ಬೆಂಗಳೂರು, ಫೆ.4 www.bengaluruwire.com : ನಗರದ ಯಲಹಂಕ ವಾಯನೆಲೆಯಲ್ಲಿ ಫೆ.13ರಿಂದ ಐದು ದಿನಗಳ ಕಾಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ (Airshow 2023) ಮತ್ತು ಯುದ್ಧೋಪಕರಣ, ಶಸ್ತ್ರಾಸ್ತ್ರಗಳ ಪ್ರದರ್ಶನ ಹಾಗೂ ವ್ಯಾಪಾರಿ ಸಭೆಗಳು, ವಿಚಾರಸಂಕಿರಣಗಳು ನಡೆಯಲಿದೆ. ಈ ವೈಮಾನಿಕ ಪ್ರದರ್ಶನದಲ್ಲಿ ಸಾರ್ವಜನಿಕರು, ಪ್ರವಾಸಿಗರು ಹಾಗೂ ವ್ಯಾಪಾರಸ್ಥರು ಭೇಟಿ ನೀಡಬಹುದಾಗಿದೆ.
ಇದಕ್ಕಾಗಿ ಹಲವು ದಿನಗಳಿಂದಲೇ ರಕ್ಷಣಾ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ರಕ್ಷಣಾ ಉತ್ಪಾದನಾ ಇಲಾಖೆ (Department Of Defence Production) ಏರ್ ಶೋ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಟಿಕೇಟ್ ಮಾರಾಟ ನಡೆಸುತ್ತಿದೆ. 14ನೇ ಆವೃತ್ತಿಯ ದ್ವೈವಾರ್ಷಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತವುಳ್ಳವರು ಕೂಡಲೇ ತಮ್ಮ ಕಂಪ್ಯೂಟರ್, ಟ್ಯಾಬ್ ಅಥವಾ ಮೊಬೈಲ್ ನಲ್ಲಿ ಏರೊ ಇಂಡಿಯಾ ಆಂಡ್ರಾಯ್ಡ್ ಆಪ್ ಡೌನ್ ಲೋಡ್ ಮಾಡಿಕೊಂಡು ಆ ಮೂಲಕ ಏರ್ ಶೋ ಟಿಕೇಟು (Airshow Tickets) ಗಳನ್ನು ಖರೀದಿಸಬಹುದು.
ಏರೋ ಇಂಡಿಯಾ 2023 ರ ಟಿಕೆಟ್ ಬೆಲೆಗಳು ಈ ರೀತಿಯಿದೆ :
ಮೂರು ವಿಧದ ಟಿಕೆಟ್‌ಗಳು ಲಭ್ಯವಿದೆ – ವೈಮಾನಿಕ ಹಾರಾಟ ವೀಕ್ಷಣೆ ಪ್ರದೇಶ (ADVA) ಟಿಕೆಟ್‌ಗಳು, ಸಾಮಾನ್ಯ ಸಂದರ್ಶಕರ ಟಿಕೆಟ್‌ಗಳು (General Tickets) ಮತ್ತು ವ್ಯಾಪಾರ ಸಂದರ್ಶಕರ ಟಿಕೆಟ್‌ಗಳು. ಸಾಮಾನ್ಯ ಮತ್ತು ಎಡಿವಿಎ ಟಿಕೆಟ್ ಗಳನ್ನು ಹೊಂದಿರುವವರಿಗೆ ಒಂದೇ ದಿನ ಮತ್ತು ಒಂದೇ ಪ್ರವೇಶಕ್ಕಷ್ಟೇ ಅನುಮತಿಯಿರುತ್ತದೆ. ಆದಾಗ್ಯೂ, ಬ್ಯುಸಿನೆಸ್ ಟಿಕೆಟ್ (Business Tickets) ಗಳಿಗೆ ಒಂದೇ ದಿನದಲ್ಲಿ ಹಲವಾರು ಬಾರಿ ಪ್ರವೇಶಕ್ಕೆ ಅವಕಾಶವಿರುತ್ತದೆ.
ಏರ್ ಶೋ ವಸ್ತು ಪ್ರದರ್ಶನ ಮಳಿಗೆಗಳಿಗೆ ಪ್ರವೇಶ ಮತ್ತು ವೈಮಾನಿಕ ಹಾರಾಟ ವೀಕ್ಷಣೆ ಪ್ರದೇಶಕ್ಕೆ ಹೋಗಲು ಸಾಮಾನ್ಯ ಪ್ರವೇಶ ಟಿಕೆಟ್‌ಗಳ ಬೆಲೆ ಭಾರತೀಯ ನಾಗರಿಕರಿಗೆ 2,500 ರೂ. ಮತ್ತು ವಿದೇಶಿಯರಿಗೆ 50$ (ಡಾಲರ್) ಆಗಿರುತ್ತದೆ. ಇನ್ನು ಕೇವಲ ವೈಮಾನ ಹಾರಾಟ ವೀಕ್ಷಣೆ ಸ್ಥಳಕ್ಕಷ್ಟೇ ಭೇಟಿ ನೀಡುವವರಿಗಾಗಿ ಕೇವಲ ಎಡಿವಿಎ ಟಿಕೆಟ್ ಗಳನ್ನಷ್ಟೇ ಖರೀದಿಸಬಹುದು. ಇದರ ಬೆಲೆ ಭಾರತೀಯರಿಗಾದರೆ 1,000 ರೂ. ಮತ್ತು ವಿದೇಶಿಯರಿಗಾದರೆ 50$ (ಡಾಲರ್) ಪಾವತಿಸಿ ಟಿಕೆಟ್ ಖರೀದಿಸಬಹುದು. ವಿದೇಶಿ ಪ್ರಜೆಗಳು ವ್ಯಾಪಾರ ಸಂದರ್ಶಕರ ಟಿಕೆಟ್‌ಗೆ $150 ಪಾವತಿಸಿದರೆ, ಭಾರತೀಯ ನಾಗರಿಕರು 5,000 ರೂ. ಪಾವತಿಸಿ ಟೆಕೆಟ್ ಪಡೆಯಬಹುದು. ಎಲ್ಲಾ ವರ್ಗಗಳ ಪಾಸ್ ಬೆಲೆಗಳಲ್ಲಿ ಜಿಎಸ್ ಟಿ (GST) ತೆರಿಗೆಗಳನ್ನು ಸೇರಿಸಲಾಗಿದೆ.
ಏರೋ ಇಂಡಿಯಾ 2023 ಗಾಗಿ ಇ-ಟಿಕೆಟ್‌ಗಳನ್ನು ಪಡೆಯುವುದು ಹೇಗೆ? :
*ಏರೋ ಇಂಡಿಯಾದ ವೆಬ್‌ಸೈಟ್ aeroindia.gov.in ಗೆ ಹೋಗಿ
*ಟಿಕೆಟ್ ಟ್ಯಾಬ್ ಆಯ್ಕೆಮಾಡಿ
*ಡ್ರಾಪ್-ಡೌನ್ ಮೆನುವಿನಿಂದ “ಬುಕ್ ಟಿಕೆಟ್” ಆಯ್ಕೆಮಾಡಿ
*ಅಗತ್ಯ ಕ್ಷೇತ್ರಗಳಲ್ಲಿ ವಿವರಗಳನ್ನು ಸೇರಿಸಿ ಮತ್ತು ಸೂಕ್ತವಾದ ಟಿಕೆಟ್ ಪ್ರಕಾರವನ್ನು ಆಯ್ಕೆಮಾಡಿ
*ನಿಮ್ಮ ಆಯ್ಕೆಯನ್ನು ಮಾಡಿದ ನಂತರ, ನೀವು ಟಿಕೆಟ್ ಅನ್ನು ಕಾಯ್ದಿರಿಸಬಹುದು
ಯಾರಿಗೆ? ಯಾವತ್ತಿಗೆ? ಹೇಗೆ ಏರ್ ಶೋಗೆ ಪ್ರವೇಶ? :
ಬ್ಯುಸಿನೆಸ್ ಪಾಸ್ ಗಳನ್ನು ಹೊಂದಿರುವ ಸಂದರ್ಶಕರು ಫೆ.13, 14 ಹಾಗೂ 15ನೇ ತಾರೀಖಿನಂದು ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇನ್ನು ಎಡಿವಿಎ ಪಾಸ್ ಹೊಂದಿದವರು ಫೆ.14 ಹಾಗೂ 15 ರಂದು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಏರ್ ಶೋ ಕೊನೆಯ ಎರಡು ದಿನವಾದ ಫೆ.16 ಹಾಗೂ 17ರಂದು ಏರ್ ಶೋ ಟಿಕೆಟ್ ಅನ್ನು ಬೆಳಗ್ಗೆ ಮತ್ತು ಮಧ್ಯಾಹ್ನದ ಎರಡು ಅವಧಿಗಳಿಗೆ ಆನ್ ಲೈನ್ ಮೂಲಕ ವಿತರಿಸಲಾಗುತ್ತಿದೆ. ಬೆಳಗ್ಗೆ ಟಿಕೆಟ್ ಖರೀದಿಸುವವರು ಬೆಳಗ್ಗೆಯೇ ಆಗಮಿಸಿ ಏರ್ ಶೋ ನೋಡಬಹುದು. ಮಧ್ಯಾಹ್ನ ಟಿಕೆಟ್ ಖರೀದಿಸಿದವರು ಮಧ್ಯಾಹ್ನದ ಬಳಿಕ ಏರ್ ಶೋ ಸ್ಥಳಕ್ಕೆ ಆಗಮಿಸಲು ಅವಕಾಶವಿದೆ.
ಇನ್ನು ಸಾಮಾನ್ಯ ಟಿಕೆಟ್ ಅಂದರೆ 2,500 ರೂ. ಟೆಕೆಟ್ ಹೊಂದಿದವರಿಗೆ ಫೆ.16 ಮತ್ತು 17ರಂದು ಮಾತ್ರ ಸಾಮಾನ್ಯ ವರ್ಗದವರು ಏರ್ ಶೋಗೆ ಬರಲು ಅವಕಾಶವಿದೆ.
731 ಪ್ರದರ್ಶಕ ಕಂಪನಿಗಳು ನೋಂದಣಿ :
ಈ ಬಾರಿಯ ಏರ್ ಶೋ ನಲ್ಲಿ ಭಾಗವಹಿಸಲು ದೇಶ ವಿದೇಶಗಳ 731 ಕಂಪನಿಗಳು ವಸ್ತುಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ. ಇವುಗಳಲ್ಲಿ 633 ಭಾರತೀಯ ಕಂಪನಿಗಳಾದರೆ, 98 ವಿದೇಶಿ ಕಂಪನಿಗಳು ಏರ್ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ.
ಏರ್ ಶೋ ಪ್ರದರ್ಶನ ಸಮಯದ ಮಾಹಿತಿ :
ಫೆ.13ರ ಸೋಮವಾರ ಮೊದಲ ದಿನ, ಏರೊ ಇಂಡಿಯಾ ಕಾರ್ಯಕ್ರಮ ಉದ್ಘಾಟನೆ ಬೆಳಗ್ಗೆ 9.30 ರಿಂದ 9.40ರವರೆಗೆ (FlyPast) ನಡೆಯಲಿದೆ. 9.41ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮೊದಲ ದಿನದ ವೈಮಾನಿಕ ಪ್ರದರ್ಶನ ನಡೆಯಲಿದೆ. ಪುನಃ ಮಧ್ಯಾಹ್ನ 12.01ರಿಂದ ಸಂಜೆ 5 ಗಂಟೆಯವರೆಗೆ ಗ್ರಾಹಕ ಪ್ರದರ್ಶನ ವಿಮಾನ (CDF) ವಿಮಾನಗಳ ಹಾರಾಟ ನಡೆಯಲಿದೆ. ಫೆ.14ರ ಮಂಗಳವಾರ ಎರಡನೇ ದಿನ ಹಾಗೂ 3ನೇ ದಿನ (ಫೆ.15) ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಗ್ರಾಹಕ ಪ್ರದರ್ಶನ ವಿಮಾನ (CDF) ವಿಮಾನಗಳ ಹಾರಾಟ, ಮಧ್ಯಾಹ್ನ 12.01ರಿಂದ 2.30ರ ತನಕ ರೋಚಕ ವೈಮಾನಿಕ ಪ್ರದರ್ಶನ ಸ್ವಚ್ಛ ಆಗಸದಲ್ಲಿ ನಡೆಯಲಿದೆ. ಪುನ: ಅದೇ ದಿನ ಮಧ್ಯಾಹ್ನ 2.31ರಿಂದ ಸಂಜೆ 5 ಗಂಟೆಯ ತನಕ ಸಿಡಿಎಫ್ ವಿಮಾನಗಳ ಹಾರಾಟ ನಡೆಸಲಿದೆ.
ಫೆ.16 ಮತ್ತು 17ರ ಕೊನೆಯ ಎರಡು ದಿನ ಸಾರ್ವಜನಿಕ ಪಾಸ್ ಗಳನ್ನು ಹೊಂದಿದವರಿಗೆ ಪ್ರವೇಶವಿರಲಿದ್ದು, ಎರಡೂ ದಿನ ಹಲವು ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಸೇರಿದಂತೆ ವಿವಿಧ ಏರ್ ಕ್ರಾಫ್ಟ್ ಗಳಿಂದ ಆಕರ್ಷಕ ಪ್ರದರ್ಶನ ನಡೆಯಲಿದೆ. ಫೆ.16 ಹಾಗೂ 17ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವೈಮಾನಿಕ ಪ್ರದರ್ಶನವಿರಲಿದೆ. ಮಧ್ಯಾಹ್ನ 12.01ರಿಂದ 2.30ರ ತನಕ ಸಿಡಿಎಫ್ ವಿಮಾನಗಳು ನೀಲಾಕಾಶದಲ್ಲಿ ಹಾರಲಿವೆ. ಇನ್ನು 2023 ಏರೊ ಇಂಡಿಯಾದ ಕೊನೆಯ ವೈಮಾನಿಕ ಸಾಹಸ ಪ್ರದರ್ಶನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಹಾರಾಟ ನಡೆಸಿ, ನೆರೆದ ಏರ್ ಶೋ ಪ್ರಿಯರಿಗೆ ಕಣ್ಣಿಗೆ ಹಬ್ಬದೂಟ ಉಣಬಡಿಸಲಿದೆ.
ಕಳೆದ ಬಾರಿಯ ಏರ್ ಶೋ 2021 ಹೇಗಿತ್ತು? :
ಏರೋ ಇಂಡಿಯಾದ 13 ನೇ ಆವೃತ್ತಿಯು 3 ರಿಂದ 5 ಫೆಬ್ರವರಿ 2021 ರವರೆಗೆ ನಡೆದಿತ್ತು. ಕಳೆದ ಬಾರಿ ಕೋವಿಡ್ 19 ಸೋಂಕು ವ್ಯಾಪಕವಾಗಿದ್ದ ಕಾರಣ ರಾಜ್ಯ ಸರ್ಕಾರದ ಸಾಕಷ್ಟು ನಿರ್ಬಂಧಗಳ ಹಿನ್ನಲೆಯಲ್ಲಿ ಬ್ಯುಸಿನೆಸ್ ಹಾಗೂ ಎಡಿವಿಎ ಟಿಕೆಟ್ ಗಳನ್ನು ಮಾತ್ರ ವಿತರಿಸಲಾಗಿತ್ತು. ಜನರಲ್ ಪಾಸ್ ಗಳನ್ನು ವಿತರಿಸದ ಕಾರಣ ಹೆಚ್ಚಿನವರು ಏರ್ ಶೋ ಗೆ ನೇರವಾಗಿ ಆಗಮಿಸಲು ಅವಕಾಶವಿರಲಿಲ್ಲ. ಆ ವರ್ಷ ಹೆಚ್ಚಿನ ವಿದೇಶಿ ವಿಮಾನಗಳು ಬಾರದ ಕಾರಣ, ಭಾರತೀಯ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳದ್ದೇ ಸದ್ದು ಹೆಚ್ಚಾಗಿತ್ತು.
ಪ್ರದರ್ಶನದ ಮೊದಲ ದಿನವು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ (HAL)ಯ ತೇಜಸ್‌ನೊಂದಿಗೆ ರಾಕ್‌ವೆಲ್ B-1 ಲ್ಯಾನ್ಸರ್ ವಿಮಾನವು ಜೊತೆಯಾಗಿ ಪ್ರಥಮವಾಗಿ ಈ ವೈಮಾನಿಕ ಪ್ರದರ್ಶನ ನೀಡಿದವು. ಬಿ-1 ಬಾಂಬರ್ (B-1 Bomber) ವಿಮಾನವು ದಕ್ಷಿಣ ಡಕೋಟಾದ ಎಲ್ಸ್‌ವರ್ತ್ ವೈಮಾನಿಕ ನೆಲೆಯಿಂದ ಹಾರಾಟ ನಡೆಸಿ ಇಲ್ಲಿಗೆ ಆಗಮಿಸಿತ್ತು. ಸಾರಂಗ್ ಮತ್ತು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡಗಳ ಜಂಟಿ ಪ್ರದರ್ಶನಗಳು ಎಲ್ಲರ ಮನಸೂರೆಗೊಂಡಿದ್ದವು. ಡಸಾಲ್ಟ್ ರಫೇಲ್ ಮೊದಲ ಬಾರಿಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡು ನಮ್ಮ ದೇಶದ ವಾಯುಪಡೆಯ ಬಣ್ಣಗಳಲ್ಲಿ ಕಾಣಿಸಿಕೊಂಡಿತು. ಈ ವೈಮಾನಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಎಚ್ಎಎಲ್ ಉತ್ಪಾದಿತ 83 ತೇಜಸ್ ಎಂಕೆ1ಎಎಸ್ ವರ್ಗದ ಯುದ್ಧ ವಿಮಾನವನ್ನು ಖರೀದಿಸಲು ರಕ್ಷಣಾ ಸಚಿವಾಲಯದ ಎಚ್ಎಎಲ್ ನಡುವೆ ಸಹಿ ಮಾಡಿತು. ಇದಲ್ಲದೆ ಎಚ್ಎಎಲ್ ನಿರ್ಮಿಸುತ್ತಿರುವ ಮಾನವ ಸಹಿತ ಮತ್ತು ಮಾನವ ರಹಿತ ಯುದ್ಧ ವಿಮಾನಗಳ ಸಮರ ಪಡೆ ಕಾಂಬಾಟ್ ಏರ್ ಟೀಮಿಂಗ್ ಸಿಸ್ಟಮ್ (CATS) ಮತ್ತು ನೌಕಾಪಡೆಗಾಗಿ ನಿರ್ಮಿಸುತ್ತಿರುವ ಎರಡು ಎಂಜಿನ್ ಗಳ ಯುದ್ಧ ವಿಮಾನ ( Twin Engine Deck Based Fighter – TEDBF) ದ ಮಾದರಿಯನ್ನು ಅನಾವರಣಗೊಳಿಸಲಾಗಿತ್ತು.
“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.