ಬೆಳಗಾವಿ, ಡಿ.26 www.bengaluruwire.com : ಕೋವಿಡ್ ಸೋಂಕು ಚೀನಾ, ಜಪಾನ್ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲೂ ಹೊಸ ತಳಿಯ ರೋಗ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಇದಕ್ಕೂ ಮುನ್ನ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆಯೂ ಚರ್ಚಿಸಲಾಗಿದ್ದು, ಜನರಲ್ಲಿ ಕೋವಿಡ್ ಹೊಸ ರೂಪಾಂತರಿ ತಳಿಯ ಬಗ್ಗೆ ಜನಜಾಗೃತಿ ಮೂಡಿಸುವುದು, ಬೂಸ್ಟರ್ ಡೋಸ್ ಹೆಚ್ಚಿಸುವುದು, ಐಎಲ್ ಐ ಮತ್ತು ಸಾರಿ ಪರೀಕ್ಷೆಗಳನ್ನು ಹೆಚ್ಚಿಸುವುದು, ಮಾಸ್ಕ್ ಧರಿಸುವಿಕೆ, ಒಳಾಂಗಣದಲ್ಲಿ ಮಾಸ್ಕ್ ಧರಿಸುವುದು ಖಡ್ಡಾಯ ಮಾಡುವ ಬಗ್ಗೆ ತಜ್ಞರೊಂದಿಗೆ ಸಭೆ ನಡೆಸಿ ಜನಸಾಮಾನ್ಯರ ದೈನಂದಿನ ಚಟುವಟಿಕೆ, ಆರ್ಥಿಕತೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಹಂತ ಹಂತವಾಗಿ ಈ ನಿಯಮಗಳನ್ನು ಜಾರಿ ತರಲು ಸರ್ಕಾರ ನಿರ್ಧರಿಸಿದೆ.
ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಹಾಗೂ ಮಾರ್ಗಸೂಚಿ ಕುರಿತು ಸಚಿವ ಡಾ.ಸುಧಾಕರ್ ಹಾಗೂ ಸಚಿವ ಆರ್ ಅಶೋಕ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಚೀನಾ ಮತ್ತೆ ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿಯಾಗಿದೆ. ಚೀನಾ ಸೇರಿದಂತೆ ಬೇರೆ ಬೇರೆ ದೇಶದಿಂದ ಭಾರತಕ್ಕೆ ಬರುವವರ ಮೇಲೆ ಕಣ್ಗಾವಲು ಇಡಲಾಗುತ್ತಿದೆ. ವಿಮಾನದಲ್ಲಿ ಬೇರೆ ದೇಶದಿಂದ ಬಂದವರಿಗೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ಪತ್ರೆ ಸಿದ್ಧಮಾಡಲಾಗಿದೆ.
ರೋಗ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆ ಯಲ್ಲಿ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಚಿತ್ರಮಂದಿರಗಳಲ್ಲಿ ಮಾಸ್ಕ್ ಕಡ್ಡಾಯ ಮಾಡುವಂತೆ ಎಲ್ಲಾ ಥಿಯೇಟರ್ ಮಾಲೀಕರಿಗೆ ಸೂಚನೆ ಕೊಡಲಾಗಿದೆ. ಶಾಲಾ – ಕಾಲೇಜುಗಳಲ್ಲಿ ಥರ್ಮಲ್ ಟೆಸ್ಟ್ ಮಾಡುವುದು, ಕೈಗೆ ಸ್ಯಾನಿಟೈಸರ್ ಬಳಕೆ, ಶಾಲಾ ಕೊಠಡಿಯೊಳಗೆ ಮಾಸ್ಕ್ ಧರಿಸಬೇಕು. ಹೋಟೆಲ್ ಗಳಲ್ಲಿ ಕೆಲಸ ಮಾಡುವವರು ಎರಡು ಡೋಸ್ ಲಸಿಕೆ ಕಡ್ಡಾಯ ಹಾಕಿಸಿಕೊಂಡಿರಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಮೂರನೇ ಡೋಸ್ ಹಾಕಿಕೊಂಡರೆ ಉತ್ತಮ. ಟೇಬಲ್ ನಲ್ಲಿ ಕುಳಿತುಕೊಳ್ಳಲು ಮಾತ್ರ ಅವಕಾಶ ನೀಡಬೇಕು.
ಹೊಸ ವರ್ಷಾಚರಣೆ ಸಂಭ್ರಮಾಚರಣೆಗೆ ರಾತ್ರಿ 1 ಗಂಟೆ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವರು ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಎಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತೋ ಅಲ್ಲಿ ಎಲ್ಲ ಕಡೆಯೂ ಈ ಮಾರ್ಗಸೂಚಿ ಅನ್ವಯವಾಗುತ್ತದೆ. ಪಬ್, ಬಾರ್ ಎಂಡ್ ರೆಸ್ಟೋರೆಂಟ್ ಗಳಲ್ಲಿ ರಾತ್ರಿ 1 ಗಂಟೆ ವರೆಗೆ ಮಾತ್ರ ತೆಗೆದಿರಲು ಸಮಯ ಮಿತಿ ನಿಗಧಿಪಡಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ಬಗ್ಗೆ ಸದ್ಯಕ್ಕೆ ಏನು ದಂಡ ಹಾಕುವ ಬಗ್ಗೆ ನಿರ್ಧಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಆರ್.ಅಶೋಕ್ ಹೇಳಿದರು.
ಇದಾದ ಬಳಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಸಚಿವ ಆರ್.ಅಶೋಕ್ ಬೆಳಗಾವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಮುನ್ನೆಚ್ಚರಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು.