ಬೆಂಗಳೂರು, ಫೆ.8 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಫೆ.13ರಿಂದ ಐದು ದಿನಗಳ ಕಾಲ ನಡೆಯುವ 14ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ವಿಪತ್ತು ನಿರ್ವಹಣೆಗಾಗಿ ಇದೇ ಮೊದಲ ಬಾರಿಗೆ ಕರ್ನಾಟಕ ಭೌಗೋಳಿಕ ತಂತ್ರಜ್ಞಾನ ವ್ಯವಸ್ಥೆ (Geospatial) ಆಧಾರಿತ ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿ ಅಳವಡಿಸಿಕೊಂಡಿದೆ.
ದ್ವೈವಾರ್ಷಿಕ ಏರ್ ಶೋ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿಯಿಂದ ಕೂಡಿದ ವೈಮಾನಿಕ ಪ್ರದರ್ಶನ ಸ್ಥಳದಲ್ಲಿ ಆಕಸ್ಮಿಕವಾಗಿ ಉಂಟಾಗುವ ವಿಮಾನ ಅಪಘಾತ, ಬಾಂಬ್ ಸ್ಫೋಟ, ಕಾಲ್ತುಳಿತ, ಅಗ್ನಿ ಅವಘಡ ಇತ್ಯಾದಿ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು 2005ರ ವಿಪತ್ತು ನಿರ್ವಹಣಾ ಕಾಯ್ದೆಯಡಿ, ಕಂದಾಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರವು ಈಗಾಗಲೇ ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದೆ. ಈ ಬಾರಿ ವಿಪತ್ತು ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನ, ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ದೂರ ಸಂವೇದಿ ವಿಜ್ಞಾನ ಆಧಾರಿತ ವ್ಯವಸ್ಥೆಯನ್ನು ಬಳಸಿಕೊಂಡು ಅತ್ಯಾಧುನಿಕ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿದೆ.
ಹೊಸ ರೀತಿಯ ಡಿಎಂ ಪ್ಲಾನ್ ಹೇಗೆ ಕೆಲಸ ಮಾಡುತ್ತೆ? :
ನೈಜ ಸಮಯದಲ್ಲಿನ ಭೌಗೋಳಿಕ ದತ್ತಾಂಶಗಳು ಹಾಗೂ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳು ವಿಪತ್ತು ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯನ್ನು ಬಲಗೊಳಿಸಿ ಜೀವಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಗಳನ್ನು ತಡೆಗಟ್ಟುತ್ತದೆ. ಇದಕ್ಕಾಗಿ ವೈಮಾನಿಕ ಪ್ರದರ್ಶನದ ಹೊರಾಂಗಣ ಮತ್ತು ಒಳಾಂಗಣವನ್ನು ಪ್ರತಿ 2 ಕಿ.ಮೀ ವ್ಯಾಪ್ತಿ ಪ್ರದೇಶಗಳಲ್ಲಿನ ವಿಪತ್ತುಗಳನ್ನು ನಿರ್ವಹಿಸಲು ಭೌಗೋಳಿಕ ನಕ್ಷೆಯಾಧಾರಿತ ವಿಪತ್ತು ಮತ್ತು ತುರ್ತು ಪರಿಸ್ಥಿತಿಗಳನ್ನು ವರದಿ ಮಾಡಲು ಹಾಗೂ ಅವಶ್ಯವಿರುವ ಸಂಪನ್ಮೂಲಗಳನ್ನು ಗುರುತಿಸಲು ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (KGIS) ಯನ್ನು ಬಳಸಲಾಗಿದೆ.
ವೈಮಾನಿಕ ಪ್ರದರ್ಶನದಂತಹ ಬೃಹತ್ ಕಾರ್ಯಕ್ರಮಗಳಲ್ಲಿ ನೈಜ ಸಮಯಾಧಾರಿತ, ಸ್ಥಳ ನಿರ್ದಿಷ್ಟ ಭೌಗೋಳಿಕ ಮಾಹಿತಿಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಭೌಗೋಳಿಕ ತಂತ್ರಜ್ಞಾನ ಆಧಾರಿತ ನಕ್ಷೆಗಳು, ಆ ಸ್ಥಳದ ನಿರ್ಧಿಷ್ಟ ದತ್ತಾಂಶಗಳು, ತಂತ್ರಾಂಶಗಳು ಹಾಗೂ ಮೊಬೈಲ್ ತಂತ್ರಾಂಶಗಳು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಅತ್ಯಗತ್ಯವಾಗುತ್ತದೆ.
ಯಲಹಂಕ ವಾಯುನೆಲೆ ಸುತ್ತಲಿನ ಪ್ರದೇಶ 9 ಗ್ರಿಡ್ ಗಳಾಗಿ ವಿಭಜನೆ :
ಹೀಗಾಗಿ ಯಲಹಂಕ ವಾಯುನೆಲೆ ಸುತ್ತಲಿನ ಪ್ರದೇಶಗಳ ಭೌಗೋಳಿಕ ವಿಶ್ಲೇಷಣೆಯನ್ನು ಕೈಗೊಂಡು, ಮೂಲ ನಕ್ಷೆಯನ್ನು ತಯಾರಿಸಲಾಗಿದೆ. ವಿಪತ್ತು ನಿರ್ವಹಣೆಗೆ ಅಗತ್ಯವಾದ ರೂಪುರೇಷೆ ಮತ್ತು ಯೋಜನೆಗಳನ್ನು ಒಳಗೊಂಡ ನಕ್ಷೆಗಳನ್ನು ಸಿದ್ಧಪಡಿಸಿದ್ದು, ಒಟ್ಟಾರೆ ವೈಮಾನಿಕ ಪ್ರದರ್ಶನ ಪ್ರದೇಶವ್ಯಾಪ್ತಿಯನ್ನು ಹೊರಾಂಗಣ ಮತ್ತು ಒಳಾಂಗಣ ಗ್ರಿಡ್ ಮತ್ತು ಉಪಗ್ರಿಡ್ ಗಳನ್ನಾಗಿ ವಿಭಜಿಸಲಾಗಿದೆ. ಘಟನಾ ಸ್ಥಳದ ಮತ್ತು ಸುತ್ತಮುತ್ತಲಿನ 5 ಕಿ.ಮೀ ಪ್ರದೇಶವನ್ನು 5 ಕಿ.ಮೀx5 ಕಿ.ಮೀ ನಂತೆ ವಿಭಜಿಸಲಾಗಿದೆ. ಒಟ್ಟಾರೆ ಪ್ರದೇಶವನ್ನು 9 ಗ್ರಿಡ್ ಗಳನ್ನು ವಿಭಜಿಸಲಾಗಿದೆ.
ಪ್ರತಿ ಗ್ರಿಡ್, ಸಬ್ ಗ್ರಿಡ್ ಮತ್ತು ಮೈಕ್ರೋ ಗ್ರಿಡ್‌ಗಳನ್ನಾಗಿ ವಿಭಜಿಸಿ ಪ್ರತ್ಯೇಕ ಸಂಖ್ಯೆಗಳೊಂದಿಗೆ ಗುರುತಿಸಲಾಗಿದೆ. ಒಟ್ಟಾರೆ ದತ್ತಾಂಶವನ್ನು ಡಿಜಿಟಲ್‌ಗೊಳಿಸಲಾಗಿದ್ದು, ಸಂಪನ್ಮೂಲಗಳನ್ನು ಗುರುತಿಸುವಿಕೆ ಮತ್ತು ಸದ್ಬಳಕೆ, ಸಂಘಟಿತ ಪ್ರತಿಕ್ರಿಯೆಗಳು, ತಂಡಗಳ ನಿಯೋಜನೆ ಹಾಗೂ ಮಾರ್ಗಸೂಚಿಗಳನ್ನು ನೀಡಲು ಕರ್ನಾಟಕ ರಾಜ್ಯ ದೂರಸಂವೇಧಿ ಅನ್ವಯಿಕ ಕೇಂದ್ರವು ಪ್ರಪ್ರಥಮವಾಗಿ ಭೌಗೋಳಿಕ ತಂತ್ರಜ್ಞಾನ ಅಧಾರಿತ : http://kgis.ksrsac.in/aeroindia ಅಂತರ್ಜಾಲತಾಣವನ್ನು ಅಭಿವೃದ್ಧಿಪಡಿಸಿದ್ದು ಒಳಾಂಗಣ ಮತ್ತು ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆಗಳ ಎಲ್ಲಾ ಅಂಶಗಳನ್ನು ಪ್ರಸ್ತುತ ಪಡಿಸಲಾಗಿದೆ.
ಸಂಬಂಧ ಇಲಾಖೆಗಳ ಸಂಪನ್ಮೂಲಗಳ ನಿಯೋಜನೆ, ನಿರ್ಧಿಷ್ಟ ಪಡಿಸುವುದು, ದತ್ತಾಂಶಗಳ ನೊಂದಾಯಿಸುವುದು ಹಾಗೂ ನಕ್ಷೆಗಳನ್ನು ವಿಪತ್ತು ನಿರ್ಧಾರ ವ್ಯವಸ್ಥೆಗಳಿಗೆ ತಕ್ಕಂತೆ ನಕ್ಷೆಗಳನ್ನು ಪ್ರದರ್ಶಿಸಲು ವ್ಯವಸ್ಥೆಯನ್ನು ಕಲ್ಪಿಸಿದೆ. ವಿಪತ್ತು ಹಾಗೂ ತುರ್ತು ಪರಿಸ್ಥಿತಿಗಳನ್ನು ವರದಿ ಮಾಡಲು ಹಾಗೂ ಆವಶ್ಯವಿರುವ ಸಂಪನ್ಮೂಲಗಳನ್ನು ಗುರುತಿಸಿ ನೆರವಾಗಲು ಪ್ರತ್ಯೇಕ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದೆಲ್ಲದರಿಂದ ದುರ್ಘಟನೆಗಳಾದಾಗ ತುರ್ತಾಗಿ ಅವುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಅಲ್ಲದೆ ದುರಂತದಿಂದಾಗುವ ಹೆಚ್ಚಿನ ಹಾನಿಯನ್ನು ತಡೆಗಟ್ಟಬಹುದು.
ಸಂಭವನೀಯ ವಿಪತ್ತುಗಳು ಹಾಗೂ ಅಪಾಯಗಳು :
ವೈಮಾನಿಕ ಪ್ರದರ್ಶನ-2023ರ ಸಂದರ್ಭದಲ್ಲಿ ಕೋಡ್ 19, ಬೆಂಕಿ ಅವಘಡ, ಕಟ್ಟಡ ಕುಸಿತ, ಕಾಲ್ತುಳಿತ, ವಿಮಾನ ಅಪಘಾತ, ಅಣುವಿಕಿರಣ ಅಪಾಯಗಳು, ಭಯೋತ್ಪಾದನೆ ಕೃತ್ಯ, ಡೋನ್ ದಾಳಿ ಅಥವಾ ಸೈಬರ್ ದಾಳಿ, ಹವಾಮಾನ ವೈಪರಿತ್ಯ, ಕುಡಿಯುವ ನೀರು ಹಾಗು ಆಹಾರದಲ್ಲಿ ವಿಷ ಸೇರ್ಪಡೆ ಸೇರಿದಂತೆ ನಾನಾ ಅಪಾಯಗಳು ಸಂಭವಿಸುವ ಸಾಧ್ಯತೆಗಳಿಗೆ ವಿಪತ್ತು ನಿರ್ವಹಣಾ ತಂಡ ಅವುಗಳಿಗೆ ಪ್ರತಿಕ್ರಿಯಿಸಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ.
ಸಂಯೋಜಿತ ಸಂವಹನ ನಿಯಂತ್ರಣ ಕೇಂದ್ರ :
ಸಂಯೋಜಿತ ಸಂವಹನ ನಿಯಂತ್ರಣ ಕೇಂದ್ರ (Integrated Communications Command Center- ICCC)ವು ಏರೋ ಇಂಡಿಯಾ ಪ್ರದರ್ಶನದಲ್ಲಿ ಆನ್ ಸೈಟ್ ಹಾಗೂ ಆಫ್ ಸೈಟ್ ನಲ್ಲಿ ಸಂಭವಿಸಬಹುದಾದ ದುರ್ಘಟನೆ ಅಥವಾ ವಿಪತ್ತು ನಿರ್ವಹಣೆಯಲ್ಲಿ ವಿವಿಧ ಇಲಾಖೆಗಳು, ತಂಡಗಳ ನಡುವೆ ನೈಜ ಸಮಯದಲ್ಲಿ ವೇಗವಾಗಿ ಹಾಗೂ ಸಮರ್ಥವಾದ ಸಂಯೋಜನೆ ಕೈಗೊಳ್ಳಲು ಅಗತ್ಯವಾದ ಪ್ರಮುಖ ಕೇಂದ್ರವಾಗಿದೆ. ಈ ಕೇಂದ್ರವನ್ನು ಯಲಹಂಕ ವಾಯುನೆಲೆಯಲ್ಲಿ ಈಗಾಗಲೇ ಸ್ಥಾಪನೆ ಮಾಡಲಾಗಿದೆ.
ವಿಪತ್ತು ನಿರ್ವಹಣೆ- ಕಾರ್ಯಾಚರಣೆಗೆ ತಂಡಗಳ ನಿಯೋಜನೆ :
ವಾಯುಪಡೆಯ ವಿಪತ್ತು ನಿರ್ವಹಣೆ ತಂಡವು 21 ಅಧಿಕಾರಿಗಳು, 48 ಏರ್ ಮನ್‌ಗಳು, 10 ಎಂಟಿಡಿ ಸಿಬ್ಬಂದಿ ಒಳಗೊಂಡಿದೆ. ಇವರಿಗೆ ಅಗತ್ಯ ರಕ್ಷಣಾ ಪರಿಕರ, ಸಲಕರಣೆಗಳನ್ನು ಒದಗಿಸಲಾಗಿದೆ. ಸಮಗ್ರ ವಿಪತ್ತು ನಿರ್ವಹಣೆಗಾಗಿ, ನಿರ್ದಿಷ್ಟ ಜವಾಬ್ದಾರಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಿದೆ. ಆ ತಂಡದಲ್ಲಿ 92 ಸದಸ್ಯರನ್ನು ಒಳಗೊಂಡ 2 ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ತಂಡಗಳು, 120 ಸದಸ್ಯರನ್ನು ಒಳಗೊಂಡ 2 ತುರ್ತು ಕಾರ್ಯಚಾರಣೆ ತಂಡಗಳು, 80 ಸದಸ್ಯರನ್ನು ಒಳಗೊಂಡ ಕೇಂದ್ರಿಯ ಮತ್ತು ರಾಜ್ಯ ಪೋಲಿಸ್ ಮೀಸಲು ಪಡೆಗಳು, 35 ಸದಸ್ಯರನ್ನು ಒಳಗೊಂಡ 5 ವಿಧ್ವಂಸಕ ಕೃತ್ಯ ತಡೆ ತಂಡಗಳು, 7 ಸದಸ್ಯರನ್ನು ಒಳಗೊಂಡ 2 ಸ್ಫೋಟಕ ಅಥವಾ ಬಾಂಬ್ ಪತ್ತೆ ಮತ್ತು ವಿಲೇವಾರಿ ಸೈನಿಕರು, ರಾಜ್ಯ ತಂಡಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 21 ಸದಸ್ಯರನ್ನು ಒಳಗೊಂಡ 3 ಸ್ಫೋಟಕ ಪತ್ತೆ ಸೈನಿಕರ ತಂಡಗಳನ್ನು ವಿಪತ್ತು ನಿರ್ವಹಣೆಗಾಗಿ ನಿಯೋಜಿಸಲಾಗಿದೆ.
ಹೊರಾಂಗಣ ವಿಪತ್ತು ನಿರ್ವಹಣೆ ವ್ಯವಸ್ಥೆ :
ವೈಮಾನಿಕ ಪ್ರದರ್ಶನ 2023 ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಲಹಂಕದ ಭಾರತೀಯ ವಾಯು ನೆಲೆಯ ಆವರಣದ ಹೊರಗೆ ಸಂಭವಿಸಬಹುದಾದ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳನ್ನು ಸಮರ್ಪಕವಾಗಿ ಹಾಗೂ ರಚನಾತ್ಮಕವಾಗಿ ನಿರ್ವಹಿಸಲು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಸಂಬಂಧಪಟ್ಟ ಇಲಾಖೆಗಳ ಸಹಭಾಗಿತ್ವದಲ್ಲಿ ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆಯನ್ನು ರೂಪಿಸಿದೆ.
ಹೊರಾಂಗಣ ತುರ್ತು ವಿಪತ್ತು ನಿರ್ವಹಣಾ ಯೋಜನೆ ಸಿದ್ಧತೆ :
ವೈಮಾನಿಕ ಪ್ರದರ್ಶನ 2023 ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೊರಾಂಗಣ ವಿಪತ್ತು ನಿರ್ವಹಣೆ ವ್ಯವಸ್ಥೆಯನ್ನು ರೂಪಿಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತರ ಅಧ್ಯಕ್ಷತೆಯಲ್ಲಿ ಡಿ.12 ರಂದು ಭಾರತೀಯ ವಾಯುಸೇನೆ, ಎಚ್‌ಎಎಲ್, ಬಿಬಿಎಂಪಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೋಲಿಸ್, ಅಗ್ನಿಶಾಮಕ ಮತ್ತು ತುರ್ತುಸೇವೆ, ಕರ್ನಾಟಕ ದೂರಸಂವೇದಿ ಅನ್ವಯಿಕ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಕೈಗೊಳ್ಳಲಾಯಿತು.
ವಿಪತ್ತು ನಿರ್ವಹಣಾ ಕೋಶ :
ವಿವತ್ತು ಘಟನೆ ಕಾರ್ಯಚರಣೆಯಡಿ ವಿಪತ್ತು ನಿರ್ವಹಣಾ ಕೋಶವನ್ನು ಸ್ಥಾಪಿಸಲಾಗಿದ್ದು, ಕಾರ್ಯಚಾರಣೆ ನಿಯಂತ್ರಣ ಕೇಂದ್ರಗಳೊಡನೆ ಕಾರ್ಯ ನಿರ್ವಹಿಸಲಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅಗ್ನಿಶಾಮಕ, ಆರೋಗ್ಯ ಮತ್ತು ಸಂಬಂಧಪಟ್ಟ ಇಲಾಖೆಗಳ ಮೊಡಲ್ ಅಧಿಕಾರಿಗಳು ಕಾರ್ಯಚಾರಣೆ ನಿಯಂತ್ರಣ ಕೇಂದ್ರಗಳಲ್ಲಿ ಭಾರತೀಯ ವಾಯುಸೇನೆ ಸಿಬ್ಬಂದಿ ಜೊತೆ ನೇರ ಸಂಪರ್ಕ ಹಾಗೂ ಸಹಕಾರ ನೀಡಲಾಗುತ್ತದೆ. ವಿಪತ್ತು ನಿರ್ವಹಣಾ ಕೋಶದಲ್ಲಿ ವಿಪತ್ತು ನಿರ್ವಹಣಾ ಯೋಜನೆಗಳು, ರಕ್ಷಣೆ ಮತ್ತು ಸ್ಥಳಾಂತರ ಯೋಜನೆಗಳು, ವಿಪತ್ತು ನಿರ್ವಹಣೆ, ವೈದ್ಯಕೀಯ, ಅಗ್ನಿಶಾಮಕ, ಪೊಲೀಸ್, ಲೋಕೋಪಯೋಗಿ, ನೀರು ಸರಬರಾಜು, ವಿದ್ಯುತ್ ಹಾಗೂ ದೂರವಾಣಿ ಇಲಾಖೆಗಳ ಮುಖ್ಯಸ್ಥರುಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್ ಸಂಪರ್ಕ ಸಂಖ್ಯೆಗಳ ಮಾಹಿತಿ ಲಭ್ಯವಿರುತ್ತದೆ.
ಪ್ರತಿದಿನ ಬೆಳಗ್ಗೆ ಸಂಜೆ ಸ್ಪೋಟಕ ಪತ್ತೆಗಾಗಿ ಪರಿಶೀಲನೆ :
ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ತಂಡ, ಕೇಂದ್ರಿಯ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಗಳು ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಮತ್ತು ತುರ್ತು ಕಾರ್ಯಚಾರಣೆ ತಲಾ 2 ತಂಡಗಳು, ವಿಷತ್ತು ಕಾರ್ಯಚಾರಣೆ ನಿಯಂತ್ರಣ ಕೇಂದ್ರದ
ಅಡಿಯಲ್ಲಿ ಕಾರ್ಯನಿರತವಾಗಿದ್ದು, ಅಗತ್ಯ ತುರ್ತು ಕಾರ್ಯಚರಣೆಗಳು, ಜನಸಂದಣಿ ಹಾಗೂ ವಿಪತ್ತು ಘಟನೆಗಳನ್ನು ನಿಯಂತ್ರಿಸಲು ತಕ್ಷಣವೇ ನಿಯಂತ್ರಿಸಲಿದೆ. ಬಾಂಬ್ ಪತ್ತೆ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ವೈಮಾನಿಕ ಪ್ರದರ್ಶನಗಳು ಆರಂಭಕ್ಕೂ ಮುನ್ನ ಮತ್ತು ಪ್ರದರ್ಶನಗಳ ನಂತರ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪರಿಶೀಲನೆ ನಡೆಸಲಿದೆ. ಅಲ್ಲದೇ ಸುಧಾರಿತ ಸ್ಫೋಟಕಗಳ ಪತ್ತೆ ಮತ್ತು ವಿಲೇವಾರಿ ಜವಾಬ್ದಾರಿಯನ್ನು ನಿರ್ವಹಸುತ್ತದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜನೆಗೊಳ್ಳುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ವೈಮಾನಿಕ ಮತ್ತು ರಕ್ಷಣೆಗೆ ಸಂಬಂಧಿಸಿದ ಉದ್ಯಮಗಳು, ವೃತ್ತಿಪರತೆ, ಮಾರುಕಟ್ಟೆ, ನೂತನ ತಂತ್ರಜ್ಞಾನಗಳು ಹಾಗೂ ಅಭಿವೃದ್ಧಿಪಡಿಸುವ ಉತ್ಪಾದನೆಗಳ ಘೋಷಣೆ, ಜಾಹಿರಾತು, ಪ್ರಸಾರ, ಮನ್ನಣೆಗಳನ್ನು ಪಡೆಯಲು ಹಾಗೂ ಸಾರ್ವಜನಿಕ ವೈಮಾನಿಕ ಪ್ರದರ್ಶನಗಳಿಗೆ ವೇದಿಕೆಯನ್ನು ಕಲ್ಪಿಸುತ್ತದೆ. ಇದರಲ್ಲಿ ದೇಶೀಯ ಮತ್ತು ವಿದೇಶಿ ಪ್ರದರ್ಶಕರು, ಶಸ್ತ್ರಾಸ್ತ್ರ ಉತ್ಪಾದಕರು, ಉದ್ಯಮಿಗಳು ಭಾಗವಹಿಸುವ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣಾ ಯೋಜನೆಯು ಪ್ರಮುಖವಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರು ಹೀಗಂತಾರೆ :
“ನಾವು ಆಧುನಿಕ ತಂತ್ರಜ್ಞಾನಗಳ ಮೂಲಕ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸೂಕ್ತ ಸಂದರ್ಭದಲ್ಲಿ ವೇಗವಾಗಿ ನಿರ್ಧಾರ ಕೈಗೊಳ್ಳಲು ಸೂಕ್ತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ. ಬಿಕ್ಕಟ್ಟು ನಿರ್ವಹಣೆಗೆ ಸಹಾಯ ಮಾಡಲು ಇದೇ ಪ್ರಥಮ ಬಾರಿಗೆ ಏರೋ ಇಂಡಿಯಾ ಪ್ರದರ್ಶನ ನಡೆಯುವ ಸ್ಥಳದ ಜಿಯೋಸ್ಪೇಷಿಯಲ್ ಪರಿಸರದಲ್ಲಿ ರಿಮೋಟ್ ಸೆನ್ಸಿಂಗ್ ಡೇಟಾದೊಂದಿಗೆ ಸಂಯೋಜಿಸಿದ್ದೇವೆ. ನೈಜ ಸಮಯದ ಭೌಗೋಳಿಕ ಡೇಟಾವು ತುರ್ತು ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆಗಾಗಿ ಸಂಪನ್ಮೂಲಗಳ ಹಂಚಿಕೆಯನ್ನು ಸುಧಾರಿಸಬಹುದು. ಏರೋ ಇಂಡಿಯಾ (AERO INDIA) ಪ್ರದರ್ಶನದಲ್ಲಿ ದುರ್ಘಟನೆಗಳಾದ ಸಂದರ್ಭದಲ್ಲಿ ವಿಪತ್ತು ಮತ್ತು ತುರ್ತು ನಿರ್ವಹಣೆಗೆ ಸಾಂದರ್ಭಿಕ ಅರಿವು ಪ್ರಮುಖವಾಗಿದೆ. ಕ್ಷೇತ್ರದಲ್ಲಿರುವ ಸಂಬಂಧಪಟ್ಟ ತಂಡವು ಅಲ್ಲಿನ ಕ್ಷೇತ್ರದ ಪರಿಸ್ಥಿತಿಯನ್ನು ಸೆರೆಹಿಡಿಯುತ್ತದೆ. ಇದರಿಂದ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲ.”
- ಡಾ.ಮನೋಜ್ ರಾಜನ್, ಆಯುಕ್ತರು, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ