿಎಂಪಿಯು ವಿವಿಧ ಅನುದಾನಗಳಲ್ಲಿ 64.03 ಉದ್ದದ ಕಾಲುವೆಗಳಲ್ಲಿ ಕಾಂಕ್ರೀಟ್ ತಡೆಗೋಡೆ ಸೇರಿದಂತೆ ಅಗತ್ಯ ಕಾಮಗಾರಿ ನಿರ್ವಹಿಸಿದೆ. ಆದರೆ 52.54 ಕಿ.ಮೀ ಉದ್ದದ ರಾಜಕಾಲುವೆಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದೆ. ಉಳಿದಂತೆ 59.52 ಕಿ.ಮೀ ಕಚ್ಚಾ ರಾಜಕಾಲುವೆಯು ಈ ವಲಯದಲ್ಲಿದೆ. ಒಟ್ಟಾರೆ ಇದನ್ನೆಲ್ಲಾ ಗಮನಿಸಿ ಹೇಳುವುದಾದರೆ ಕಳೆದ ವರ್ಷದಂತೆ ಈ ವರ್ಷವೂ ಭಾರೀ ವರ್ಷಧಾರೆಯಾದರೆ ಬೆಂಗಳೂರು ಪೂರ್ವ ಮತ್ತು ಮಹದೇವಪುರ ವಲಯದಲ್ಲಿ ಮಳೆಯಿಂದಾಗುವ ಅನಾಚಾರ, ಅವಾಂತರ ಹಾಗೂ ಸಮಸ್ಯೆಗಳು ಸೃಷ್ಟಿಯಾಗುವುದನ್ನು ತಳ್ಳಿಹಾಕುವಂತಿಲ್ಲ.
ಮಳೆಗಾಲದಲ್ಲೂ ನಡೆಯುತ್ತಾ 194.57 ಕಿ.ಮೀ ಉದ್ದ ರಾಜಕಾಲುವೆ ಕಾಮಗಾರಿ? :
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 859.9 ಕಿ.ಮೀ ಉದ್ದದ ರಾಜಕಾಲುವೆಯಿದ್ದು, ಆ ಪೈಕಿ 508.01 ಕಿ.ಮೀ ಉದ್ದದ ರಾಜಕಾಲುವೆಗಳಲ್ಲಿ ಕಾಮಗಾರಿ ಪೂರ್ಣವಾಗಿದೆ. ಆದರೆ ಈಗಲೂ 194.57 ಕಿ.ಮೀ ಉದ್ದದ ಪ್ರೈಮರಿ, ಸೆಕೆಂಡರಿ ಡ್ರೈನ್ ನಲ್ಲಿ ಕಾಮಗಾರಿಗಳು ವಿವಿಧ ಹಂತದಲ್ಲಿ ನಡೆಯುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿಷಯ ಹೀಗಿರುವಾಗ ಮಳೆಗಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಮಗಾರಿ ನಡೆಯುತ್ತಿದ್ದ ಮಹಾಲಕ್ಷ್ಮಿ ಲೇಔಟ್ ಪ್ರದೇಶದಲ್ಲಿ ರಾಜಕಾಲುವೆ ಕಾಮಗಾರಿ ನಡೆಸುತ್ತಿದ್ದ ಕಾಂಕ್ರಿಟ್ ತಡೆಗೋಡೆ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿದೆ. ಇದೇ ರೀತಿಯ ಪ್ರಕರಣಗಳು ಬೇರೆಡೆ ಆದರೂ ಆಶ್ಚರ್ಯವಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಯುದ್ಧಕಾಲೇ ಶಸ್ತ್ರಭ್ಯಾಸ ಎಂದಿಗೂ ಒಳ್ಳೆಯದಲ್ಲ.
ನಗರದ ಕೆರೆಗಳ ನಡುವೆ ಅಂತರ್ ಸಂಪರ್ಕ – ಹೂಳು ತೆಗೆದರೆ ಸಮಸ್ಯೆ ಇತ್ಯರ್ಥ :
“ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು 859 ಕಿ.ಮೀ ಇದ್ದ ರಾಜಕಾಲುವೆಗಳ ಮರು ವಿನ್ಯಾಸದ ಹೆಸರಿನಲ್ಲಿ ಅವೈಜ್ಞಾನಿಕವಾಗಿ ರಾಜಕಾಲುವೆಗಳನ್ನು ಸಂಪೂರ್ಣ ಕಾಂಕ್ರೀಟ್ ಮಯ ಮಾಡಿರುವುದರಿಂದ ನೈಸರ್ಗಿಕವಾಗಿ ಕಾಲುವೆಯಲ್ಲಿ ನೀರು ಇಂಗುವಿಕೆ ಕಡಿಮೆಯಾಗಿ, ನೀರಿನ ರಭಸ ಹೆಚ್ಚಾಗಿ ಸಮಸ್ಯೆಗಳು ಹೆಚ್ಚಾಗುತ್ತಿದೆ. ರಾಜಧಾನಿಯಲ್ಲಿನ ಬಹುತೇಕ ರಾಜಕಾಲುವೆಗಳನ್ನು ಭೂಮಾಫಿಯಾಗೆ ಅನುಕೂಲ ಮಾಡಿಕೊಡಲು ಪಾಲಿಕೆ ಅಧಿಕಾರಿಗಳು ರಾಜಕಾಲುವೆ ಅಗಲವನ್ನೆ ಕಡಿಮೆ ಮಾಡುತ್ತಿದ್ದಾರೆ. ಉದಾಹರಣೆಗೆ ಬೆಳ್ಳಂದೂರು- ಅಗರ ಮಧ್ಯೆ ಮೊದಲು 80 ಮೀಟರ್ ಅಗಲವಿದ್ದ ಕಾಲುವೆಯನ್ನು 20 ಮೀಟರ್ ಗೆ ಇಳಿಸಿದ್ದಾರೆ. ಇದು ಕೂಡ ಪ್ರವಾಹ ಸೃಷ್ಟಿಗೆ ಪ್ರಮುಖ ಕಾರಣ. ನಗರದಲ್ಲಿರುವ ಕೆರೆಗಳ ನಡುವೆ ಕಡಿದು ಹೋದ ಸಂಪರ್ಕಗಳನ್ನು ಮರು ಸ್ಥಾಪಿಸಿ, ರಾಜಕಾಲುವೆ ಒತ್ತುವರಿ ಸರಿಪಡಿಸಿ, ಹೂಳುಗಳನ್ನು ತೆಗೆದರೆ ನಗರದಲ್ಲಿ ಮಳೆಗಾಲದಲ್ಲಿ ಕಂಡು ಬರುವ ಪ್ರವಾಹ ಪರಿಸ್ಥಿತಿಯನ್ನು ಶಾಶ್ವತವಾಗಿ ಪರಿಹರಿಸಬಹುದು. ಅಧಿಕಾರಿಗಳು ಅಧಿಕಾರದಲ್ಲಿರುವ ಜನಪ್ರತಿನಿಧಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ.”
– ಪ್ರೊ.ಟಿ.ವಿ.ರಾಮಚಂದ್ರ, ಹಿರಿಯ ಪರಿಸರ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಐಐಎಸ್ ಸಿ ಪರಿಸರ ವಿಜ್ಞಾನ ಕೇಂದ್ರ
- “ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.