ಬೆಂಗಳೂರು/ ನವದೆಹಲಿ, ಮೇ.18 www.benglauruwire.com : ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಸರ್ಕಸ್ ಮತ್ತು ಲೆಕ್ಕಾಚಾರ ನಡೆಸಿದ ಬಳಿಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಘೋಷಣೆ ಮಾಡಿದೆ. ಈ ಮೂಲಕ ಕೈ ಪಕ್ಷ ಮೇ.13ರಂದು 135 ಬಹುಮತ ಪಡೆದ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಗ್ಗಂಟಿಗೆ ಮುಕ್ತಿ ಸಿಕ್ಕಂತಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತಿತರ ಹಿರಿಯ ನಾಯಕರ ಜೊತೆ ಸುಧೀರ್ಘವಾಗಿ ಚರ್ಚಿಸಿ ಅಂತಿಮವಾಗಿ, ಅಧಿಕೃತವಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿರುವುದನ್ನು ಘೋಷಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಹಾಗೂ ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಸದ್ಯ ಡಿಸಿಎಂ, ಎರಡು ಪ್ರಬಲ ಖಾತೆಯನ್ನು ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆ ಮುಗಿಯುವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದರಿಂದಾಗಿ ಕೊನೆಯ ಕ್ಷಣದ ವರೆಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಯ್ಕೆ ಮಾಡುತ್ತಾರೆಂದು ಕಾದು ಕುಳಿತಿದ್ದ ಅವರ ಬೆಂಬಲಿಗರಿಗೆ ಬಹುದೊಡ್ಡ ನಿರಾಶೆಯಾಗಿದೆ. ಬುಧವಾರ ಸುಮಾರು 40 ನಿಮಿಷಗಳ ಕಾಲ ಸೋನಿಯಾಗಾಂಧಿಯವರ ನಿವಾಸದಲ್ಲಿ ರಾಹುಲ್ ಗಾಂಧಿಯವರ ಜೊತೆ ಮಾತುಕತೆ ನಡೆಸಿದ ಡಿ.ಕೆ.ಶಿವಕುಮಾರ್ ಮಾಧ್ಯಮದವರೊಂದಿಗೂ ಮಾತನಾಡದೆ ಕಾರು ಹತ್ತಿ ಅಲ್ಲಿಂದ ತೆರಳಿದರು. ರಾಹುಲ್ ಗಾಂಧಿ ಜೊತೆ ಮಾತುಕತೆ ಸಂದರ್ಭದಲ್ಲಿ ಡಿ.ಕೆ.ಶಿವಕುಮರ್ ವಿರುದ್ಧ ನಡೆಯುತ್ತಿರುವ ಕಾನೂನು ಪ್ರಕರಣಗಳ ಮುಂದೆ ತಮಗೆ ಹಾಗೂ ಪಕ್ಷದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯಿತು. ಒಂದು ಹಂತದಲ್ಲಿ ರಾಹುಲ್ ಗಾಂಧಿಯವರು ಇಟ್ಟ ಸೂತ್ರಕ್ಕೆ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಕೊನೆಗೆ ಬುಧವಾರ ತಡರಾತ್ರಿ ವರೆಗೂ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿ ಸಂಧಾನ ಯಶಸ್ವಿಯಾಯಿತು.
ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭವನ್ನು ನಗರದ ಕಂಠೀರವ ಸ್ಟೇಡಿಯಮ್ ನಲ್ಲಿ ಮೇ.20 ಮಧ್ಯಾಹ್ನ ನಡೆಯಲಿದೆ. ಈ ರಾಜ್ಯಪಾಲರಿಗೆ ಈ ಸಂಬಂಧ ಕಾಂಗ್ರೆಸ್ ಮಾಹಿತಿ ನೀಡಿದೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ 33 ಸಚಿವ ಸ್ಥಾನ ಕಲ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುತ್ತಿದ್ದು, ಅವರ ಅಪಾರ ಬೆಂಬಲಿಗರು, ರಾಜ್ಯಕ್ಕೆ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ನಿರೀಕ್ಷೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಸಾಕಷ್ಟು ಪ್ರಯಾಸದ ಬಳಿಕ ಮುಖ್ಯಮಂತ್ರಿ ಗಾದಿ ಸಿದ್ದರಾಮಯ್ಯನವರಿಗೆ ಒಲಿದು ಬಂದಿರುವುದಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಸಿದ್ದು ಬೆಂಬಲಿಗರು ಪಟಾಕಿ ಸಿಡಿಸಿ, ಅವರ ಹೆಸರಿನಲ್ಲಿ ಘೋಷಣೆ ಕೂಗಿ, ಕೆಲವು ಕಡೆಗಳಲ್ಲಿ ಸಿದ್ದರಾಮಯ್ಯ ಅವರ ಪೋಸ್ಟರ್ ಗೆ ಹಾಲು ಸುರಿದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ತವರು ಸಿದ್ದರಾಮನ ಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಡಿಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಕಾರಣದಿಂದ ರಾಮನಗರ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೂ ಕೆಲವು ಬೆಂಬಲಿಗರು ಮೊದಲ ಬಾರಿಗೆ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಮೇ.14ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತ ಸಭೆಯಲ್ಲಿ ಕಾಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಇದಾದ ಬಳಿಕ ಸಿಎಂ ಹುದ್ದೆ ಆಯ್ಕೆಯ ಕಸರತ್ತು ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು. ಈ ಬೆಳವಣಿಗೆಯಾದ ಬಳಿಕ ಸಿದ್ದರಾಮಯ್ಯ ಮೊದಲಿಗೆ ನವದೆಹಲಿಗೆ ತೆರಳಿ ತಮ್ಮದೇ ರೀತಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಹುದ್ದೆ ಗಿಟ್ಟಿಸಿಕೊಳ್ಳಲು ನಿರಂತರ ಪ್ರಯತ್ನಿಸಿದ್ದರು. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ತಾವು ಮಾಡಿದ ಹೋರಾಟ, ಪ್ರಯತ್ನಗಳಲ್ಲವೂ ವ್ಯರ್ಥವಾಗದಂತೆ ತಡೆಯಲು ತೆರೆಮರೆಯಲ್ಲಿ ಕಾರ್ಯೋನ್ಮುಖರಾಗಿದ್ದರು. ಹೈಕಮಾಂಡ್ ಮೇ.15ರಂದೇ ನವದೆಹಲಿಗೆ ಆಹ್ವಾನ ನೀಡಿದ್ದರೂ, ಅನಾರೋಗ್ಯದ ಕಾರಣಕ್ಕೆ ಮಂಗಳವಾರ ತೆರಳಿದ್ದರು.
ಸಿದ್ದರಾಮಯ್ಯ ಖಾಸಗಿ ಮತ್ತು ರಾಜಕೀಯ ಬದುಕು :
1983ರಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ವತಂತ್ರ ರಾಜಕಾರಣಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ ಸಿದ್ದರಾಮಯ್ಯ ಈವರೆಗೆ ಒಟ್ಟು 12 ಚುನಾವಣೆಗಳನ್ನು ಎದುರಿಸಿ ಆ ಪೈಕಿ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿದ್ದು ಅವರು ಹಣಕಾಸು ಸಚಿವರಾಗಿ ಇದುವರೆಗೆ 13 ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಪ್ರತಿಪಕ್ಷಗಳಿಂದ ರಾಜ್ಯದ ಬೊಕ್ಕಸದ ಮೇಲೆ ಸಾಲದ ಹೆಚ್ಚಳದ ಆರೋಪಗಳ ಹೊರತಾಗಿಯೂ, ಅವರು ರಾಜ್ಯದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯಿದೆಯ ವ್ಯಾಪ್ತಿಯಲ್ಲಿ ಹಣಕಾಸಿನ ವಿವೇಕವನ್ನು ಕಾಪಾಡಿಕೊಳ್ಳಲು ಹೆಸರುವಾಸಿಯಾಗಿದ್ದರು.
ಮೈಸೂರು ಜಿಲ್ಲೆಯ ತಿ.ನರಸೀಪುರ ಸಮೀಪದ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಎಂಬ ದೂರದ ಹಳ್ಳಿಯಲ್ಲಿ ಕುರುಬ ಗೌಡ ಸಮುದಾಯಕ್ಕೆ ಸೇರಿದ ರೈತ ಕುಟುಂಬದಲ್ಲಿ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಯ ಮಗನಾಗಿ 3 ಆಗಸ್ಟ್ 1947ರಂದು ಜನಿಸಿದರು. ತಮ್ಮ ಐದು ಒಡಹುಟ್ಟಿದವರಲ್ಲಿ ಎರಡನೆಯವರಾಗಿದ್ದಾರೆ. ತಮ್ಮ ಹತ್ತನೇ ವಯಸ್ಸಿನವರೆಗೆ ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿರಲಿಲ್ಲ. ಆದರೆ ಅವರ ಬಿ.ಎಸ್ಸಿ ಪದವಿಯನ್ನು ಪೂರೈಸಿದರು. ಹಾಗೂ ತಮ್ಮ ಎಲ್.ಎಲ್.ಬಿ. ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ಮೈಸೂರಿನಲ್ಲಿ ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜ್ಯೂನಿಯರ್ ಆಗಿದ್ದ ಸಿದ್ದರಾಮಯ್ಯ ನಂತರ ಕೆಲ ಕಾಲ ಕಾನೂನು ಕಲಿತರು. ಹೀಗೆ ಪ್ರಾರಂಭಿಕ ಜೀವನದಲ್ಲಿ ಕಷ್ಟ ನಷ್ಟಗಳನ್ನು ಕಂಡಿದ್ದ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರವಾಗಿ ಹಲವು ಕಡೆಗಳಲ್ಲಿ ತಮ್ಮ ಹೋರಾಟ ಕೈಗೊಂಡಿದ್ದರು. ಕೊನೆಗೂ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ನಡೆದು ಬಂದ ಹಾದಿ :
ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಶ್ರೀ ಡಿ.ಕೆ. ಶಿವಕುಮಾರ್ (ಜನನ 15ನೇ ಮೇ 1962) ತಮ್ಮತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು. 18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ NSUI ಗೆ ಸೇರ್ಪಡೆಗೊಂಡು ಅನತಿ ಕಾಲದಲ್ಲಿಯೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾದರು (1981-83).
1989ರಲ್ಲಿ ಅಖಿಲ ಭಾರತೀಯಕಾಂಗ್ರೆಸ್ ಪಕ್ಷದ ಮುಖೇನ ಸಾತನೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಸಿ, ಅಭೂತಪೂರ್ವ ರೀತಿಯಲ್ಲಿ, ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ ಡಿ.ಕೆ. ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಶಾಸಕರಾಗಿ, ಸಚಿವರಾಗಿ ಪಕ್ಷಕ್ಕೆ ಕಂಟಕ ಬಂದಾಗಲೆಲ್ಲ ಮುಂದೆ ನಿಂತು ಹೋರಾಟ ನಡೆಸಿ 2023ರ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯುವಲ್ಲಿ ಅವರ ಅಚಲ ಹೋರಾಟ ಹಾಗೂ ಸಂಘಟನಾ ಚತುರತೆ ಪ್ರಮುಖ ಕಾರಣವಾಗಿದೆ.