ಬೆಂಗಳೂರು, ನ.4 www.bengaluruwire.com : ರಾಜಧಾನಿ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಕಾಲದ ಹಲವು ಕೆರೆಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಈಗ ಬರೋಬ್ಬರಿ 500 ವರ್ಷಗಳ ಹೆಸರಿರುವ ಯಲಹಂಕ ಸಮೀಪದ ಸಿಂಗಾಪುರ ಕೆರೆ (Singapura Lake)ಯ ಹೆಸರನ್ನೇ ಸ್ಥಳೀಯರ ವಿರೋಧದ ನಡುವೆಯೇ ಬಿಬಿಎಂಪಿ (BBMP) ಬದಲಾಯಿಸಿದೆ. ಇದೇ ನ.6ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೆರೆಗೆ ಹೊಸ ನಾಮಕರಣ ಮಾಡಲಿದ್ದಾರೆ. ಈ ಕುರಿತಂತೆ ಸಿಎಂ ಕಚೇರಿಯಿಂದ ಮುಖ್ಯ ಆಯುಕ್ತರಿಗೆ (ಸಂಖ್ಯೆ : ಮುಮಂ:431/ವಿಕ/2022 ದಿನಾಂಕ 31-10-2022) ಅಧಿಕೃತ ನೋಟಿಸ್ ರವಾನೆಯಾಗಿದೆ.
ಬಿಬಿಎಂಪಿಯ ಈ ಹಿಂದಿನ ವಾರ್ಡ್ 11ರ ಕುವೆಂಪು ನಗರ ವ್ಯಾಪ್ತಿಯ ಸಿಂಗಾಪುರ ಗ್ರಾಮದ ಸರ್ವೆ ನಂ.102ರಲ್ಲಿರುವ ಸಿಂಗಾಪುರ ಕೆರೆ ಮತ್ತು ಪಾರ್ಕ್ ಜಾಗಕ್ಕೆ ‘ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ನಾಮಕರಣ ಮಾಡಲು ಪಾಲಿಕೆ ಆಡಳಿತಗಾರರು ಆಗಸ್ಟ್ 28ರಂದು ನಿರ್ಣಯಕ್ಕೆ ಅನುಮೋದನೆ ನೀಡಿದ್ದಾರೆ. ವಾಸ್ತವವಾಗಿ ಸಿಂಗಾಪುರ ಕೆರೆಯಲ್ಲಿ ಪಾರ್ಕ್ ಇಲ್ಲವೆಂದು ಪಾಲಿಕೆ ಅಧಿಕಾರಿಗಳೇ ವರದಿ ನೀಡಿದ್ದರೂ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ‘ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ಎಂದು ಹೇಳಿದೆ. ಇದು ಹಲವು ಗೊಂದಲಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಈ ಕುರಿತಂತೆ ಬರೆದ ಪತ್ರದ ಪ್ರತಿಯು ‘ಬೆಂಗಳೂರು ವೈರ್’ ಬಳಿ ಲಭ್ಯವಿದೆ.
ವಿಜಯನಗರ ಸಾಮ್ರಾಜ್ಯದಲ್ಲಿನ ಶಿಲಾ ಶಾಸನಗಳಲ್ಲಿ ಸಿಂಗಾಪುರ ಎಂದೇ ಉಲ್ಲೇಖವಾಗಿದೆ. ಆಗಿನಿಂದಲೂ ಈ ಗ್ರಾಮದ ಕೆರೆಯನ್ನು ಸಿಂಗಾಪುರ ಕೆರೆಯೆಂದೇ ಕರೆಯಲಾಗುತ್ತಿದೆ. ಆದರೀಗ ಇಲ್ಲಿನ ಕೆರೆಯ ಹೆಸರನ್ನು ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್ ಎಂದು ಹೆಸರು ಬದಲಾಯಿಸಲು ಪಾಲಿಕೆ ನಿರ್ಣಯ ಕೈಗೊಂಡಿದೆ. ಐತಿಹಾಸಿಕ ಕೆರೆ ಹೆಸರು ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಪಾಲಿಕೆಯು ಇಂತಹ ಕ್ರಮಕ್ಕೆ ಮುಂದಾಗಿರುವುದಕ್ಕೆ ಸಿಂಗಾಪುರ ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಐದು ದಿನಗಳ ಹಿಂದೆ ಲೋಕಾಯುಕ್ತಕ್ಕೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಹಾಗೂ ಪಾಲಿಕೆ ಕಂದಾಯ ಇಲಾಖೆ ಜಂಟಿ ಆಯುಕ್ತರಾದ ವೆಂಕಟಾಚಲಪತಿ ವಿರುದ್ಧ ಅ.31ರಂದು (ಪ್ರಕರಣ ಸಂಖ್ಯೆ : Compt/Lok/BCD/4396/2022) ದೂರು ನೀಡಿದ್ದಾರೆ.
ಈ ಹಿಂದೆ ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪನವರು ಸಿಂಗಾಪುರ ಕೆರೆಯ ಹೆಸರನ್ನು ‘ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ನಾಮಕರಣ ಮಾಡುವಂತೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
“ಸಿಂಗಾಪುರ ಕೆರೆ ಹೆಸರನ್ನು ‘ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ಎಂದು ನಾಮಕರಣ ಮಾಡುವಂತೆ ಬಿಬಿಎಂಪಿಗೆ ಪ್ರಸ್ತಾವನೆ ಬಂದಾಗ, ಪಾಲಿಕೆ ಕಂದಾಯ ವಿಭಾಗದವರು ಸಿಂಗಾಪುರ ಕೆರೆ ಪ್ರದೇಶದಲ್ಲಿ ಮೊದಲ ಮಹಜರು ನಡೆಸಿದಾಗ, ಕೆರೆ ಹೆಸರು ಬದಲಾವಣೆಗೆ 143 ಮಂದಿ ಪರವಾಗಿ ಹಾಗೂ 243 ಮಂದಿ ವಿರೋಧವಾಗಿ ಸಹಿ ಹಾಕಿದ್ದರು. ಆದರೆ ನಂತರ ಸಿಂಗಾಪುರ ಕೆರೆ ಹೆಸರು ಬದಲಾಯಿಸದಂತೆ ಗ್ರಾಮಸ್ಥರು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರಲ್ಲಿ ಮತ್ತೊಂದು ಮನವಿ ಸಲ್ಲಿಸಿದಾಗ ಎರಡನೇ ಬಾರಿ ಕಂದಾಯ ವಿಭಾಗದವರು ಮಹಜರು ನಡೆಸಿದಾಗ ಹೆಸರು ಬದಲಾಯಿಸದಂತೆ ಪರವಾಗಿ 93 ಮಂದಿ ಹಾಗೂ ಅದಕ್ಕೆ ವಿರೋಧವಾಗಿ ಒಬ್ಬರೇ ಒಬ್ಬರು ಸಹಿ ಹಾಕಿಲ್ಲ. ಆದರೆ ಈ ಕಡತವನ್ನು ಜಂಟಿ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ. ಇದೀಗ ನ.6ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆರೆ ನಾಮಕರಣ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಈ ಅನ್ಯಾಯದ ಬಗ್ಗೆ ಪ್ರತಿಭಟನೆ ನಡೆಸುತ್ತೇವೆ” ಎಂದು ಸಿಂಗಾಪುರ ಗ್ರಾಮದ ಸ್ಥಳೀಯರಾದ ಶ್ರೀನಿವಾಸ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
.”ಬೆಂಗಳೂರಿನ ಕೆರೆ ಒತ್ತುವರಿ ಪಟ್ಟಿಯಲ್ಲಿ ಸಿಂಗಾಪುರ ಕೆರೆ ಎಂದೇ ಉಲ್ಲೇಖಿಸಲಾಗಿದೆ. ರಾಜ್ಯ ಕಂದಾಯ ಇಲಾಖೆ ಗ್ರಾಮ ನಕ್ಷೆಯಲ್ಲೂ ಹಾಗೂ ಮೈಸೂರು ಸರ್ವೆ ಸೆಟಲ್ ಮೆಂಟ್ ರಿಜಿಸ್ಟರ್ 1966ರಲ್ಲೂ ಸಿಂಗಾಪುರ ಸರ್ಕಾರಿ ಕೆರೆ ಎಂದು ದಾಖಲಾಗಿದೆ. ಅದೇ ರೀತಿ ಬಿಬಿಎಂಪಿಯ ಕಂದಾಯ ವಿಭಾಗದ ಟಿಪ್ಪಣಿಯಲ್ಲೇ ಸಿಂಗಾಪುರ ಕೆರೆ ಜಾಗದಲ್ಲಿ ಉದ್ಯಾನವವಿಲ್ಲ. ಸಂಪೂರ್ಣವಾಗಿ 66.18 ಎಕರೆ ಕೆರೆ ಇದೆಯಂದು ಹೇಳಲಾಗಿದೆ. ಹೀಗಿದ್ದಾಗ ಪಾರ್ಕ್ ಅನ್ನು ಹೊಸದಾಗಿ ಸೃಷ್ಟಿಸಿ ಕೆರೆ ಹೆಸರು ಬದಲಾಯಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಬಿಬಿಎಂಪಿ ಸೂಕ್ತ ನಿಯಮಾವಳಿಯಡಿ ನಿರ್ಣಯ ಕೈಗೊಂಡಿಲ್ಲ :
ಮೊದಲನೆಯದಾಗಿ ಸೆಪ್ಟೆಂಬರ್ 13ರಂದು ಪಾಲಿಕೆ ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ 293ನೇ ಪ್ರಕರಣದ (1)ನೇ ಉಪ ಪ್ರಕರಣದ ಅನುಸಾರ ನಗರ ಪಾಲಿಕೆ ಬೀದಿಗೆ ನಾಮಕರಣ ಮಾಡುವುದಕ್ಕೆ ಅವಕಾಶವಿದೆ ಎಂದು ತಿಳಿಸಿದೆ. ಬಿಬಿಎಂಪಿಯಲ್ಲಿ ಕೆರೆಯ ಹೆಸರನ್ನು ಬದಲಾಯಿಸಿ ಹೊಸದಾಗಿ ನಾಮಕರಣ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲದಿರುವುದನ್ನು ಮುಖ್ಯ ಆಯುಕ್ತರು ಪತ್ರದಿಂದಲೇ ತಿಳಿದು ಬರುತ್ತೆ. ಆದರೆ ಈಗಾಗಲೇ 500 ವರ್ಷಗಳ ಇತಿಹಾಸವಿರುವ, ವಿಜಯನಗರ ಸಾಮ್ರಾಜ್ಯದ ಇತಿಹಾಸದ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಐತಿಹಾಸಿಕ ಹಾಗೂ ಕಂದಾಯ ಇಲಾಖೆಯ ದಾಖಲೆಗಳಲ್ಲಿ ತಿಳಿಸಿರುವ ಸಿಂಗಾಪುರ ಕೆರೆಯ ಹೆಸರನ್ನು ಬದಲಾಯಿಸಲು ಅಕಾಶವಿಲ್ಲದಿದ್ದರೂ ಬಿಬಿಎಂಪಿಯು ತನ್ನ ಕಾನೂನು ವ್ಯಾಪ್ತಿ ಮೀರಿ ನಿರ್ಣಯ ಕೈಗೊಂಡಿದೆ.
ಕೆರೆ ಅಧಿಕಾರಿಗಳ ಹೇಳಿಕೆಯನ್ನೂ ಗಾಳಿಗೆ ತೂರಲಾಗಿದೆ :
ಈ ಆರೋಪಕ್ಕೆ ಪುಷ್ಟಿ ನೀಡುವಂತೆ, ಬಿಬಿಎಂಪಿಯ ಕೆರೆ ವಿಭಾಗದ ಕಾರ್ಯಪಾಲಕ ಅಭಯಂತರರು ಟಿಪ್ಪಣಿ ಹಾಳೆಯಲ್ಲೇ, “ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪನವರು, ಬಿಬಿಎಂಪಿ ವ್ಯಾಪ್ತಿಯ ಯಲಹಂಕ ಹೋಬಳಿ, ಸಿಂಗಾಪುರ ಸರ್ವೆ ನಂ.102ರಲ್ಲಿರುವ ಸರ್ಕಾರಿ ಕೆರೆ ಹಾಗೂ ಪಾರ್ಕ್ ಜಾಗಕ್ಕೆ “ಭಗವಾನ್ ಬುದ್ಧ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್” ಎಂದು ನಾಮಕರಣ ಮಾಡುವಂತೆ ನೀಡಿರುವ ಪ್ರಸ್ತಾವೆಯನ್ನು ಪರಿಶೀಲಿಸಿದಾಗ, ಆ ಕೆರೆಯ ಜಾಗದಲ್ಲಿ 50 ಎಕರೆ ಖಾಲಿ ಜಾಗವಿರುತ್ತದೆ ಎಂದು ತಿಳಿಸಿದ್ದು, ವಾಸ್ತವವಾಗಿ ಉಳಿಕೆ 50 ಎಕರೆ ಜಾಗದಲ್ಲಿ 40 ಎಕರೆಯಷ್ಟು ದಕ್ಷಿಣ ಭಾಗದಲ್ಲಿ ನೀರು ನಿಲುಗಡೆ ಪ್ರದೇಶವಿದೆ. ಈ ಭಾಗದಲ್ಲಿ ಕೆರೆ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಿರುವಾಗ ಈ ಕೆರೆಯನ್ನು ಲೇಕ್ ಪಾರ್ಕ್ ಎಂದು ಕರೆಯುವುದು ಅಸಮಂಜಸವಾಗಿರುತ್ತದೆ” ಎಂದು ಚೀಫ್ ಎಂಜಿನಿಯರ್ ಗೆ ಬರೆದ ಟಿಪ್ಪಣಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
“ನಮ್ಮ ಸಿಂಗಾಪುರ ಕೆರೆ ಐತಿಹಾಸಿಕ ಮಹತ್ವವುಳ್ಳದ್ದು. ವಿಜಯನಗರ ಸಾಮ್ರಾಜ್ಯ ಶಿಲಾ ಶಾಸನಗಳಲ್ಲೇ ಸಿಂಗಾಪುರ ಎಂದು ಹೆಸರಿದ್ದ ಬಗ್ಗೆ ಉಲ್ಲೇಖವಿದೆ. ಇಂತಹ ಕೆರೆಯ ಹೆಸರನ್ನು ಗ್ರಾಮಸ್ಥರ ವಿರೋಧದ ನಡುವೆಯೇ ಬಿಬಿಎಂಪಿಯು ಸಿಂಗಾಪುರ ಕೆರೆ ಮತ್ತು ಪಾರ್ಕ್ ಜಾಗಕ್ಕೆ ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್ ಎಂದು ನಾಮಕರಣ ಮಾಡಲು ತೀರ್ಮಾನ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ಮತ್ತೊಬ್ಬ ಗ್ರಾಮಸ್ಥರು ಟೀಕಿಸಿದ್ದಾರೆ.
ಕೆರೆಯ ಹೆಸರು ಬದಲಾವಣೆಗೆ ಅವಕಾಶ ಕೊಡದಿರಿ :
ಸಿಂಗಾಪುರ ಗ್ರಾಮವು ಜೋಡಿ ಗ್ರಾಮವಾಗಿದ್ದು, 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿಯತನಕ ಕೆರೆಯ ಹೆಸರನ್ನು ಬದಲಾವಣೆ ಮಾಡಿರುವ ಇತಿಹಾಸವೇ ಇಲ್ಲ. ಉದಾಹರಣೆಗೆ ಹೆಬ್ಬಾಳದಲ್ಲಿ ಹೆಬ್ಬಾಳ ಕೆರೆ, ಹಲಸೂರಿನಲ್ಲಿ ಹಲಸೂರು ಕೆರೆ, ಯಡಿಯೂರಿಗೆ ಯಡಿಯೂರು ಕೆರೆ ಹೀಗೆ ನಗರದಲ್ಲಿ ನೂರಾರು ಕೆರೆಗಳು ಬೆಂಗಳೂರಿನಲ್ಲಿದ್ದು, ರಾಜಕೀಯ ಪಕ್ಷದ ಮನವಿಗೆ ಮನ್ನಣೆ ದೊರಕಿದರೆ ಮುಂದಿನ ದಿನಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕೆರೆಗಳ ಹೆಸರನ್ನು ಬದಲಾಯಿಸಲು ಕೇಳಿರುವುದರಲ್ಲಿ ಆಶ್ಚರ್ಯವಿಲ್ಲ. ಹಾಗಾಗಿ ಈ ಕೆರೆಯ ಹೆಸರನ್ನು ಸಿಂಗಾಪುರ ಕೆರೆ ಎಂದೇ ಮುಂದುವರೆಸಿ ಎಂದು ಸಿಂಗಾಪುರ ಗ್ರಾಮದ ಶ್ರೀ ವರದರಾಜಸ್ವಾಮಿ ಸೇವಾ ಸಮಿತಿಯು ಮುಖ್ಯ ಆಯುಕ್ತರಿಗೆ ಇದೇ ಜು.30ರಂದು ಬರೆದ ಪತ್ರದಲ್ಲಿ ತಿಳಿಸಿತ್ತು.
ವಿವಾದಿತ ಪ್ರಕರಣದ ಹಿನ್ನಲೆ :
“ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸಿಂಗಾಪುರ ಕೆರೆ ಮತ್ತು ಪಾರ್ಕ್ ಜಾಗಕ್ಕೆ ‘ಭಗವಾನ್ ಬುದ್ಧ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ನಿರ್ಮಾಣಕ್ಕೆಂದು ಪಾಲಿಕೆಯು ಜು.20ರಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು. ಅದರಂತೆ 13-07-2022ರಂದು ದಾಸರಹಳ್ಳಿ, ಬ್ಯಾಟರಾಯನಪುರ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು ಮೂಲ ಪತ್ರದೊಂದಿಗೆ ‘ಭಗವಾನ್ ಬುದ್ಧ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ಎಂದು ನಾಮಕರಣ ಪ್ರಸ್ತಾವನೆ ಪರವಾಗಿ 1,004 ಮಂದಿ ಸಹಿ ಮಾಡಿ ಆಡಳಿತಗಾರರಿಗೆ ಸಲ್ಲಿಸಿರುತ್ತಾರೆ. ಅದೇ ರೀತಿ ಜು.16ರಂದು ಕರ್ನಾಟಕ ವಾಲ್ಮೀಕಿ ನಾಯಕ ಪರಿಷತ್ತು, ಕಾನ್ಷಿರಾಂನಗರ- ಲಕ್ಷ್ಮೀಪುರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜು.19ರಂದು ದಲಿತ ಸಂಘರ್ಷ ಸಮಿತಿಯವರು ಪ್ರಸ್ತಾವನೆ ಪರವಾಗಿ ಸಹಿ ಮಾಡಿ ನೀಡಿದ್ದಾರೆ” ಎಂದು ಸೆಪ್ಟೆಂಬರ್ 13ರಂದು ಪಾಲಿಕೆ ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರ (ಸಂಖ್ಯೆ : ಜಂಆ (ಕಂ)/ಪಿ.ಆರ್/03/2022-23) ದಲ್ಲಿ ತಿಳಿಸಿದ್ದಾರೆ.
ಇನ್ನು ಕೆರೆ ಹೆಸರು ಬದಲಾವಣೆಗೆ ವಿರೋಧವಾಗಿ 63 ಮಂದಿ ವರದರಾಜ ನಗರ ಗ್ರಾಮಸ್ಥರು ಎಚ್.ಮೋಹನ್ ಜೂ.13ರಂದು ಆಕ್ಷೇಪಣೆ ಸಲ್ಲಿಸಿದ್ದರು. ಅದೇ ರೀತಿ ಜು.29ರಂದು ಪಿ.ಎಲ್.ಉದಯ್ ಕುಮಾರ್, ಶ್ರೀ ಮಾರ್ಕಂಡೇಯ ಪದ್ಮಶೇವಾ ಸಮಿತಿ, ಶ್ರೀ ಮಾರುತಿ ಲೇಔಟ್ ಮತ್ತು ಭಾರತ್ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ಸ್, ಜೂ.29ರಂದು 105 ಮಂದಿ ಸಿಂಗಾಪುರ ಗ್ರಾಮಸ್ಥರು ಸಹಿ ಮಾಡಿರುವ ಆಕ್ಷೇಪಣಾ ಪತ್ರವನ್ನು ಬಿಬಿಎಂಪಿಗೆ ಸಲ್ಲಿಸಿರುತ್ತಾರೆ. ಅದೇ ರೀತಿ ಜೂ.30ರಂದು ಸಿಂಗಾಪುರ ಪಾದಚಾರಿ ವರ್ತಕರ ಸಂಘ, ಪ್ರಜಾ ಸ್ಪಂದನ ಕಮ್ಯುನಿಟಿ ಡೆವಲಪ್ ಮೆಂಟ್ ಸಂಸ್ಥೆ, ಶ್ರೀ ವರದರಾಜಸ್ವಾಮಿ ಸೇವಾ ಸಮಿತಿ ಹಾಗೂ ಜು.1ರಂದು ಸಿಂಗಾಪುರ ಗ್ರಾಮದ ಎಚ್.ಮೋಹನ್ ಎಂಬುವರು ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಪತ್ರ ನೀಡಿದ್ದರು ಎಂದು ಪಾಲಿಕೆ ಮುಖ್ಯ ಆಯುಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
1976ರ ಕೆಎಂಸಿ ಕಾಯ್ದೆ ಏನು ಹೇಳುತ್ತೆ?
ಅದೇ ಪತ್ರದಲ್ಲಿ “ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ 293ನೇ ಪ್ರಕರಣದ (1)ನೇ ಉಪ ಪ್ರಕರಣದ ಅನುಸಾರ ಪ್ರತಿಯೊಂದು ಪ್ರಸ್ತಾವನೆಯನ್ನು ಸಂಬಂಧಪಟ್ಟ ಸ್ಥಾಯಿ ಸಮಿತಿಯು 5,6 ಮತ್ತು 7ನೇ ನಿಯಮಗಳ ಉಪಬಂಧಗಳ ದೃಷ್ಟಿಯಿಂದ ಪರಿಶೀಲಿಸತಕ್ಕದ್ದು ಮತ್ತು ಮಹಾನಗರ ಪಾಲಿಕೆಯು ಗೊತ್ತುವಳಿಯನ್ನು ಅಂಗೀಕರಿಸತಕ್ಕದ್ದು. ಆನಂತರ ಅದನ್ನು ಕನಿಷ್ಠ ಎರಡು ವೃತ್ತಪತ್ರಿಕೆಗಳಲ್ಲಿ ವಿಶೇಷವಾಗಿ, ಕನ್ನಡ ಪತ್ರಿಕೆಗಳಲ್ಲಿ ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಗೆ ಮಾಹಿತಿಗಾಗಿ ಮತ್ತು ಅದು ಪ್ರಕಟವಾದ ದಿನದಿಂದ ಮೂವತ್ತು ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸತಕ್ಕದ್ದು. ಹೀಗೆ ಸಲಹೆ ಅಥವಾ ಆಕ್ಷೇಪಣೆ ಬಂದರೆ ಅದನ್ನು ಮುಂದಿನ ಸಭೆಯಲ್ಲಿ ಪರಿಶೀಲಿಸಲು ಮಂಡಿಸಬೇಕು. ರಾಜ್ಯ ಸರ್ಕಾರದ ಯಾವುದೇ ನಿರ್ದೇಶನಗಳಿದ್ದರೆ ಅವುಗಳಿಗೆ ಒಳಪಟ್ಟು ಗೊತ್ತುವಳಿಯನ್ನು ಅಂಗೀಕರಿಸಿದ ಮೇಲೆ ಅದರಂತೆ ನಗರ ಪಾಲಿಕೆಯ ಬೀದಿಗೆ ನಾಮಕರಣ ಮಾಡುವುದಕ್ಕೆ ಕ್ರಮ ಕೈಗೊಳ್ಳತಕ್ಕದೆಂದು ಉಲ್ಲೇಖಿಸಲಾಗಿದೆ.” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೆರೆಯ ಮೇಲೆ ವೋಟ್ ಬ್ಯಾಂಕ್ ರಾಜಕೀಯದ ಕರಿನೆರಳು :
ಸಿಂಗಾಪುರ ಗ್ರಾಮಸ್ಥರಿಂದ ಸಾಕಷ್ಟು ವಿರೋಧವಿದ್ದರೂ ಐತಿಹಾಸಿಕ ಕೆರೆಯ ಹೆಸರನ್ನು ಬಿಬಿಎಂಪಿ ಬದಲಾಯಿಸಲು ನಿರ್ಣಯ ಕೈಗೊಂಡು, ಈ ನಾಮಕರಣ ಕಾರ್ಯಕ್ರಮ ಮಾಡಲು ಹೊರಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲೇ ಸಿಂಗಾಪುರ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ರಾಜಕೀಯ ಪಕ್ಷಗಳು ತಾಮುಂದು- ನಾಮುಂದು ಎಂದು ಜನರಿಗೆ ಆಶ್ವಾಸನೆ, ಭರವಸೆ ಹಾಗೂ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದಾಗಿ ತೋರ್ಪಡಿಸಿಕೊಳ್ಳುವ ಭರದಲ್ಲಿ ಐತಿಹಾಸಿಕ ಕೆರೆಯ ಹೆಸರನಲ್ಲೂ ರಾಜಕೀಯ ಪ್ರವೇಶವಾಗಿರುವುದು ನಿಜಕ್ಕೂ ದುರ್ದೈವವೇ ಸರಿ. ಇಂತಹ ಸಂದರ್ಭವಿರುವಾಗ ‘ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನ.6ರಂದು ಉದ್ಘಾಟಿಸುತ್ತಿರುವುದು ಸಿಂಗಾಪುರ ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ಕೆರೆ ಹೆಸರು ಬದಲಾವಣೆ ಕ್ರಮ ಸರಿಯಲ್ಲ :
“ಸಿಂಗಾಪುರ ಐತಿಹಾಸಿಕ ಕೆರೆಯ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. 500 ವರ್ಷಗಳ ಇತಿಹಾಸವಿರುವ ಕೆರೆಯನ್ನು ‘ಭಗವಾನ್ ಬುದ್ಧ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಲೇಕ್ ಪಾರ್ಕ್’ ಎಂದು ಬಿಬಿಎಂಪಿ ಮರು ನಾಮಕರಣ ಮಾಡಲು ಹೊರಟಿರುವುದು ಸಾಧುವಾದ ಕ್ರಮವಲ್ಲ. ಕೆರೆ ಸುತ್ತಮುತ್ತಲ ಸಿಎ ನಿವೇಶನವನ್ನು ಶಾಲಾ-ಕಾಲೇಜು ಮತ್ತಿತರ ಉದ್ದೇಶಕ್ಕೆ ಕೊಟ್ಟು ಇದೀಗ ಕೆರೆ ಜಾಗದಲ್ಲಿ ಪಾರ್ಕ್ ಮಾಡಿದ್ದೂ ಅಲ್ಲದೆ ಹೆಸರು ಬದಲಾಯಿಸಲಾಗುತ್ತಿದೆ. ಇದು ಮೊದಲು ನಿಲ್ಲಬೇಕು. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ಹಲ್ಲಿಲ್ಲದ ಹಾವಾಗಿರುವುದಕ್ಕೆ ಇಂತಹ ಅವ್ಯವಸ್ಥೆ ಕಂಡು ಬರುತ್ತಿದೆ.”
– ಮಾಧುರಿ, ಕೆರೆ ಸಂರಕ್ಷಣಾ ಹೋರಾಟಗಾರ್ತಿ
ಈ ವಿಚಾರದಲ್ಲಿ ಬಿಬಿಎಂಪಿ ಎಡವಿದೆ :
“ಸಿಂಗಾಪುರ ಕೆರೆ ಹೆಸರು ಬದಲಾವಣೆ ಮಾಡುವಾಗ ಕಾನೂನಾತ್ಮಕ ಅಂಶಗಳನ್ನು ಬಿಬಿಎಂಪಿಯು ಪರಿಗಣಿಸಬೇಕಿತ್ತು. ಮಹನೀಯರ ಹೆಸರನ್ನು ಇಡುವ ಮುಂಚೆ ಜನರ ಅಭಿಪ್ರಾಯ, ಪರ- ವಿರೋಧ ಅಂಶಗಳು, ಸ್ಥಳೀಯ ಜನರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ ಈ ವಿಚಾರದಲ್ಲಿ ಪಾಲಿಕೆಯು ಎಡವಿರುವುದು ಕಂಡು ಬರುತ್ತಿದೆ.”
– ಸಾಯಿದತ್ತ, ಸಾಮಾಜಿಕ ಕಾರ್ಯಕರ್ತ