ಬೆಂಗಳೂರು, ಮೇ.19 www.bengaluruwire.com : ದೇಶಾದ್ಯಂತ ನಕಲಿ ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಹಾಗೂ ನಕಲಿ ಸರಕು ಪಟ್ಟಿ (Invoices) ನೀಡುತ್ತಿರುವವರ ವಿರುದ್ಧ ಮೇ.16 ರಿಂದ ಜುಲೈ 15ರ ತನಕ ಎರಡು ತಿಂಗಳುಗಳ ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ (Central Board Of Indirect Taxes –CBIC) ವಿಶೇಷ ಕಾರ್ಯಾಚರಣೆ ಕಾರ್ಯಚರಣೆಯನ್ನು ಹಮ್ಮಿಕೊಂಡಿದೆ.
ದೇಶಾದ್ಯಂತ 1ನೇ ಜುಲೈ 2017ರಿಂದ ಜಿಎಸ್ ಟಿ ಜಾರಿಗೆ ಬಂದಾಗಿನಿಂದ 1.39 ಕೋಟಿ ವ್ಯಾಪಾರ ನಡೆಸಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ 2022-23ನೇ ವರ್ಷದಲ್ಲಿ ಜಿಎಸ್ ಟಿ ತೆರಿಗೆ ತಪ್ಪಿಸಿಕೊಳ್ಳುವಿಕೆಯ ಪ್ರಮಾಣ 1 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಾಗಿರುವ ಕಾರಣದಿಂದ ಜಿಎಸ್ ಟಿ ಕೌನ್ಸಿಲ್ ಸಭೆಯು ಈ ಸಮಸ್ಯೆಯನ್ನು ಚರ್ಚಿಸಿ ನಕಲಿ ಜಿಎಸ್ ಟಿ ನೋಂದಣಿ ಹಾಗೂ ಕಾನೂನು ಬಾಹಿರ ಇನ್ ವಾಯ್ಸ್ ಹಂಚಿಕೆಯನ್ನು ತಡೆಗಟ್ಟಲು ಎರಡು ತಿಂಗಳ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.
ಜಿಎಸ್ ಟಿ ನೀತಿ ನಿರೂಪಣಾ ವಿಭಾಗವು ಮೇ ತಿಂಗಳ ಆರಂಭದಲ್ಲಿ ಕೇಂದ್ರೀಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರಿಗೆ ಪತ್ರ ಬರೆದು, ನಕಲಿ ಜಿಎಸ್ ಟಿ ನೋಂದಣಿ ಬಳಸಿಕೊಂಡು ಸರಕು ಮತ್ತು ಸೇವೆಗಳನ್ನು ನೀಡದೆ ಅನಧಿಕೃತ ಇನ್ ವಾಯ್ಸ್ ಮೂಲಕ ಇನ್ ಪುಟ್ ಕ್ರೆಡಿಟ್ (ITC) ಅನ್ನು ಬೇರೊಂದು ವ್ಯಕ್ತಿಗೆ ವರ್ಗಾಯಿಸಿ ಲಾಭ ಮಾಡಿಕೊಡಲಾಗುತ್ತಿರುವುದನ್ನು ಗಮನಕ್ಕೆ ತಂದಿತ್ತು. ಇದೊಂದು ಗಂಭೀರ ಪ್ರಕರಣವಾಗಿದ್ದು, ಜಿಎಸ್ ಟಿಯ ಐಟಿಸಿ ದುರ್ಬಳಕೆ, ನಕಲಿ ಜಿಎಸ್ ಟಿ ಹಾಗೂ ಬೋಗಸ್ ಇನ್ ವಾಯ್ಸ್ ಗಳ ನೀಡಿಕೆಯಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುವುದನ್ನು ಗಮನಕ್ಕೆ ತಂದಿತ್ತು. ಈ ಹಿನ್ನಲೆಯಲ್ಲಿ ಜಿಎಸ್ ಟಿ ದುರ್ಬಳಕೆ ತಡೆ ವಿರುದ್ಧ ಎರಡು ತಿಂಗಳ ಕಾಲ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ದೇಶದಲ್ಲಿ ನಕಲಿ ಜಿಎಸ್ ಟಿ ಬಳಕೆಯನ್ನು ತಡೆಗಟ್ಟಲು ಸರ್ಕಾರ ದತ್ತಾಂಶ ವಿಶ್ಲೇಷಣೆ ಹಾಗೂ ಕೃತಕ ಬುದ್ದಿಮತ್ತೆ (Artificial Intelligence- AI) ವ್ಯವಸ್ಥೆಯ ಮೂಲಕ ಅಪಾಯಕಾರಿ ತೆರಿಗೆದಾರರ ಮಾಹಿತಿಯನ್ನು ಕಾನೂನು ಪಾಲನೆ ಮಾಡುವ ಇಲಾಖೆಗಳಿಗೆ ಮಾಹಿತಿ ರವಾನಿಸಿ ತೆರಿಗೆ ತಪ್ಪಿಸುವಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದೆ. ಇದಲ್ಲದೆ ಹೊಸದಾಗಿ ಜಿಎಸ್ ಟಿ ನೋಂದಣಿ ಮಾಡುವವರಿಗೆ ಆಧಾರ್ ಆಧಾರಿತ ಖಚಿತಪಡಿಸುವಿಕೆಯನ್ನು ಖಡ್ಡಾಯಗೊಳಿಸಲಾಗಿದೆ. ಜೊತೆಗೆ ಸೂಕ್ತ ಕಾಲಾವಧಿಯಲ್ಲಿ ಜಿಎಸ್ ಟಿ ವಿವರ ಸಲ್ಲಿಕೆ ಮಾಡದ ಜಿಎಸ್ ಟಿ ನೋಂದಣಿಯನ್ನು ಅಮಾನತು ಮಾಡುವ ಕಾರ್ಯವನ್ನು ಮಾಡುತ್ತಿದೆ. ಈ ಪ್ರಕ್ರಿಯೆಗಳು ನಕಲಿ ಜಿಎಸ್ ಟಿ ನೋಂದಣಿ ತಪ್ಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.
2020-21ರಲ್ಲಿ 12,596 ಪ್ರಕರಣ, 2021-22ರಲ್ಲಿ 12,574 ಹಾಗೂ 2022-23ನೇ ಸಾಲಿನಲ್ಲಿ ಒಟ್ಟು 14,000 ಜಿಎಸ್ ಟಿ ತೆರಿಗೆ ತಪ್ಪಿಸುವಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2022-23ನೇ ಸಾಲಿನಲ್ಲಿ ತೆರಿಗೆ ತಪ್ಪಿಸುವಿಕೆಯನ್ನು ಪತ್ತೆಹಚ್ಚುವಿಕೆಯ ಪ್ರಮಾಣ ದುಪ್ಪಟ್ಟು ಆಗಿ 1.01 ಲಕ್ಷ ಕೋಟಿ ರೂ.ನಷ್ಟು ಇರುವುದನ್ನು ಕಂಡು ಹಿಡಿದಿದೆ. ಈ ಪೈಕಿ 2022-23ನೇ ಸಾಲಿನಲ್ಲಿ ಜಿಎಸ್ ಟಿ ಗುಪ್ತಚರ ಮಹಾ ನಿರ್ದೇಶನಾಲಯದ (DGGI) ಅಧಿಕಾರಿಗಳು 21,000 ಕೋಟಿ ರೂ. ತೆರಿಗೆ ಹಣವನ್ನು ಮರಳಿ ಪಡೆದಿದೆ.
“ಜಿಎಸ್ ಟಿ ನೋಂದಣಿ ಕುರಿತು ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ನಡೆಸುವುದು ಕೇವಲ ಪರಿಶೀಲನೆ ಪ್ರಕ್ರಿಯೆಯಾಗಿದೆ ಮತ್ತು ತಪಾಸಣೆ ಪ್ರಕ್ರಿಯೆಯಲ್ಲ. ಆದ್ದರಿಂದ ನಿಜವಾದ GSTN ನೋಂದಣಿ ಮಾಡಿದವರು ಭಯಪಡುವ ಅಗತ್ಯವಿಲ್ಲ. ಇದು ನಕಲಿ ಜಿಎಸ್ ಟಿ ನೋಂದಣಿಯನ್ನು ಗುರುತಿಸಲು ಮಾತ್ರ. ನಿಯಮಿತ ವ್ಯವಹಾರವನ್ನು ಮಾಡದೆ ಐಟಿಸಿ ಪಾಸ್ ಆಗುತ್ತಿದ್ದು, ಈ ನಕಲಿ ಇನ್ ಪುಟ್ ಕ್ರೆಡಿಟ್ ನಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ. ಜಿಎಸ್ ಟಿ ಅಧಿಕಾರಿಯು ತಮ್ಮ ವ್ಯಾಪಾರ ಆವರಣಕ್ಕೆ ಅಥವಾ ತೆರಿಗೆದಾರರು ಜಿಎಸ್ ಟಿ ನೋಂದಣಿಯನ್ನು ತೆಗೆದುಕೊಂಡಿರುವ ವಿಳಾಸಕ್ಕೆ ಭೇಟಿ ನೀಡಿದರೆ ಈ ವಿಶೇಷ ಕಾರ್ಯಾಚರಣೆಯ ಅಡಿಯಲ್ಲಿ ಅವರು ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಿ” ಎಂದು ಕರ್ನಾಟಕ ತೆರಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಫ್ರುಲ್ಲಾ ಸತ್ತಾರ್ ಖಾನ್ ಜಿಎಸ್ ಟಿ ನೋಂದಣಿದಾರರಿಗೆ ಮಾಹಿತಿ ನೀಡಿದ್ದಾರೆ.
ಈ ಕೆಳಗೆ ತಿಳಿಸಿದ ದಾಖಲೆಗಳು ನಿಮ್ಮ ಬಳಿಯಿಟ್ಟುಕೊಂಡಿರಿ :
1. ತೆರಿಗೆದಾರರು ತಮ್ಮ ವ್ಯಾಪಾರದ ಆವರಣದಲ್ಲಿ GSTN ಅನ್ನು ಪ್ರದರ್ಶಿಸುವ ಅಗತ್ಯವಿದೆ.
2. ತೆರಿಗೆದಾರರು ತಮ್ಮ ಬಾಡಿಗೆ ಒಪ್ಪಂದದ ಅವಧಿ ಮುಗಿದಿದ್ದರೆ ಅದನ್ನು ನವೀಕರಿಸಬೇಕು ಮತ್ತು GST ನೋಂದಣಿ ಸಮಯದಲ್ಲಿ ಸಲ್ಲಿಸಿದ ಎಲ್ಲಾ ಪೂರಕ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ.
3. ಪಾಲುದಾರಿಕೆಯಲ್ಲಿ ನೋಂದಾಯಿಸಿದ್ದರೆ ತೆರಿಗೆದಾರರು ತಮ್ಮ ಪಾಲುದಾರ/ನಿರ್ದೇಶಕರ ಕೆವೈಸಿ (KYC) ಅನ್ನು ಸಂಗ್ರಹಿಸಬೇಕಾಗುತ್ತದೆ.
4. ವ್ಯಾಪಾರ ಆವರಣದ ತಿದ್ದುಪಡಿ ಅಥವಾ ಒಪ್ಪಂದವನ್ನು ನವೀಕರಿಸಿದರೆ ತೆರಿಗೆದಾರರು NOC ಅಥವಾ ಮಾಲೀಕತ್ವದ ಪುರಾವೆಗಳನ್ನು ಸಂಗ್ರಹಿಸಬೇಕು. ಆವರಣಕ್ಕೆ ಬೆಂಬಲವಾಗಿ ಅವರ ವಿದ್ಯುತ್ ಬಿಲ್‌ಗಳು ಇತ್ಯಾದಿಗಳನ್ನು ಪರಿಶೀಲಿಸಬಹುದು.
5. ತೆರಿಗೆದಾರರು ತಮ್ಮ ಜಿಎಸ್‌ಟಿ ನೋಂದಣಿ ಪ್ರಮಾಣಪತ್ರದಲ್ಲಿ ತಮ್ಮ ಜಿಎಸ್‌ಟಿಎನ್‌ನೊಂದಿಗೆ ತಮ್ಮ ನಿಖರವಾದ ವ್ಯಾಪಾರದ ಹೆಸರನ್ನು ಪ್ರದರ್ಶಿಸಬೇಕು.
6. ತೆರಿಗೆದಾರರು ಅವರು ಸರಕುಗಳನ್ನು ಖರೀದಿಸುತ್ತಿರುವ ತಮ್ಮ ಪೂರೈಕೆದಾರರ ವಿವರಗಳನ್ನು ಮತ್ತು ಇನ್‌ವಾಯ್ಸ್ ಪ್ರಕಾರ ಪಾವತಿ ಟ್ರ್ಯಾಕ್ ಅನ್ನು ಜಿಎಸ್ ಟಿ ಅಧಿಕಾರಿಗಳು ಪರಿಶೀಲಿಸುವ ಸಾಧ್ಯತೆಯಿದೆ.
7. ಜಿಎಸ್ ಟಿ ನೋಂದಣಿದಾರರು ನಿಜವಾದ ಪೂರೈಕೆದಾರರಿಂದ ಸರಕುಗಳನ್ನು ಖರೀದಿಸುತ್ತಿದ್ದಾರೆ ಎಂದು ರುಜುವಾತುಪಡಿಸುವ ದಾಖಲೆಗಳಿಟ್ಟುಕೊಂಡಿರಬೇಕು.
8. ತೆರಿಗೆದಾರರು ಜಿಎಸ್ ಟಿ ಕಾಯಿದೆಯು ಸೂಚಿಸಿದಂತೆ ಎಲ್ಲಾ ಖಾತೆಯ ಪುಸ್ತಕಗಳನ್ನು ನಿರ್ವಹಿಸಬೇಕಾಗುತ್ತದೆ ಮತ್ತು ಒಳಗಿನ ಸರಬರಾಜು (ಖರೀದಿಗಳು) ಹೊರಗಿನ ಸರಬರಾಜುಗಳು (ಮಾರಾಟ) ಇತ್ಯಾದಿಗಳ ವಿವರಗಳನ್ನು ನಿರ್ವಹಿಸುವ ಮೂಲಕ ಎಲ್ಲಾ ಅನುಸರಣೆಯನ್ನು ಅನುಸರಿಸಬೇಕಾಗುತ್ತದೆ.
9. ತೆರಿಗೆದಾರರು ತಮ್ಮ ಸರಕು ಮತ್ತು ಸೇವೆಗಳ ಪೂರೈಕೆದಾರರ ಸ್ಥಿತಿಯನ್ನು ಪರಿಶೀಲಿಸುವ ಮೂಲಕ ಎಲ್ಲಾ ಜಿಎಸ್ ಟಿ ಅನುಸರಣೆಗಳನ್ನು ಪರಿಶೀಲಿಸಬೇಕು ಮತ್ತು GSTR-1 ಮತ್ತು GSTR-3B ಇತ್ಯಾದಿಗಳನ್ನು ನಿಗದಿತ ದಿನಾಂಕಗಳೊಳಗೆ ಭರ್ತಿ ಮಾಡಬೇಕಾಗುತ್ತದೆ.
10. ಜಿಎಸ್‌ಟಿ ಅಧಿಕಾರಿಗಳು ಪರಿಶೀಲನೆಗಾಗಿ ತಮ್ಮ ವ್ಯಾಪಾರದ ಆವರಣಕ್ಕೆ ಭೇಟಿ ನೀಡಿದರೆ ತೆರಿಗೆದಾರರು ತಮ್ಮ ವ್ಯಾಪಾರದ ಆವರಣದಲ್ಲಿ ತಪ್ಪದೆ ಹಾಜರಿರಬೇಕು. ಇಲ್ಲದಿದ್ದಲ್ಲಿ ತೆರಿಗೆದಾರರಿಗೆ ಜಿಎಸ್ ಟಿ ಕಚೇರಿಯಿಂದ ಸೂಕ್ತ ರೀತಿಯಲ್ಲಿ ಸೂಚನೆ ಪಾಲಿಸಲಿಲ್ಲ ಎಂದು ಅವರ ಹೆಸರಿನಲ್ಲಿ ಅನಗತ್ಯ ನೋಟಿಸ್‌ಗಳನ್ನು ಬರುವ ಸಾಧ್ಯತೆಗಳಿರುತ್ತದೆ.
ಜಿಎಸ್ ಟಿ ಇಲಾಖೆಯ ಸೂಚನೆ ಪಾಲಿಸದಿದ್ದರೆ ಅದರ ಪರಿಣಾಮವೇನಾಗುತ್ತದೆ? :
1. ಸಿಜಿಎಸ್ ಟಿ (CGST) ಮತ್ತು ಎಸ್ ಜಿಎಸ್ ಟಿ ( SGST) ಕಾಯಿದೆಯ ಪ್ರಕಾರ ದಂಡ ವಿಧಿಸಬಹುದು.
2. ಜಿಎಸ್ ಟಿ ನೋಂದಣಿಯನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಬಹುದು.
3. ಇನ್‌ಪುಟ್ ತೆರಿಗೆಯನ್ನು ನಿರ್ಬಂಧಿಸುವುದು.
4. ಯಾವುದೇ ನಕಲಿ ಜಿಎಸ್ ಟಿ ಇನ್‌ವಾಯ್ಸ್‌ನಿಂದ ಪಡೆದ ಇನ್‌ಪುಟ್ ತೆರಿಗೆ ಕ್ರೆಡಿಟ್‌ನ ಮರು ಪಾವತಿಸಿಕೊಳ್ಳಬಹುದು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.