ಬೆಂಗಳೂರು, ಫೆ.7 www.bengaluruwire.com : ನಾಡಪ್ರಭು ಕೆಂಪೇಗೌಡ ಬಡಾವಣೆ (NPKL)ಯಲ್ಲಿ ಭೂಸ್ವಾಧೀನ ಪ್ರಕರಣದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದ ಸುಮಾರು ಹತ್ತಕ್ಕೂ ಹೆಚ್ಚು ಭೂಮಾಲೀಕರು ಪ್ರಕರಣವನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ.
ಕೆಂಪೇಗೌಡ ಬಡಾವಣೆಗೆ ಸಂಬಂಧಿಸಿದಂತೆ ಭೂಮಾಲೀಕರುಗಳು ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವಂತೆ ಬಿಡಿಎ ಆಯುಕ್ತ ಕುಮಾರ್ ನಾಯಕ್ ರೈತರ ಮನವೊಲಿಸುವ ಕಾರ್ಯ ನಡೆಸಿದ್ದರು. ಹೀಗಾಗಿ ಹಲವು ರೈತರು ತಾವು ನ್ಯಾಯಾಲಯದಲ್ಲಿ ದಾಖಲು ಮಾಡಿರುವ ಪ್ರಕರಣದಲ್ಲಿ 60:40 ಅನುಪಾತದಲ್ಲಿ ನಿವೇಶನ ಪಡೆಯಲು ಒಪ್ಪಿ ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ.
ಚಂದ್ರಶೇಖರಯ್ಯ, ನಂಜುಂಡೇಶ್, ಮರಿಯಮ್ಮ, ನರಸಮ್ಮ, ರಾಜಣ್ಣ, ದಾಸೇಗೌಡ ಹಾಗೂ ವಿಜಯ್ ಅವರು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ವಾಪಸ್ ಪಡೆಯಲು ಪ್ರಕ್ರಿಯೆ ಆರಂಭಿಸಿದ್ದಾರೆ.
ಸಾಮಾನ್ಯ ಜನರ ಹಿತ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ರಚಿಸುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದ ರೈತರು ಪ್ರಕರಣವನ್ನು ವಾಪಸ್ ಪಡೆಯುವಂತೆ ಬಿಡಿಎ ಆಯುಕ್ತ ಜಿ. ಕುಮಾರ ನಾಯಕ ಮನವಿ ಮಾಡಿದ್ದಾರೆ.
ಬಿಡಿಎಗೆ ಭೂಮಿ ಬಿಟ್ಟುಕೊಡುವ ರೈತರಿಗೆ ಪ್ರಾಧಿಕಾರದ ನಿಯಮಾವಳಿಗಳಂತೆ ಪರಿಹಾರ ಕಲ್ಪಿಸಲಾಗುವುದು. ಹಾಗೂ ಎಲ್ಲಾ ರೈತರು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ವಾಪಸ್ ಪಡೆದರೆ ಬಡಾವಣೆ ಅಭಿವೃದ್ಧಿ ವೇಗವಾಗಿ, ರೈತರು ವೃಥಾ ಅಲೆದಾಟ ತಪ್ಪಿಸಿ ಶೀಘ್ರವಾಗಿ ನಿವೇಶನವನ್ನು ನೀಡಬಹುದು. ಇದರಿಂದ ನಿವೇಶನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಅರ್ಜಿದಾರರಿಗೂ ಅನುಕೂಲವಾಗಲಿದೆ ಎಂದು ಆಯುಕ್ತರು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ 4,041 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ ಈಗಾಗಲೇ 2,635 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕೆಂಪೇಗೌಡ ಬಡಾವಣೆಯಲ್ಲಿ 2,635 ಎಕರೆ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ. 2015-16ರಿಂದ ಈವರೆಗೆ ನಿವೇಶನಗಳ ಹಂಚಿಕೆಯಿಂದ ಬಿಡಿಎ 2,053.16 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ. ಆದರೆ, ಸ್ವಾಧೀನಪಡಿಸಿಕೊಂಡ ಭೂಮಿಗೆ 685.17 ಕೋಟಿ ಪರಿಹಾರ ಮತ್ತು ಮೂಲಸೌಕರ್ಯ ಒದಗಿಸಲು 1,854.50 ಕೋಟಿ ಸೇರಿದಂತೆ 2,539.67 ಕೋಟಿ ರೂ. ಖರ್ಚು ಮಾಡಿದೆ.
ಭೂಸ್ವಾಧೀನ ಮಾಡಲು ತ್ವರಿತ ಕ್ರಮವಹಿಸಿ :
ಆಯುಕ್ತರು ಭೂಸ್ವಾಧೀನ ತಂಡವನ್ನು ವಿಸ್ತರಿಸಬೇಕು ಮತ್ತು ಸ್ವಾಧೀನದ ಸಮಸ್ಯೆಗಳನ್ನು ಪರಿಹರಿಸಲು ಗುರಿಗಳನ್ನು ಇಟ್ಟುಕೊಳ್ಳಬೇಕು. ಏಕೆಂದರೆ ಎನ್ಪಿಕೆಎಲ್ ಭೂಸ್ವಾಧೀನ ವಿಭಾಗವು ಕೇವಲ ಒಬ್ಬ ಎಸ್ಎಲ್ ಅಧಿಕಾರಿಯನ್ನು ಹೊಂದಿದೆ ಮತ್ತು ಇಲ್ಲಿ ಸರ್ವೇಯರ್ ಇಲ್ಲ. ಭೂಸ್ವಾಧೀನಕ್ಕೆ ಬಾಕಿಯಿರುವ 1,400 ಎಕರೆ ಪೈಕಿ ಹೈಕೋರ್ಟ್ನಲ್ಲಿ 600 ಎಕರೆಗೆ ಸಂಬಂಧಿಸಿದಂತೆ ಪ್ರಕರಣ ಬಾಕಿಯಿದೆ. ಉಳಿದಂತೆ 800 ಎಕರೆಗೂ ಹೆಚ್ಚು ಸರ್ಕಾರಿ ಭೂಮಿ, ಕಂದಾಯ ಭೂಮಿ ಮತ್ತು ನ್ಯಾಯಾಲಯದಿಂದ ಹೊರಗಿರುವ ಆರ್ಟಿಸಿ ಅಸಮಂಜಸವಿರುವ ಭೂಮಿಯನ್ನು ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಜಂಟಿ ಕಾರ್ಯದರ್ಶಿ ಎ.ಎಸ್.ಸೂರ್ಯಕಿರಣ್ ಬೆಂಗಳೂರು ವೈರ್ ನೊಂದಿಗೆ ಲೇಔಟ್ ನಲ್ಲಿನ ಸಮಸ್ಯೆಯನ್ನು ಬಿಡಿಸಿಟ್ಟಿದ್ದಾರೆ.
ಭೂಸ್ವಾಧೀನ ಸಮಸ್ಯೆಗಳನ್ನು ನಿಭಾಯಿಸಲು ಅಧಿಕಾರಿಗಳನ್ನು ಪ್ರತಿ ಗ್ರಾಮಕ್ಕೆ ಕಳುಹಿಸಬೇಕು, ತಕ್ಷಣದ ನಿವೇಶನ ನೋಂದಣಿಯೊಂದಿಗೆ ಏಕ ಗವಾಕ್ಷಿ ಪರಿಹಾರ ಒದಗಿಸಬೇಕು. ಭೂಸ್ವಾಧೀನ ಕಾರ್ಯವು ಬಾಕಿ ಉಳಿದಿರುವುದರಿಂದಾಗಿ ಎನ್ ಪಿಕೆಎಲ್ ಲೇಔಟ್ ನಲ್ಲಿ ಸಂಪರ್ಕ ಸಮಸ್ಯೆಯು ಎದುರಾಗಿದೆ. ಇದರಿಂದ ಲೇಔಟ್ ನಲ್ಲಿ ಸಮರ್ಪಕ ಸಂಪರ್ಕವಿಲ್ಲದೆ ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಅಳಸು ತೋಡಿಕೊಂಡಿದ್ದಾರೆ.
ಒಟ್ಟಾರೆ 4 ಸಾವಿರ ಎಕರೆ ಬಡಾವಣೆಯ ಯೋಜನೆಯನ್ನು ಬಿಡಿಎ 2010 ರಲ್ಲಿ ಕೈಗೆತ್ತಿಕೊಂಡಿದೆ, ಪ್ರಾಥಮಿಕ ಭೂಸ್ವಾಧೀನ ಅಧಿಸೂಚನೆಯನ್ನು 2010 ರಲ್ಲಿ ಹೊರಡಿಸಲಾಯಿತು ಮತ್ತು 2014 ರ ಸುಮಾರಿಗೆ ಅಂತಿಮ ಅಧಿಸೂಚನೆಯ ನಂತರ ಇಲ್ಲಿಯವರೆಗೆ 2640 ಎಕರೆ ಭೂಮಿಯನ್ನು ಬಿಡಿಎ ಭೂ ಸ್ವಾಧೀನ ವಿಭಾಗ ಸ್ವಾಧೀನಪಡಿಸಿಕೊಂಡು ಬಡಾವಣೆ ರೂಪಿಸಲು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಿದೆ. ಹಾಗೂ 1,400 ಎಕರೆ ಭೂಸ್ವಾಧೀನವು ವಿವಿಧ ರೀತಿಯ ತಕರಾರುಗಳಿಂದ ಇನ್ನು ಬಾಕಿ ಉಳಿದಿದೆ.
“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.