ಬೆಂಗಳೂರು, ಫೆ.7 www.bengaluruwire.com : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL)ದಲ್ಲಿ 2022ನೇ ವರ್ಷದಲ್ಲಿ 27.50 ದಶಲಕ್ಷ ಜನರು ಪ್ರಯಾಣಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದು 2019ರ ಕೋವಿಡ್ ಪೂರ್ವ ಅವಧಿಗಿಂತಲೂ ಹೆಚ್ಚು. ದೇಶಿಯ ವಲಯದಲ್ಲಿ ಶೇ.85ರಷ್ಟು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇ.65ರಷ್ಟು ಚೇತರಿಕೆ ಕಂಡಿದೆ.
27.50 ದಶಲಕ್ಷ ಪ್ರಯಾಣಿಕರಲ್ಲಿ 24.36 ದಶಲಕ್ಷ ದೇಶೀಯ ಪ್ರಯಾಣಿಕರು ಹಾಗೂ 3.14 ದಶಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿಯೇ ಅತ್ಯಧಿಕ ಜನರು ವಿಮಾನ ಪ್ರಯಾಣವನ್ನು ಆಯ್ಕೆ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಪ್ರಮುಖ ದೇಶಿಯ ಹಾಗೂ ವಿದೇಶಿಯ ವ್ಯಾಪಾರ ಕೇಂದ್ರಗಳ ಮಾರ್ಗ ಮರು ಪ್ರಾರಂಭ ಹಾಗೂ ಹೊಸಮಾರ್ಗಗಳ ಪರಿಚಯದಿಂದಾಗಿ ತ್ವರಿತ ಸುಧಾರಣೆ ಹಾಗೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ವರ್ಷಾಂತ್ಯದಲ್ಲಿ ಚೇತರಿಕೆ :
ಇನ್ನು, ಡಿಸೆಂಬರ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಈ ಒಂದು ತಿಂಗಳಲ್ಲಿಯೇ 3.13 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ (ಅದರಲ್ಲಿ 2.74 ದಶಲಕ್ಷ ದೇಶೀಯ ಪ್ರಯಾಣಿಕರು) 2019ರ ಡಿಸೆಂಬರ್‌ನಲ್ಲಿ 3.06 ದ.ಲ ಪ್ರಯಾಣಿಕರು ಪ್ರಯಾಣಿಸಿದ್ದರು. ಆದರೆ, 2022ರ ಡಿಸೆಂಬರ್ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಟ್ಟಿದ್ದು, ಡಿ.23 ಒಂದೇ ದಿನದಂದು ಬರೋಬ್ಬರಿ 1,07,825 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ, ವಿಮಾನ ಸಾರಿಗೆ ಚಲನೆಗಳಲ್ಲಿ (ಎಟಿಎಂ) ಶೇ.98ರಷ್ಟು ಚೇತರಿಕೆ ಕಂಡಿದೆ.
ದೇಶದಾದ್ಯಂತ 75 ಸ್ಥಳಗಳಿಗೆ ವಿಮಾನ ಸಂಪರ್ಕ :
ಕೋವಿಡ್ ಸಾಂಕ್ರಾಮಿಕದ ಬಳಿಕ, ಬಹುತೇಕ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಪುನರಾರಂಭಿಸಿವೆ ಹಾಗೂ 2022ರಲ್ಲಿ ಹೆಚ್ಚಿನ ಸಂಖ್ಯೆಯ ನಗರಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರಸ್ತುತ, ಬೆಂಗಳೂರು ವಿಮಾನ ನಿಲ್ದಾಣವು ಭಾರತಾದ್ಯಂತ 75 ಸ್ಥಳಗಳಿಗೆ ಸಂಪರ್ಕ ಹೊಂದಿದ್ದು, ಪೂರ್ವ ಕೋವಿಡ್‌ಗೆ ಹೋಲಿಸಿದರೆ 16 ಸ್ಥಳಗಳು ಹೊಸದಾಗಿ ಸೇರ್ಪಡೆಗೊಂಡಿದೆ. “ಆಕಾಶ ಏರ್‌ಲೈನ್” ಸಂಸ್ಥೆಯ ಬೆಳವಣಿಗೆ ಗಮನಾರ್ಹವಾಗಿದ್ದು, ಈ ವಿಮಾನ ನಿಲ್ದಾಣದಲ್ಲಿ ತಮ್ಮ ಉಪಸ್ಥಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಏರ್‌ಲೈನ್ ಪ್ರಾರಂಭಗೊಂಡ 6 ತಿಂಗಳೊಳಗೆ 11 ಸ್ಥಳಗಳಿಗೆ ಪ್ರತಿದಿನ 30 ಬಾರಿ ವಿಮಾನಯಾನ ನಡೆಸುತ್ತಿದೆ.
ಮಾರ್ಚ್ 2022 ರಲ್ಲಿ ನಿಗದಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳ ಪುನರಾರಂಭದ ನಂತರ, ಕ್ವಾಂಟಾಸ್ ಏರ್‌ವೇಸ್‌ನಿಂದ ಬೆಂಗಳೂರು ಮತ್ತು ಸಿಡ್ನಿ ನಡುವೆ ನೇರ ಮಾರ್ಗವನ್ನು (ನಾಲ್ಕು ಸಾಪ್ತಾಹಿಕ ವಿಮಾನಗಳು) ಪರಿಚಯಿಸಲಾಯಿತು, ಇದು ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ಮೊದಲ ನೇರ ಸಂಪರ್ಕವಾಗಿದೆ. ಇನ್ನು, ಬಿಎಲ್‌ಆರ್ ಮತ್ತು ದಕ್ಷಿಣ ಭಾರತದಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಮಿರೇಟ್ಸ್ A380 (ವಿಶ್ವದ ಅತಿ ದೊಡ್ಡ ವಿಮಾನ) ಸೇವೆಯನ್ನು ದುಬೈಗೆ ಪ್ರಾರಂಭಿಸಲಾಗಿದೆ. ಜೊತೆಗೆ, ಏರ್ ಇಂಡಿಯಾ ತನ್ನ ಬೆಂಗಳೂರು – ಸ್ಯಾನ್ ಫ್ರಾನ್ಸಿಸ್ಕೊ ಮೂರು-ಸಾಪ್ತಾಹಿಕ ಮಾರ್ಗವನ್ನು ಡಿಸೆಂಬರ್ 2022ರಲ್ಲಿ ಪುನರ್ ಪ್ರಾರಂಭ ಮಾಡಿದೆ.
ಈ ವಿಮಾನಯಾನದಿಂದ ಬೆಂಗಳೂರು ವಿಮಾನ ನಿಲ್ದಾಣವು ಉತ್ತರ ಅಮೆರಿಕಾಕ್ಕೆ ನೇರ ಸಂಪರ್ಕ ಹೊಂದುವ ದಕ್ಷಿಣ ಮತ್ತು ಮಧ್ಯ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಇದು ಬೆಂಗಳೂರು ಮಾರುಕಟ್ಟೆಯ ವಿಕಾಸ ಮತ್ತು ಅಭಿವೃದ್ಧಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದೇ ಮಾದರಿ ಇತರ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸಹ 2022 ರಲ್ಲಿ ಇಲ್ಲಿನ ವಿಮಾನ ನಿಲ್ದಾಣದಿಂದ ವಿಮಾನಯಾನವನ್ನು ಪುನರಾರಂಭಿಸಿವೆ.
ಕೆಐಎಎಲ್ ಏರ್ ಪೋರ್ಟ್ ವರ್ಗಾವಣೆ ಕೇಂದ್ರ :
ಬೆಂಗಳೂರು ವಿಮಾನ ನಿಲ್ದಾಣವು ಬೌಗೋಳಿಕವಾಗಿ ಪ್ರಾದೇಶಿಕ ಸಂಪರ್ಕದ ಕೇಂದ್ರವಾಗಿದ್ದು, ಈ ಕಾರಣದಿಂದಾಗಿ ಒಂದೆಡೆ ಆಗಮಿಸಿ ಬೇರೆ ಕಡೆ ವರ್ಗಾವಣೆಯಾಗುವ ಪ್ರಯಾಣಿಕರ ಸಂಖ್ಯೆಯ ಹೆಚ್ಚಳಕ್ಕೂ ಕಾರಣವಾಗಿದೆ. 100 ಕ್ಕೂ ಹೆಚ್ಚು ದೈನಂದಿನ ನಿರ್ಗಮನಗಳೊಂದಿಗೆ, ವರ್ಗಾವಣೆ ಪ್ರಯಾಣಿಕರ ಪಾಲು ಶೇ.15ಕ್ಕೆ ಏರಿದೆ. (ಪೂರ್ವ ಕೋವಿಡ್ ವರ್ಷಗಳಿಗೆ ಹೋಲಿಸಿದರೆ ಶೇ.5ರಷ್ಟು). ಇದು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಆದ್ಯತಾ ವರ್ಗಾವಣೆ / ಸಾರಿಗೆ ವಿಮಾನ ನಿಲ್ದಾಣವಾಗಿ ಬೆಂಗಳೂರು ವಿಮಾನ ನಿಲ್ದಾಣ ಸ್ಥಾನ ಪಡೆದುಕೊಂಡಿದೆ.
ದೇಶ – ವಿದೇಶ ಸಂಚಾರದಲ್ಲಿ ಇವು ಪ್ರಮುಖ ಮಾರ್ಗಗಳು :
2022 ವರ್ಷದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿ ಮತ್ತು ಹೈದರಾಬಾದ್ ಅಗ್ರ ದೇಶೀಯ ಮಾರ್ಗಗಳಾಗಿ, ದೇಶೀಯಾ ಸಂಚಾರದಲ್ಲಿ ಸರಿಸುಮಾರು ಶೇ.40ರಷ್ಟು ಕೊಡುಗೆ ನೀಡಿವೆ. ದುಬೈ, ಮಾಲೆ, ಸಿಂಗಾಪುರ್, ದೋಹಾ ಮತ್ತು ಅಬುಧಾಬಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸಂಚಾರದಲ್ಲಿ ಶೇ.47ರಷ್ಟು ಪಾಲು ಪಡೆದುಕೊಂಡ ಅಗ್ರ ಅಂತಾರಾಷ್ಟ್ರೀಯ ಮಾರ್ಗಗಳಾಗಿವೆ.
“ಕೋವಿಡ್ ವರ್ಷಗಳು ನಮಗೆ ತುಂಬಾ ಸವಾಲಾಗಿತ್ತು. ಅದರ ಹೊರತಾಗಿಯೂ, ಪ್ರಯಾಣಿಕರ ದಟ್ಟಣೆಯಲ್ಲಿ ಸ್ಥಿರವಾದ ಚೇತರಿಕೆಯಿಂದ ಸಂತಸವಾಗಿದೆ. ಪ್ರಯಾಣಿಕರ ಸೌಕರ್ಯ ಮತ್ತು ತಡೆರಹಿತ ಪ್ರಯಾಣವು ಆದ್ಯತೆಯಾಗಿ ಮುಂದುವರಿಯುತ್ತದೆ. ಇದರ ಜೊತೆಗೆ, ನಮ್ಮ ಸರಕು ಪಾಲುದಾರಿಕೆಗಳು ನಮ್ಮ ವ್ಯಾಪಾರದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ 2 (T2) ಉದ್ಘಾಟನೆಯೊಂದಿಗೆ ನಮ್ಮ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ 2022 ವರ್ಷವು ನಮಗೆ ಮಹತ್ವದ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ” ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸಾತ್ಯಕಿ ರಘುನಾಥ್ ತಿಳಿಸಿದ್ದಾರೆ.
“ಟರ್ಮಿನಲ್-2 ಕಾರ್ಯಾಚರಣೆಯೊಂದಿಗೆ, ಕೆಐಎಎಲ್ ವಿಮಾನ ನಿಲ್ದಾಣ ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ನೈಸರ್ಗಿಕ ಹೆಬ್ಬಾಗಿಲಾಗಿ ಸೇವೆ ಸಲ್ಲಿಸುವ ಮೂಲಕ ಇನ್ನಷ್ಟು ಉತ್ತಮ ಸ್ಥಾನವನ್ನು ಪಡೆದುಕೊಳ್ಳಲಿದೆ” ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ
ಕಾರ್ಗೋ ಸರಕು ಸಾಗಣೆ ಬೆಳವಣಿಗೆ :
ಬೆಂಗಳೂರು ಏರ್ ಪೋರ್ಟಿನ ಕಾರ್ಗೋ ಸತತ ಎರಡನೇ ವರ್ಷ, ಹಾಳಾಗುವ ಪದಾರ್ಥಗಳ ಸಾಗಾಟದಲ್ಲಿ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಜೊತೆಗೆ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿಯೂ ಹೆಸರುಪಡೆದುಕೊಂಡಿದೆ. 14 ದೇಶೀಯ ಮತ್ತು 41 ಮಾರ್ಗಗಳಲ್ಲಿ ವಿದೇಶಿ ಸರಕು ವಾಹಕಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಕಾರ್ಗೋ, ದೇಶದ ಅಗ್ರ ಕಾರ್ಗೋ ವಿಮಾನ ನಿಲ್ದಾಣಗಳಲ್ಲಿ ತನ್ನ ಸ್ಥಾನವನ್ನು ಭದ್ರಮಾಡಿಕೊಂಡಿದೆ.
2022 ವರ್ಷದಲ್ಲಿ ಸರಕು ಪ್ರಮಾಣವು 412,668 ಮೆಟ್ರಿಕ್ ಟನ್ ಆಗಿದ್ದು, ಇದು ವಿಮಾನ ನಿಲ್ದಾಣದ ಪ್ರಾರಂಭದ ದಿನದಿಂದ ನಿರ್ವಹಿಸಲಾದ ಅತ್ಯಧಿಕ ಪ್ರಮಾಣದ ಸರಕಾಗಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು ಟನ್ ಸರಕು ಸಾಗಣೆ ಆಮದು ಮಾಡಿಕೊಳ್ಳುವ ಮೂಲಕ 2022ರಲ್ಲಿ ದೇಶೀಯ ಸರಕು ಶೇ.8ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 29 ರಂದು ಒಂದೇ ದಿನದಲ್ಲಿ 1,612 ಮೆ.ಟನ್ ಅತ್ಯಧಿಕ ಸರಕು ಸಾಗಣೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.