ಬೆಂಗಳೂರು, ಫೆ.4 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲು ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಅಗತ್ಯ ಅನುದಾನ ಕಲ್ಪಿಸುವಂತೆ ಬೆಂಗಳೂರು ಪ್ರಯಾಣಿಕರ ವೇದಿಕೆ ಒತ್ತಾಯಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡಲು ಇಂದ ವೇದಿಕೆವತಿಯಿಂದ ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ಹಾಗೂ ಸಹಿಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ನಗರದಲ್ಲಿ ದುಬಾರಿ ಬಿಎಂಟಿಸಿ ಬಸ್ ದರದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸದಸ್ಯರು ಫಲಕಗಳನ್ನು ಹಿಡಿದು ಸಾರ್ವಜನಿಕರ ಗಮನ ಸೆಳೆದರು.
ನಗರದಲ್ಲಿ ಅನೇಕರು ದುಬಾರಿ ಬಸ್ ಟಿಕೆಟ್‍ಗಳಿಂದಾಗಿ ತಮ್ಮ ಕೆಲಸದ ಸ್ಥಳಗಳಿಗೆ 3-4 ಕಿ.ಮೀ.ಗಳಷ್ಟು ದೂರ ನಡೆದುಕೊಂಡೇ ಹೋಗುತ್ತಿದ್ದಾರೆ. ಬಸ್ ಪ್ರಯಾಣವನ್ನು ಬಳಸುವ ಅನೇಕರು ಕೇವಲ ರೂ.10 ಟಿಕೆಟ್ ದರಕ್ಕೆ ಎಷ್ಟು ದೂರ ಹೋಗಬಹುದೋ ಅಲ್ಲಿಯವರೆಗೆ ಮಾತ್ರ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದಾರೆ. ಕಡಿಮೆ ಆದಾಯವುಳ್ಳ ಕುಟುಂಬಗಳಲ್ಲಿ, ದುಬಾರಿ ಸಾರ್ವಜನಿಕ ಸಾರಿಗೆಯಿಂದಾಗಿ ಯಾವ ರೀತಿ ಅವರ ಜೀವನದ ಮೇಲೆ ಪರಿಣಾಮ ಬೀರಿದೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ ಎಂದು ವೇದಿಕೆ ಕಾರ್ಯಕರ್ತರು ಮನವರಿಕೆ ಮಾಡಿಕೊಟ್ಟರು.
ಬಿಎಂಟಿಸಿ ನಗರದ ಎಲ್ಲಾ ಭಾಗಗಳಿಗೂ ಸೂಕ್ತ ಸಂಪರ್ಕ ಹಾಗೂ ಸೇವೆಯನ್ನು ಕಲ್ಪಿಸುತ್ತಿಲ್ಲ. ವಿಶೇಷವಾಗಿ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಜನರು, ನಗರದ ಹೊರವಲಯಗಳಲ್ಲಿ ವಾಸಿಸುವವರು, ಮುಖ್ಯ ರಸ್ತೆಗಳಿಂದ ದೂರ ಒಳ ಭಾಗಗಳಲ್ಲಿ ವಾಸಿಸುತ್ತಿರುವವರು ಬಸ್ ಹಿಡಿಯಲು 2-3 ಕಿ.ಮೀ.ಗಳಷ್ಟು ದೂರ ನಡೆದುಕೊಂಡು ಹೋಗಬೇಕಾಗುತ್ತದೆ ಅಥವಾ ದುಬಾರಿ ಶೇರ್ ಆಟೋ ಸೇವೆಗಳಿಗೆ ಮೊರೆ ಹೋಗಬೇಕಾಗುತ್ತಿದೆ. ಈ ಲಭ್ಯತೆಯ ಕೊರತೆಯು ಜನರನ್ನು ಕೈಗೆಟಕುವ ಹಾಗೂ ಸುರಕ್ಷಿತ ಸಾರಿಗೆಯಿಂದ ವಂಚಿತರಾಗಿಸುತ್ತಿದ್ದು, ಮತ್ತೊಂದೆಡೆ ಖಾಸಗಿ ವಾಹನಗಳ ಆರ್ಭಟ ಹೆಚ್ಚಾಗಿಸುವಂತೆ ಮಾಡಿದೆ ಎಂದು ವೇದಿಕೆ ಸದಸ್ಯರು ಹೇಳಿದರು.
ನಗರದ ಜನಸಂಖ್ಯೆಗೆ ಕನಿಷ್ಠ 15,660 ಬಿಎಂಟಿಸಿ ಬಸ್ ಅಗತ್ಯ :
ಬಿಎಂಟಿಸಿ ಸುಮಾರು ಒಂದು ದಶಕದಿಂದಲೂ 6000-6500 ರಷ್ಟು ಸಂಖ್ಯೆಯ ಬಸ್ಸುಗಳನ್ನೇ ನಡೆಸುತ್ತಿದೆ. ಆದರೆ ನಗರದ ಜನಸಂಖ್ಯೆ (ಪ್ರಸ್ತುತ 1.3 ಕೋಟಿ) ಹಾಗೂ ಖಾಸಗಿ ವಾಹನಗಳ ಸಂಖ್ಯೆ (ಪ್ರಸ್ತುತ 1 ಕೋಟಿ) ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಜಾಗತಿಕ ಗುಣಮಟ್ಟಗಳ ಪ್ರಾವಧಾನದ ಪ್ರಕಾರ, ಬೆಂಗಳೂರು ನಗರ 1.3 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 15,660 ಬಸ್ಸುಗಳ ಅಗತ್ಯವಿದೆ. ಈ ಹೋಲಿಕೆಯಲ್ಲಿ ಬಹಳ ಕಡಿಮೆ ಸಂಖ್ಯೆಯ ಬಸ್ಸುಗಳನ್ನು ಹೊಂದಿರುವ ಬಿಎಂಟಿಸಿಗೆ ಈಗ ಎದುರಾಗಿರುವ ಸೇವಾ ಅಂತರಗಳು ಹಾಗೂ ನಗರದ ಸಾರಿಗೆ ಬೇಡಿಕೆಯನ್ನು ಬಗೆಹರಿಸುವುದು ಸಾಧ್ಯವಾಗುತ್ತಿಲ್ಲ ಎಂದು ವೇದಿಕೆಯ ಸದಸ್ಯರಾದ ವಿನಯ್ ಶ್ರೀನಿವಾಸ್ ಬೆಂಗಳೂರು ವೈರ್ ಗೆ ತಿಳಿಸಿದರು.
ಪ್ರಸ್ತುತ ಬಿಎಂಟಿಸಿ ಬಳಿಯಿದೆ 5,600 ಬಸ್ :
ಕೋವಿಡ್ ಸಾಂಕ್ರಾಮಿಕದ ನಂತರ, ಬಿಎಂಟಿಸಿಯು ತೀವ್ರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಬಿಎಂಟಿಸಿ ನೌಕರರ ಕೆಲಸದ ಪರಿಸ್ಥಿತಿಗಳು ಹಾಗೂ ಆರ್ಥಿಕ ಸ್ಥಿತಿಗತಿಗಳೂ ಸಹ ಉಲ್ಭಣಗೊಂಡಿವೆ. ಈ ಸಮಸ್ಯೆಗಳ ವಿರುದ್ಧ ಕಾರ್ಮಿಕರು ಪ್ರತಿಭಟಿಸಿದರು. ಆದರೆ ಅನೇಕರನ್ನು ಕೆಲಸದಿಂದ ವಜಾಗೊಳಿಸಲಾಯಿತು. ಇದರ ಜೊತೆಗೆ, ನೌಕರರ ನಡುವಿನ ಸಾಮಾನ್ಯ ಘರ್ಷಣೆಗಳಿಂದಾಗಿ ಬಿಎಂಟಿಸಿಯಲ್ಲಿ ಪ್ರಸ್ತುತ ಈಗಿರುವ ಬಸ್ಸುಗಳನ್ನು ನಡೆಸುವಷ್ಟು ಸಿಬ್ಬಂದಿಗಳೂ ಲಭ್ಯವಿಲ್ಲ. ಹಾಗಾಗಿ ಈಗ ಕೇವಲ 5600 ಬಸ್ಸುಗಳು ಮಾತ್ರ ರಸ್ತೆಗಳ ಮೇಲಿವೆ . ಈ ಕಾರಣವು ನಗರದ ಅನೇಕ ಪ್ರದೇಶಗಳಿಗೆ ಬಸ್ ಸೇವೆಗಳನ್ನು ಮತ್ತಷ್ಟು ಕಡಿಮೆಯಾಗಿಸಿದೆ.
ಈ ನಿಟ್ಟಿನಲ್ಲಿ ಬಸ್ ಪ್ರಯಾಣಿಕರ ವೇದಿಕೆ, ನಗರದಲ್ಲಿ ಎಲ್ಲರ ಕೈಗೆಟಕುವಂತೆ ಸುಲಭ ದರದಲ್ಲಿ ಬಿಎಂಟಿಸಿ ಬಸ್ ಸೇವೆ ದೊರಕಲು ಸರ್ಕಾರವು ಈ ಬಾರಿಯ ಬಜೆಟ್ ನಲ್ಲಿ ಈ ಕೆಳಕಂಡ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದೆ. ಇದಲ್ಲದೆ ಜಟಕಾ.ಆರ್ಗ್ ಸರ್ಕಾರೇತರ ಸಂಘಟನೆಯು ಮುಖ್ಯಮಂತ್ರಿಗಳಿಗೆ ಆನ್ ಲೈನ್ ಸಹಿಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ.
ಸಂಕ್ಷಿಪ್ತ ಬೇಡಿಕೆಗಳು :
1) ನಗರದ ಅತ್ಯಂತ ಅಗತ್ಯವಿರುವ ಸಮುದಾಯಗಳ ಜನರಾದ ಮಹಿಳೆಯರು,Transgender ಸಮುದಾಯ , ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣವನ್ನು ಉಚಿತಗೊಳಿಸಿ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಎಂಟಿಸಿಗೆ ಅಗತ್ಯ ಹಣಕಾಸಿನ ಹಂಚಿಕೆಯನ್ನು ಮಾಡಿ (ಅಂದಾಜು ರೂ.1,500 ಕೋಟಿಗಳು). ಈ ಹಂಚಿಕೆ ವಿಶೇಷವಾಗಿ ಉಚಿತ ಪ್ರಯಾಣ ಯೋಜನೆಗಾಗಿ ಮಾತ್ರ ಮೀಸಲಿರಬೇಕು
2) ಬಿಎಂಟಿಸಿಗೆ ವಿಧಿಸಿರುವ ಸಿಬ್ಬಂದಿ ನೇಮಕಾತಿ ಸ್ಥಗಿತದ ಆದೇಶವನ್ನು ಹಿಂಪಡೆದು , ಕೂಡಲೇ 1,000 ಹೆಚ್ಚುವರಿ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳುವುದು. ಈ ಸಿಬ್ಬಂದಿಗಳ ವೇತನಕ್ಕಾಗಿ ಅಗತ್ಯ ಆಯವ್ಯಯ ಹಂಚಿಕೆ ಮಾಡುವುದು (ಅಂದಾಜು ರೂ.100 ಕೋಟಿಗಳು)
3) ಬಿಎಂಟಿಸಿಗೆ 3,000 ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಸೇರ್ಪಡೆಗೊಳಿಸುವುದು (ಹಾಲಿ ಇತರೆ ಖರೀದಿ ಯೋಜನೆಗಳ ಜೊತೆಗೆ) ಹಾಗೂ ಇದಕ್ಕಾಗಿ ಅಗತ್ಯವಾಗುವ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು. ಅಗತ್ಯವಾಗುವ ಹೆಚ್ಚುವರಿ ಅನುದಾನ (ಬಂಡವಾಳ ವೆಚ್ಚ (Capital Expenditure) ಅಂದಾಜು 1,350 ಕೋಟಿ ರೂ.ಗಳು ಹಾಗೂ ಕಾರ್ಯಾಚರಣೆ ವೆಚ್ಚ (Operational Expenditure)ಕ್ಕಾಗಿ 4,500 ಕೋಟಿ ರೂ.ಗಳಾಗುತ್ತದೆ. ಈ ಮೇಲ್ಕಂಡ ತುರ್ತು ಕ್ರಮಗಳು ಈ ಸದ್ಯಕ್ಕೆ ಸಾಕಾಗುತ್ತದೆ.
ಬಸ್ಸುಗಳ ಹೋಲಿಕೆಯಲ್ಲಿ ಮೆಟ್ರೋ ರೈಲುಗಳಲ್ಲಿನ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆ ಇದೆ. ಆದರೂ ಸಹ ಮೆಟ್ರೋ ಯೋಜನೆಗಳಿಗೆ ಹೆಚ್ಚಿನ ಆಯವ್ಯಯ ಹಂಚಿಕೆ ಮಾಡಲಾಗುತ್ತದೆ. ಹಾಗಾದರೆ, ಬಿಎಂಟಿಸಿಯಲ್ಲಿ ಹೂಡಿಕೆ ಮಾಡಲು ಸರ್ಕಾರವನ್ನು ತಡೆಯುತ್ತಿರುವ ಅಂಶವಾದರೂ ಏನು? ಸ್ಪಷ್ಟವಾಗಿ, ಇದು ಹಣದ ಕೊರತೆ ಅಲ್ಲ. ಬದಲಿಗೆ ಇಚ್ಛಾಶಕ್ತಿಯ ಕೊರತೆ!
ನಗರದ ಸಾರಿಗೆ ಅಗತ್ಯಗಳನ್ನು ಪೂರೈಸುವ ಹಾಗೂ ಉತ್ತಮ ಸೇವೆಗಳನ್ನು ಒದಗಿಸಲು ಬಿಎಂಟಿಸಿಯನ್ನು ಬಲಪಡಿಸಲು ಇನ್ನೂ ಇತರೆ ಮಹತ್ತರವಾದ ಹಾಗೂ ಸಮಗ್ರ ಬದಲಾವಣೆಗಳನ್ನು ತರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ನಗರದ ದೊಡ್ಡ ಸವಾಲುಗಳು ಹಾಗೂ ಸಂಭಾವ್ಯತೆಗಳು ಹಾಗೂ ವಿಸ್ತೃತ ಸಂಚಾರ ಪರಿಹಾರಗಳ ಕುರಿತು ಚರ್ಚಿಸಲು, ಸಮುದಾಯ ಗುಂಪುಗಳು ಹಾಗೂ ಪ್ರಯಾಣಿಕರ ತುರ್ತು ಸಭೆಯೊಂದನ್ನು ಏರ್ಪಡಿಸುವಂತೆ ಸರ್ಕಾರವನ್ನು ಈ ಮೂಲಕ ಕೋರುವುದಾಗಿ ವೇದಿಕೆಯು ತಿಳಿಸಿದೆ.