ಬೆಂಗಳೂರು, ಫೆ.3 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಸಮರ ಕಲೆಯನ್ನು ನೋಡಲು ಇನ್ನು ಕೆಲವೇ ದಿನಗಳು ಬಾಕಿಯಿದೆ. ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ 17ವರೆಗೆ ʼಏರೋ ಇಂಡಿಯಾ-2023ʼ (Aero India 2023) ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಬಾರಿ ಏರ್ ಶೋನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (LCA) ತೇಜಸ್ “ಭಾರತೀಯ ಪೆವಿಲಿಯನ್” ನಲ್ಲಿ ವಿಶೇಷ ಸ್ಥಾನ ನೀಡಲಾಗುತ್ತಿದೆ.
ಕೇಂದ್ರ ರಕ್ಷಣಾ ಸಚಿವಾಲಯ ಆಯೋಜಿಸುವ ʼಏರೋ ಇಂಡಿಯಾʼ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. “ದ ರನ್ವೇ ಟು ಎ ಬಿಲಿಯನ್ ಆಪರ್ಚುನಿಟೀಸ್”- ‘ಈ ರನ್ ವೇ ಶತಕೋಟಿ ಅವಕಾಶಗಳಿಗೆ ರಹದಾರಿ’ ಎಂಬ ಘೋಷವಾಕ್ಯದೊಂದಿಗೆ, ಏರೋ ಇಂಡಿಯಾ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳಿಗೆ ತಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಹಾಗೂ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ.
ಏರೋ ಇಂಡಿಯಾದ 14ನೇ ಆವೃತ್ತಿಯು ಫಿಕ್ಸೆಡ್ ವಿಂಗ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ ಪ್ರತ್ಯೇಕ “ಇಂಡಿಯಾ ಪೆವಿಲಿಯನ್” ಅನ್ನು ಮೀಸಲಿಡಲಿದೆ. ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ನಿರ್ದಿಷ್ಟ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ಈ ಪೆವಿಲಿಯನ್ ಉದ್ದೇಶವಾಗಿದೆ.
ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್ಸಿಎ-ತೇಜಸ್ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್ಗಳು, ಸಿಸ್ಟಮ್ಗಳು (ಎಲ್ಆರ್ಯು) ಇತ್ಯಾದಿಗಳ ಪ್ರದರ್ಶನವನ್ನು ಈ ಪವಿಲಿಯನ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಫಿಕ್ಸೆಡ್ ವಿಂಗ್ ಪ್ಲಾಟ್ಫಾರ್ಮ್ ನಲ್ಲಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿನ ಪ್ರಗತಿ ಬಿಂಬಿಸಲಿದೆ. ಈ ಪೆವಿಲಿಯನ್ ನಲ್ಲಿ ರಕ್ಷಣಾ ಬಾಹ್ಯಾಕಾಶ, ಹೊಸ ತಂತ್ರಜ್ಞಾನಗಳು ಮತ್ತು ಯುಎವಿ ವಿಭಾಗವು ಇರಲಿದ್ದು, ಅವುಗಳಲ್ಲಿ ಪ್ರತಿ ವಲಯದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಒಳನೋಟವನ್ನು ನೀಡಲಾಗುತ್ತದೆ.
ಎಲ್ಸಿಎ ತೇಜಸ್ ಒಂದೇ ಎಂಜಿನ್, ಹಗುರ, ಚಾಕಚಕ್ಯತೆಯ, ಬಹು-ಪಾತ್ರದ ಸೂಪರ್ ಸಾನಿಕ್ ಯುದ್ಧ ವಿಮಾನವಾಗಿದೆ. ಇದು ಬಹು-ಪಾತ್ರದ ಸೂಪರ್ ಸಾನಿಕ್ ಸಮರ ವಿಮಾನವಾಗಿದೆ. ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್ಸಿಎಸ್) ಜತೆಗೆ ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣಗಳನ್ನು ಹೊಂದಿದೆ. ಡೆಲ್ಟಾ ವಿಂಗ್ ಹೊಂದಿರುವ ವಿಮಾನವಾಗಿರುವ ತೇಜಸ್, ಗಾಳಿಯಲ್ಲಿ ಹಾರಾಡುತ್ತಲೇ ಯುದ್ಧ ಮಾಡಲು ಮತ್ತು ‘ಆಕ್ರಮಣಕಾರಿ ವಾಯು ಬೆಂಬಲಕ್ಕಾಗಿ ‘ವಿಚಕ್ಷಣ’ ಮತ್ತು ಆಂಟಿಶಿಪ್ ಕಾರ್ಯವನ್ನು ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ.
ಏರ್ಫ್ರೇಮ್ನಲ್ಲಿ ಸುಧಾರಿತ ಸಂಯೋಜನೆಗಳ ವ್ಯಾಪಕ ಬಳಕೆಯು ತೂಕದ ಅನುಪಾತ, ಕಡಿಮೆ ರೇಡಾರ್ ಸಂಕೇತಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ತೇಜಸ್ ಅತ್ಯಾಧುನಿಕ ವೈಶಿಷ್ಟ್ಯಗಳಾದ ಗ್ಲಾಸ್ ಕಾಕ್ಪಿಟ್, ಜೀರೋ-ಜೀರೋ ಎಜೆಕ್ಷನ್ ಸೀಟ್, ಹಾರಾಟದ ವೇಳೆಯೇ ಇಂಧನ ತುಂಬುವುದು, ಜಾಮ್ ಪ್ರೂಫ್ ಎಇಎಸ್ಎ ರಾಡಾರ್, ಎಸ್ಪಿಜೆಯೊಂದಿಗೆ ಯುಇಡಬ್ಲ್ಯುಎಸ್, ಸಿಎಮ್ಡಿಎಸ್, ಎಚ್ಎಮ್ಡಿಎಸ್ ಡ್ಯಾಶ್ವಿ, ಬಿವಿಆರ್ ಕ್ಷಿಪಣಿ ಸಾಮರ್ಥ್ಯ ಮತ್ತು ವಿಮಾನವನ್ನು ಹೆಚ್ಚು ಘಾತಕವಾಗಿಸುವಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಲಘು ಯುದ್ಧ ವಿಮಾನ (ಎಲ್ಸಿಎ) ಪ್ರಸ್ತುತ ವಾಯುಪಡೆ ಯುದ್ಧ ವಿಮಾನ (ಎರಡು ಆಸನ), ಎಲ್ಸಿಎ ನೌಕಾ ವಿಮಾನ (ಎರಡು ಆಸನ) ವರ್ಗಗಳಲ್ಲಿ ಲಭ್ಯವಿದೆ. ತೇಜಸ್ಗಾಗಿ ಎಲ್ಸಿಎ, ಎಲ್ಐಎಫ್ಟಿ (ಲೀಡ್ ಇನ್ ಫೈಟರ್ ಟ್ರೈನರ್) ಮತ್ತು ಎಂಕೆ-2 ನಂತಹ ಇತರ ರೂಪಾಂತರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ತೇಜಸ್ ಲಘು ಯುದ್ಧ ವಿಮಾನದ ಪ್ರಮುಖ ವಿಶೇಷತೆಗಳು :
*ಇದು ಚಿಕ್ಕ ಮತ್ತು ಹಗುರವಾದ ವಿಮಾನಗಳಲ್ಲಿ ಒಂದಾಗಿದೆ
*ಅತ್ಯುತ್ತಮ ವಿಮಾನ ಸುರಕ್ಷತಾ ವ್ಯವಸ್ಥೆ
*ಎಲ್ಲ ರೀತಿಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಿರ್ಮಿತ ವಿಮಾನ
*ಅತಿ ಎತ್ತರದಲ್ಲಿ ಹಾರಾಡುವ ಸೂಪರ್ ಸಾನಿಕ್
*ಎಯುಡಬ್ಲೂನ ಶೇ.30ರ ವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯ (ಎಲ್ಲ ತೂಕವೂ ಸೇರಿ)
*ಎಲ್ಲ ಶಸ್ತ್ರಗಳನ್ನು ಒಗ್ಗೂಡಿಸಿ ಸಕ್ರಿಯಗೊಳಿಸುವ ಓಪನ್ ಆರ್ಕಿಟೆಕ್ಚರ್ (ಮುಕ್ತ ವಿನ್ಯಾಸ)
*ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ನಿರ್ವಹಣಾ ಸ್ನೇಹಿ ಸಮರ ವಿಮಾನ