ಬೆಂಗಳೂರು, ಫೆ.20 www.bengaluruwire.com : ಐಟಿ ರಾಜಧಾನಿಯ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿದಿರುವ ಬೃಹತ್ ಬೆಂಗಳೂರು ನಗರ ಪಾಲಿಕೆ (BBMP) ಮಲ್ಲೇಶ್ವರ ಕಚೇರಿಯ ಸರ್ವರ್ ಕೊಠಡಿಯಲ್ಲಿ ನಿನ್ನೆ ಸಂಜೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ.
ಇದರಿಂದಾಗಿ ಪಾಲಿಕೆಯ ಸರ್ವರ್ ಗಳು ನಿನ್ನೆ ಸಂಜೆಯಿಂದ ಸೂಕ್ತ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ಸಣ್ಣ ಮಟ್ಟಿಗಿನ ಅಗ್ನಿ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬದಲಿಗೆ ಸರ್ವರ್ ರೂಮಿನಲ್ಲಿ ಸರ್ವರ್ ಗೆ ಸಂಪರ್ಕ ಕಲ್ಪಿಸಿದ್ದ ಬಿಎಎಸ್ ಎನ್ ಎಲ್ ಮುಖ್ಯ ರೂಟರ್ ಹಾಗೂ ಹವಾ ನಿಯಂತ್ರಿತ ಯಂತ್ರವು ಶಾರ್ಟ್ ಸರ್ಕ್ಯೂಟ್ ಆಗಿ ಸುಟ್ಟು ಹೋಗಿದೆ. ಆದರೆ ಸರ್ವರ್ ನಲ್ಲಿನ ದತ್ತಾಂಶಗಳಿಗೆ ತೊಂದರೆಯಾಗಿಲ್ಲ ಎಂದು ಪಾಲಿಕೆ ಐಟಿ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಮೂರು ರ್ಯಾಕ್ ನಲ್ಲಿನ ಸರ್ವರ್ ಆಗಲಿ ಫೈರ್ ರೋಲ್ ಸರ್ವರ್ ಆಗಲಿ ಸಮಸ್ಯೆಯಿಲ್ಲ. ಇ- ಆಸ್ತಿ, ಇ- ಆಫೀಸ್ ಕಾರ್ತನಿರ್ವಹಣೆಗೆ ತೊಂದರೆ ಇಲ್ಲ. ನಿನ್ನೆ ಸಂಜೆ 4.30ರ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬಿಎಸ್ ಎನ್ಎಲ್ ರೂಟರ್ ಮತ್ತು ಹವಾ ನಿಯಂತ್ರಣ ಯಂತ್ರ (BSNL Router) (AC) ಸುಟ್ಟು ಹೋಗಿದೆ. ಲೀಸ್ಡ್ ಲೈನ್ ಅಂದರೆ ಮುಖ್ಯ ಸಂಪರ್ಕ ವ್ಯವಸ್ಥೆ (Leased Main line) ಸುಟ್ಟು ಹೋಗಿದೆ. ಬಿಎಸ್ ಎನ್ ಎಲ್ ಅಪ್ ಆದ ಮೇಲೆ ನಾವು ಕಾನ್ಪಿಗರೇಷನ್ ಸೆಟ್ ಮಾಡ್ತೀವಿ. ಇಂದು ಮಧ್ಯರಾತ್ರಿ ವರೆಗೆ ಕೆಲಸ ಮಾಡಿ ಎಲ್ಲವನ್ನು ಸರಿಪಡಿಸ್ತೀವಿ. ಡಾಟಾ ಬ್ಯಾಕಪ್ ಇದೆ. ಡಾಟಾ ಹಾನಿಯಾಗಿಲ್ಲ.” ಎಂದು ಪಾಲಿಕೆ ಐಟಿ ವಿಭಾಗದ ಅಧಿಕಾರಿ ನಾಗೇಶ್ ತಿಳಿಸಿದ್ದಾರೆ.
ಬೆಂಕಿ ಅವಘಡದಿಂದಾಗಿ ಸರ್ವರ್ ಕೊಠಡಿಗೆ ನಿನ್ನೆ ಭಾನುವಾರ ರಜೆಯಾಗಿದ್ದಾರಿಂದ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಯಾರೂ ಇರಲಿಲ್ಲ. ಅವರು ವಿಷಯ ತಿಳಿದ ಕೂಡಲೇ ಐಟಿ ವಿಭಾಗದವರು ಸ್ಥಳಕ್ಕೆ ಧಾವಿಸಿ ಬಂದರು.
“ಸದ್ಯ ಬಿಎಸ್ ಎನ್ ಎಲ್ ಇಂಟರ್ ನೆಟ್ ರೂಟರ್ ಸಂಪರ್ಕ ನೀಡುವ ಕೆಲಸ ಹಾಗೂ ಸರ್ವರ್ ಹೆಲ್ತ್ ಪರೀಕ್ಷಿಸ್ತೀವಿ. ಬಿಬಿಎಂಪಿ ಸಹಾಯ್ ಆಪ್, ಹಣಕಾಸು ನಿರ್ವಹಣೆಯ ಐಎಫ್ ಎಂಎಸ್ ಸಾಫ್ಟ್ ವೇರ್ (IFMS Software) ಹಾಗೂ ಪಾಲಿಕೆ ವೆಬ್ ಸೈಟ್ (bbmp.gov.in) ಸದ್ಯ ಡೌನ್ ಇದೆ. ಇಂದು ರಾತ್ರಿ ಬಳಿಕ ಎಲ್ಲವೂ ಸರಿಯಾಗಲಿದೆ” ಎಂದು ಅವರು ಹೇಳಿದ್ದಾರೆ.