ನವದೆಹಲಿ, ಏ.16 www.bengaluruwire.com : ಭಾರತೀಯ ರೈಲು ಸಾರಿಗೆ ಪಾಲಿಗೆ ಭಾನುವಾರ ಒಂದು ಚಾರಿತ್ರಿಕ ದಿನ. ಏಕೆಂದರೆ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಹೆಜ್ಜೆ ಇರಿಸಿದ ದಿನ. ಇದೇ ದಿನದಂದು ಅಂದರೆ 170 ವರ್ಷಗಳ ಹಿಂದೆ ಏಷ್ಯಾದ ಮೊದಲ ಪ್ರಯಾಣಿಕ ರೈಲು ಬೋರಿಬಂದರ್ (ಈಗಿನ ಮುಂಬೈ) ನಿಲ್ದಾಣದಿಂದ ಥಾಣೆ ನಡುವೆ 34 ದೂರದ ರೈಲು ಪ್ರಯಾಣ ಆರಂಭವಾಯಿತು.
ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಯುಗದ ಉದಯವನ್ನು ಗುರುತಿಸುವ ಮೂಲಕ, ಏಷ್ಯಾದ ಮೊದಲ ಪ್ರಯಾಣಿಕ ರೈಲು 1853 ಏಪ್ರಿಲ್ 16ರಂದು ಮುಂಬೈ ಮತ್ತು ಥಾಣೆ ನಡುವೆ ಆರಂಭವಾಗಿ ದೇಶದ ಪ್ರಗತಿ ಮತ್ತು ಸಮೃದ್ಧಿಗೆ ಸಾಕ್ಷಿಭೂತವಾಯಿತು. ಆಗ ಉದ್ಘಾಟನಾ ರೈಲನ್ನು ಬೋರಿಬಂದರ್ ನಿಲ್ದಾಣದಿಂದ ಫ್ಲ್ಯಾಗ್ ಮಾಡಲಾಗಿತ್ತು. 1953 ಏಪ್ರಿಲ್ 16ರಂದು 14 ಹೊಸ ಮರದ ಬೋಗಿಗಳಲ್ಲಿ 400 ಉತ್ಸುಕರಾದ ಅತಿಥಿಗಳೊಂದಿಗೆ ತಮ್ಮ ಮೊದಲ ದಿನ ಆ ಹಳಿಗಳಲ್ಲಿ ತೆರೆಳಿದ್ದರು. ಅದೇ ಉದ್ಘಾಟನಾ ಸ್ಥಳದಲ್ಲೀಗ ಯುನೆಸ್ಕೋ (UNESCO) ಭವ್ಯವಾದ ವಿಶ್ವ ಪರಂಪರೆಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಆಗಿ ತಲೆಯೆತ್ತಿ ನಿಂತಿದೆ.
ಮೊದಲ ಪ್ರಯಾಣಿಕ ಸೇವೆಯನ್ನು ಮೂರು ಇಂಜಿನ್‌ಗಳಿಂದ ಸಾಗಿಸಲಾಯಿತು, ಆ ಮೂರು ಎಂಜಿನಿಗಳ ಹೆಸರು `ಸಾಹಿಬ್,` `ಸಿಂಧ್,` ಮತ್ತು `ಸುಲ್ತಾನ್,` ಎಂಬುದಾಗಿತ್ತು. ಈ ಮೂರು ಎಂಜಿನ್ ಗಳು ಜೋರಾಗಿ ಸಿಳ್ಳೆಗಳನ್ನು ಊದುತ್ತಾ, ದಟ್ಟವಾದ ಹೊಗೆ ಮತ್ತು ಹಬೆಯನ್ನು ಹೊರಹಾಕುತ್ತಾ ಸಂಜೆ 3.35 ಕ್ಕೆ ಐತಿಹಾಸಿಕ ಪ್ರಯಾಣವನ್ನು ಪ್ರಾರಂಭಿಸಿತ್ತು. ಆ ದಿನ, ಬ್ರಿಟೀಷ್ ಇಂಡಿಯಾದ ಮೊದಲ ರೈಲು ಇತಿಹಾಸಕ್ಕೆ ಸಾಕ್ಷಿಯಾದರು 21-ಗನ್ ಸೆಲ್ಯೂಟ್, ಹರ್ಷೋದ್ಗಾರಗಳು ಮತ್ತು ಚಪ್ಪಾಳೆಗಳ ಕರಾಡನದೊಂದಿಗೆ ಐತಿಹಾಸಿಕ ರೈಲು ಪ್ರಯಾಣ ಆರಂಭವಾಗಿತ್ತು.
ಮದ್ರಾಸ್ ನಲ್ಲಿ ಪ್ರಾಯೋಗಿಕ ರೈಲು ಓಡಾಟ :
ಆ ಕಾಲದ ರೈಲು ಪ್ರಯಾಣಕ್ಕಾಗಿ 30 ವರ್ಷಗಳ ಹಿಂದೆ ಮದ್ರಾಸ್‌ನಲ್ಲಿ ರೈಲು ಮಾರ್ಗವನ್ನು ರಚಿಸಿ ಅಲ್ಲಿ ಪ್ರಾಯೋಗಿಕ ಓಡಾಟವನ್ನು ನಡೆಸಲಾಗಿತ್ತು. ನಂತರ ಮುಂಬೈ-ಥಾಣೆ ಸೆಕ್ಟರ್‌ನಲ್ಲಿ ಮೊದಲ ಪ್ರಯಾಣಿಕ ಸೇವೆಯನ್ನು ಪ್ರಾರಂಭಿಸಲಾಯಿತು. ಇತರ ಹಲವು ದೇಶಗಳಲ್ಲಿನ ಹಳೆಯ ರೈಲುಮಾರ್ಗಗಳಿಗಿಂತ ಭಿನ್ನವಾಗಿ, ಭಾರತೀಯರು ತ್ವರಿತ, ಅಗ್ಗದ ಮತ್ತು ಸುರಕ್ಷಿತ ರೈಲು ಪ್ರಯಾಣಕ್ಕೆ ಬಹುಬೇಗನೆ ಹೊಂದಿಕೊಂಡರು.
ಇದಾದ ಬಳಿಕ ರೈಲ್ವೇ ಸೇವೆಗಳನ್ನು ಭಾರತದ ಇತರ ಭಾಗಗಳಲ್ಲೂ ಪ್ರಾರಂಭವಾಯಿತು. ಹೌರಾ ಮತ್ತು ಹೂಗ್ಲಿ ನಡುವೆ 39 ಕಿ.ಮೀ.ಗಳ ಮೊದಲ ಪ್ಯಾಸೆಂಜರ್ ರೈಲು 1854 ರ ಆಗಸ್ಟ್ 15 ರಂದು ಪೂರ್ವದಲ್ಲಿ ಪ್ರಾರಂಭವಾಯಿತು. ನಂತರ ದಕ್ಷಿಣದಲ್ಲಿ ವೆಯಸರ್ಪಾಂಡಿ ಮತ್ತು ವಾಲಾಜಾ ರಸ್ತೆ (ಮದ್ರಾಸ್ ಪ್ರೆಸಿಡೆನ್ಸಿ) ಜುಲೈ 1, 1856 ರಂದು ಮತ್ತು 53 ಕಿಮೀ ವಿಸ್ತಾರವಾದ ರೈಲು ಮಾರ್ಗ ಉತ್ತರದಲ್ಲಿ ಹತ್ರಾಸ್ ರಸ್ತೆ ಮತ್ತು ಮಥುರಾ ನಡುವೆ ಅಕ್ಟೋಬರ್ 19, 1875 ರಂದು ಆರಂಭವಾಯಿತು.
ಇದಾದ ಸುಮಾರು 27 ವರ್ಷಗಳಲ್ಲಿ, 1880 ರ ವೇಳೆಗೆ, ಭಾರತವು ಉಪ-ಖಂಡದ ಉದ್ದ ಮತ್ತು ಅಗಲವನ್ನು ವ್ಯಾಪಿಸಿರುವ 9,000 ಕಿ.ಮೀ ರೈಲ್ವೆ ಜಾಲವನ್ನು ಹೊಂದುವಂತಾಯಿತು. ದೇಶವು 1857ರ ಮೇ 10ರಂದು ಪ್ರಾರಂಭವಾದ ಮೊದಲ ಸ್ವಾತಂತ್ರ್ಯ ಸಂಗ್ರಾಮದಂತಹ ಐತಿಹಾಸಿಕ ಘಟನೆಗಳನ್ನು ಕಂಡಿತು. ಈ ಸ್ವಾತಂತ್ರ್ಯ ಹೋರಾಟ 90 ವರ್ಷಗಳ ಕಾಲ ಆಧುನಿಕ ಪ್ರಪಂಚದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ವಾತಂತ್ರ್ಯ ಚಳುವಳಿಗಳನ್ನು ಉತ್ತೇಜಿಸಿತು.
1.08 ಲಕ್ಷ ಕಿ.ಮೀ. ಉದ್ದ ರೈಲ್ವೆ ಮಾರ್ಗ :
ಕಳೆದ 170 ವರ್ಷಗಳಲ್ಲಿ, ಭಾರತೀಯ ರೈಲ್ವೇಯು ಈಗ ತಿಳಿದಿರುವಂತೆ, ಬಹು ವಿಧದ ಗೇಜ್ ಆಗಿ ರೂಪುಗೊಂಡಿದೆ. ದೇಶದ ಪರ್ವತ ಪ್ರದೇಶ, ಮರಭೂಮಿ, ಹಿಮಚ್ಛಾದಿತ ಪ್ರದೇಶ, ಬಯಲು, ಕಾಡು-ಮೇಜು ಹೀಗೆ ಒಟ್ಟಾರೆ 1,08,000 ಕಿ.ಮೀ.ಗೂ ಹೆಚ್ಚು ಉದ್ದ ರೈಲು ಮಾರ್ಗಗಳನ್ನು ಹೊಂದುವ ಮೂಲಕ ದೇಶದ ಮೂಲೆ ಮೂಲೆಗಳಿಗೆ ಪ್ರಯಾಣಿಕರು, ಪ್ರಾಣಿಗಳು ಮತ್ತು ಸರಕುಗಳನ್ನು ಸಾಗಿಸುವ ಮೂಲಕ ವಿಶ್ವದ ಎರಡನೇ ಅತಿದೊಡ್ಡ ರೈಲು ಸಾರಿಗೆಯಾಗಿ ಬೆಳೆದು ನಿಂತಿದೆ.
ಉಗಿ ಎಂಜಿನ್ ನಿಂದ ಎಲೆಕ್ಟ್ರಿಕ್ ರೈಲು ತನಕ :
ಭಾರವಾದ, ಹೆಚ್ಚು ಮಾಲಿನ್ಯಕಾರಕ ಉಗಿ ಇಂಜಿನ್‌ಗಳಿಂದ ಪ್ರಾರಂಭಿಸಿ, ಭಾರತೀಯ ರೈಲ್ವೇಯು ಫೆಬ್ರವರಿ 1925 ರಲ್ಲಿ ಮುಂಬೈನ ವಿಕ್ಟೋರಿಯಾ ಟರ್ಮಿನಲ್ (ಈಗಿನ CSMT) ಮತ್ತು ಕುರ್ಲಾ ಹಾರ್ಬರ್ ನಡುವಿನ ಮೊದಲ ವಿದ್ಯುದೀಕೃತ 15 ಕಿ.ಮೀ ಟ್ರ್ಯಾಕ್‌ನಲ್ಲಿ ಸೇವೆಗಳನ್ನು ಪ್ರಾರಂಭಿಸಿತು. ಒಂದು ಹಂತದಲ್ಲಿ, ಇದು ಆಗಸ್ಟ್ 1955 ರಲ್ಲಿ ಡೀಸೆಲ್ ಲೊಕೊಗಳಿಗೆ ಸ್ಥಳಾಂತರಗೊಂಡಿತು. ಆದರೆ ತೈಲ ಬೆಲೆಗಳು ಒಂದೇ ಸಮನೆ ಏರಿಕೆಯಾಗುತ್ತಿದ್ದ ಕಾರಣ ಈ ಡೀಸೆಲ್ ಎಂಜಿನ್ ಗಳನ್ನು ಕ್ರಮೇಣ ತಿರಸ್ಕರಿಸಲಾಯಿತು. ಆದಾಗ್ಯೂ, ವಿದ್ಯುದ್ದೀಕರಣವು ವೇಗವನ್ನು ಪಡೆದುಕೊಂಡಿತು ಮತ್ತು ಕಳೆದ 100 ವರ್ಷಗಳಲ್ಲಿ, ಭಾರತೀಯ ರೈಲ್ವೇಯು ಶೇ.80ದಷ್ಟು ವಿದ್ಯುದ್ದೀಕರಿಸಲ್ಪಟ್ಟಿದೆ. 2022 ರವರೆಗಿನ ಅಧಿಕೃತ ಮಾಹಿತಿಯ ಪ್ರಕಾರ ಅಗ್ಗದ, ಪರಿಸರ ಸ್ನೇಹಿ ಮತ್ತು ವೇಗದ ಪರ್ಯಾಯವನ್ನು ನೀಡುವತ್ತ ಗಮನಹರಿಸಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಪ್ರಯಾಣಿಕರಲ್ಲಿ ಭಾರತೀಯ ರೈಲು ಸೇವೆಯ ಬಗ್ಗೆ ಹೊಸ ಭರವಸೆ ಮೂಡಿಸಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.