ಬೆಂಗಳುರು, ಮೇ.12 www.bengaluruwire.com : ಮೈಸೂರಿನಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊತ್ತ ಮೊದಲ ಎಲ್‌ಇಡಿ ಗುಮ್ಮಟ ತಾರಾಲಯಕ್ಕೆ ಎಲ್ ಇಡಿ ಡೂಮ್ ತಂತ್ರಜ್ಞಾನದ ಗುತ್ತಿಗೆಯನ್ನು ಜಪಾನಿನ ಕೊನಿಕಾ ಮಿನೋಲ್ಟಾ ಇಂಕ್ ಒಕ್ಕೂಟಕ್ಕೆ ನೀಡಲಾಗಿದೆ ಎಂದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (Indian Institute of Astrophysics – IIA) ತಿಳಿಸಿದೆ.
ಮೈಸೂರು ವಿಶ್ವವಿದ್ಯಾನಿಲಯ (University of Mysore) ದ 3 ಎಕರೆ ಜಾಗದಲ್ಲಿ ತಾರಾಲಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಈ ವಾಣಿಜ್ಯ ಎಲ್ ಇಡಿ ಗುಮ್ಮಟವು 15 ಮೀಟರ್ ವ್ಯಾಸವನ್ನು ಹೊಂದಿದ್ದು, ನೆಲಕ್ಕೆ 15 ಡಿಗ್ರಿಯಷ್ಟು ಓರೆಯಾಗಿದೆ. ಸುಮಾರು 150 ಜನರು ಈ ಡೂಮ್ ಕೊಠಡಿಯಲ್ಲಿ ಒಟ್ಟಿಗೆ ಕುಳಿತು ಖಗೋಳ ಸೌಂದರ್ಯವನ್ನು ಸವಿಯಬಹುದು. ವಿಶ್ವವಿಜ್ಞಾನ ಶಿಕ್ಷಣ ಮತ್ತು ತರಬೇತಿ ಕೇಂದ್ರ (Cosmology Education And Research Training Center – COSMOS) ಯೋಜನೆಯಡಿಯಲ್ಲಿ ನೂತನ ಎಲ್ಇಡಿ ಡೋಮ್ ಪ್ಲಾನಿಟೋರಿಯಮ್ ನಿರ್ಮಾಣಕ್ಕೆ ಮೈಸೂರು ವಿಶ್ವವಿದ್ಯಾಲಯ ಭೂಮಿ ನೀಡುತ್ತಿದ್ದು, ಐಐಎ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಇದಕ್ಕಾಗಿ ಪರಸ್ಪರ ಒಪ್ಪಂದವನ್ನು ಮಾಡಿಕೊಂಡಿವೆ.
ಕೊನಿಕಾ ಮಿನೋಲ್ಟಾ ಇಂಕ್ ಒಕ್ಕೂಟದಲ್ಲಿ ಫ್ರಾನ್ಸಿನ ಆರ್ ಎಸ್ಎ ಕಾಸ್ಮೋಸ್, ಭಾರತದ ಆರ್ಬಿಟ್ ಆನಿಮೇಟ್ ಸಂಸ್ಥೆಗಳಿದ್ದು, ಕೋಲ್ಕೊತಾದ ಕೊತಾರಿ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯವರು ಕ್ಯಾಂಪಸ್ ಮತ್ತು ಕಟ್ಟಡದ ವಾಸ್ತುಶಿಲ್ಪ ವಿನ್ಯಾಸ ಕೈಗೊಳ್ಳುತ್ತಿದ್ದು, ಅಂತಿಮ ಹಂತದಲ್ಲಿದೆ. ಕಟ್ಟಡ ಕಾಮಗಾರಿ ನಡೆಸುವ ಸಂಸ್ಥೆಯನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. 2024 ಇಸವಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಐಐಎ ಮಾಹಿತಿ ನೀಡಿದೆ.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ನಿರ್ದೇಶಕರಾದ ಅನ್ನಪೂರ್ಣ ಸುಬ್ರಮಣ್ಯಂ ನೇತೃತ್ವದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಕೇಂದ್ರ ಅಣುಶಕ್ತಿ ಸಚಿವಾಲಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಎಲ್ ಇಡಿ ಡೋಮ್ ತಾರಾಲಯ ಯೋಜನೆ ಜಾರಿಗೊಳ್ಳುತ್ತಿದೆ ಎಂದು ಐಐಎ ವಿಜ್ಞಾನಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಎಲ್ಇಡಿ ಡೋಮ್ ಪ್ಲಾನಿಟೋರಿಯಂ ವಿಶೇಷತೆಗಳು :
ಇದು ಪ್ರಪಂಚದಲ್ಲೇ ಮೊದಲ ಎಲ್ಇಡಿ ಡೋಮ್ ಪ್ಲಾನೆಟೋರಿಯಮ್ ಆಗಿರುತ್ತದೆ (ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ). ಪ್ರಪಂಚದಲ್ಲಿ ಈಗಿರುವ ತಾರಾಲಯಗಳಲ್ಲಿರುವುದು ನಿಷ್ಕ್ರಿಯ ಗುಮ್ಮಟ ಮತ್ತು ಪ್ರೊಜೆಕ್ಟರ್ ವ್ಯವಸ್ಥೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಬೆಂಗಳೂರಿನಲ್ಲಿನ ನೆಹರು ತಾರಾಲಯದಲ್ಲಿರುವುದು ಹೈಟೆಕ್ ಪ್ರೊಜೆಕ್ಟರ್ ಮೂಲಕವೇ ಅಂತರಿಕ್ಷ ಕುರಿತ ಮಾಹಿತಿಯನ್ನು ಮೇಲ್ಮುಖವಿರುವ ಡೋಮ್ ನಲ್ಲಿ ಬಿಂಬಿಸಲಾಗುತ್ತಿದೆ.
ಹೊಸ ರೀತಿಯ ಗುಮ್ಮಟವು ನೇರವಾಗಿ ಎಲ್ಇಡಿ ದೀಪಗಳ ಫಲಕಗಳಿಂದ ಮಾಡಲ್ಪಟ್ಟಿದೆ ಹಾಗೂ ಕಂಪ್ಯೂಟರ್ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತದೆ. ನಂತರ ಎಲ್ಇಡಿ ದೀಪಗಳ ಮೂಲಕ ತಾರಾಲಯ ಪ್ರದರ್ಶನವನ್ನು ಪ್ರದರ್ಶಿಸಲಾಗುತ್ತದೆ. ಎಲ್ಇಡಿ ಗುಮ್ಮಟವು ಉತ್ತಮ ಕಾಂಟ್ರಾಸ್ಟ್ ಮತ್ತು 8 ಕೆ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ. ಇದು ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಹೀಗಾಗಿ ನಮ್ಮ ಕಣ್ಣ ಮುಂದೆಯೇ ಎಲ್ಲವೂ ನೈಜವಾಗಿ ಘಟಿಸುತ್ತಿವೆಯೇನೊ ಎಂಬಂತೆ ನೋಡುಗರಿಗೆ ಭಾಸವಾಗುತ್ತದೆ.
ವಿಶ್ವದ ಮೊತ್ತ ಮೊದಲ ವಾಣಿಜ್ಯ ಎಲ್ ಇಡಿ ಡೋಮ್ :
ಸಾರ್ವಜನಿಕ ವೀಕ್ಷಣೆಗಾಗಿ ಜಪಾನ್ ನಲ್ಲಿ ಮಾತ್ರ ಇಂತಹ ವ್ಯವಸ್ಥೆಯ ಎರಡು ಎಲ್ ಇಡಿ ಡೋಮ್ ಗಳಿವೆ. ಮಾತ್ರ ಇವೆ. ಮತ್ತು ಇದು ಕೊನಿಕಾ ಮಿಸೋಲ್ಟಾ ಇಂಕ್ ಮಾರಾಟಗಾರರಿಂದ ಸ್ವತಃ ನಿರ್ವಹಿಸಲಾಗುತ್ತದೆ. ಮೈಸೂರಿನ ಈ ತಾರಾಲಯವು ಮೊದಲ ಎಲ್ಇಡಿ ಗುಮ್ಮಟವಾಗಿದ್ದು, ಮಾರಾಟಗಾರರಿಂದ ಸ್ವತಂತ್ರ ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತಿರುವ ಮೊದಲ ಎಲ್ ಇಡಿ ಡೋಮ್ ತಂತ್ರಜ್ಞಾನವಾಗಿದೆ.
ಕಾಸ್ಮೋಸ್ ಯೋಜನೆಯಡಿ ಸ್ಥಾಪಿತವಾಗುತ್ತಿರುವ ಈ ತಾರಾಲಯದಲ್ಲಿ ಖಗೋಳ ದತ್ತಾಂಶ ವಿಶ್ಲೇಷಣೆ ಕುರಿತಂತೆ ಶಾಲೆ, ಕಾಲೇಜು ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಹಾಗೂ ವಿವಿಧ ರೀತಿಯ ಬಾಹ್ಯಾಕಾಶ ವಿಜ್ಞಾನ ಕುರಿತ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತದೆ.
ಯೋಜನಾ ಮುಖ್ಯಸ್ಥರು ಹೇಳೋದೇನು? :
“ಇದು ಉತ್ತಮ ರೆಸಲ್ಯೂಶನ್ ಮತ್ತು ಸೂಕ್ಷ್ಮತೆಯೊಂದಿಗೆ ವಿಶ್ವದ ಮೊದಲ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಎಲ್ಇಡಿ ಗುಮ್ಮಟ ತಾರಾಲಯವಾಗಿದೆ. ಅತ್ಯಾಧುನಿಕ ತಾರಾಲಯ ನಿರ್ಮಾಣದ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಈ ಕೇಂದ್ರವು ಮೈಸೂರು ಮತ್ತು ದೇಶದ ಉಳಿದ ವಿದ್ಯಾರ್ಥಿಗಳಿಗೆ ಆಧುನಿಕ ಖಗೋಳ ದತ್ತಾಂಶ ವಿಶ್ಲೇಷಣೆಯಲ್ಲಿ ತರಬೇತಿ ನೀಡುತ್ತದೆ. ಅಲ್ಲದೆ ವಿಶೇಷವಾಗಿ ಭಾರತವು ಭವಿಷ್ಯಕ್ಕಾಗಿ ಹಲವಾರು ದೊಡ್ಡ ದೂರದರ್ಶಕ ಯೋಜನೆಗಳನ್ನು ಯೋಜಿಸಿರುವುದರಿಂದ ಈ ಎಲ್ ಇಡಿ ತಾರಾಲಯ ನಿರ್ಮಾಣದಿಂದ ಬಹಳ ಅನುಕೂಲವಾಗಲಿದೆ.”
– ಫ್ರೊ. ಅನ್ನಪೂರ್ಣಿ ಸುಬ್ರಮಣ್ಯಂ, ಐಐಎ ನಿರ್ದೇಶಕಿ ಮತ್ತು ಕಾಸ್ಮಾಸ್ ಯೋಜನೆ ಉಸ್ತುವಾರಿ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.